ಕಾಲ ಉರುಳಿದರೂ, ಹಬ್ಬ ಬರುತ್ತದೆ. ಕರೋನಾ ಕಾಟ ಇದ್ದರೂ, ಹಬ್ಬದ ಆಚರಣೆ ಇದ್ದೇ ಇರುತ್ತದೆ. ಕತ್ತಲನ್ನು
ಓಡಿಸುವ, ಮನದ ಬೇಸರವನ್ನು ತೊಳೆಯುವ, ಎಲ್ಲೆಲ್ಲೂ ದೀಪಗಳ ಸಾಲನ್ನು ಮೆರೆಯುವ ದೀಪಾವಳಿಯು ಮತ್ತೆ ಬಂದಿದೆ. ವಿಶ್ವಕ್ಕೆ ವಿಶ್ವವೇ ಕರೋನಾ ಸೋಂಕಿನಿಂದ ಹೊರಬರುತ್ತಿರುವ ಈ ಸಂದರ್ಭದಲ್ಲಿ ದೀಪಗಳ ಹಬ್ಬ ದೀಪಾ ವಳಿ ಎಲ್ಲರ ಮನಸ್ಸು ಬೆಳಗುವುದು ನಿಸ್ಸಂಶಯ. ಅದೇ ಬದುಕಿನ ಭರವಸೆ ಅಲ್ಲವೆ!
ಕಮಲಾಕರ ಕೆ ಆರ್ ತಲವಾಟ
ನಮ್ಮ ದೇಶದ ವಿಶಿಷ್ಟ ಹಬ್ಬಗಳಲ್ಲಿ ದೀಪಾವಳಿ ಹಬ್ಬವೂ ಒಂದು. ಇದನ್ನು ಕರ್ನಾಟಕದ ಮಲೆನಾಡಿನಲ್ಲಿ ‘ದೊಡ್ಡ ಹಬ್ಬ’ ಎಂದು ಕರೆಯುತ್ತಾರೆ. ದೀಪಾವಳಿಯೆಂದರೆ ದೀಪಗಳ ಸಾಲು. ದೀಪಗಳ ಹಬ್ಬ. ದೀಪ ಜ್ಞಾನದ ಸಂಕೇತ. ಕತ್ತಲಿನಿಂದ ಬೆಳಕಿನೆಡೆಗೆ ಪಯಣ.
ಎಲ್ಲರ ಮನೆಯಲ್ಲಿ ಮನೆಯ ಒಳಗೆ, ಹೊರಗಡೆ ದೀಪಹಚ್ಚಿ ಆಚರಿಸಲಾಗುತ್ತದೆ. ಮದುವೆಯಾದ ಹೊಸ ಜೋಡಿಗೆ ಇದು ಹೊಸ ಹಬ್ಬ. ಅವರಿಗೆ ವಿಶೇಷ ಆದ್ಯತೆ. ಮಳೆಗಾಲ ಮುಗಿದು ಎಲ್ಲೂ ಹಸಿರು ಸೀರೆ ಹೊದ್ದ ಗz, ತೋಟ, ಗುಡ್ಡಬೆಟ್ಟಗಳು ಕಣ್ಮನ ಸೆಳೆಯುತ್ತವೆ. ಮಲೆನಾಡಿನ ದೀಪಾವಳಿಯ ಸಂಭ್ರಮದ ಆಚರಣೆ ಶುರುವಾಗುವುದು ದೀಪಾವಳಿಯ ಕೆಲ ದಿನಗಳ ಮೊದಲೆ. ಮನೆಯ ಒಳಗಡೆ, ಹೊರಗಡೆ ಎಲ್ಲ ಕಡೆ ಇರುವ ಧೂಳು, ಕಸಕಡ್ಡಿಗಳನ್ನು ದೂರಮಾಡಿ ಸ್ವಚ್ಛಗೊಳಿಸಲಾಗುತ್ತದೆ. ಮನೆಯ ಮುಂದಿನ, ಹಿಂದಿನ ಅಂಗಳಗಳು, ಗೋಪೂಜೆ ಮಾಡುವ ಕೊಟ್ಟಿಗೆಗಳು ಒಪ್ಪ ಓರಣಗೊಳ್ಳುತ್ತವೆ.
ಮನೆಯವರಿಗೆ ಹೊಸ ಬಟ್ಟೆಗಳ ಕೊಡುಗೆ. ಆದರೆ ಮಲೆನಾಡಿನ ಹಳ್ಳಿಗಳಲ್ಲಿ ಈ ದೀಪಾವಳಿಯ ಹಬ್ಬದ ಸಮಯದಲ್ಲಿ ನಗರ ಗಳಲ್ಲಿ ಹೊಡೆಯುವಂತೆ ಪಟಾಕಿ ಸಿಡಿಸುವುದಿಲ್ಲ. ಪಟಾಕಿ ಸಂಭ್ರಮ ಸಾಮಾನ್ಯವಾಗಿ ಗಣೇಶನ ಹಬ್ಬದಂದು. ದೀಪಾವಳಿ ಯನ್ನು ಸಾಮಾನ್ಯವಾಗಿ ಮೂರು ದಿನ ಆಚರಿಸಲಾಗುತ್ತದೆ. ನರಕಚತುರ್ಥಿ, ಅಮವಾಸ್ಯೆ ಮತ್ತು ಬಲಿಪಾಡ್ಯಮಿ.
ನರಕ ಚತುರ್ದಶಿ
ಹಬ್ಬದ ಮೊದಲನೆ ದಿನ ನರಕಚತುರ್ಥಿ. ಇದರ ಪೌರಾಣಿಕ ಹಿನ್ನೆಲೆ ನೋಡೋಣ. ನರಕಾಸುರ ಬ್ರಹ್ಮನನ್ನು ತಪಗೈದು, ‘ನಾನು ಭೂಮಿ ತಾಯಿಯಿಂದ ಜನಿಸಿದ್ದರಿಂದ ನನ್ನ ಸಾವು ತಾಯಿಯಿಂದ ಮಾತ್ರ ಬರಲಿ’ ಎಂದು ವರ ಪಡೆಯು ತ್ತಾನೆ. ಮುಂದೆ ಲೋಕಕಂಟಕನಾಗಿ ದೇವಲೋಕಕ್ಕೆ ಮುತ್ತಿಗೆ ಹಾಕುತ್ತಾನೆ ಮತ್ತು ಅಲ್ಲಿಯ ಸೀಯರನ್ನು ಬಂಧಿಸಿ ಸೆರೆ ಯಲ್ಲಿಡುತ್ತಾನೆ. ದೇವತೆಗಳೆ ಕೃಷ್ಣನ ಮೊರೆ ಹೋದಾಗ ಕೃಷ್ಣ ಸತ್ಯಭಾಮೆಯೊಡನೆ (ಹಿಂದೊಮ್ಮೆ ಯುದ್ಧದಲ್ಲಿ ಕೃಷ್ಣನೊಡನೆ ತಾನು ಜೊತೆಯಾಗ ಬೇಕೆಂದು ಬಯಸಿದ್ದಳಂತೆ) ನರಕಾಸುರನ ವಧೆಗೆ ಹೊರಡುತ್ತಾನೆ. ಘನಘೋರ ಯುದ್ಧದಲ್ಲಿ ನರಕಾಸುರ ಒಮ್ಮೆ ಅಸ್ತ್ರವೊಂದ ನ್ನು ಕೃಷ್ಣನ ಮೇಲೆ ಎಸೆದಾಗ ಅದು ಕೃಷ್ಣನ ಎದೆಗೆ ಬಡಿದು ಭಗವಂತ ಪ್ರಜ್ಞೆ ತಪ್ಪಿ ಬೀಳುತ್ತಾನೆ.
ಭೂ ದೇವಿಯ ಅವತಾರಿಣಿಯಾದ ಸತ್ಯಭಾಮೆ ಸಿಟ್ಟಾಗಿ ಅಸ ಪ್ರಯೋಗಿಸಿ ನರಕಾಸುರನ ತಲೆ ಕತ್ತರಿಸುತ್ತಾಳೆ. ಬಂಧಿಸಿದ ಸೀಯರ ಬಿಡುಗಡೆಯಾಗುತ್ತದೆ. ನರಕಾಸುರನ ವಧೆಯಾದುದು ಆಶ್ವಯುಜ ಮಾಸದ ಕೃಷ್ಣಪಕ್ಷದ ಚತುರ್ದಶಿಯಂದು. ಇದೇ ನರಕ ಚತುರ್ದಶಿಯಾಯಿತು. ಕೃಷ್ಣ , ಸತ್ಯ ಭಾಮೆಯರು ನರಕಾಸುರನನ್ನು ಸಂಹರಿಸಿದ ನಂತರ ತಮ್ಮ ರಾಜ್ಯಕ್ಕೆ ತೆರಳಿ ಅಭ್ಯಂಜನ ಸ್ನಾನಗೈದರಂತೆ. ಹಾಗಾಗಿ ನರಕಚತುರ್ದಶಿಯಂದು ಎಣ್ಣೆ ಸ್ನಾನ ಮಾಡುವ ಆಚರಣೆ ರೂಡಿಯಲ್ಲಿದೆ.
ನರಕ ಚತುರ್ದಶಿಯ ಹಿಂದಿನ ದಿನ ಬಚ್ಚಲು ಮನೆಯ ಹಂಡೆಗೆ ಮತ್ತು ನೀರು ಸಂಗ್ರಹಿಸುವ ಸಲಕರಣೆಗಳನ್ನೆ ತೊಳೆದು ನೀರು ತುಂಬಿ ಹಂಡೆಗೆ ಶೇಡಿ, ಕೆಮ್ಮಣ್ಣಿನಿಂದ ಚಿತ್ತಾರ ಬರೆದು ಶೀಂಡ್ಲೆ ಕಾಯಿ ಬಳ್ಳಿಯಿಂದ (ಕಹಿ ಇರುವ ಸವತೆಕಾಯಿ ಮಾದರಿಯ ಒಂದು ಬಳ್ಳಿ) ಸುತ್ತಿ, ಬೆಳಿಗ್ಗೆ ಬೇಗನೆ ಸ್ನಾನ ಮಾಡುವ ರೂಢಿ. ನರಕಚತುರ್ದಶಿಯ ದಿನದ ಕೆಂಪು ಕುಂಬಳದಿಂದ, ಬಾಳೆ ಎಲೆ ಯಲ್ಲಿ ಹೊಯ್ದ ಕೊಟ್ಟೆ ಕಡುಬು (ಬೂರೆ ಕಡುಬು) ಸಿಹಿ ಖಾದ್ಯ.
ಇದನ್ನು ಜಾನುವಾರುಗಳಿಗೆ ತಿನ್ನಲು ಕೊಡುತ್ತಾರೆ. ಬಲೀಂದ್ರನ ಪೂಜೆ ಕಲಶದಲ್ಲಿ ಅಕ್ಕಿ ತುಂಬಿ, ತೆಂಗಿನ ಕಾಯಿ ಇಟ್ಟು ಪಚ್ಚೆತೆನೆ
(ಮಲೆನಾಡಿನ ತೋಟದಲ್ಲಿ ಬೆಳೆಯುವ ಈ ಗಿಡವನ್ನು ಪೂಜೆಗೆ ಮತ್ತು ದನಕರುಗಳ ಕುತ್ತಿಗೆಗೆ ಕಟ್ಟುವುದು ಪದ್ಧತಿ), ಮಾವಿನ
ಚಂಡೆ ಕಟ್ಟಿ, ಹೂ ಮಾಲೆ ಹಾಕಿ , ಅಡಿಕೆ ಸಿಂಗಾರದಿಂದ ಸಿಂಗರಿಸಿ ನರಕಚತುರ್ದಶಿಯಂದು ಬಲೀಂದ್ರನನ್ನು ಭೂಮಿಗೆ ಬರಮಾಡಿಕೊಡಲಾಗುತ್ತದೆ. ಅಂದಿನಿಂದ ಬಲಿಪಾಡ್ಯಮಿಯ ರಾತ್ರಿಯವರೆಗೆ ಬಲೀಂದ್ರನಿಗೆ ಮಧ್ಯಾಹ್ನ ಮತ್ತು ರಾತ್ರಿ ಮಂಗಳಾ ರತಿ ಮಾಡಿ ಪೂಜಿಸಲಾಗುತ್ತದೆ. ಪಾಡ್ಯದ ದಿನ ರಾತ್ರಿ ಪೂಜೆ ಮಾಡಿ ಬಲೀಂದ್ರನಿಗೆ ಮನೆಯ ಮುಂದಿನ ಬೀದಿಯಲ್ಲಿ ದೀಪದ ದೊಂದಿ ಹಚ್ಚಿ ‘ದಿಪ್ಪಡ್ ದಿಪ್ಪಡ್ ದೀವಳಿಗೆಯೊ ಹಬ್ಬಕ್ಕೆ ಮೂರು ಹೋಳಿಗೆಯೊ’ ಎಂದು ಕೂಗುತ್ತಾ ವಿದಾಯ ಹೇಳಲಾಗುತ್ತದೆ. ಇದನ್ನು ‘ಬಲೀಂದ್ರನನ್ನ ಕಳುಹಿಸಿಕೊಡುವುದು’ ಎಂದು ಕರೆಯುತ್ತಾರೆ.
ಅಮವಾಸ್ಯೆಯ ಲಕ್ಷ್ಮೀ ಪೂಜೆ ಇದನ್ನು ಹಬ್ಬದ ಎರಡನೇ ದಿನ ಆಚರಿಸಲಾಗುತ್ತದೆ. ಇದನ್ನು ಹೆಚ್ಚಾಗಿ ವ್ಯಾಪಾರಿ ವರ್ಗ ಮಾಡು ತ್ತಾರೆ. ಮಲೆನಾಡಿನ ಹಳ್ಳಿಗಳಲ್ಲಿ ಲಕ್ಷ್ಮೀ ಪೂಜೆಯನ್ನು ಬಲಿಪಾಡ್ಯಮಿ ದಿನದಂದೇ ಮಾಡುತ್ತಾರೆ.
ಬಲಿ ಪಾಡ್ಯಮಿಯ ಪೂಜೆ
ದೀಪಾವಳಿಯ ಮೂರನೆಯ ದಿನದ ಬಲಿ ಪಾಡ್ಯಮಿಯೇ ನಮಗೆ ವಿಶೇಷ ದಿನ. ಈ ಹಬ್ಬ ವಿಶೇಷವಾಗಿ ದನಕರುಗಳಿಗೆ ಮೀಸಲು. ಕೊಟ್ಟಿಗೆಯ ಬಾಗಿಲಿಗೆ, ಮನೆಯ ಎದುರಿನ ರಸ್ತೆಯಲ್ಲಿ ಕೆಂಪು ಗೋಟಡಿಕೆ ಸೇರಿಸಿದ ಮಾವಿನ ತೋರಣ ಕಟ್ಟುತ್ತಾರೆ. ಬೆಳ್ಳಂ ಬೆಳಿಗ್ಗೆ ದನಕರುಗಳ ಮೈ ತೊಳೆಯುತ್ತಾರೆ. ಹಸುಗಳ ಮೈಗೆ, ಕೋಡುಗಳಿಗೆ ಬಣ್ಣಬಳಿದು ಶೃಂಗರಿಸಲಾಗುತ್ತದೆ. ನೀರಿನಲ್ಲಿ ಶೇಡಿ, ಕೆಮ್ಮಣ್ಣು ಬೆರೆಸಿ ಲೋಟಗಳ ಸಹಾಯದಿಂದ ಗೊರಸಿನಾಕಾರದಲ್ಲಿ ಕಾಣುವಂತೆ ಜಾನುವಾರುಗಳ ಮೈಮೇಲೆ ಅದನ್ನು ಚಿತ್ತಾರವಾಗಿ ಬಳಿಯುತ್ತಾರೆ.
ಪಚ್ಚೆತೆನೆ, ಅಡಿಕೆ ಸಿಂಗಾರ, ಚೆಂಡು ಹೂವು, ಗೋಟಡಿಕೆ ಎಲ್ಲ ಸೇರಿಸಿ ಮಾಲೆ ಮಾಡಿ ಅವುಗಳ ಕೊರಳಿಗೆ ಕಟ್ಟಲಾಗುತ್ತದೆ. ಅಂದು ಹೊಸ ಗಂಟೆಗಳನ್ನೂ ಅವುಗಳ ಕೊರಳಿಗೆ ಕಟ್ಟಿ ಸಂಭ್ರಮಿಸಲಾಗುತ್ತದೆ. ನಂತರ ಮನೆಮಂದಿಯೆ ಸೇರಿಕೊಂಡು ಜಾಗಟೆ ಸದ್ದಿನೊಂದಿಗೆ ಗೋಪೂಜೆ ನಡೆಯುತ್ತದೆ. ಹಸು, ಕರು, ಎತ್ತುಗಳ ಕಾಲು ತೊಳೆದು ಅರಸಿನ ಕುಂಕುಮ ಹಚ್ಚಿ ಆರತಿ ಬೆಳಗಿ ನಮಸ್ಕರಿಸುತ್ತಾರೆ. ಎಲ್ಲ ಹಸುಕರುಗಳಿಗೆ ಅನ್ನದ ಚೆರು, ರೊಟ್ಟಿ ಸಮರ್ಪಣೆಯಾಗುತ್ತದೆ. ಈ ರೊಟ್ಟಿ , ಚೆರುವನ್ನು ಮನೆಯ ಹೆಂಗಸರು ಬೆಳಿಗ್ಗೆ 4-5 ಗಂಟೆಯ ಒಳಗೆ ತಯಾರು ಮಾಡುತ್ತಾರೆ. ನಂತರ ಎಲ್ಲರ ಮನೆಯ ಬಣ್ಣಬಣ್ಣದಿಂದ ಶೃಂಗಾರಗೊಂಡ ಹಸುಗಳನ್ನು ಒಟ್ಟಿಗೆ ಊರ ಹೊರಗಿನ ಗುಡ್ಡಕ್ಕೆ ಮೇಯಲು ಬಿಡುತ್ತಾರೆ.
ಎಲ್ಲ ಮನೆಯವರೂ ತಿಂಡಿ ತಿಂದು ಊರೊಟ್ಟಿನ ದೇವಸ್ಥಾನಕ್ಕೆ ಹೋಗಿ ಹಣ್ಣು ಕಾಯಿ ಒಡೆಸಿ ಪೂಜೆ ಮಾಡಿಸುತ್ತಾರೆ. ಮನೆ ಯಲ್ಲಿ ಎತ್ತುಗಳನ್ನು ಸಾಕಿದವರು ಅವುಗಳನ್ನು ಚೆಂಡು ಮೊದಲಾದ ಹೂಗಳಿಂದ ಅಲಂಕರಿಸಿಕೊಂಡು ದೇವಸ್ಥಾನಕ್ಕೆ
ಹೊಡೆದುಕೊಂಡು ಬಂದು ಅವುಗಳಿಗೂ ಆರತಿ ಎತ್ತಿ ದೇವರ ಆಶೀರ್ವಾದ ಬೇಡುತ್ತಾರೆ. ನಂತರ ಎಲ್ಲರ ಮನೆಯವರೂ
ಊರಲ್ಲಿಯ ಬೂತನ ಕಟ್ಟೆಗೆ, ಚೌಡಿ, ಜಟಕ ಮೊದಲಾದ ದೇವರುಗಳಿಗೆ ತೆಂಗಿನಕಾಯಿ ಒಡೆದು ಪೂಜೆ ಮಾಡಿ ನಮ್ಮ ಮನೆಯ ತೋಟ, ಜನ, ಜಾನುವಾರುಗಳ ರಕ್ಷಣೆ ಮಾಡು ಎಂದು ಬೇಡಿಕೊಳ್ಳುತ್ತಾರೆ.
ಆಯುಧ ಪೂಜೆ
ಮಧ್ಯಾಹ್ನದ ಹೊತ್ತಿಗೆ ತೋಟದ, ಗದ್ದೆಯ ಕೆಲಸಕ್ಕೆ ಉಪಯೋಗಿಸುವ ಎಲ್ಲಾ ಸಲಕರಣೆಗಳನ್ನ – ಗುದ್ದಲಿ, ಹಾರೆ, ಪಿಕಾಸಿ, ಕತ್ತಿ, ಕೊಡಲಿ, ಬುಟ್ಟಿ, ಹಗ್ಗ ಮುಂತಾದವುಗಳ ಜೊತೆಗೆ ಹೊಸ -ಸಲು ಅಡಿಕೆ ಗೋಟಿನ ಕೊನೆಯನ್ನು ಕೊಯ್ದು ತಂದು ಕೊಟ್ಟಿಗೆ ಯಲ್ಲಿ ಒಂದೆಡೆ ಸೇರಿಸುತ್ತಾರೆ. ಇದರ ಜೊತೆಗೆ ಅಡುಗೆ ಮನೆಯಲ್ಲಿ ತರಕಾರಿ ಹೆಚ್ಚಲು ಉಪಯೋಗಿಸುವ ಕತ್ತಿ, ಒರಳುಗುಂಡು, ಒನಕೆ ಮುಂತಾದವುಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ಇದನ್ನು ‘ಗಡಿಮೆಟ್ಲು ಪೂಜೆ’ ಎಂದು ಆಡು ಭಾಷೆಯಲ್ಲಿ ಕರೆಯುವ
ಪದ್ಧತಿ. ಸಾಮಾನ್ಯವಾಗಿ ಮಲೆನಾಡಿನ ಹಳ್ಳಿಗಳಲ್ಲಿ ವಾಹನಗಳ ಪೂಜೆ ಕೂಡ ದೀಪಾವಳಿಯಂದೇ ನಡೆಯುತ್ತದೆ (ನಗರಗಳ ಲ್ಲಿರುವಂತೆ ವಿಜಯದಶಮಿಯಂದು ಮಾಡುವುದಿಲ್ಲ).
ಲಕ್ಷ್ಮೀ ಪೂಜೆ ಕೂಡ ಇದರೊಟ್ಟಿಗೆ ಮಾಡಲಾಗುತ್ತದೆ. ಈ ಹಬ್ಬದಲ್ಲಿ ಗೋವುಗಳಿಗೆ, ಚೌಡಿ ಭೂತ, ಊರಿನ ದೇವಸ್ಥಾನದಲ್ಲಿ, ಮನೆಯ ದೇವರಿಗೆ ಹೀಗೆ ಎಲ್ಲಾ ಕಡೆಯೂ ತೆಂಗಿನ ಕಾಯಿ ಒಡೆಯುವುದರಿಂದ ಅದರಿಂದಲೇ ತಯಾರಿಸಲ್ಪಡುವ ಹೋಳಿಗೆ ‘ಕಾಯಿ ಹೋಳಿಗೆ’ ವಿಶೇಷ ತಿನಿಸು. ಹೊಸ ಭತ್ತದ ತೆನೆಯ (ಹೊಸ ಕದ್ರು ಎಂದು ಇದನ್ನು ಕರೆಯುತ್ತಾರೆ) 4-6 ಕಾಳುಗಳನ್ನು ಬಿಡಿಸಿ ಸೇರಿಸುತ್ತಾರೆ. ಮಧ್ಯಾಹ್ನದ ಮೇಲೆ ಮತ್ತೆ ದೇವಸ್ಥಾನದಲ್ಲಿ ಸಾಕಷ್ಟು ಜನ ಸೇರುತ್ತಾರೆ ಅದರಲ್ಲೂ ಹೊರಗಡೆ ಕೆಲಸದಲ್ಲಿರುವವ ಹುಡುಗ ಹುಡುಗಿಯರು, ಹೊಸದಾಗಿ ಮದುವೆಯಾದ ಜೋಡಿಗಳು, ಹೆಂಗಸರು ಸೇರಿ ಲಘು ಹರಟೆ, ಹಾಸ್ಯ, ಅಂದಿನ ಹಬ್ಬದ ಅಡುಗೆಯ ಸ್ವಾದ ವಗೈರಾ,ವಗೈರಾ ಬಗೆಗೆ ಮಾತುಕತೆ.
ದೇವಸ್ಥಾನದಿಂದ ಮನೆಗೆ ಹಿಂದುರುಗುವ ಹೊತ್ತಿಗೆ ಬೆಟ್ಟಕ್ಕೆ ಮೇಯಲು ಬಿಟ್ಟು ವಾಪಾಸು ಬಂದ ಹಸುಗಳಿಗೆ ಮತ್ತು ಮನೆಯ ಕಟ್ಟಿ ಹಾಕಿದ ಹಸುಗಳಿಗೆ ದೃಷ್ಟಿ ಬಳಿದು ಆರತಿ ಮಾಡುತ್ತಾರೆ. ನಂತರ ರಾತ್ರಿ 7-8 ಗಂಟೆಗೆ ಈ ಮೊದಲೇ ತಿಳಿಸಿದಂತೆ ಬಲೀಂದ್ರ ನನ್ನು ಪೂಜೆ ಮಾಡಿ ಅವನನ್ನು ಮತ್ತೆ ಪಾತಾಳ ಲೋಕಕ್ಕೆ ಕಳುಹಿಸುವಲ್ಲಿಗೆ ದೊಡ್ಡ ಹಬ್ಬದ ಪೂಜೆ ಪುನಸ್ಕಾರಗಳಿಗೆ ಮಂಗಳ.
ಬೂರ್ಗಳು ಹಾಯುವುದು
ಇದು ಮಲೆನಾಡಿನ ಹಳ್ಳಿಗಳಲ್ಲಿ ಕಾಣ ಬರುವ ಒಂದು ವಿಶೇಷ ಆಚರಣೆ. ನರಕಚತುರ್ದಶಿಯ ಹಿಂದಿನ ತೋಟದಲ್ಲಿರುವ ಎಳೆನೀರು, ಮನೆಯ ಹಿತ್ತಲಿನಲ್ಲಿ ಬೆಳೆಯುವ ಸವತೆಕಾಯಿ ಮೊದಲಾದ ಸಣ್ಣಪುಟ್ಟ ತರಕಾರಿಗಳನ್ನು ಕದಿಯಬಹುದು. ಅದಕ್ಕೆ ಯಾರ ಆಕ್ಷೇಪವಿರುವುದಿಲ್ಲ.
ಊರಿನ ಹಲವು ಹುಡುಗರೆ ಸೇರಿ ಖುಷಿಗಾಗಿ ಮಾಡುವ ಒಂದು ಕಾರ್ಯ. ಇದನ್ನು ತಡೆಯಲು ಹಲವರು ತೆಂಗಿನಕಾಯಿ, ತರಕಾರಿ ಗಳನ್ನು ಆ ದಿನದ ಮುಂಚೆಯೇ ಕೊಯ್ಯುತ್ತಾರೆ. ತೆಂಗಿನಕಾಯಿ, ಎಳೆನೀರನ್ನು ಕದಿಯುವುದನ್ನು ತಡೆಯಲು ಕೆಲ ಮನೆಯವರು ನಿz ಬಂದರೂ ಆಕಳಿಸುತ್ತಾ ತೆಂಗಿನ ಮರಕ್ಕೆ ಆಗಾಗ ರಾತ್ರಿ ಬ್ಯಾಟರಿ ಬಿಟ್ಟು ಕಾವಲು ಕಾಯುವುದಿದೆ. ಆದರೆ ಕೆಲವು ಕಿಲಾಡಿ ಹುಡುಗರು ಮನೆಯ ಹೊರ ಬಾಗಿಲಿಗೆ ಚಿಲಕ ಹಾಕಿ, ಮನೆಯವರಿಗೆ ರಾತ್ರಿ 2-3 ಗಂಟೆಗೆ ನಿz ಹತ್ತಿದ ಮೇಲೆ ಕಳ್ಳತನ ಮಾಡುವು ದುಂಟು. ಆದರೆ ಆಧುನಿಕತೆಯ ಗಾಳಿ ಬೀಸಿದ ನಂತರ, ಇತ್ತೀಚೆಗೆ ಇದು ಹೆಚ್ಚು ಪ್ರಚಲಿತದಲ್ಲಿಲ್ಲ.
ಹಬ್ಬ ಹಾಡುವುದು ಅಥವಾ ಅಂಟಿಗೆ-ಪಂಟಿಗೆ
ಇದು ಮಲೆನಾಡಿನ ಭಾಗದಲ್ಲಿ ತುಂಬಾ ಪ್ರಚಲಿತದಲ್ಲಿರುವ, ಕೇಳುಗರಿಗೆ, ನೋಡುವವರಿಗೆ ತುಂಬಾ ಖುಷಿಕೊಡುವ ಒಂದು ಜಾನಪದ ಕಲೆ. ಹಬ್ಬದ ದಿನ ಅಥವಾ ಮಾರನೆ ದಿನಗಳಲ್ಲಿ ರಾತ್ರಿಯಲ್ಲಿ ಕೆಲವೊಂದು ಪಂಗಡಗಳು ತಂಡ ಕಟ್ಟಿಕೊಂಡು ಊರಿನ
ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಜ್ಯೋತಿಯನ್ನು ಹಚ್ಚಿಕೊಂಡು ‘ಧಿಮಿಸಾಲೆನಿರಣ್ಣಾ ಧಿಮಿಸಾಲನಿರೊ’ ಎಂದು ರಾಗವಾಗಿ ಕೂಗುತ್ತಾ ಅದಕ್ಕೆ ಉಳಿದವರು ‘ಹುಯ್ಯೋ’ ಎಂದು ಕೋರಸ್ನಲ್ಲಿ ಕೂಗಿ ಮನೆಯವರನ್ನು ಎಚ್ಚರಗೊಳಿಸಿ ಜಾನಪದ ಹಾಡು ಗಳನ್ನು ಹಾಡುತ್ತಾ ಮನೆಮನೆಗೂ ತೆರಳಿ ಮನೆಯವರಿಗೆ ಜ್ಯೋತಿಯನ್ನು ನೀಡಿ ಅವರು ಕೊಡುವ ದುಡ್ಡು, ತೆಂಗಿನಕಾಯಿ, ದೀಪಕ್ಕೆ ಎಣ್ಣೆ ಮುಂತಾದವುಗಳನ್ನು ಸ್ವೀಕರಿಸುತ್ತಾರೆ.
ತಂಡದ ಚಿಕ್ಕಮಕ್ಕಳು ಹೋಳಿಗೆ, ಕಡುಬಿಗೆ ದುಂಬಾಲು ಬೀಳುತ್ತಾರೆ. ಮನೆಯ ಬಾಗಿಲು ತೆಗೆಸುವ, ದೀಪಕ್ಕೆ ಎಣ್ಣೆ ಹಾಕುವ, ಹೊಸ ಜೋಡಿಯ, ಹೆಣ್ಣುಮಕ್ಕಳನ್ನು ನವಿರಾಗಿ ಕೀಟಲೆ ಮಾಡುವ ಹಾಡುಗಳನ್ನು ತಂಡದ ಒಬ್ಬಿಬ್ಬರು ಹಾಡುತ್ತಾರೆ. ತಂಡದ ಉಳಿದವರು ರಾಗವಾಗಿ ದನಿಗೂಡಿಸುವ ಇಂತಹ ಹಾಡುಗಳು ಮನಸ್ಸಿಗೆ ಮುದಕೊಡುತ್ತದೆ. ಎರಡು ತಂಡಗಳಿದ್ದರೆ ಅವು ಪರಸ್ಪರ ಎದುರಾಗಬಾರದು ಮತ್ತು ಹೊರಟ ಮೇಲೆ ದೀಪ ಆರಬಾರದು ಎಂಬ ನಂಬುಗೆ ಇದೆ. ಇವರ ಈ ಸಂಚಾರ ಮತ್ತು ಹಬ್ಬ
ಹಾಡುವುದು ಬೆಳಗಿನ ಜಾವದವರೆಗೂ ಮುಂದುವರಿಯುತ್ತದೆ.
ತನ್ನ ರಾಜ್ಯ ದಾನ ಮಾಡಿದ ಬಲಿ ಚಕ್ರವರ್ತಿ
ಬಲಿ ಚಕ್ರವರ್ತಿ ವಿಷ್ಣು ಭಕ್ತ. ಭಕ್ತ ಪ್ರಹ್ಲಾದನ ಮೊಮ್ಮಗ. ಸಾತ್ವಿಕ. ಅಂದು ದೇಶ ಸುಭಿಕ್ಷವಾಗಿತ್ತು. ಮಹಾದಾನಿಯೂ ಆಗಿದ್ದ. ಕೇಳಿದವರಿಗೆ ಇಲ್ಲವೆನ್ನದವ. ಆತನ ಗುರುಗಳಾದ ಶುಕ್ರಾಚಾರ್ಯ ಅಪಾತ್ರ ದಾನವಾಗಬಾರದು ಎಂದು ಬಲಿಗೆ ಸಲಹೆ ಇತ್ತರೂ
ಕೇಳಲಿಲ್ಲ. ಆತ ಮಹಾಯಾಗ ಮಾಡುವಾಗ ಎಲ್ಲರಿಗೂ ದಾನ ಕೊಡುತ್ತಿರುವ ಸಂದರ್ಭದಲ್ಲಿ ವಿಷ್ಣು ವಾಮನರೂಪದಲ್ಲಿ ಯಾಗ ನಡೆಯುವ ಸ್ಥಳಕ್ಕೆ ಬಂದು ಮೂರು ಹೆಜ್ಜೆ ದಾನ ಕೇಳುತ್ತಾನೆ. ಇದನ್ನು ತಮ್ಮ eನದಿಂದ ತಿಳಿದ ಗುರು ಶುಕ್ರಾಚಾರ್ಯರು ಬಲಿಗೆ ಮಾತುಕೊಡಬೇಡವೆನ್ನುತ್ತಾರೆ. ಆದರೆ ಕೊಟ್ಟ ಮಾತಿಗೆ ತಪ್ಪದ ಬಲೀಂದ್ರನು ದಾನ ನೀಡಲು ಕಮಂಡಲದಿಂದ ನೀರನ್ನು ದಾನ ಸ್ವೀಕರಿಸುವ ವಾಮನನ ಹಸ್ತಕ್ಕೆ ಹಾಕುವಾಗ ಶುಕ್ರಾಚಾರ್ಯರು ಕಮಂಡಲದ ನೀರು ಬರುವ ರಂದ್ರದಲ್ಲಿ ಕಪ್ಪೆಯ ರೂಪದಲ್ಲಿ ಸೇರಿಕೊಳ್ಳುತ್ತಾರೆ. ವಿಷ್ಣುವಿಗೆ ಇದು ಗೊತ್ತಾಗಿ ನೀರು ಬರುವ ರಂದ್ರದಲ್ಲಿ ಕಸ ಸಿಕ್ಕಿಹಾಕಿಕೊಂಡಿದೆ. ಅದನ್ನು
ತೆಗೆಯುತ್ತೇನೆಂದು ದರ್ಭೆಯಿಂದ ರಂದ್ರವನ್ನು ಚುಚ್ಚಿದಾಗ ಕಪ್ಪೆಯ ರೂಪದಲ್ಲಿದ್ದ ಶುಕ್ರಾಚಾರ್ಯರು ತಮ್ಮ ಒಂದು ಕಣ್ಣನ್ನು ಕಳೆದುಕೊಳ್ಳುತ್ತಾರೆ. ಮುಂದೆ ಬಲೀಂದ್ರನಿಂದ ವಾಮನಮೂರ್ತಿಗೆ ದಾನ ನಡೆಯುತ್ತದೆ.
ದಾನವಾಗಿ ತನಗೆ ಕೊಟ್ಟ ಮೂರು ಹೆಜ್ಜೆಗಳಲ್ಲಿ ವಿಷ್ಣುವು ತ್ರಿವಿಕ್ರಮನಾಗಿ ಬೆಳೆದು ಮೊದಲ ಹೆಜ್ಜೆಯನ್ನು ಇಡೀ ಭೂಮಂಡಲದ ಮೇಲೆ ಇಡುತ್ತಾನೆ. ಅವನ ಎರಡನೇ ಹೆಜ್ಜೆ ಆಕಾಶವನ್ನು ಆಕ್ರಮಿಸುತ್ತದೆ. ಮೂರನೆಯ ಹೆಜ್ಜೆ ಎಲ್ಲಿಡಲೆಂದು ಕೇಳಿದಾಗ ಬಲಿ ತನ್ನ ತಲೆಯ ಮೇಲಿಡಲು ಕೇಳಿಕೊಳ್ಳುತ್ತಾನೆ. ವಿಷ್ಣು ಹೀಗೆ ತನ್ನ ಪಾದವನ್ನು ಅವನ ತಲೆಯ ಮೇಲಿಟ್ಟು ಬಲಿಯನ್ನು ಪಾತಾಳ ಲೋಕಕ್ಕೆ ನೂಕುತ್ತಾನೆ. ವರುಷದಲ್ಲಿ ಮೂರುದಿನ ಭೂಲೋಕಕ್ಕೆ ಬಂದು ಜನರಿಂದ ಪೂಜೆ ಸ್ವೀಕರಿಸುವಂತೆ ವರ ನೀಡುತ್ತಾನೆ. ಹಾಗಾಗಿ ದೀಪಾವಳಿಯ ಸಮಯದಲ್ಲಿ ತನ್ನ ರಾಜ್ಯಕ್ಕೆ ವಾಪಾಸಾಗುತ್ತಾನೆ. ಮೂರು ದಿನ ಬಲೀಂದ್ರನ ಪೂಜೆ ನಡೆಯುತ್ತದೆ. ಪಾಡ್ಯದ ದಿನದಂದು ರಾತ್ರಿ ಬಲೀಂದ್ರ ತನ್ನ ಲೋಕವಾದ ಪಾತಾಳಕ್ಕೆ ತೆರಳುತ್ತಾನೆ.