ಬಹು ದಿನಗಳಿಂದ ಕಾಯುತ್ತಿದ್ದ ‘ಪೊಗರು’ ಚಿತ್ರ ತೆರೆಗೆ ಬರುತ್ತಿದೆ. ಕೋವಿಡ್ ಬಳಿಕ ತೆರೆ ಕಾಣುತ್ತಿರುವ ಹೈಬಜೆಟ್ ಚಿತ್ರ ಇದಾಗಿದ್ದು, ಪ್ರೇಕ್ಷಕರು ಚಿತ್ರವನ್ನು ಹೇಗೆ ಸ್ವಾಗತಿಸುತ್ತಾರೆ ಎಂಬ ಕಾತರ ಎಲ್ಲರಲ್ಲೂ ಇದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೂರು ವರ್ಷಗಳ ಬಳಿಕ ‘ಪೊಗರು’ ತೋರಲು ಬರುತ್ತಿದ್ದಾರೆ. ಧ್ರುವ ಜತೆಯಾಗಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯಿಸಿರು ವುದು ವಿಶೇಷವಾಗಿದೆ. ಡೈಲಾಗ್ ಹಾಗೂ ‘ಖರಾಬು…’ ಸಾಂಗ್ ಮೂಲಕವೇ ಚಿತ್ರ ಸಾಕಷ್ಟು ನಿರೀಕ್ಷೆೆ ಮೂಡಿಸಿದೆ. ಇನ್ನು ರಶ್ಮಿಕಾಗೂ ಚಿತ್ರ ಮತ್ತೊಂದು ದೊಡ್ಡ ಬ್ರೇಕ್ ನೀಡುವ ನಿರೀಕ್ಷೆಯೂ ಇದೆ.
‘ಚಮಕ್’, ‘ಯಜಮಾನ’ ಬಳಿಕ ಶಾನ್ವಿ ಪೊಗರಿನ ಮೂಲಕ ಖದರ್ ಹೆಚ್ಚಿಸಲಿದ್ದಾರೆ. ಇಲ್ಲಿ ರಶ್ಮಿಕಾ ಗೀತಾ ಆಗಿ ಬಣ್ಣ ಹಚ್ಚಿದ್ದಾರೆ. ಚಷ್ಮಾ ಧರಿಸಿದ ರಶ್ಮಿಕಾ, ಹಳೆಯ ಶಾನ್ವಿಯಂತೆ ಕಂಗೊ ಳಿಸುತ್ತಾರೆ.
ರಶ್ಮಿಕಾಗೆ ‘ಪೊಗರು’ ಚಿತ್ರದಲ್ಲಿ ನಟಿಸಿರುವುದು ಸಂತಸ ತಂದಿದೆಯಂತೆ. ಚಿತ್ರದ ಬಗ್ಗೆ ಖುಷಿ ಯಿಂದ, ನಗು ಮುಖದಿಂದಲೇ ಮಾತು ಆರಂಭಿಸಿದ ರಶ್ಮಿಕಾ, ‘ಪೊಗರು’ ಬರೀ ಆ್ಯಕ್ಷನ್ಗೆ ಸೀಮಿತವಾಗಿಲ್ಲ. ಕೌಟುಂಬಿಕ ಕಥೆಯೂ ಚಿತ್ರದಲ್ಲಿದೆ. ಇದು ನಾಯಕ ಕೇಂದ್ರಿತ ಸಿನಿಮಾ ವಾದರೂ, ಇಲ್ಲಿ ನಾಯಕಿಗೂ ಅಷ್ಟೇ ಆದ್ಯತೆ ಇದೆ. ನನಗೆ ಈ ಚಿತ್ರದಲ್ಲೂ ಒಳ್ಳೆಯ ಪಾತ್ರವೇ ಸಿಕ್ಕಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎನ್ನುವ ತೃಪ್ತಿ ನನಗಿದೆ.
‘ಪೊಗರು’ ಚಿತ್ರದಲ್ಲಿ ನಾನು ಗೀತಾ ಎನ್ನುವ ಟೀಚರ್ ಪಾತ್ರ ಮಾಡಿದ್ದೇನೆ. ಆಕೆ ತುಂಬಾ ಶಿಸ್ತಿನ ಹುಡುಗಿ, ನನ್ನ ಹಾಗೂ ನಾಯಕ ನದ್ದು ಒಂಥರಾ ಟಾಮ್ ಅಂಡ್ ಜೆರ್ರಿ ಗುದ್ದಾಟದ ಕಥೆ, ನಾಯಕನದ್ದು ಒರಟು ಸ್ವಭಾವವಾದರೆ ನನ್ನದು ಅದಕ್ಕೆ ತದ್ವಿರುದ್ದ. ನಮ್ಮಿಬ್ಬರ ನಡುವೆ ಯಾವಾಗಲೂ ಒಂಥರಾ ಶೀತಲಯುದ್ಧ ನಡೆಯುತ್ತಲೇ ಇರುತ್ತದೆ. ‘ಖರಾಬು..’ ಹಾಡಿನಲ್ಲಿ ತೋರಿಸಿ ದ್ದಾರೋ ಅದೇ ಥರ ನಮ್ಮಿಬ್ಬರ ಪಾತ್ರಗಳು ಸಾಗುತ್ತವೆ.
ಹೊಸ ಅಲೆ ಸೃಷ್ಟಿಸಿದ ಖರಾಬು
ಧ್ರುವ ಸರ್ಜಾ ಚಿತ್ರದ ಕೇಂದ್ರಬಿಂದು. ತಮ್ಮ ಪಾತ್ರಕ್ಕೆ ಡೆಡಿಕೇಷನ್ ಹೇಗಿರಬೇಕು ಎಂಬುದನ್ನು ಧ್ರುವ ಅವರನ್ನು ನೋಡಿ ಕಲಿಯಬಹುದು. ನಾನೆದುರಿಸಿದ ಮೊದಲ ಸೀನ್ನಲ್ಲಿ ಅವರ ರಗಡ್ ಅವತಾರ ನೋಡಿ ಅವಕ್ಕಾದೆ. ನಂತರ ಹೊಂದಿಕೊಂಡೆ. ಧ್ರುವ ಪ್ರತಿ ಗೆಟಪ್ ಮೆಚ್ಚುಗೆಯಾಗುತ್ತದೆ.
ಅದಕ್ಕೆ ಅವರ ಶ್ರಮವೇ ಕಾರಣ. ತಮ್ಮ ಪಾತ್ರಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ. ಚಿತ್ರದ ಡೈಲಾಗ್ ಅದಾಗಲೇ ಜನಮನ ಸೆಳೆದಿದೆ. ಆ ಪಂಚಿಂಗ್ ಡೈಲಾಗ್ ನನಗೂ ಬಲು ಇಷ್ಟ. ಇನ್ನು ಚಿತ್ರದ ಹಾಡು ಹೊಸ ಅಲೆ ಸೃಷ್ಟಿಸಿದೆ. ನಾನು ಜಿಮ್ನಲ್ಲಿ ಇರುವಾಗಲೂ ಇದೇ ಹಾಡು ಅಲ್ಲಿಯೂ ಕೇಳಿಬರುತ್ತದೆ. ಆ ಹಾಡಿನ ಚಿತ್ರೀಕರಣ ಸದಾ ನನ್ನನ್ನು ಕಾಡು ತ್ತದೆ. ಅದು ಹಾಡಿನ ಚಿತ್ರೀಕರಣ ಎನ್ನುವುದಕ್ಕಿಂತ, ಸೀನ್ ಶೂಟಿಂಗ್ ತರವೇ ಇತ್ತು ಎಂದರೆ ಚೆಂದ. ಅಷ್ಟೊಂದು ಕಲಾವಿದರನ್ನು ಬಳಸಿಕೊಂಡು ಹಾಡಿನ ಶೂಟಿಂಗ್ ನಡೆಸಿದ್ದು, ಒಳ್ಳೆಯ ಅನುಭವ ನೀಡಿತು.
ಟೀಕೆ, ಟ್ರೋಲ್ಗಳು ಕಾಮನ್
ಸಾಮಾಜಿಕ ಜಾಲತಾಣಗಳಲ್ಲಿ ಹೊಗಳಿಕೆ ತೆಗಳಿಕೆ ಸಾಮಾನ್ಯ. ಅದೆಲ್ಲವನ್ನೂ ಜೀರ್ಣಿಸಿ ಕೊಳ್ಳುವ ಶಕ್ತಿ ನಮ್ಮಲ್ಲಿರಬೇಕು. ಮೂರು ವರ್ಷಗಳ ಹಿಂದೆ ಸೋಷಿಯಲ್ ಮೀಡಿಯಾ ದಲ್ಲಿ ಬರುತ್ತಿದ್ದ ಟೀಕೆಗಳು, ಟ್ರೋಲ್ಗಳನ್ನು ನೋಡಿ ಕಣ್ಣೀರು ಸುರಿಸುತ್ತಿದ್ದೆ. ಈಗ ಅದನ್ನೆಲ್ಲವನ್ನು ತಾಳಿಕೊಳ್ಳುವ ಸಾಮರ್ಥ್ಯವಿದೆ. ಈಗ ಟೀಕೆಗಳು ಬರಲಿಲ್ಲ ಎಂದರೆ ಬೇಜಾರಾಗುತ್ತದೆ. ಪರವೋ ವಿರೋಧವೋ, ಒಟ್ಟಿನಲ್ಲಿ ಹೇಗಾದರೂ ಸದಾ ಸುದ್ದಿಯಲ್ಲಿರುತ್ತೇನೆ.
ಎರಡು ಕೋಟಿ ಸಂಭಾವನೆ ?
ಅಯ್ಯೋ… ಅಷ್ಟೊಂದು ಸಂಭಾವನೆ ಸಿಕ್ಕರೆ ನಂಗೂ ಖುಷಿ ಅಲ್ವೇ. ಹಾಗೆಲ್ಲ ಹೇಳಿದವರು, ಹೇಳುತ್ತಿರುವವರು ಯಾರೋ ನಂಗೆ ಗೊತ್ತಿಲ್ಲ. ಆದರೆ ನನ್ನ ಪ್ರಕಾರ ಅದೆಲ್ಲ ಸುಳ್ಳು. ವಾಸ್ತವದಲ್ಲಿ ನಾನು ಅಷ್ಟೊಂದು ಸಂಭಾವನೆ ಪಡೆಯುತ್ತಿಲ್ಲ.
ಒಂದು ವೇಳೆ ಅಷ್ಟು ಸಂಭಾವನೆ ಸಿಕ್ಕಿದ್ದರೆ ನಿಜಕ್ಕೂ ಅದು ನನಗೂ ಖುಷಿ ನೀಡುತ್ತಿತ್ತು. ಆದರೆ ಅದೆಲ್ಲ ಗಾಳಿಸುದ್ದಿ, ಅಷ್ಟೊಂದು ಸಂಭಾವನೆ ಬೇಕೆಂದು ಡಿಮ್ಯಾಂಡ್ ಮಾಡಿದರೂ ಅಲ್ಲಿ ಕೊಡುವವರು ಇಲ್ಲ. ಅವರಿಗೂ ಗೊತ್ತು, ಯಾರಿಗೆ ಡಿಮ್ಯಾಂಡ್ ಇದೆ, ಎಷ್ಟು ಕೊಡಬೇಕು ಅಂತ. ನಾವು ಕೇಳಿದಷ್ಟನ್ನೇ ಕೊಡುವುದಕ್ಕೂ ಕೂಡ ಬೇರೆ ಬೇರೆ ನಟಿಯರನ್ನು ಮಾದರಿಯಾಗಿ ತೋರಿಸು ತ್ತಾರೆ. ಅವರೇ ಅಷ್ಟು ಸಂಭಾವನೆ ಪಡೆಯುವಾಗ, ನೀವು ಯಾಕೆ ಇಷ್ಟೊಂದು ಕೇಳುತ್ತೀರಾ ಎನ್ನು ತ್ತಾರೆ.
ಒಳ್ಳೆಯ ಕಥೆ ಸಿಗಲಿ
ನನಗೆ ಕನ್ನಡ ಅಚ್ಚುಮೆಚ್ಚು. ಸದ್ಯ ಪರಭಾಷೆಗಳಲ್ಲಿ ಅವಕಾಶವಿರುವುದರಿಂದ ನಟಿಸುತ್ತಿದ್ದೇನೆ. ಮುಂದೆ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕಿದರೆ ಕನ್ನಡದಲ್ಲಿ ನಟಿಸಲು ನಾನು ಸಿದ್ಧವಾಗಿದ್ದೇನೆ. ಕಲಾವಿದರಿಗೆ ಯಾವುದೇ ಭಾಷೆಯ, ರಾಜ್ಯದ ಗಡಿಯಿರುವುದಿಲ್ಲ.