Tuesday, 26th November 2024

ನೈಜ ಘಟನೆಯ ಮಾರ್ಚ್ 23

ಈಗೇನಿದ್ದರು ಹೊಡಿಬಡಿ ಚಿತ್ರಗಳಿಗಿಂತ ರೆಟ್ರೋ ಶೈಲಿಯ, ನೈಜ ಘಟನೆಯ ಕಥೆಯಾಧಾರಿತ ಚಿತ್ರಗಳು ಹೆಚ್ಚಾಗಿ ಸೆಟ್ಟೇರುತ್ತಿವೆ. ಆ ಸಾಲಿಗೆ ಈಗ ಮಾರ್ಚ್ 23 ಚಿತ್ರ ಕೂಡ ಸೇರ್ಪಡೆಯಾಗಿದೆ. ಈ ಹಿಂದೆ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆಯನ್ನು ಆಧರಿಸಿ ಚಿತ್ರದ ಕಥೆ ಹೆಣೆಯ ಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ಸಹ ಕಲಾವಿದರಾಗಿ ಹಲವು ಚಿತ್ರಗಳಲ್ಲಿ ನಟಿಸಿರುವ ತರುಣ್ ಚಿತ್ರದ ಕಥೆ ಬರೆದು ಇದೇ ಮೊದಲ ಬಾರಿಗೆ ನಿರ್ದೇಶನದ ಜವಬ್ದಾರಿಯನ್ನು ಹೊತ್ತಿದ್ದಾರೆ. ಸಿನಿಮಾಗಳು ಎಂದರೆ ನನಗೆ ಪಂಚಪ್ರಾಣ. ಅದಕ್ಕಾಗಿ ನಾನು ಒಂದು ಸಿನಿಮಾವನ್ನು ನಿರ್ದೇಶನ ಮಾಡಬೇಕು ಎಂದುಕೊಂಡಿದ್ದೆ. ಅದಕ್ಕಾಗಿ ಕಥೆ ಹುಡುಕುವಾಗ ರೈಲ್ವೆ ನಿಲ್ದಾಣದಲ್ಲಿ ನನ್ನ ಕಣ್ಣೆದುರಿಗೆ ಘಟನೆ ಯನ್ನೇ ಆಧರಿಸಿ ಸಿನಿಮಾ ಮಾಡಬಾರದೇಕೆ ಅಂದುಕೊಂಡೆ, ಅದಕ್ಕೆ ತಕ್ಕ ಕಥೆ ಹೆಣೆದೆ. ಆ ಘಟನೆ
ಮಾರ್ಚ್ ೨೩ ರಂದು ನಡೆದಿದ್ದರಿಂದ ಅದೇ ಶೀಷಿಕೆಯಲ್ಲಿಯೇ ಚಿತ್ರ ಮೂಡಿಬರಲಿದೆ.

ಕರ್ನಾಟಕದಲ್ಲಿ ಪರಭಾಷಿಗರಿಂದ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ ಎನ್ನುತ್ತಾರೆ ತರುಣ್. ನಿರ್ದೇಶನದ ಜತೆಗೆ ನಾಯಕನಾಗಿಯೂ ನಟಿಸುತ್ತಿರುವ ತರುಣ್, ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲು ನಿರ್ಧರಿಸಿದ್ದಾರೆ. ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿರುವ ಸೀಮಾ ಖಾನ್ ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನುಳಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರಲಿದೆ. ಈಗಾಗಲೇ ಚಿತ್ರದ ಹಾಡುಗಳ ಶೂಟಿಂಗ್ ಮುಗಿಸಿದ್ದು, ಈ ತಿಂಗಳ ಅಂತ್ಯದಲ್ಲಿ ಮಾತಿನ ಭಾಗದ ಚಿತ್ರೀಕರಣ ಆರಂಭವಾಗಲಿದೆ. ಬಿ.ವಿ.ರಮೇಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.