ಪ್ರಶಾಂತ್ ಟಿ.ಆರ್
1990 ರಲ್ಲಿ ಶಂಕರ್ನಾಗ್ ಅಭಿನಯದ ಮಹೇಶ್ವರ ಚಿತ್ರ ತೆರೆಗೆ ಬಂದು, ಭರ್ಜರಿ ಪ್ರದರ್ಶನ ಕಂಡಿತು. ಈ ಚಿತ್ರದಲ್ಲಿ ಬಾಲಕ ಶಂಕರ್ನಾಗ್ ಪಾತ್ರ ನಿರ್ವಹಿಸಿದ್ದ ಬಾಲನಟ ತೇಜ್ ಎಲ್ಲರ ಮೆಚ್ಚುಗೆಗೂ ಪಾತ್ರರಾದರು. ಎಳೆವಯಸ್ಸಿ ನಲ್ಲಿಯೇ ಉತ್ತಮ ನಟನೆ ತೋರಿ ಭರವಸೆ ಮೂಡಿಸಿದ್ದರು. ಈಗ ಅದೇ ನಟ ತೇಜ್, ಚಿತ್ರರಂಗಕ್ಕೆ ನಾಯಕನಾಗಿ ಮರಳಿದ್ದು, ರಿವೈಂಡ್ ಮೂಲಕ ಮುನ್ನುಡಿ ಬರೆದಿದ್ದಾರೆ. ವಿಭಿನ್ನ ಕಥೆಯ ಚಿತ್ರದಲ್ಲಿ ಮಿಂಚುತ್ತಿದ್ದಾರೆ. ಬಣ್ಣದ ಲೋಕಕ್ಕೆ ಮತ್ತೆ ಮರಳಿರುವುದು ತೇಜ್ಗೆ ಹರುಷ ತಂದಿದೆ. ಈ ಬಗ್ಗೆ ವಿ.ಸಿನಿಮಾಸ್ ನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ವಿ.ಸಿನಿಮಾಸ್ : ಚಂದನವನಕ್ಕೆ ಮರಳಿ ಬಂದಿದ್ದೀರ ಹೇಗಿದೆ ನಿಮ್ಮ ನಿರೀಕ್ಷೆ ?
ತೇಜ್ : ನಾನು ಬಣ್ಣಹಚ್ಚಿ ಹಲವು ವರ್ಷಗಳೇ ಕಳೆದಿದ್ದವು. ಈಗ ಮತ್ತೆ ನನ್ನ ನೆಚ್ಚಿನ ಕ್ಷೇತ್ರಕ್ಕೆ ಮರಳಿರುವುದು ಸಂತಸ ತಂದಿದೆ. ಜತೆಗೆ ನನ್ನ ಸಿನಿಮಾದ ಬಗ್ಗೆ ನಿರೀಕ್ಷೆಯೂ ಹೆಚ್ಚಿದೆ. ಒಳ್ಳೆಯ ಸಿನಿಮಾದ ಮೂಲಕ ಮರಳಬೇಕು ಎಂಬ ನನ್ನ ಕನಸು
ರಿವೈಂಡ್ ಮೂಲಕ ನನಸಾಗಿದೆ.
ವಿ.ಸಿ : ಇಷ್ಟು ವರ್ಷ ಚಿತ್ರರಂಗದಿಂದ ದೂರ ಉಳಿದಿದ್ದು ಯಾಕೆ?
ತೇಜ್: ನನಗೆ ಬಾಲ್ಯದಿಂದಲೂ ಚಿತ್ರರಂಗದಲ್ಲಿ ಸಕ್ರೀಯವಾಗಿರಬೇಕು ಎಂಬ ಆಸೆಯಿತ್ತು. ಆದರೆ ವಿದ್ಯಾಭ್ಯಾಸದ ಬಗ್ಗೆಯೂ ಗಮನಹರಿಸುವುದು ಅಗತ್ಯವಾಗಿತ್ತು. ಹಾಗಾಗಿ ನಮ್ಮ ತಂದೆ ತಾಯಿಯ ಆಸೆಯಂತೆ, ವ್ಯಾಸಂಗದತ್ತ ಗಮನಹರಿಸಿದೆ. ಉನ್ನತ ವ್ಯಾಸಂಗ ಮುಗಿಸಿದೆ. ವಿದೇಶ ದಲ್ಲಿ ಕೈತುಂಬಾ ಸಂಬಳ ಬರುವ ನೌಕರಿಯೂ ಇತ್ತು. ಆದರೂ ನನಗೆ ಚಿತ್ರರಂಗದ ಸೆಳೆತ ವಿತ್ತು. ನಟನೆಗೆ ಮರಳುವ ತುಡಿತವಿತ್ತು. ಆದರೆ ಅದಕ್ಕೆ ಅಗತ್ಯ ವೇದಿಕೆ ಸಿಕ್ಕಿರಲಿಲ್ಲ. ಈಗ ರಿವೈಂಡ್ ಮೂಲಕ ನಟನೆಗೆ ಮರಳುವ ಉತ್ತಮ ಅವಕಾಶ ಸಿಕ್ಕಿದೆ.
ವಿ.ಸಿನಿಮಾಸ್ : ರಿವೈಂಡ್ , ಶೀರ್ಷಿಕೆಯಲ್ಲಿಯೇ ಪಂಚಿಂಗ್ ಇದೆ. ಚಿತ್ರದಲ್ಲಿ ಏನು ಹೇಳಲು ಹೊರಟ್ಟಿದ್ದೀರಿ?
ತೇಜ್: ರಿವೈಂಡ್ ಹೊಸ ಜಾನರ್ನ ಸಿನಿಮಾ. ಪ್ರೇಕ್ಷಕರು ಏನು ಬಯಸುತ್ತಾರೋ ಅದೆಲ್ಲವೂ ಚಿತ್ರದಲ್ಲಿದೆ. ಇಲ್ಲಿ ಹೊಡಿ ಬಡಿ ಇಲ್ಲದೆ, ಬಿಲ್ಡಪ್ ಇಲ್ಲದೆ ನೈಜವಾಗಿ ಕಥೆಯನ್ನು ತೆರೆಗೆ ತರುವ ಪ್ರಯತ್ನ ಮಾಡಿದ್ದೇನೆ. ನಾವು ಅಂದುಕೊಂಡಂತೆ ಚಿತ್ರವೂ ಮೂಡಿಬಂದಿದೆ. ಹಾಗಾಗಿ ಪ್ರೇಕ್ಷಕರೂ ಕೂಡ ಚಿತ್ರವನ್ನು ಮೆಚ್ಚುತ್ತಾರೆ ಎಂಬ ಆಶಾಭಾವ ನಮ್ಮಲ್ಲಿದೆ. ರಿವೈಂಡ್ ಅಂದಾಕ್ಷಣ ಹಿಂದಿನ ನನೆಪಿನ ಕಥೆನವೇ ಚಿತ್ರದ ಸ್ಟೋರಿ ಅಂದುಕೊಳ್ಳಬಹುದು. ಆದರೆ ಇಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಥ್ರಿಲ್ಲರ್ ಸ್ಟೋರಿ ಇದೆ. ಅದನ್ನು ತೆರೆಯಲ್ಲಿ ನೋಡಿಯೇ ಆನಂದಿಸಬೇಕು.
ವಿ.ಸಿ: ಈ ಚಿತ್ರದಲ್ಲಿ ನಿಮ್ಮ ಪಾತ್ರ ?
ತೇಜ್ : ಇದು ನೈಜ ಘಟನೆ ಆಧಾರಿತ ಚಿತ್ರ. ಚಿತ್ರದಲ್ಲಿ ನಾನು ಪತ್ರಕರ್ತನಾಗಿ ಬಣ್ಣಹಚ್ಚಿದ್ದೇನೆ. ಸಮಾಜದಲ್ಲಿ ನಡೆಯುತ್ತಿರುವ ಹಗರಣವೇ ಚಿತ್ರದ ಮುಖ್ಯಕಥಾ ವಸ್ತು. ಹಗರಣವನ್ನು ಬಯಲು ಮಾಡುವ ನಾಯಕ ದುರುಳರಿಂದ ತನ್ನ ಕುಟುಂಬವನ್ನು ಹೇಗೆ ರಕ್ಷಿಸಿಕೊಳ್ಳುತ್ತಾನೆ. ಅದಕ್ಕಾಗಿ ಎಂತಹ ಸೈಟಿಂಫಿಕ್ ಪ್ಲಾನ್ ರೂಪಿಸುತ್ತಾನೆ. ಅದು ಏನು, ಹೇಗೆ ಎಂಬುದೇ ಚಿತ್ರದ ಒನ್
ಲೈನ್ ಸ್ಟೋರಿ. ಚಿತ್ರ ಸೈಟಿಫಿಕ್ ಜಾನರ್ನಲ್ಲಿ ಮೂಡಿ ಬಂದಿದೆ. ಅದನ್ನು ತೆರೆಯಲ್ಲಿ ನೋಡಿದರೆ ಚೆಂದ. ಹಿಂದಿನಿಂದಲೂ ನನಗೆ ಪತ್ರಕರ್ತರೆಂದರೆ ಪ್ರೀತಿ, ಗೌರವ. ಯಾಕೆಂದರೆ ಅವರೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದು. ಅಂತು ಈ ಚಿತ್ರದ ಮೂಲಕ ಜರ್ನ ಲಿಸ್ಟ್ ಆಗಿ ಪಾತ್ರ ನಿರ್ವಹಿಸುವ ಅವಕಾಶ ಸಿಕ್ಕಿತಲ್ಲ ಎಂಬ ಸಂತಸ ನನಗಿದೆ.
ವಿ.ಸಿ : ಕಥೆ ಹುಟ್ಟಿದ್ದು ಹೇಗೆ ?
ತೇಜ್ : ಮೀಸೆ ಚಿಗುರಿದಾಗ ಚಿತ್ರದ ಬಳಿಕ, ತಮಿಳಿನಲ್ಲಿ ಕಾದಲಕ್ ಸಾವಿಲ್ಲೈ ಎನ್ನುವ ತಮಿಳಿನ ಚಿತ್ರದಲ್ಲಿ ನಟಿಸಿದೆ. ಆ ಚಿತ್ರ ಪ್ರೇಕ್ಷಕರಿಗೆ ಹಿಡಿಸಿತು. ಬಳಿಕ ಮತ್ತೆರಡು ಸಿನಿಮಾದಲ್ಲಿ ಅಭಿನಯಿಸಿದೆ. ಆದರೂ ಕನ್ನಡದಲ್ಲಿ ಸಿನಿಮಾ ಮಾಡಬೇಕು ಎಂಬ ಆಸೆ ನನ್ನ ಮನದಲ್ಲಿ ಬಲವಾಗಿ ಬೇರೂರಿತ್ತು. ಅಂದೇ ಒಳ್ಳೆಯ ಚಿತ್ರದ ಮೂಲಕ ಚಂದನವನಕ್ಕೆ ಮರಳಲು ನಿರ್ಧರಿಸಿದೆ. ಹೊಸ ರೂಪದ ಕಥೆ ಬರೆಯಲು ತೊಡಗಿದೆ. ಹೀಗೆ ಹುಟ್ಟಿದ ಕಥೆಯೇ ರಿವೈಂಡ್.
ವಿ.ಸಿ : ನಟನೆಯ ಜತೆಗೆ ನಿರ್ದೇಶನದ ಜವಾಬ್ಧಾರಿಯನ್ನು ನಿಭಾಯಿಸಿದ್ದೀರಿ ಹೇಗಿತ್ತು ಅನುಭವ ?
ತೇಜ್ : ನಿಜವಾಗಿಯೂ ಚಿತ್ರ ನಿರ್ದೇಶನ ಚಾಲೆಂಜಿಂಗ್ ಆಗಿತ್ತು. ಕಥೆಗೆ ತಕ್ಕಂತೆ ಪ್ರತಿ ದೃಶ್ಯವೂ ಉತ್ತಮವಾಗಿ ಮೂಡಿಬರಲು, ಶತಾಯಗತಾಯ ಶ್ರಮಿಸಲೇಬೇಕು. ಪ್ರತಿಯೊಂದು ದೃಶ್ಯವೂ ಕೂಡ ಕಣ್ಣಿಗೆ ಕಟ್ಟುವಂತೆ ಮೂಡಿಬರುವ ನಿಟ್ಟಿನಲ್ಲಿ, ಎರಡೆರಡು ಬಾರಿ ಶೂಟ್ ಮಾಡಿದ್ದೇವೆ. ಚಿತ್ರಕ್ಕೆ ಹಲವರ ಸಹಕಾರ ಮಾರ್ಗದರ್ಶನವೂ ಇತ್ತು. ಹಾಗಾಗಿ ಚಿತ್ರ ಉತ್ತಮವಾಗಿ ಮೂಡಿಬಂದಿದೆ.
ವಿ.ಸಿ : ನೀವೂ ಕಲಾವಿದರ ಕುಟುಂಬದಿಂದ ಬಂದವರು, ಅವರ ಪ್ರಭಾವ ಬೀರಿದೆಯೆ ?
ತೇಜ್ : ನನ್ನ ಆಂಟಿ ಪ್ರಮೀಳಾ ಜೋಷಾಯ್ ಹಾಗೂ ಅಂಕಲ್ ಸುಂದರ್ರಾಜ್ ಅವರ ನಟನೆಯನ್ನು ನೋಡಿ ಬೆಳೆದವನು ನಾನು. ಹಾಗಾಗಿ ಅವರ ಪ್ರಭಾವ ಸಹಜವಾಗಿಯೇ ಬೀರಿದೆ. ಹಾಗಾಗಿಯೇ ಬಾಲನಟನಾಗಿ ನಟಿಸಿದೆ. ಇಂದು ನಾಯಕನಾಗಿ ರುವುದು ನನಗೆ ಹೆಮ್ಮೆ ಎನ್ನಿಸುತ್ತಿದೆ.
ವಿ.ಸಿ : ಚಿತ್ರರಂಗಕ್ಕೆ ಬರಲು ಸ್ಫೂರ್ತಿ ಯಾರು ?
ಮೊದಲೇ ಹೇಳಿದ ಹಾಗೆ ನನ್ನ ಕುಟುಂಬ. ಅದಕ್ಕೂ ಮಿಗಿಲಾಗಿ ಅಣ್ಣಾವ್ರ ನನಗೆ ಸ್ಫೂರ್ತಿಯಾದರು. ಅವರ ಚಿತ್ರಗಳಲ್ಲಿ ಹೆಚ್ಚು ಮೌಲ್ಯಗಳನ್ನು ಕಾಣುತ್ತಿದ್ದೆ. ಮುಖ್ಯವಾಗಿ ಸಮಾಜಕ್ಕೆ ಯಾವುದು ಅಗತ್ಯವೋ ಅದು ಅಣ್ಣಾವ್ರ ಚಿತ್ರದಲ್ಲಿ ಇರುತ್ತಿತ್ತು. ಅದುವೇ ನನಗೆ ಸ್ಫೂರ್ತಿ ತುಂಬಿತು.
ನನ್ನ ಕುಟುಂಬವು ನನಗೆ ಪ್ರೇರಣೆಯಾಗಿದೆ. ಅರ್ಜುನ್ ಸರ್ಜಾ ಅವರಿಂದ ಫೆಟ್ನೆಸ್ ಅರಿವು ಬೆಳೆಸಿಕೊಂಡೆ. ಧ್ರುವ ಸರ್ಜಾ ಅವರಿಂದ ಎಲ್ಲರೊಂದಿಗೂ ಬೆರೆಯುವ ಸರಳತೆಯನ್ನು ಮೈಗೂಡಿಸಿಕೊಂಡೆ.
90 ರ
ದಶಕದಲ್ಲಿ
ಶಂಕರ್ನಾಗ್ ಅವರೊಂದಿಗೆ
ನಟಿಸಿದ ಮಹೇಶ್ವರ ಚಿತ್ರ ಇಂದಿಗೂ
ನನ್ನ ಮೋಸ್ಟ್ ಫೆವರಿಟ್. ನಾನು
ಶಂಕರ್ನಾಗ್ ಸರ್ ಅವರೊಂದಿಗೆ ಕಳೆದ
ಆ ದಿನಗಳು ಸ್ಮರಣೀಯ, ಆ ಕ್ಷಣಗಳು
ಇಂದಿಗೂ ನನ್ನ ಮನದಲ್ಲಿ
ಹಸಿರಾಗಿವೆ.