Monday, 25th November 2024

ಆಕರ್ಷಕ ನಿರ್ಮಾಣ ಎಡಿನ್‌ಬರ್ಗ್‌ ಕೋಟೆ

ಮಂಜುನಾಥ್‌ ಡಿ.ಎಸ್‌.

ಮಧ್ಯಯುಗೀನ ಕೋಟೆಯೊಂದನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಿದ ಉದಾಹರಣೆ ಸ್ಕಾಟ್ಲೆಂಡ್‌ನ ರಾಜಧಾನಿ ಯಲ್ಲಿ ಕಾಣಸಿಗುತ್ತದೆ. ನಮ್ಮ ರಾಜ್ಯದ ಉತ್ತಮ ಕೋಟೆಗಳನ್ನು ಸಹ ಪ್ರವಾಸೋದ್ಯಮಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ಮಾದರಿ ಎನಿಸೀತು.

ಸ್ಕಾಟ್ಲೆಂಡ್‌ನ ರಾಜಧಾನಿ ಎಡಿನ್ ಬರೋ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವುದಲ್ಲದೆ ಚಾರಿತ್ರಿಕ ಹಾಗು ಸಾಂಸ್ಕೃತಿಕ ಕಾರಣಗಳಿಂದಲೂ ವಿಶ್ವವಿಖ್ಯಾತಿ ಪಡೆದಿದೆ. ಈ ನಗರದ ಅನೇಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಎಡಿನ್‌ಬರ್ಗ್ ಕೋಟೆಯೂ ಒಂದು.
ಕಡಿದಾದ ಬೃಹತ್ ಬಂಡೆಯ ಮೇಲೆ ಈ ಮಧ್ಯಯುಗೀಯ ಕಾಲದ ಕೋಟೆ ಯನ್ನು ನಿರ್ಮಿಸಲಾಗಿದೆ. ಈ ದುರ್ಗವು ಕೆಲವು ಶತಮಾನಗಳ ಕಾಲ ಸ್ಕಾಟ್ಲೆಂಡ್‌ನ ಚರಿತ್ರೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಕೋಟೆಯ ಪ್ರವೇಶ ದ್ವಾರವು ರಾಯಲ್ ಮೈಲ್ ರಸ್ತೆಯ ಏರು ತುದಿಯಲ್ಲಿದೆ. ಪುರಾತನ ಮಹಾದ್ವಾರದ ಮೇಲಿರುವ ಚೌಕಟ್ಟಿನಲ್ಲಿ ಸಿಂಹ ಲಾಂಛನದ ಫಲಕವಿದೆ. ಇದು ರಾಯಲ್ ಕೋಟ್ ಆಫ್ ಆರ್ಮ್ಸ್ ಆಫ್ ಸ್ಕಾಟ್ಲೆಂಡ್‌ನ ಚಿಹ್ನೆಯಾಗಿದೆ. ಲಾಂಛನ ಫಲಕದ ಮೇಲೆ ಕಿರೀಟವೂ ಇರುವುದನ್ನು ಗಮನಿಸಬಹುದು.

ಕೋಟೆಯೊಳಗೆ ಪ್ರವೇಶಿಸುತ್ತಿದ್ದಂತೆ ಎಡ ಭಾಗದಲ್ಲಿ ಲ್ಯಾಂಗ್ ಸ್ಟೇರ‍್ಸ್‌ ಇದೆ. ಕಡಿದಾದ ಈ ಪಾವಟಿಕೆಗಳು ಆರಂಭದಲ್ಲಿ ದುರ್ಗದ ಒಂದು ಹಂತದಿಂದ ಇನ್ನೊಂದು ಮಜಲಿಗೆ ಸಂಪರ್ಕ ಕಲ್ಪಿಸುವ ಏಕಮೇವ ಹಾದಿಯಾಗಿತ್ತು. ಸಾಮಗ್ರಿಗಳನ್ನು ಸಾಗಿಸಲು ಈ ಮಾರ್ಗ ತ್ರಾಸಕರವಾಗಿತ್ತು. ಇದಕ್ಕೆ ಪರಿಹಾರವೆಂಬಂತೆ ಹೊಸ ಹಾದಿ ನಿರ್ಮಾಣಗೊಂಡಿತು. ನೂತನ ದಾರಿಯನ್ನು ಬಳಸಿಕೊಂಡು ಫೂಗ್ಸ್‌ ಗೇಟ್ ಮೂಲಕ ಮೇಲಿನ ಹಂತ ತಲುಪುವುದು ಸುಲಭ.

ಗೈಡೆಡ್ ಟೂರ್
ಲ್ಯಾಂಗ್ ಸ್ಟೇರ‍್ಸ್‌ ಎದುರಿನಿಂದ ಗೈಡೆಡ್ ಟೂರ್ ಆರಂಭವಾಗುತ್ತದೆ. ಮಾರ್ಗದರ್ಶಿಗಳು ಕೋಟೆಯಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ದು, ಅವುಗಳ ವೈಶಿಷ್ಟ್ಯಗಳನ್ನು ತಿಳಿಸುತ್ತಾರೆ. ಮುಂದಿನ ಟೂರ್ ಶುರುವಾಗುವ ಸಮಯವನ್ನು ತಿಳಿಸುವ ಸರಳ ವ್ಯವಸ್ಥೆ ಪ್ರವಾಸಿಗರು ಸಮಯ ಹೊಂದಿಸಿಕೊಳ್ಳಲು ನೆರವಾಗುತ್ತದೆ. ದುರ್ಗದ ಮುಖ್ಯ ಒಳಾಂಗಣ ಕ್ರೌನ್ ಸ್ಕ್ವೇರ್. ಇದರ ಸುತ್ತಲೂ ರಾಯಲ್ ಅಪಾರ್ಟ್‌ಮೆಂಟ್ಸ್, ಗ್ರೇಟ್ ಹಾಲ್, ಕ್ರೌನ್ ರೂಂ, ಸ್ಕಾಟಿಷ್ ನ್ಯಾಷನಲ್ ವಾರ್ ಮೆಮೋರಿಯಲ್, ಮುಂತಾದ ಭವ್ಯ ಭವನಗಳಿವೆ. ಕ್ರೌನ್ ರೂಂನಲ್ಲಿ ಸ್ಕಾಟಿಷ್ ಕ್ರೌನ್ ಜ್ಯೂಯೆಲ್ಸ್‌ ಪ್ರದರ್ಶಿಸಲಾಗಿದೆ.

ಇಲ್ಲಿರುವ ರತ್ನಖಚಿತ ಕಿರೀಟ, ಕತ್ತಿ, ರಾಜದಂಡಗಳನ್ನು ಪಟ್ಟಾಭಿಷೇಕ ಮಹೋತ್ಸವದಲ್ಲಿ ಬಳಸಿದ್ದು 1543ರಲ್ಲಿ ಮೊದಲ ಸಲ ಹಾಗು 1651ರಲ್ಲಿ ಕಡೆಯ ಸಲ. ಸ್ಟೋನ್ ಆಫ್ ಡೆಸ್ಟಿನಿ ಇಲ್ಲಿನ ಇನ್ನೊಂದು ವಿಶಿಷ್ಟ ಆಕರ್ಷಣೆ. 1296ರಲ್ಲಿ ಸ್ಕಾಟ್ಲೆಂಡ್‌ನಿಂದ ಇಂಗ್ಲೆಂಡಿಗೆ ಕೊಂಡೊಯ್ದಿದ್ದ ಈ ಶಿಲೆಯನ್ನು 1996 ರಲ್ಲಿ ಸ್ಕಾಟ್ಲೆಂಡ್‌ಗೆ ಮರಳಿಸಲಾಯಿತು. ನಾಲ್ಕನೆಯ ಕಿಂಗ್ ಜೇಮ್ಸ್‌ 1511ರಲ್ಲಿ ನಿರ್ಮಿಸಿದ ಗ್ರೇಟ್ ಹಾಲ್ ಸ್ಕಾಟ್ಲೆಂಡ್ ಸಂಸತ್ತಿನ ಕಲಾಪಗಳಿಗೆ ಬಳಕೆಯಾಗುತ್ತಿತ್ತು. ಈಗ ಇಲ್ಲಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಲಾಗಿದೆ.

ಬೃಹತ್ ಫಿರಂಗಿ
ಮಧ್ಯಯುಗೀನ ಆರು ಟನ್ ತೂಕದ ದೊಡ್ಡ ಫಿರಂಗಿ ಈ ದುರ್ಗದಲ್ಲಿದೆ. ಇದನ್ನು ತಯಾರಿಸಿದ್ದು 1449ರಲ್ಲಿ; ಬೆಲ್ಜಿಯಂನ ಮಾನ್ಸ್‌ ಮೆಗ್ ಪಟ್ಟಣ ದಲ್ಲಿ. ಹಾಗಾಗಿ ಇದು ಮಾನ್ಸ್ ಮೆಗ್ ಎಂಬ ಹೆಸರಿನಿಂದಲೇ ಖ್ಯಾತಿ ಪಡೆದಿದೆ. ಈ ತೋಪಿನಿಂದ ಕಡೆಯ ಸಲ ಗುಂಡು ಹಾರಿಸಿದ್ದು 1681ರಲ್ಲಿ. ಕೋಟೆಯನ್ನು ರಕ್ಷಿಸಲು ಅಳವಡಿಸಲಾಗಿದ್ದ ಬಂಡಿತೋಪುಗಳ ಸಾಲು ವೀಕ್ಷಕರ ಗಮನ ಸೆಳೆಯುತ್ತದೆ.

ಪ್ರತಿ ದಿನ ಮಧ್ಯಾಹ್ನ ಒಂದು ಘಂಟೆಗೆ ಸರಿಯಾಗಿ 105ನೆಯ ರೆಜಿಮೆಂಟ್ ರಾಯಲ್ ಆರ್ಟಿಲೆರಿಯ ಡಿಸ್ಟ್ರಿಕ್ಸ್‌ ಗನ್ನರ್ ತುಪಾಕಿ ಯಿಂದ ಗುಂಡು ಹಾರಿಸುವ ಕಾರ್ಯಕ್ರಮವಿರುತ್ತದೆ. ಇದನ್ನು ನೋಡಲು ಪ್ರವಾಸಿಗರು ಉತ್ಸುಕರಾಗಿ ಕಾದಿರುತ್ತಾರೆ. ನಾವಿಕ ರಿಗೂ ಹಾಗು ಎಡಿನ್‌ಬರೋ ನಗರದ ನಾಗರಿಕರಿಗೂ ನಿಖರ ಸಮಯ ಸೂಚಿಸಲು 1861ರಲ್ಲಿ ಆರಂಭವಾದ ಈ ರೂಢಿಯನ್ನು ಈಗ ಪ್ರವಾಸೀ ಆಕರ್ಷಣೆಯಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ಥ್ಯಾಂಕ್ಸ್‌ ಗಿವಿಂಗ್, ಕ್ರಿಸ್ ಮಸ್ ಮತ್ತು ಭಾನುವಾರ ಗಳಂದು ಈ ಚಟುವಟಿಕೆಗೆ ವಿರಾಮ.

ನಾಯಿಗಳ ಸ್ಮಶಾನ
ಈ ಕೋಟೆಯಲ್ಲಿದ್ದಕಿರು ಉದ್ಯಾನವೊಂದನ್ನು 1840ರಲ್ಲಿ ಶ್ವಾನ ಶ್ಮಶಾನವನ್ನಾಗಿ ಪರಿವರ್ತಿಸಲಾಗಿದೆ. ರಕ್ಷಣಾಕಾರ್ಯದಲ್ಲಿ
ತಮ್ಮ ಒಡನಾಡಿಗಳಾಗಿದ್ದು ಮರಣಿಸಿದ ನಾಯಿಗಳಿಗೂ ಗೌರವಯುತ ಅಂತ್ಯಸಂಸ್ಕಾರ ಮಾಡುವ ಮೂಲಕ ಸೈನಿಕರು ಮೆರೆದ
ಮಾನವೀಯತೆಯ ಪ್ರತೀಕವಾಗಿದೆ ಈ ಮಸಣ. ಸುಮಾರು 1900ನೆಯ ಇಸವಿಯ ತನಕ ಯೋಧರ ನಾಯಿಗಳ ರುದ್ರಭೂಮಿ ಯಾಗಿದ್ದ ಈ ಚಿಕ್ಕ ಜಾಗದಲ್ಲಿ ಇಪ್ಪತ್ತಕ್ಕೂ ಹೆಚ್ಚು ಗೋರಿಕಲ್ಲುಗಳಿವೆ. ಈ ಸಮಾಧಿ ಸ್ಥಳಕ್ಕೆ ಪ್ರವೇಶವಿಲ್ಲದಿರುವುದರಿಂದ ಮೇಲಿ ನಿಂದಲೇ ಇದನ್ನು ವೀಕ್ಷಿಸಿ ತೃಪ್ತರಾಗಬೇಕು.

ಚಾಪೆಲ್‌ನ ವರ್ಣಚಿತ್ರಗಳು
ಸಂತ ಮಾರ್ಗರೆಟ್ಸ್‌ ಚಾಪೆಲ್ ಎಡಿನ್ ಬರೋ ನಗರದ ಅತ್ಯಂತ ಪ್ರಾಚೀನ ಕಟ್ಟಡಗಳಲ್ಲಿ ಒಂದಾಗಿದೆ. ಈ ಪ್ರಾರ್ಥನಾ ಮಂದಿರ ದಲ್ಲಿ 25 ಮಂದಿಗೆ ಸ್ಥಳಾವಕಾಶವಿದೆ. ಎತ್ತರದ ಈ ಮಂದಿರದಲ್ಲಿನ ದೊಡ್ಡಕಿಟಕಿಗಳ ಗಾಜುಗಳು ಸಂತ ಮಾರ್ಗರೆಟ್, ಸಂತ ಕೊಲಂಬಿಯ, ಸಂತ ಆಂಡ್ರ್ಯೂಸ್, ಸಂತ ವಿಲಿಯಂ ಇವರುಗಳ ವರ್ಣಚಿತ್ರಗಳಿಂದ ಅಲಂಕೃತವಾಗಿವೆ. ಈ ಇಗರ್ಜಿಯಲ್ಲಿಯೂ ಸಮಾರಂಭಗಳನ್ನು ಆಯೋಜಿಸಲು ಅವಕಾಶವಿದೆ.