Monday, 25th November 2024

ಪ್ರೇಮಂ ಪೂಜ್ಯಂ – ಕನಸು ಇಂದು ನನಸಾಗಿದೆ

ಪ್ರಶಾಂತ್.ಟಿ.ಆರ್.

ವೈದ್ಯರ ಹೃದಯದಲ್ಲೂ ಒಬ್ಬ ಸಂಗೀತಗಾರ, ಕವಿಯಿದ್ದಾನೆ, ಅದ್ಭುತ ಪ್ರೇಮ ಕಾವ್ಯ ಮೂಡಿಸುವ ನಿರ್ದೇಶಕನೂ ಇರುತ್ತಾನೆ ಎನ್ನುವುದು ಪ್ರೇಮಂ ಪೂಜ್ಯಂ ಚಿತ್ರದ ಮೂಲಕ ಸಾಬೀತಾಗಿದೆ.ನವಿರಾದ ಪ್ರೇಮಕಥೆಯ ಪ್ರೇಮಂ ಪೂಜ್ಯಂ ಚಿತ್ರವನ್ನು ಡಾ.ರಾಘವೇಂದ್ರ ನಿರ್ದೇಶಿಸಿದ್ದು, ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ.

ವಿಶೇಷ ಎಂದರೆ ಈ ಚಿತ್ರವನ್ನು ವೈದ್ಯರ ತಂಡವೇ ನಿರ್ಮಾಣ ಮಾಡಿದೆ. ಈ ಚಿತ್ರ ಡಾ.ರಾಘವೇಂದ್ರ ಅವರ ಬಹುದಿನಗಳ ಕನಸಾಗಿತ್ತು. ಅದು ಇಂದು ಸಾಕಾರಗೊಂಡಿರುವ ಸಂತಸದಲ್ಲಿದ್ದಾರೆ. ಡಾ.ರಾಘವೇಂದ್ರ ವೃತ್ತಿಯಲ್ಲಿ ವೈದ್ಯರು. ಆದರೂ ಸಿನಿಮಾದ ಮೇಲೂ ವಿಶೇಷ ಪ್ರೀತಿ. ಕಾಲೇಜು ದಿನ ಗಳಿಂದಲೂ ಸಿನಿಮಾ ಇಷ್ಟಪಡುತ್ತಿದ್ದ ಡಾ.ರಾಘವೇಂದ್ರ ತಾವು ಕೂಡ ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಮನದಿಂಗಿಂತ ಹೊಂದಿದ್ದರು. ಆ ಆಸೆ ಈಗ ಕೈಗೂಡಿದೆ. ಅಂದುಕೊಂಡಂತೆ ಪ್ರೇಮಂ ಪೂಜ್ಯ ಚಿತ್ರವನ್ನು ನಿರ್ದೇಶನ ಮಾಡಿ ತೆರೆಗೆ ತಂದಿದ್ದಾರೆ.

ಸಿನಿಮಾದ ಜತೆಗೆ ಧಾರಾವಾಹಿಗಳನ್ನು ಮೆಚ್ಚುತ್ತಿದ್ದ ರಾಘವೇಂದ್ರ ಅವರಿಗೆ ಮಾಸ್ಟರ್ ಆನಂದ್ ನಟನೆ ಬಲು ಇಷ್ಟವಾಗಿದೆ.
ಹಾಗಾಗಿ ತಾವು ಬರೆದಿದ್ದ ಕಥೆಯೊಂದನ್ನು ಆನಂದ್‌ಗೆ ತಿಳಿಸಿದ್ದಾರೆ. ಕಥೆ ಕೇಳಿ ಮೆಚ್ಚಿದ ಆನಂದ್, ರಾಘವೇಂದ್ರ ಅವರಿಗೆ ಚಿತ್ರ ನಿರ್ದೇಶನ ಮಾಡುವಂತೆ ಸಲಹೆ ನೀಡಿದ್ದಾರೆ. ಅಂತೆಯೇ ಡಾ. ರಾಘವೇಂದ್ರ ನಿರ್ದೇಶನದತ್ತ ಒಲವು ತಾಳಿದ್ದಾರೆ.

ಪ್ರೇಮ್‌ಗೆ ಬಿಗ್ ಬ್ರೇಕ್: ಪ್ರೇಮಂ ಪೂಜ್ಯಂ, ಪ್ರೇಮ್ ಅಭಿನಯದ ಇಪ್ಪತ್ತೈದನೆ ಸಿನಿಮಾ ಎನ್ನುವುದು ವಿಶೇಷ. ಈ ಚಿತ್ರ ಪ್ರೇಮ್‌ಗೆ ಸದಾ ನೆನಪಿನಲ್ಲಿ ಉಳಿಯುವ ಚಿತ್ರವಾಗಲಿದ್ದು, ಹೊಸ ತಿರುವು ನೀಡುವುದು ನಿಚ್ಚಳವಾಗಿದೆ. ಪ್ರೇಮ್ ಈ ಚಿತ್ರ ದಲ್ಲಿ ಏಳು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಇದಕ್ಕೆ ಪುಷ್ಟಿ ನೀಡಿವೆ. ಪ್ರೇಮ್ ಈ ಚಿತ್ರದಲ್ಲಿ ತುಂಬಾ ಯಂಗ್ ಆಗಿ ಕಂಗೊಳಿಸಿದ್ದಾರೆ. ಬೃಂದಾ ಆಚಾರ್ಯ ಚಿತ್ರದ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಮಾಸ್ಟರ್ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ವಿಶೇಷ ಪಾತ್ರದಲ್ಲಿ ಐಂದ್ರಿತಾ ರೇ ಕಾಣಿಸಿಕೊಂಡಿದ್ದಾರೆ.

ಸುಂದರ ದೃಶ್ಯ ಕಾವ್ಯ: ಅದ್ಭುತ ಪ್ರೇಮ ಕಥೆಯ ಜತೆಗೆ ಸುಂದರ ತಾಣಗಳು ಕೂಡ ಚಿತ್ರಕ್ಕೆ ಮತ್ತಷ್ಟು ಮೆರಗು ನೀಡಿವೆ. ಛಾಯಾಗ್ರಾಹಕ ನವೀನ್ ಕ್ಯಾಮೆರಾ ಕೈಚಳಕ ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ. ಕರ್ನಾಟಕದ ಸುಂದರ ತಾಣಗಳು ಹಾಗೂ ವಿಯಟ್ನಂನಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

***

ಕನ್ನಡ ಚಿತ್ರಗಳು ಎಂದರೆ ನನಗೆ ಅಚ್ಚುಮೆಚ್ಚು. ಅದಕ್ಕಾಗಿ ಕನ್ನಡ ಸಿನಿಪ್ರಿಯರಿಗೆ ಅದ್ಭುತವಾದ ಸುಂದರ ಕಾವ್ಯವನ್ನು ಕಟ್ಟಿ ಕೊಡಬೇಕು ಎಂಬುದು ನನ್ನ ಬಹುದಿನಗಳ ಬಯಕೆಯಾಗಿತ್ತು. ಅಂತು, ಅಂದು ಕಂಡ ಕನಸು ಈ ಚಿತ್ರದ ಮೂಲಕ ನನಸಾಗಿದೆ. ಪ್ರೇಮಂ ಪೂಜ್ಯಂ ಎಂದರೆ ಮಾಮೂಲಿ ಪ್ರೇಮ ಕಥೆಯ ಚಿತ್ರ ಎಂದುಕೊಳ್ಳಬಹುದು. ಇದು ಪ್ರೀತಿ ಎನ್ನುವ ಪದಕ್ಕೆ ದೈವಿಕ ಭಾವನೆ, ಹೊಸ ವ್ಯಾಖ್ಯಾನ ಕೊಡುವ ಸಿನಿಮಾ. ಚಿತ್ರವನ್ನು ತೆರೆಯಲ್ಲಿ ನೋಡುತ್ತಿದ್ದರೆ ಹೊಸ ಅನುಭವಾಗುತ್ತದೆ. ನನ್ನ ಕನಸು ಕೈಗೂಡಲು ಡಾ.ರಕ್ಷಿತ್ ಕದಂಬಾಡಿ, ಹಾಗೂ ಡಾ. ರಾಜ್‌ಕುಮಾರ್, ಜಾನಕಿ ರಾಮನ್ ಸಾಥ್ ನೀಡಿದ್ದು, ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಬಯಸಿದಂತೆಯೇ ಸಿನಿಮಾ ಮೂಡಿಬಂದಿದೆ ಎಂಬ ಸಂತೃಪ್ತಿ ನನಗಿದೆ.
-ಡಾ.ರಾಘವೇಂದ್ರ ನಿರ್ದೇಶಕ