Tuesday, 26th November 2024

ಶುರುವಾಗಲಿದೆ ಮದಕರಿ ನಾಯಕನ ಅಬ್ಬರ

ರಾಬರ್ಟ್ ಯಶಸ್ಸಿನ ಖುಷಿಯಲ್ಲಿರುವ ದರ್ಶನ್, ವೀರ ಮದಕರಿನಾಯಕನಾಗಿ ಅಬ್ಬರಿಸಲು ಸಿದ್ಧವಾಗಿದ್ದಾರೆ. ಈಗಾಗಲೇ ಚಿತ್ರದ ಮೊದಲ ಶೆಡ್ಯುಲ್ ಮುಗಿಸಿದ್ದು, ಮುಂದಿನ ಭಾಗದ ಚಿತ್ರೀಕರಣಕ್ಕಾಗಿ ಅಗತ್ಯ ತಯಾರಿ ನಡೆಸುತ್ತಿದ್ದಾರೆ.

ಸದ್ಯ ಕರೋನಾ ಮೂರನೇ ಅಲೆ ಕಾಡುವ ಭೀತಿಯಿಂದಾಗಿ ಚಿತ್ರೀಕರಣವನ್ನು ಮುಂದೂಡಲಾಗಿದೆ. ಈ ಬಿಡುವಿನ ಅವಧಿಯಲ್ಲಿ ಚಿತ್ರಕ್ಕಾಗಿ ತಯಾರಿಯು ನಡೆದಿದೆ. ಚಿತ್ರದಲ್ಲಿ ನಟಿಸುವ ಉಳಿದ ತಾರಾಗಣದ ಬಗ್ಗೆಯೂ ಚರ್ಚೆ ನಡೆದಿದೆ. ವೀರ ಮದಕರಿನಾಯಕ ಐತಿಹಾಸಿಕ ಕಥೆಯ ಚಿತ್ರ. ಸಂಗೊಳ್ಳಿ ರಾಯಣ್ಣ ಚಿತ್ರದ ನಂತರ ದಚ್ಚು ಅಭಿನಯಿಸುತ್ತಿರುವ ಎರಡನೇ ಐತಿಹಾಸಿಕ ಚಿತ್ರವಿದು.

ಹಾಗಾಗಿ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಗಳಿವೆ. ವೀರ ಮದಕರಿನಾಯಕನಾಗಿ ದಚ್ಚು ಮತ್ತೆ ಅಬ್ಬರಿಸಲಿದ್ದಾರೆ. ಚಿತ್ರದುರ್ಗವನ್ನು ಆಳಿದ ಪಾಳೆಗಾರರ ವಂಶದ ಪ್ರಸಿದ್ಧ ರಾಜರಲ್ಲಿ ಒಬ್ಬರಾದ ಮದಕರಿನಾಯಕನ ಕುರಿತ ಚಿತ್ರ ಇದಾಗಿದೆ. ಮದಕರಿನಾಯಕ ಹಾಗೂ ಹೈದರಾಲಿಯ ನಡುವಿನ ಯುದ್ದದ ಸನ್ನಿವೇಶ. ತನ್ನ ರಾಜ್ಯ, ಜನತೆ ಯನ್ನು ಉಳಿಸಲು ವೀರ ಮದಕರಿನಾಯನ, ವೀರಾವೇಶ ಇವೆಲ್ಲ ಅಂಶಗಳನ್ನು ತೆರೆಗೆ ತರಲಾಗುತ್ತಿದೆ. ಮದಕರಿ ನಾಯಕನಾಗಿ ಬಣ್ಣಹಚ್ಚಿರುವ ದರ್ಶನ್, ಈಗಾಗಲೇ ೨೦ ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿ ಯಾಗಿದ್ದಾರೆ.

ಕೇರಳದ ಕೊಚ್ಚಿನ್‌ನಲ್ಲಿ ಅದ್ಧೂರಿ ಸೆಟ್ ಹಾಕಿ ಕೆಲವೊಂದು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಹಿರಿಯ ನಟ ಅವಿನಾಶ್ ಚಿತ್ರದಲ್ಲಿ ಮುಖ್ಯ ಪಾತ್ರವನ್ನು
ನಿರ್ವಹಿಸುತ್ತಿದ್ದಾರೆ. ಆ ಪಾತ್ರ ಯಾವುದು ಎಂದು ನಿರ್ದೇಕರು ಗುಟ್ಟು ಬಿಟ್ಟುಕೊಟ್ಟಿಲ್ಲ. ಇನ್ನು ಹೈದರಾಲಿ ಪಾತ್ರವೂ ಚಿತ್ರದಲ್ಲಿ ಪ್ರಮುಖವಾಗಿದ್ದು, ಆ ಪಾತ್ರವನ್ನು
ಯಾರು ನಿರ್ವಹಿಸುತ್ತಾರೆ ಎಂಬುದನ್ನು ಚಿತ್ರತಂಡ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಹೈದರಾಲಿಯ ಪಾತ್ರದಲ್ಲಿ ಪ್ರಸಿದ್ಧ ನಟರೊಬ್ಬರು ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ
ಎಂದಷ್ಟೇ ಹೇಳುವ ನಿರ್ದೇಶಕರು, ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸುತ್ತಾರೆ. ಹಿರಿಯ ನಿರ್ದೇಶಕ ಎಸ್ .ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ವೀರ ಮದಕರಿನಾಯಕ ಮೂಡಿಬರುತ್ತಿದೆ. ಇದು ಕೂಡ ಹೈ ಬಜೆಟ್ ಚಿತ್ರವಾಗಿದ್ದು, ರಾಕ್‌ಲೈನ್ ಪ್ರೊಡಕ್ಷನ್ಸ್‌ನಲ್ಲಿ ನಿರ್ಮಾಣವಾಗುತ್ತಿದೆ.

***

ವೀರ ಮದಕರಿನಾಯಕ ಚಿತ್ರದ ಮೊದಲ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ದರ್ಶನ್ ಹಾಗೂ ಅವಿನಾಶ್ ಅವರು ನಟಿಸಿದ ಒಂದಷ್ಟು ಸನ್ನಿವೇಶಗಳನ್ನು
ಚಿತ್ರೀಕರಿಸಿಕೊಳ್ಳಲಾಗಿದೆ. ಮುಂದಿನ ಭಾಗದ ಶೂಟಿಂಗ್‌ಗೆ ರೆಡಿಯಾಗಬೇಕು ಎನ್ನುವಾಗಲೇ ಕರೋನಾ ಕಾಡಿತು. ಮುಂದೆ ಮೂರನೇ ಅಲೆ ಬರುವ ಆತಂಕವೂ ಇದೆ. ಹಾಗಾಗಿ ಕರೋನಾ ಅಬ್ಬರ ನಿಂತ ಬಳಿಕ ಶೂಟಿಂಗ್‌ಗೆ ತೆರಳಲು ನಿರ್ಧರಿಸಿದ್ದೇವೆ. ಅಂದಿನ ಕಾಲದ ಗತವೈಭವನ್ನು ತೆರೆಯಲ್ಲಿ ಅದ್ಭುತವಾಗಿ ತೋರಿಸುವ ಸಲುವಾಗಿ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಿದ್ದೇವೆ.
– ಎಸ್.ವಿ.ರಾಜೇಂದ್ರಸಿಂಗ್ ಬಾಬು