Monday, 25th November 2024

ನಿಗೂಢ ಲೋಕದಲ್ಲಿ ಅಸುರ ಮರ್ಧನ: ಭಜರೇ ಭಜರಂಗಿ…

ಪ್ರಶಾಂತ್‌ ಟಿ.ಆರ್‌

ಬಹು ದಿನಗಳ ಬಳಿಕ ಶಿವರಾಜ್ ಕುಮಾರ್ ಮತ್ತೆ ಭಜರಂಗಿಯ ಅವತಾರ ತಾಳಿ ತೆರೆಗೆ ಬಂದಿದ್ದಾರೆ. ಒಂದು ವರ್ಷದಿಂದ ಭಜರಂಗಿಯ ದರ್ಶನಕ್ಕಾಗಿ ಕಾದಿದ್ದ ಪ್ರೇಕ್ಷಕರು ಕೊನೆಗೂ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಭಜರಂಗಿ ಬಲು ಅಪರೂಪದ ಕಥೆ ಎನ್ನುವುದು ಅದಾಗಲೇ ಸಾಬೀತಾಗಿದೆ.

ಚಿತ್ರದ ಶೀರ್ಷಿಕೆಯೂ ಇದಕ್ಕೆ ಪುಷ್ಠಿ ನೀಡಿದೆ. ಹಾಗಾದರೆ ಭಜರಂಗಿ ಚಿತ್ರಕ್ಕೂ ಈ ಚಿತ್ರದ ಕಥೆಗೂ ಹೋಲಿಕೆಯಿದೆಯೇ. ಇದು ಭಜರಂಗಿ ಚಿತ್ರದ ಮುಂದುವರಿದ ಭಾಗವೇ. ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆದರೆ ಭಜರಂಗಿ 2 ಚಿತ್ರಕ್ಕೂ ಹಿಂದಿನ ಭಜರಂಗಿ ಚಿತ್ರದ ಕಥೆಗೂ ಸಂಬಂಧವೇ ಇಲ್ಲ, ಇಲ್ಲಿ ಬೇರೆಯದ್ದೇ ರೀತಿಯ ಕಥೆ ಇದೆ. ಭಜರಂಗಿ ಚಿತ್ರಕ್ಕಿಂತ ಹೆಚ್ಚು ಮನರಂಜನೆ ಈ ಚಿತ್ರದಲ್ಲಿದೆ. ಭಜರಂಗಿ ೨ ಪ್ರೇಕ್ಷಕರನ್ನು ಬೇರೆ ಪ್ರಪಂಚಕ್ಕೆ ಕರೆದೊಯ್ಯುತ್ತದೆ ಎನ್ನುತ್ತಾರೆ ನಿರ್ದೇಶಕ ಹರ್ಷ.

ಭಜರಂಗಿ ಸೂಪರ್ ನ್ಯಾಚುರಲ್ ಪವರ್ ಕಥೆಯ ಚಿತ್ರ. ಅದು ಪೋಸ್ಟರ್ ಹಾಗೂ ಟೀಸರ್‌ನಲ್ಲಿ ಸ್ಪಷ್ಟವಾಗಿದೆ. ಈ ಚಿತ್ರದ ಕಥೆಗೆ ಶಿವಣ್ಣ ಹೇಳಿ ಮಾಡಿಸಿ ದಂತೆ ಹೊಂದಿಕೊಂಡಿದ್ದಾರೆ. ಶಿವಣ್ಣ ಆಕ್ಷನ್‌ನಲ್ಲಿ ಮಿಂಚಿದ್ದು, ತಮ್ಮ ತಂಟೆಗೆ ಬರುವ ದುರಳರನ್ನು ಹಡೆಮುರಿ ಕಟ್ಟುತ್ತಾರೆ. ರಕ್ತಪಿಪಾಸು ಅಸುರರನ್ನು ಮರ್ಧನ ಮಾಡಿದ್ದಾರೆ. ಶಿವಣ್ಣ ಅವರನ್ನು ಈ ವಿಭಿನ್ನ ಲುಕ್‌ನಲ್ಲಿ ನೋಡು ವುದೇ ಚೆಂದ.

ಭಜರಂಗಿಯ ಅವತಾರ ತಾಳಿ ಶಿವಣ್ಣನ ಎಂಟ್ರಿ ಮತ್ತು ಲುಕ್ ಅಭಿಮಾನಿಗಳಲ್ಲಿ ಕಿಚ್ಚಾಯಿಸಿದೆ. ಇದರ ಜತೆಗೆ ಚಿತ್ರದ ಕಥೆಗೆ ತಕ್ಕಂತೆ, ಸೆಟ್ ಮೂಲಕ ಹೊಸ ಲೋಕವನ್ನೇ ಸೃಷ್ಟಿಸಲಾಗಿದೆ. ಅದ್ಭುತ ಗ್ರಾಫಿಕ್ಸ್‌ಗಳು, ಭಿನ್ನ ಮ್ಯಾನರಿಸಂನ ಪಾತ್ರಗಳು ಕಣ್ಣ್ ಕೋರೈಸುತ್ತವೆ. ಹರ್ಷ ನಿರ್ದೇಶನದ ಚಿತ್ರ ಎಂದ ಮೇಲೆ ಅಲ್ಲಿ ವಿಶೇಷತೆ ಇದ್ದೇ ಇರುತ್ತದೆ. ಅಂತೆಯೇ ಇಲ್ಲಿಯೂ ವಿಶೇಷವಿದೆ. ಸಿನಿಮಾ ಆರಂಭದಲ್ಲೇ ಸಿನಿಪ್ರಿಯರಿಗೆ ದೊಡ್ಡ ಸರ್‌ಪ್ರೈಸ್ ಸಿಗಲಿದೆಯಂತೆ. ಅದು ಏನೆಂದು ತಿಳಿಯಲು ಚಿತ್ರ ನೋಡಲೇಬೇಕು ಎನ್ನುತ್ತಾರೆ ಹರ್ಷ.

ಅತೀಂದ್ರೀಯ ಶಕ್ತಿ
ಭಜರಂಗಿ ಒಬ್ಬ ವ್ಯಕ್ತಿ ಅನ್ನುವುದಕ್ಕಿಂತ ಶಕ್ತಿ ಎನ್ನಬಹುದು. ಹಾಗಂತ ಭಜರಂಗಿ ಚಿತ್ರದಲ್ಲಿ ನಾಯಕನ ಪಾತ್ರವನ್ನಷ್ಟೇ ವೈಭವೀ ಕರಿಸಿಲ್ಲ. ಬದಲಾಗಿ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳು ಮುಖ್ಯವಾಗಿವೆ. ಖಳ ನಟರು ಕೂಡ ಚಿತ್ರದಲ್ಲಿ ವಿಜೃಂಭಿಸ ಲಿದ್ದಾರೆ. ಖಳ ನಾಯಕರ ಪಾತ್ರದ ಪೋಸ್ಟರ್ ಅನ್ನು ಕೂಡ ಚಿತ್ರತಂಡ ರಿಲೀಸ್ ಮಾಡಿ ಕುತೂಹಲ ಮೂಡಿಸಿತ್ತು.

ಇನ್ನು ಖಳರ ನಾಮಧೇಯವೂ ವಿಶೇಷವಾಗಿದೆ. ಜಾಗೃವ, ಆರಕ, ಹೀಗೆ ಪ್ರತಿ ಪಾತ್ರವೂ ಕಾತರತೆ ಹೆಚ್ಚಿಸಿದೆ. ಅದಕ್ಕೆ ತಕ್ಕಂತೆ ಸಿನಿಮಾದಲ್ಲಿ ರಕ್ಕಸ-ದೈವದ ನಡುವೆ ಕದನ ಇರುವುದು ಟ್ರೇಲರ್‌ನಿಂದ ಗೊತ್ತಾಗುತ್ತದೆ. ಅತೀಂದ್ರಿಯ ಶಕ್ರಿ, ಅತಿಮಾನವೀಯ ಶಕ್ತಿಗಳ ನಿಗೂಢ ಲೋಕವನ್ನು ನಿರ್ದೇಶಕರು ಭಜರಂಗಿ 2 ನಲ್ಲಿ ಅನಾವರಣಗೊಳಿಸಿದ್ದಾರೆ.

ಶ್ರುತಿಯ ಅಪರೂಪದ ಪಾತ್ರ
ಹಿರಿಯ ನಟಿ ಶ್ರುತಿ ಅವರನ್ನು ಇಲ್ಲಿ ವಿಭಿನ್ನವಾಗಿ ತೋರಿಸಲಾಗಿದೆ. ಅಳುಮುಂಜಿಯ ಪಾತ್ರಕ್ಕೆ ಹೊರತಾಗಿ ಹೊಸ ಗೆಟಪ್‌ನಲ್ಲಿ
ಕಂಗೊಳಿಸಿದ್ದಾರೆ. ಶ್ರುತಿ ಅವರ ಲುಕ್ ನೋಡಿದವರು ಶ್ರುತಿ ಅವರದ್ದು ನೆಗೆಟಿವ್ ರೋಲ್ ಅಂದುಕೊಂಡಿದ್ದಾರೆ. ಆದರೆ ಶ್ರುತಿ ಇಲ್ಲಿ ಖಳ ನಟಿಯಾಗಿ ಕಾಣಿಸಿಕೊಂಡಿಲ್ಲ. ಹಾಗಾದರೆ ಅವರ ಪಾತ್ರವೇನು ಎಂಬುದಕ್ಕೆ ಚಿತ್ರದಲ್ಲಿಯೇ ಉತ್ತರ ಸಿಗಲಿದೆ.

‘ನಾನು ಅಭಿನಯಿಸಿದ ಚಿತ್ರಗಳಲ್ಲಿ ಎಲ್ಲರನ್ನೂ ಅಳುವಂತೆ ಮಾಡುತ್ತಿದ್ದೆ. ಆದರೆ ಈ ಚಿತ್ರದಲ್ಲಿ ನಿರ್ದೇಶಕರು ನನ್ನನ್ನೇ ಅಳು ವಂತೆ ಮಾಡಿದ್ದಾರೆ. ಅಂತಹ ಪಾತ್ರ ನನ್ನದು. ಚಿತ್ರವನ್ನು ನೋಡುತ್ತದ್ದರೆ ಮೈ ಜುಂ ಅನ್ನಿಸುತ್ತದೆ’ ಎನ್ನುತ್ತಾರೆ ಶ್ರುತಿ.

ಭಜಾರಿಯಾದ ಭಾವನಾ
ಗ್ಲಾಮರ್ ಬೆಡಗಿ ಭಾವನಾ ಟಗರು ಬಳಿಕ ಈ ಚಿತ್ರದಲ್ಲಿಯೂ ಶಿವಣ್ಣನ ಜತೆಯಾಗಿ ನಟಿಸಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಕ್ಯೂಟ್ ಆಗ ಕಾಣಿಸಿಕೊಂಡು, ಸಿನಿಪ್ರಿಯರ ಫೇವರಿಟ್ ನಟಿಯಾಗಿದ್ದ ಭಾವನಾ, ಈ ಚಿತ್ರದಲ್ಲಿ ಚಿಣ್ಮಿಣಿಕಿಯಾಗಿ ಕಾಣಿಸಿಕೊಂಡಿ ದ್ದಾರೆ. ಅದು ಭಜಾರಿಯ ಪಾತ್ರದಲ್ಲಿ. ಗ್ಲಾಮರ್‌ಗೆ ಹೆಚ್ಚು ಒತ್ತುಕೊಡದೆ, ಚಾಲೆಂಜಿಂಗ್ ರೋಲ್‌ನಲ್ಲಿ ಕಂಗೊಳಿಸಿದ್ದಾರೆ.

‘ಒಂದೇ ರೀತಿಯ ಪಾತ್ರಕ್ಕೆ ಅಂಟಿಕೊಳ್ಳದೆ ವಿಭಿನ್ನ ಪಾತ್ರದಲ್ಲಿ ನಟಿಸಬೇಕು ಎಂಬ ಆಸೆ ನನ್ನಲ್ಲಿತ್ತು. ಅದಕ್ಕೆ ತಕ್ಕಂತೆ ಭಜರಂಗಿ 2 ನಲ್ಲಿ ನಾನು ಬಯಸಿದ ಪಾತ್ರವೇ ಸಿಕ್ಕಿದೆ. ಈ ಪಾತ್ರ ಚಾಲೆಂಜಿಂಗ್ ಆಗಿತ್ತು. ಮತ್ತೊಮ್ಮೆ ಶಿವರಾಜ್ ಕುಮಾರ್ ಅವರ ಜತೆ ಅಭಿ ನಯಿಸಲು ಅವಕಾಶ ಸಿಕ್ಕಿದ್ದು, ಸಂತಸ ತಂದಿದೆ’ ಎಂದು ನಗು ಬೀರಿದರು ಭಾವನಾ.

***

ಭಜರಂಗಿ 2 ಚಿತ್ರ ಅಂದುಕೊಂಡಂತೆ ಮೂಡಿಬಂದಿದೆ. ಪ್ರೇಕ್ಷಕರು ಬಯಸುವ ಭರಪೂರ ಮನರಂಜನೆ ಚಿತ್ರದಲ್ಲಿದೆ. ಸಿನಿಮಾದ
ಶೂಟಿಂಗ್ ವೇಳೆ ಹಲವು ಸಮಸ್ಯೆಗಳು ಎದುರಾದವು. ಭಜರಂಗಿಯ ಕೃಪೆಯಿಂದ ಎಲ್ಲಾ ಸಂಕಷ್ಟಗಳು ನಿವಾರಣೆಯಾದವು. ಚಿತ್ರದ ಆರಂಭದಲ್ಲಿಯೇ ವೈದ್ಯೋ ನಾರಾಯಣ ಹರಿ.. ಎಂಬ ವಾಚ್ಯಾರ್ಥವಿದೆ. ಅದು ಯಾಕೆ ಎಂಬುದು ಚಿತ್ರ ನೋಡಿದ ಮೇಲೆ ತಿಳಿಯುತ್ತದೆ. ಭಜರಂಗಿ 2 ಹೊಸ ಲೋಕವನ್ನೇ ಅನಾವರಣ ಮಾಡುತ್ತದೆ. ಈ ಹಿಂದೆ ಎಂದು ಕಂಡಿರದ ಶಿವಣ್ಣನನ್ನು ಈ ಚಿತ್ರ ದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ. ನಮ್ಮ ದೇಶ ಮಾತ್ರ ವಲ್ಲದೆ ದುಬೈ, ಕತಾರ್, ಒಮನ್, ಬಹ್ರೈನ್‌ನಲ್ಲೂ ಭಜರಂಗಿಯ ದರ್ಶನವಾಗಲಿದೆ.
-ಎ.ಹರ್ಷ ನಿರ್ದೇಶಕ