ಉತ್ತರ ಕರ್ನಾಟಕದ ಬಹುತೇಕ ಮಂದಿ ಸೇರಿ ನಿರ್ಮಾಣ ಮಾಡಿರುವ ‘ನಿಮ್ಮೂರು’ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಸದ್ಯ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರನ್ನು ಸೆಳೆಯುತ್ತಿವೆ.
ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ ಹಾಗೂ ನಟಿ ರೂಪಿಕಾ, ಭಾಮ ಹರೀಶ್ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ
ಚಿತ್ರತಂಡಕ್ಕೆ ಶುಭಕೋರಿದರು. ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ವಿಜಯ್, ‘ನಿಮ್ಮೂರು’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.
ರಾಜಶೇಖರ ಚಂದ್ರಶೇಖರ್ ದಾವಣಗೇರಿ ಚಿತ್ರಕ್ಕೆ ಬಂಡವಾಳ ಹೂಡಿದ್ದು ನಿರ್ಮಾಣದ ಜವಾಬ್ಧಾರಿ ಹೊತ್ತಿದ್ದಾರೆ. ಲಕ್ಕಿರಾಮ್ ನಾಯಕನಾಗಿ ನಟಿಸುತ್ತಿದ್ದು, ಇವರಿಗೆ ಜತೆಯಾಗಿ ನಟಿ ವೀಣಾಗಂಗಾಧರ್ ಅಭಿನಯಿಸುತ್ತಿದ್ದಾರೆ. ಅಲ್ಲದೆ ನಿರ್ಮಾಪಕ ರಾಜ ಶೇಖರ್ ಕೂಡ ನೆಗೆಟಿವ್ ಪಾತ್ರ ನಿರ್ವಹಿಸಿದ್ದಾರೆ.
‘ನಿಮ್ಮೂರು’ ಎಂದಾಗ ಎಲ್ಲರಿಗೂ ಅವರವರ ಊರಿನ ನೆನಪಾಗಬೇಕು ಎನ್ನುವ ಉದ್ದೇಶದಿಂದ ಈ ಶೀರ್ಷಿಕೆ ಇಟ್ಟಿದಾರಂತೆ. ‘ನಿಮ್ಮೂರು’ ಎಂದಾಕ್ಷಣ ಅಲ್ಲಿ ನಡೆದ ಘಟನೆಗಳು ನೆನಪಾಗಬೇಕು, ಇಂಪ್ಯಾ್ಟಾೃ ಆಗಬೇಕು ಎನ್ನುವುದು ಇದರ ಉದ್ದೇಶ. ಒಂದು ಹಳ್ಳಿ ಎಂದ ಮೇಲೆ ಅಲ್ಲಿ ಮಿಳಿತವಾಗಿರುವ ಪ್ರೀತಿ, ರಾಜಕೀಯ, ರೈತರ ಸಮಸ್ಯೆಗಳು ಹೀಗೆ ಎಲ್ಲವೂ ಚಿತ್ರದಲ್ಲಿದೆ. ಇದರ ಜತೆಗೆ ಒಂದೊಳ್ಳೆ ಸಂದೇಶವೂ ಚಿತ್ರದಲ್ಲಿದೆ ಇದೆಯಂತೆ.
ಚಿತ್ರದಲ್ಲಿ ಮೂರು 3 ಫೈಟ್ಸ್, 5 ಹಾಡುಗಳಿವೆ. ಕೊಳ್ಳೇಗಾಲ, ಹಾಸನ, ಬೆಂಗಳೂರು ಹಾಗೂ ಸಕಲೇಶಪುರದ ಸುತ್ತಮುತ್ತ ಹಾಡು ಹಾಗೂ ಮಾತಿನ ಭಾಗ ಸೇರಿ 76 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಒಂದು ನೈಜಘಟನೆ ಆಧರಿಸಿ ಸಿದ್ಧವಾದ ಕಥೆಯಿದು, ನೇಟಿವಿಟಿಗೆ ತುಂಬಾ ಹತ್ತಿರವಾದಂಥ ಪಾತ್ರಗಳನ್ನಿಟ್ಟುಕೊಂಡು ಚಿತ್ರಕಥೆ ಮಾಡಿದ್ದೇವೆ. ಎಲ್ಲಾ ರೀತಿಯ ಮನರಂಜನಾತ್ಮಕ ಅಂಶಗಳಿರುವ ಚಿತ್ರವಿದು ಎನ್ನುತ್ತಾರೆ ನಿರ್ದೇಶಕರು.
ತ್ರಿವಿಕ್ರಮ್, ಮೀಸೆ ಅಂಜಿನಪ್ಪ, ಶ್ರೀಕಾಂತ್ ಹೊನ್ನವಳ್ಳಿ, ಸಿದ್ದು ಮಂಡ್ಯ, ಮಂಜುನಾಥ್ ಹಾಗೂ ಇತರರು ಚಿತ್ರದ ತಾರಾಬಳಗ ದಲ್ಲಿದ್ದಾರೆ.