Tuesday, 26th November 2024

ಮೂರು ಮಜಲುಗಳ ಎಲಿಫೆಂಟ್ಸ್‌ ಫಾಲ್ಸ್

ಮಂಜುನಾಥ್‌ ಡಿ.ಎಸ್‌

ಮೇಘಾಲಯದಲ್ಲಿರುವ ಎಲೆಫೆಂಟ್ ಫಾಲ್ಸ್‌ ಜಲಪಾತವು ಎತ್ತರದಲ್ಲಿ ಕಿರಿದು ಎನಿಸಿದರೂ, ಸೌಂದರ್ಯದಲ್ಲಿ ಹಿರಿದು.

ಭಾರತದ ಈಶಾನ್ಯ ರಾಜ್ಯ ಮೇಘಾಲಯ ಪ್ರಕೃತಿ ಸೌಂದರ್ಯದ ಖನಿ. ಬೆಟ್ಟಗುಡ್ಡಗಳು, ಅರಣ್ಯಗಳು, ಕಣಿವೆಗಳು, ಸರೋವರಗಳು ಹಾಗು ಅನೇಕ ಸುಂದರ ಜಲಪಾತಗಳಿಂದ ಸಮೃದ್ದವಾಗಿರುವ ಮೇಘಾಲಯ, ಅಪಾರ ಸಂಖ್ಯೆಯ ಪ್ರವಾಸಿಗರನ್ನು ತನ್ನೆೆಡೆಗೆ ಸೆಳೆಯುತ್ತದೆ.

ಮಳೆಗಾಲದ ತಿಂಗಳುಗಳಲ್ಲಿ ಮೈದುಂಬಿ ಭೋರ್ಗರೆವ ಜಲಪಾತಗಳು ಇಲ್ಲಿನ ಅಂದವನ್ನು ಇಮ್ಮಡಿಗೊಳಿಸುವುದು ವಿಶೇಷ. ಇಲ್ಲಿನ ಪ್ರಮುಖ ಜಲಪಾತ ಗಳಲ್ಲಿ ಒಂದೆನಿಸಿರುವ ಎಲಿಫೆಂಟ್ ಫಾಲ್ಸ್‌ ರಾಜ್ಯದ ರಾಜಧಾನಿ ಷಿಲ್ಲಾಂಗ್ ‌ನಿಂದ 12 ಕಿಲೋಮೀಟರ್ ದೂರದಲ್ಲಿದೆ.

ಪೂರ್ವ ಖಾಸಿ ಹಿಲ್ಸ್‌ ಜಿಲ್ಲೆಯ ಷಿಲ್ಲಾಂಗ್ ಶೃಂಗದ ಸನಿಹದ ಕವಲಿನಲ್ಲಿ ಮಾರ್ಗಸೂಚಿ ಫಲಕ ಅನುಸರಿಸಿದರೆ ಸಿಗುವ ಕಿರುದಾರಿ ಈ ಜಲಪಾತಕ್ಕೆ ತಲುಪಿಸುತ್ತದೆ. ಖಾಸಿ ಭಾಷೆಯಲ್ಲಿ ಈ ಜಲಪಾತದ ಹೆಸರು ಉದ್ದ ಹಾಗು ಕ್ಲಿಷ್ಟವಾಗಿದ್ದು ಅದರ ಉಚ್ಛಾರಣೆಯೇ ಒಂದು ಸವಾಲು! Ka Kshaid Lai Pateng Khohsiew ಎಂಬ ಹೆಸರಿನ ಅರ್ಥ ಮೂರು ಮಜಲಿನ ಜಲಪಾತ ಎಂದು.

ಒಂದರ ನಂತರ ಇನ್ನೊಂದು ಮಜಲು: ಪ್ರವೇಶ ದ್ವಾರದಿಂದ ಸಾಗಿ, ಕಣಿವೆಯಲ್ಲಿನ ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆ ಪ್ರಥಮ ಹಂತದ ಜಲಪಾತ ಎದುರಾಗುತ್ತದೆ. ಇದು ವಿಶಾಲವಾಗಿದ್ದು ಮರಗಳ ನಡುವಿಲ್ಲಿ ಆಶ್ರಯ ಪಡೆದಿದೆ. ಮುಂದು ವರಿದಂತೆ ಸಿಗುವ ಎರಡನೆಯ ಮಜಲಿನ ಜಲಪಾತ ಅಷ್ಟಾಗಿ ಗಮನ ಸೆಳೆಯುವುದಿಲ್ಲ. ಚಿಕ್ಕ ಸೇತುವೆಯೊಂದನ್ನು ದಾಟಿ ಮತ್ತಷ್ಟು ಮೆಟ್ಟಿಲುಗಳನ್ನಿಳಿದಾಗ ಮುಖಾಮುಖಿಯಾಗುವ ಮೂರನೆಯ ಮತ್ತು ಅಂತಿಮ ಘಟ್ಟದ ಜಲಪಾತ ಕಣ್ಸೆಳೆಯುತ್ತದೆ.

ಇಲ್ಲಿರುವ ಮೂರು ಜಲಪಾತಗಳಲ್ಲಿ ಇದೇ ಅತ್ಯಂತ ಎತ್ತರವಾದದ್ದು. ಇದು ಹಚ್ಚಹಸಿರಿನ ವೃಕ್ಷಗಳಿಂದ, ಅದರಲ್ಲೂ ಹೆಚ್ಚಾಗಿ ಫರ್ನ್ ಮರಗಳಿಂದ, ಸುತ್ತುವರಿದು ಪ್ರಕೃತಿ ಪ್ರಿಯರನ್ನು ಸಂತೃಪ್ತಿಗೊಳಿಸುತ್ತದೆ. ಸೇತುವೆಯ ಕೆಳಗಿನಿಂದ ಹರಿದು ಬಂದ ನೀರು
ತನ್ನ ಹರಹನ್ನು ವಿಸ್ತರಿಸಿಕೊಂಡು, ವಿವಿಧ ಆಕಾರಗಳ ಬಂಡೆಗಳ ಮೇಲಿನಿಂದ ಧುಮುಕುವ ದೃಶ್ಯ ರಮಣೀಯ. ಜಲಧಾರೆ ಬೆಳ್ಳಗಿನ ನೊರೆಹಾಲನ್ನು ನೆನಪಿಸುತ್ತದೆ.

ನೀರಿನ ಕೊಳದಲ್ಲಿ ಇಳಿದು ಜಳಕ ಮಾಡಲು ಪ್ರವಾಸಿಗರಿಗೆ ಅವಕಾಶವಿಲ್ಲ. ಅಡ್ಡಲಾಗಿ ಕಟ್ಟಲಾಗಿರುವ ಹಗ್ಗ ಲಕ್ಷ್ಮಣ ರೇಖೆ ಯಂತೆ ಪ್ರವಾಸಿಗರನ್ನು ನಿಯಂತ್ರಿಸುತ್ತದೆ. ಇದರ ಬಳಿಯೇ ನಿಂತು ಮನೋಹರ ದೃಶ್ಯವನ್ನು ಕಣ್ತುಂಬಿಸಿಕೊಳ್ಳಬೇಕು. ಸವಿ ನೆನಪಿಗಾಗಿ ಜಲಪಾತದ ಹಿನ್ನೆಲೆಯಲ್ಲಿ ಫೋಟೋ ತೆಗೆಸಿಕೊಳ್ಳಬಹುದು. ಇದನ್ನು ಒಂದು ಅದ್ಭುತ ಜಲಪಾತ ಎನ್ನಲಾಗ ದಿದ್ದರೂ ಆನಂದಮಯ ಅನುಭವ ನೀಡುವ ತಾಣ ಇದಾಗಿದೆ.

ಕೆಳಹಂತದ ಜಲಪಾತದ ಅಭಿಮುಖದಲ್ಲಿ ವೀಕ್ಷಣಾ ಜಗಲಿಗಳನ್ನು ನಿರ್ಮಿಸಲಾಗಿದೆ. ಪ್ರವಾಸಿಗರು ವಿರಮಿಸಿಕೊಳ್ಳಲು ಅನು ಕೂಲ ಕಲ್ಪಿಸಲಾಗಿದೆ. ಬೆಳಗಿನ ಆರರಿಂದ ಸಂಜೆ ಆರರ ತನಕ ಎಲಿಫೆಂಟ್ ಫಾಲ್ಸ್‌ ವೀಕ್ಷಣೆಗೆ ತೆರೆದಿರುತ್ತದೆ. ಪ್ರವೇಶ ದ್ವಾರದ ಬಳಿ ಖಾದ್ಯ-ಪಾನೀಯಗಳು ಹಾಗು ಕರಕುಶಲ ವಸ್ತುಗಳನ್ನು ಖರೀದಿಸಬಹುದು.

ಪ್ರವಾಸ ಪೂರೈಸಿ, ವಾಪಸಾಗಲು ಅಣಿಯಾಗಿ, ಕೆಲವು ಮೆಟ್ಟಿಲುಳನ್ನೇರಿದ್ದಾಗ ಒಮ್ಮೆ ನಿಂತು ವಿದಾಯ ಹೇಳುವ ಮನಸ್ಸಾಯಿತು. ಪಕ್ಕದಲ್ಲಿದ್ದ ಜಲಪಾತದೆಡೆಗೆ ದೃಷ್ಟಿ ಹಾಯಿಸಿದಾಗ ಅನಿರೀಕ್ಷಿತವಾಗಿ ಕಂಡ ನೋಟ ವಿಸ್ಮಯ ಮೂಡಿಸಿತು. ಜಲಪಾತದಿಂದ ತುಸು ಎತ್ತರದಲ್ಲಿ ಸೂರ್ಯರಶ್ಮಿಗಳ ವರ್ಣಮಯ ಪಾರದರ್ಶಕ ಜವನಿಕೆ ಸೃಷ್ಟಿಯಾಗಿತ್ತು. ಕ್ಯಾಮೆರ ಈ ಅಪೂರ್ವ ದೃಶ್ಯವನ್ನು ಸೆರೆ ಹಿಡಿದಿತ್ತು.

ಮೇಘಾಲಯದಲ್ಲೂ ಆನೆ ಬಂಡೆ!
ಈ ಸುಂದರ ಜಲಪಾತದ ಬಳಿಯಿರುವ ಫಲಕದಲ್ಲಿ ಇದಕ್ಕೆ ಈಗಿನ ಹೆಸರು ಏಕೆ ಬಂತು ಎಂಬ ವಿವರಗಳಿವೆ. ಬ್ರಿಟಿಷ್ ವ್ಯಕ್ತಿ ಯೋರ್ವ ಇಲ್ಲಿಗೆ ಬಂದಾಗ, ಜಲಪಾತದ ಬಳಿಯ ದೊಡ್ಡ ಬಂಡೆಯೊಂದು ಆನೆಯನ್ನು ಹೋಲುತ್ತಿರುವಂತೆ ಭಾಸವಾಯಿ  ತಂತೆ. ಹಾಗಾಗಿ ಆತ ಎಲಿಫೆಂಟ್ ಫಾಲ್ಸ್‌ ಎಂದು ಕರೆಯಲು ಆರಂಭಿಸಿದ. ಬ್ರಿಟಿಷ್ ಆಳ್ವಿಕೆಯ ಕಾಲದ ಈ ಹೆಸರಿನಿಂದಲೇ ಜಲಪಾತ ಜನಪ್ರಿಯವಾಗಿದೆ. ಆದರೆ, ಅಂದು ಆ ವ್ಯಕ್ತಿ ಕಂಡ ಬಂಡೆ ಈಗ ಅಲ್ಲಿಲ್ಲ. 1987ರ ಭೂಕಂಪದಲ್ಲಿ ಅದು ನಾಶ ಗೊಂಡಿದೆ. ಪರಿಸರ ರಕ್ಷಿಸಲು ಕ್ರಮ ಕೈಗೊಳ್ಳಲಾಗಿದ್ದು, ‘ಸಿಗರೆಟ್ ಸೇದುವುದು ಅಪರಾಧ’ ಎಂಬ ಫಲಕವೂ ಇಲ್ಲಿದೆ!

ಮೋದಿ ಮೆಚ್ಚಿದ ಜಲಪಾತ
‘ನೀವು ಮೇಘಾಲಯ ಪ್ರವಾಸ ಮಾಡುವಾಗ, ಸುಂದರ ಎಲಿಫೆಂಟ್ ಜಲಪಾತವು ನಿಮ್ಮ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಇರಲೇಬೇಕು’ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. 2016ರಲ್ಲಿ ಮೇಘಾಲಯದ ಭೇಟಿ ಸಂದರ್ಭದಲ್ಲಿ ಮೋದಿ ಯವರು ಎಲಿಫೆಂಟ್ ಫಾಲ್ಸ್‌ ಜಲಪಾತಕ್ಕೆ ಭೇಟಿ ನೀಡಿ, ಅದರ ಫೋಟೋವನ್ನು ತೆಗೆದಿದ್ದರು.