ನಮ್ಮಲ್ಲಿ ಸಾಕಷ್ಟು ಜನಪ್ರಿಯ ನಿರ್ದೇಶಕರಿದ್ದಾರೆ. ಇಡೀ ಭಾರತೀಯ ಚಿತ್ರರಂಗವೇ ಚಂದನವನದತ್ತ ನಿಬ್ಬೆರಗಾಗಿ ನೋಡುವ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಮಹಿಳಾ ನಿರ್ದೇಶಕರಿದ್ದಾರೆ.
ಚಂದನವನದಲ್ಲಿ ಸಾಕಷ್ಟು ಮಹಿಳಾ ಮಣಿಗಳಿದ್ದರೂ, ಅವರ ಮೊದಲ ಆಯ್ಕೆ ನಟನೆ. ಹಾಗಾಗಿ ನಿರ್ದೇಶನಕ್ಕೆ ಅವರ ಒಲವು ತೀರ ವಿರಳ. ಆದರೆ ಕೆಲವು ಮಹಿಳೆಯರು ಮಾತ್ರ, ನಿರ್ದೇಶನದತ್ತಲೇ ವಾಲಿದ್ದು, ಪ್ರೇಕ್ಷಕರು ಮೆಚ್ಚುವ ಚಿತ್ರಗಳನ್ನು ನೀಡಿದ್ದಾರೆ. ಉಳಿದವರು ಅದರತ್ತಲೇ ಚಿತ್ತ ನೆಟ್ಟಿದ್ದಾರೆ.
ಅಂತಹವರಲ್ಲಿ ನವ ನಿರ್ದೇಶಕಿ ವಿಸ್ಮಯ ಕೂಡ ಒಬ್ಬರು. ವಿಸ್ಮಯ ವ್ಯಾಸಾಂಗ ಮಾಡಿದ್ದು ತಾಂತ್ರಿಕ ವಿಭಾಗದಲ್ಲಿ, ಆದರೆ ಆಯ್ದುಕೊಂಡಿದ್ದು ಮಾತ್ರ ಸಿನಿಮಾರಂಗವನ್ನು. ಮೊದಲಿನಿಂದಲೂ ಸಿನಿಮಾದಲ್ಲಿ ಆಸಕ್ತಿ ಇದ್ದ ವಿಸ್ಮಯ ಅವರಿಗೆ ಮೊದಲು ತಾನು ನಟಿಯಾಗಬೇಕೆಂದೆ ಭಾವಿಸಿದ್ದರು. ಬಳಿಕ ಒಳ್ಳೆಯ ಚಿತ್ರಗಳನ್ನು ಯಾಕೆ ನಿರ್ದೇಶಿಸಬಾರದು ಎಂದು ಅಂದುಕೊಂಡರು, ಆ ನಿಟ್ಟಿನಲ್ಲಿಯೇ ಸಿದ್ಧತೆಗಳನ್ನು ಆರಂಭಿಸಿದರು.
ಅದಕ್ಕಾಗಿ ಸಾಕಷ್ಟು ಕಥೆಗಳನ್ನು ಹುಡುಕಾಡಿದರು. ಕೆಲವು ಕಥೆಗಳನ್ನು ಬರೆದರು. ಯಾವ ಕಥೆಗಳು ಅವರಿಗೆ ತೃಪ್ತಿ ನೀಡಲೇ ಇಲ್ಲ. ಮೋಟಿವೇಷನ್ ಟ್ರೇನರ್ ಆಗಿದ್ದ ವಿಸ್ಮಯ, ಪರಿಚಿತರಿಂದ ಒಂದಷ್ಟು ಘಟನೆಗಳನ್ನು ಕೇಳಿದರು. ಹೀಗೆ ತಾವು ಕೇಳಿದ ನೈಜ ಘಟನೆಗಳನ್ನೇ ಏಕೆ ತೆರೆಗೆ ತರಬಾರದು ಎಂದು ಅಂದುಕೊಂಡು, ತಮ್ಮ ಬಳಿ ಸಲಹೆ ಪಡೆಯಲು ಬರುತ್ತಿದ್ದ ಕೆಲವರಿಂದ ಅವರ ಜೀವನದಲ್ಲಿ ನಡೆದ ಘಟನೆಗಳನ್ನು ಕೇಳಿ ತಿಳಿದುಕೊಂಡರು.
ಆ ನೈಜಘಟನೆಗಳನ್ನೇ ಆಯ್ದು ಅದಕ್ಕೆೆ ತಕ್ಕಂತೆ ಕಥೆ ರಚಿಸಿದರು. ಈಗ ಅದೇ ಕಥೆಯನ್ನು ಆಧರಿಸಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ತೆರೆಯಲ್ಲಿ ನವಿರಾದ ಪ್ರೇಮಕಥೆಯನ್ನು ತೋರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ನಿರ್ದೇಶನದ ಜತೆಗೆ ತಮ್ಮದೇ ವಿಸ್ಮಯ ಫಿಲ್ಮ್ಸ್ ಬ್ಯಾನರ್ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ತಮ್ಮ ಚಿತ್ರವನ್ನು ಪ್ರೊಡಕ್ಷನ್ ನಂ 1 ಎಂದು ಪ್ರಾರಂಭಿಸು ತ್ತಿದ್ದು, ಫೆಬ್ರವರಿ 14 ರ ಪ್ರೇಮಿಗಳ ದಿನದಂದೇ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಿದ್ದಾರೆ.
ಚಿತ್ರದಲ್ಲಿ ಎರಡು ಜೋಡಿಗಳ ಪ್ರೇಮಕಥಾನಕ ಹಾದು ಹೋಗಲಿದೆ. ತಮ್ಮ ಚೊಚ್ಚಲ ಚಿತ್ರ ದಲ್ಲಿ ವಿಸ್ಮಯ ಹೊಸಬರಿಗೆ ಅವಕಾಶ ನೀಡಿದ್ದಾರೆ. ರೇಖಾದಾಸ್ ಪುತ್ರಿ ಶ್ರಾವ್ಯಾದಾಸ್ ಚಿತ್ರದ ನಾಯಕಿಯಾಗಿ ನಟಿಸುತ್ತಿದಾರೆ, ಇವರಿಗೆ ಜತೆಯಾಗಿ ಬಿಗ್ಬಾಸ್ ಖ್ಯಾತಿಯ ಕಿಶನ್ ಅಭಿನಯಿಸಲಿದ್ದಾರೆ.
ಮತ್ತೊಂದು ಮುಖ್ಯಪಾತ್ರದಲ್ಲಿ ಕ್ರಿಕೆಟರ್ ಪ್ರವೀಣ್ ಬಣ್ಣಹಚ್ಚುತ್ತಿದ್ದು, ಅವರೊಂದಿಗೆ ಸ್ಟಾರ್ ನಟಿಯೊಬ್ಬರು ನಟಿಸಲಿದ್ದಾ ರಂತೆ, ಮಹೂರ್ತದ ದಿನ ಆ ನಟಿ ಯಾರು ಎಂಬುದು ಬಹಿರಂಗವಾಗಲಿದೆ. ಮೈಸೂರು, ಕೊಡಗು ಹಾಗೂ ಕಾರಾವಾರದ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲು ವಿಸ್ಮಯ ಪ್ಲಾನ್ ಮಾಡಿದ್ದಾರೆ.