ಹಿರಿಯ ನಟ ದೇವರಾಜ್ ನಟಿಸಿರುವ ಮಾನ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್‌ನಲ್ಲಿ ವಿಭಿನ್ನವಾಗಿ ಕಂಗೊಳಿಸಿರುವ ದೇವರಾಜ್ ಕಂಡು ಸಿನಿಪ್ರಿಯರು ಖುಷಿಯಾಗಿದ್ದಾರೆ.
ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಈ ಚಿತ್ರದಲ್ಲಿ ನನ್ನ ತಂದೆ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರ ನೋಡಲು ನಾನು ಕಾತನಾಗಿದ್ದೇನೆ ಎಂದು ಹೇಳಿದರು. ಮಾನ, ಪ್ರಸಿದ್ಧ ಸಾಹಿತಿ ಕುಂ.ವೀರಭದ್ರಪ್ಪ ಅವರ ಕಾದಂಬರಿ ಆಧಾರಿತ ಸಿನಿಮಾವಾಗಿದೆ. ಚಿತ್ರದಲ್ಲಿ ಅನಿಷ್ಟ ಪದ್ಧತಿಯಾಗಿದ್ದ ಜೀತಪದ್ಧತಿಯ ಬಗ್ಗೆ ಚಿತ್ರ ಬೆಳಕು ಚೆಲ್ಲುತ್ತದೆ. ದೇವರಾಜ್ ಈ ಚಿತ್ರದಲ್ಲಿ ಹಳ್ಳಿಯ ಮುಗ್ಧ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.
ನನ್ನ ನಟನಾ ಜೀವನದ ಆರಂಭದಲ್ಲಿ ನಾನು ಗ್ರಾಮೀಣ ಸೊಗಡಿನ ಕಥೆಯ ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅಲ್ಲಿ ತನ್ನ ತಂಟೆಗೆ ಬಂದ, ಕಿರುಕುಳ ಕೊಡುವ ದುಷ್ಟರ ವಿರುದ್ಧ ಸಿಡಿದೇಳುವ ಪಾತ್ರ ನನ್ನದು. ಆದರೆ ಇದರಲ್ಲಿ ವಿಭಿನ್ನವಾದ ಪಾತ್ರ ಮಾಡಿದ್ದೇನೆ. ತನ್ನ ವಿರುದ್ಧ ಸಂಚು ಹೂಡುವವರಿಗೆ ನಗುತ್ತಲೇ ಉತ್ತರ ನೀಡುವ ಮುಗ್ಧನಾಗಿ ಕಾಣಿಸಿಕೊಂಡಿದ್ದೇನೆ. ಆ ಸಂಭಾಷಣೆಗಳು ಹಾಸ್ಯಮಯವಾಗಿ ಮೂಡಿಬಂದಿವೆ. ಅದೇ ಚಿತ್ರದ ಹೈಲೈಟ್ಸ್. ಈ ಚಿತ್ರದಲ್ಲಿ ಮೊದಲ ಬಾರಿಗೆ ಉಮಾಶ್ರೀ ಅವರು ನನ್ನ ಪತ್ನಿಯ ಪಾತ್ರದಲ್ಲಿ ಬಣ್ಣಹಚ್ಚಿ ದ್ದಾರೆ.
ಹಿಂದೆ ನಾಟಕಗಳಲ್ಲಿ ನಾವಿಬ್ಬರೂ ಒಟ್ಟಿಗೆ ನಟಿಸುತ್ತಿದ್ದೆವು. ಈಗ ಸಿನಿಮಾದಲ್ಲಿ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದೇವೆ ಎಂದರು ದೇವರಾಜ್. ನಾವೆಲ್ಲಾ ಆಧುನಿಕ ಕಾಲಘಟ್ಟದಲ್ಲಿದ್ದರೂ, ಗ್ರಾಮೀಣ ಭಾಗದಲ್ಲಿ ಇಂದಿಗೂ ಬಡವರನ್ನು ದಟ್ಟ ದಾರಿ ದ್ರ್ಯಕ್ಕೆ ತಳ್ಳುವ ಘಟನೆಗಳು ನಡೆಯುತ್ತಿವೆ. ಅದನ್ನು ಈ ಚಿತ್ರದ ಮೂಲಕ ನಿರ್ದೇಶಕರು ಹೇಳಿದ್ದಾರೆ. ಒಳ್ಳೆಯ ಚಿತ್ರದಲ್ಲಿ ನಟಿಸಿದ ಸಂತಸ ನನಗಿದೆ ಎಂದು ಉಮಾಶ್ರೀಹೇಳಿದರು.
ಎಂ.ಡಿ.ಕೌಶಿಕ್, ಶ್ರೀನಿವಾಸ್ ಪ್ರಭು ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಸೆಬಾಸ್ಟಿಯನ್ ಸಮಾಜಕ್ಕೆ ಅಗತ್ಯವಾದ ಕಥೆಯನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ. ಕುಂ. ವೀರಭದ್ರಪ್ಪ ಅವರ ಕಾದಂಬರಿ ಓದಿದಾಗ ಇದನ್ನು ಚಿತ್ರದ ಮೂಲಕ ತೆರೆಗೆ ತರಬೇಕು ಎಂದುಕೊಂಡೆ. ಈ ವಿಚಾರವನ್ನು ನಿರ್ಮಾಪಕ ರಿಗೂ ತಿಳಿಸಿದೆ. ನಿರ್ಮಾಪಕರು ಕಥೆ ಕೇಳಿ ಮೆಚ್ಚಿದರು. ದೇವರಾಜ್ ಅವರೇ ಈ ಚಿತ್ರದಲ್ಲಿ ನಟಿಸಿದರೆ ಸೂಕ್ತ ಎಂದರು, ಅಂತೆಯೇ ದೇವ ರಾಜ್ ಸರ್ ಅವರಿಗೆ ಕಥೆ ಹೇಳಿದಾಗ ಅವರು ಕೇಳಿ ಮೆಚ್ಚಿದರು. ಅಂತು ಅಂದುಕೊಂಡಂತೆ ಚಿತ್ರ ಸೆಟ್ಟೇರಿತು, ಮೈಸೂರು, ಮಂಡ್ಯ, ಮದ್ದೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಇನ್ನೇನು ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕರು ತಿಳಿಸಿದರು. ಕಾಂತಲಕ್ಷ್ಮಿ ರಮೇಶ್ ಬಾಬು ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಸೋಜೊ.ಕೆ.ಜೋಸ್ ಛಾಯಾ ಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ ಈ ಚಿತ್ರಕ್ಕಿದೆ.