ಪ್ರಶಾಂತ್ ಟಿ.ಆರ್
ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಹೊಸತನವನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.
ಸ್ಯಾಂಡಲ್‌ವುಡ್ ಡೆಡ್ಲಿ ಖ್ಯಾತಿಯ ಆದಿತ್ಯ, ಹೊಸ ಗೆಟಪ್‌ನಲ್ಲಿ ತೆರೆಗೆ ಬಂದಿದ್ದಾರೆ. ಹೆಚ್ಚಾಗಿ ಅಂಡರ್‌ವರ್ಲ್ಡ್ ಚಿತ್ರಗಳಲ್ಲೇ ನಟಿಸಿ
ಪ್ರಸಿದ್ದಿ ಪಡೆದಿರುವ ಆದಿ, ಈಗ ಖಾಕಿ ತೊಟ್ಟು ತೆರೆಯಲ್ಲಿ ಮಿಂಚುತ್ತಿದ್ದಾರೆ. ಎರಡು ನಿಗೂಢ ಘಟನೆಗಳ ಸುತ್ತ ತನಿಖೆಯ ಜಾಡು ಹಿಡಿದು ‘ಮುಂದುವರೆದ ಅಧ್ಯಾಯ’ ಆರಂಭಿಸಿದ್ದಾರೆ.
ಯಾರೂ ಭೇಧಿಸಲಾಗದ ನಿಗೂಢತೆಯನ್ನು ಭೇದಿಸುವ ಚಾಣಾಕ್ಷ ಅಧಿಕಾರಿಯಾಗಿ ಕಾಣಿಸಿ ಕೊಂಡಿದ್ದಾರೆ. ‘ಮುಂದುವರೆದ ಅಧ್ಯಾಯ’ ಎಲ್ಲಾ ಸಿನಿಮಾಗಳಂತೆ ಇರದೆ, ನೈಜತೆಯ ಪ್ರತಿರೂಪದಂತೆ ತೆರೆಯಲ್ಲಿ ಭಾಸವಾಗುತ್ತದೆ. ಅಷ್ಟರಮಟ್ಟಿಗೆ ಚಿತ್ರಕ್ಕೆ ತಯಾರಿಸಿ ನಡೆಸಿ, ಚಿತ್ರವನ್ನು ತೆರೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಯುವ ನಿರ್ದೇಶಕ ಬಾಲು ಚಂದ್ರಶೇಖರ್.
ಚಿತ್ರದ ಟ್ರೇಲರ್ ನೋಡಿದರೆ ಇದೊಂದು ಥ್ರಿಲ್ಲರ್ ಚಿತ್ರ ಎನ್ನುವುದು ಖಚಿತವಾಗುತ್ತದೆ. ಆ ಒಂದು ನಿರ್ಧಿಷ್ಟ ದಿನದಂದೇ ನಡೆಯುವ ಕೊಲೆ, ಕಿಡ್ನಾಪ್ ಹೀಗೆ ಸಮಾಜ ಘಾತುಕ ಕೃತ್ಯಗಳು ಸಮಾಜದಲ್ಲಿ ಭಯಹುಟ್ಟಿಸಿರುತ್ತವೆ. ಇದಕ್ಕೆ ಕೊನೆಯೆಂದು, ಎಲ್ಲರು ನೆಮ್ಮದಿಯಾಗಿ ಬದುಕುವುದೆಂತು ಎಂದು ನಾಗರೀಕರು ಚಿಂತಿಸುತ್ತಿರುವಾಗಲೇ ದುಷ್ಟ ಶಿಕ್ಷಕ, ಶಿಷ್ಟ ರಕ್ಷಕನಾಗಿ ನಾಯಕ ಆಗಮಿಸುತ್ತಾನೆ. ಆತ ಈ ಕೃತ್ಯಗಳ ಹಿಂದಿನ ಮರ್ಮವನ್ನು ಹೇಗೆ ಭೇಧಿಸುತ್ತಾನೆ, ಸಮಾಜಘಾತುಕರನ್ನು ಹೇಗೆ ಮಟ್ಟ ಹಾಕುತ್ತಾನೆ ಎಂಬುದೇ ಚಿತ್ರದ ಕಥೆ.
ಇಲ್ಲಿ ಥ್ರಿಲ್ಲರ್ ಜತೆಗೆ, ಆ್ಯಕ್ಷನ್‌ಗೂ ಒತ್ತು ಕೊಟ್ಟಿದ್ದು ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಕಾಲ್ಪನಿಕತೆಗೆ ನೈಜತೆಯ ಸ್ಪರ್ಶ ‘ಮುಂದುವರೆದ ಅಧ್ಯಾಯ’ ಟ್ರೇಲರ್ ನೋಡಿದರೆ ಇದು ನೈಜಘಟನೆ ಆಧಾರಿತ ಚಿತ್ರವೇ ಇರಬೇಕು ಎಂದು ಅನ್ನಿಸುತ್ತದೆ. ಖಂಡಿತ ಇಲ್ಲ. ಇದು ಕಾಲ್ಪನಿಕ ಕಥೆ. ಅದಕ್ಕೆ ಒಂದಿಷ್ಟು ನೈಜತೆಯ ಸ್ಪರ್ಶ ನೀಡಿ ತೆರೆಗೆ ತಂದಿದ್ದಾರೆ ನಿರ್ದೇಶಕ ಬಾಲು
ಚಂದ್ರಶೇಖರ್. ಎಷ್ಟೋ ಕ್ರೈಂ ಕಥೆಗಳ ನಡುವೆ ಇದೊಂದು ಕ್ರಾಂತಿಕಾರಿಯ ಕಥೆ’ ಎಂದಿದ್ದಾರೆ.
ಒಬ್ಬ ವೈದ್ಯೆ, ಪತ್ರಕರ್ತೆ, ಗುತ್ತಿಗೆದಾರ, ಕಲಾವಿದ, ಹೊಟೇಲ್ ಮಾಲೀಕ.. ಹೀಗೆ ಸಮಾಜದಲ್ಲಿ ಕಂಡುಬರುವ ನಾನಾ ವೃತ್ತಿಯ ಪಾತ್ರಗಳು ತೆರೆಯಲ್ಲಿ ಹಾದುಹೋಗುತ್ತವೆ. ಸಮಾಜದಲ್ಲಿ ಭೂಗತ ಚಟುವಟಿಕೆ, ರೌಡಿಸಂನಂಥ ಯಾವುದೇ ಚಟುವಟಿಕೆಗಳಿಗೆ
ಕೊನೆಯೆಂಬುದೇ ಇಲ್ಲ. ಇದಕ್ಕೆ ಕೊನೆ ಹಾಡಬೇಕೆಂದರೆ ಜನ ಬದಲಾಗಬೇಕಿದೆ, ನಾವೆಲ್ಲ ಬದಲಾದರೆ ಸಮಾಜದಲ್ಲಿ ಖಂಡಿತ ಬದಲಾವಣೆ ತರಲು ಸಾಧ್ಯ ಎಂಬ ವಿಷಯವನ್ನು ನಿರ್ದೇಶಕರು ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ.
ನಾವು ಹೇಗಿರುತ್ತೇವೋ ಹಾಗೇಯೇ ಸಮಾಜವೂ ಇರುತ್ತದೆ ಎನ್ನುವುದೂ ಈ ಚಿತ್ರದಲ್ಲಿ ಕಂಡುಬರುವ ಮತ್ತೊಂದು ಪ್ರಮುಖ ಅಂಶವಾಗಿದೆ. ಆ ಒಂದು ದಿನದ ನಿಗೂಢತೆ ಅದು ಶಿವರಾತ್ರಿ, ಆ ದಿನ ವೈದ್ಯೆಯ ಕೊಲೆಯಾಗುತ್ತದೆ. ಸಮಾಜದ ಅಂಕು ಡೊಂಕನ್ನು ತಿದ್ದುತ್ತಿದ್ದ ಪತ್ರಕರ್ತೆಯ ಹತ್ಯೆಯಾಗುತ್ತದೆ. ಹೀಗಿರುವಾಗಲೇ ಗುತ್ತಿಗೆದಾರನ ಅಪಹರಣವಾಗುತ್ತದೆ. ಇವೆಲ್ಲವೂ ಒಂದೇ ದಿನದಲ್ಲಿ ನಡೆಯುತ್ತವೆ. ಸಮಾಜದಲ್ಲಿ ಭಯ ಹುಟ್ಟಿಸುತ್ತದೆ. ಈ ಕೃತ್ಯವನ್ನು ಯಾರು ಎಸುಗುತ್ತಿದ್ದಾರೆ ಯಾಕಾಗಿ?ಎಂಬುದೇ ಚಿತ್ರದ ಸಸ್ಪೆನ್ಸ್. ಈ ಎಲ್ಲಾ ಘಟನೆಗಳು ಶಿವರಾತ್ರಿಯಂದೇ ನಡೆಯುವುದು ಮತ್ತಷ್ಟು ಕುತೂಹಲ ಕೆರಳಿಸುವ ಅಂಶ.
ಅದನ್ನು ತೆರೆಯಲ್ಲಿಯೇ ನೋಡಿದರೆ ಚೆಂದ ಎನ್ನುತ್ತಾರೆ ನಿರ್ದೇಶಕರು. ಈ ಎಲ್ಲದಕ್ಕೂ ಕಾರಣೀಭೂತರು ಯಾರು ಎಂಬುದು ಕ್ಲೈಮ್ಯಾಕ್ಸ್‌ನಲ್ಲಿ ರಿವಿಲ್ ಆಗುತ್ತದೆ. ಯಾರು ಊಹಿಸಲಾಗದ ಕ್ಲೈಮ್ಯಾಕ್ಸ್ ಚಿತ್ರದಲ್ಲಿ ಇದೆಯಂತೆ. ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ
ಹೀಗೆ ನಡೆಯುತ್ತಿರುವ ನಿಗೂಢತೆಗಳನ್ನು ಭೇಧಿಸಲು ನಾಯಕ ಪೊಲೀಸ್ ಅವತಾರದಲ್ಲಿ ಆಗಮಿಸುತ್ತಾನೆ.
ಸಮಾಜದಲ್ಲಿ ಶಾಂತಿ ನೆಲೆಸುವುದೇ ಆತನ ಕಾಯಕವಾಗಿರುತ್ತದೆ. ಹಾಗಾಗಿ ತನಿಖೆಯ ಜಾಡು ಹಿಡಿದು ನಿಗೂಢತೆಯ ಬೆನ್ನು ಬೀಳುತ್ತಾನೆ. ಈ ಸವಾಲಿನ ಹಾದಿಯಲ್ಲಿ ನಾಯಕನಿಗೆ ಯಾವೆಲ್ಲಾ ಸಮಸ್ಯೆಗಳು ಎದುರಾಗುತ್ತವೆ. ಅವೆಲ್ಲವನ್ನು ಪರಿಹರಿಸಿ, ಸಮಾಜಘಾತುಕರನ್ನು ಹೇಗೆ ಹೆಡೆಮುರಿ ಕಟ್ಟುತ್ತಾನೆ ಎಂಬುದೇ ಚಿತ್ರದ ಸಸ್ಪೆನ್ಸ್, ಈ ಹಂತದಲ್ಲಿ ಚಿತ್ರ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತದೆ. ‘ಧರ್ಮ ಯುದ್ಧಗಳಲ್ಲೇ ರಕ್ತಪಾತಗಳು ಜಾಸ್ತಿಯಾಗುವುದು, ಅಧರ್ಮವನ್ನು ಅಳಿಸಬೇಕಾದರೆ ಧರ್ಮದ ಕೈಚಳಕವೂ ಇರುತ್ತದೆ’. ಚಿತ್ರದ ಈ ಡೈಲಾಗ್‌ಗಳು ಸಖತ್ ವೈರಲ್ ಆಗುತ್ತಿದೆ.
ಚಿತ್ರದಲ್ಲಿ ನಾಯಕಿ ಇಲ್ಲ. ಆದರೂ ಇಲ್ಲಿ ಲವ್ ಸ್ಟೋರಿ ಇದೆ, ಸೆಂಟಿಮೆಂಟ್ ಎಲ್ಲವೂ ಇದೆ. ಅದು ಹೇಗೆ ಏನು ಎಂಬುದಕ್ಕೆ ತೆರೆಯಲ್ಲಿಯೇ ಉತ್ತರ ಸಿಗಲಿದೆಯಂತೆ. ಚಿತ್ರದ ಎಲ್ಲಾ ಪಾತ್ರಗಳು ಪ್ರಾಮುಖ್ಯತೆ ಪಡೆದಿವೆ. ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು ಹಾಗೂ ಜೈಜಗದೀಶ್, ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಎಂಎಲ್ಎ ಪಾತ್ರದಲ್ಲಿ ವಿನಯ್ ಕೃಷ್ಣಸ್ವಾಮಿ, ಪೋಲೀಸ್ ಪಾತ್ರದಲ್ಲಿ ವಿನೋದ್, ಪತ್ರಕರ್ತೆಯಾಗಿ ಆಶಿಕಾ ಸೋಮ ಶೇಖರ್, ಡಾಕ್ಟರ್ ಪಾತ್ರಧಾರಿಯಾಗಿ ಚಂದನಾಗೌಡ ಮತ್ತಿತರರು ನಟಿಸಿದ್ದಾರೆ. ನಿರ್ದೇಶಕರ ಒಂದಷ್ಟು ಜನ ಆತ್ಮೀಯ ಸ್ನೇಹಿತರ ಬಳಗವೇ ಸೇರಿ ಕಣಜ ಎಂಟರ್ ಪ್ರೈಸಸ್ ಮೂಲಕ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಬೆಂಗಳೂರು, ರಾಮನಗರ, ದೇವರಾಯನ ದುರ್ಗ, ಮಂಡ್ಯ, ಮಳವಳ್ಳಿ, ತುಮಕೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ಜಾನಿ, ನಿತಿನ್ ಅವರ ಸಂಗೀತ ನಿರ್ದೇಶನವಿದೆ. ದಿಲೀಪ್ ಚಕ್ರವರ್ತಿ ಛಾಯಾಗ್ರಹಣ,
ವಿನೋದ್ ಸಾಹಸ ನಿರ್ದೇಶನ, ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ.
***
ಈ ಚಿತ್ರ ನನ್ನ ಜೀವನದ ಇನ್ನೊಂದು ಅಧ್ಯಾಯ. ಬರೀ ಅಂಡರ್‌ವಲ್ಡರ್ ಕಥೆಗಳೇ ಬರುತ್ತಿದ್ದಾಗ ಬಾಲು ಅವರು ಈ ಕಥೆ
ತಂದರು. ಒನ್‌ಲೈನ್ ಸ್ಟೋರಿ ಹೇಳಿದಾಗಲೇ ತುಂಬಾ ಇಷ್ಟವಾಯಿತು. ಚಿತ್ರದಲ್ಲಿ ಬರುವ ಪ್ರತಿ ಪಾತ್ರವೂ ನೈಜತೆಗೆ ಹತ್ತಿರ ವಾದಂತಿವೆ. ಪ್ರೇಕ್ಷಕರು ಮೆಚ್ಚುವ ಸಿನಿಮಾ ಇದಾಗಿದೆ.
– ಆದಿತ್ಯ