ಆ್ಯಪಲ್ ತನ್ನ ಭದ್ರಕೋಟೆಯೊಳಗೆ ಯಾರನ್ನೂ ನುಸುಳದ ಹಾಗೆ ನೋಡಿಕೊಳ್ಳುತ್ತಿದ್ದರೆ ವಿಂಡೋಸ್ ಹಾಗೂ ಆಂಡ್ರಾಯ್ಡ್ ತಮ್ಮದೇ ಆದ ಕೋಟೆಯೊಂದನ್ನು ಕಟ್ಟುತ್ತಿವೆಯೇ ಎನ್ನುವ ಅನಿಸಿಕೆಯೂ ಮೂಡತೊಡಗಿದೆ.
ಬಡೆಕ್ಕಿಲ ಪ್ರದೀಪ
ಟೆಕ್ ಟಾಕ್
ಒಂದು ಕಾಲದಲ್ಲಿ ಭಾರಿ ಪಾರುಪತ್ಯ ಹೊಂದಿದ್ದ ಮೈಕ್ರೋಸಾಫ್ಟ್ನ ವಿಂಡೋಸ್ ಇದೀಗ ಆ ಪಾರು ಪತ್ಯವನ್ನು ಕಳೆದುಕೊಳ್ಳುವ ಭಯದಲ್ಲಿದ್ದ ಹಾಗಿದೆ.
ಇದರ ಬಗ್ಗೆ ಯೋಚಿಸುತ್ತಿರುವ ಹಾಗೇ ಬಿಲ್ ಗೇಟ್ಸ್ ವಿಶ್ವದ ನಂಬರ್ ಒನ್ ಶ್ರೀಮಂತ ಅನ್ನುವ ಪಟ್ಟವನ್ನು ಇಲಾನ್ ಮಸ್ಕ್ ಅನ್ನುವ ಕ್ರಾಂತಿಕಾರಿ ಆವಿಷ್ಕಾರಿಯೊಬ್ಬನ ಕೈಗೆ ಬಿಟ್ಟುಕೊಟ್ಟಿರುವ ಸುದ್ದಿಯೂ ಕೇಳಿಬಂತು. ಇನ್ನು ಮೊಬೈಲ್ ಫೋನ್ಗಳು, ಅದರಲ್ಲೂ ಸ್ಮಾರ್ಟ್ ಫೋನ್ಗಳು ಬಂದ ಆರಂಭದಲ್ಲಿ ಐಫೋನ್ ಹಾಗೂ ಆಂಡ್ರಾಯ್ಡ್ ಕಾಳಗ ತಾರಕಕ್ಕೇರುವ ಶುರುವಿನ
ದಿನಗಳಲ್ಲಿ ವಿಂಡೋಸ್ ಫೋನ್ಗಳ ಅಬ್ಬರವೂ ಕೇಳಿ ಬರುವುದೇನೋ ಅನ್ನುವ ಯೋಚನೆ ಇದ್ದವರಿಗೆ ಅದೀಗ ದೂರವಾಗಿದೆ.
ನಿಧಾನವಾಗಿ ವಿಂಡೋಸ್ ಹಾಗೂ ಆಂಡ್ರಾಯ್ಡ್ ನ ನಡುವಿನ ಅಂತರ ಕಡಿಮೆಯಾಗುತ್ತಿದೆ. ಈ ಹಿಂದೆ ವಿಂಡೋಸ್ ತನ್ನದೇ ಫೋನ್ ಅನ್ನು ತಯಾರಿಸಿ, ಅದಕ್ಕೆ ತನ್ನದೇ ಆಪರೇಟಿಂಗ್ ಸಿಸ್ಟಂ ಅನ್ನು ತಯಾರಿಸಿ, ಅದೆರಡರ ಜೊತೆ ಬೇರೆಯವರಿಗೂ ತಮ್ಮ ಓಎಸ್ ಅನ್ನು ಆಂಡ್ರಾಯ್ಡ್ ರೀತಿ ಬಳಸಲು ನೀಡುವ ಪ್ರಯತ್ನದಲ್ಲಿ ಸೋಲನ್ನು ಕಂಡ ನಂತರ ಇದೀಗ ನಿಧಾನಕ್ಕೆ ಅದು
ಗೂಗಲ್ ಮತ್ತು ಆಂಡ್ರಾಯ್ಡ್ನ ಮೇಲಿನ ತನ್ನ ಕಠೋರ ನಿಲುವನ್ನು ಸಡಿಲಗೊಳಿಸಿದೆ. ಈ ಹಿಂದೆ ಕ್ರೋಮ್ ರೀತಿಯ ಫೀಚರ್ಗಳಿರುವ ಅದರದೇ ಇಂಟರ್ನೆಟ್ ಬ್ರೌಸರ್ ಅನ್ನು ಹೊಸ ರೂಪದೊಂದಿಗೆ ಲಾಂಚ್ ಮಾಡುವ ಮೂಲಕ, ಕೋರ್ಟಾನಾ, ಮೈಕ್ರೋಸಾಫ್ಟ್ ಲಾಂಚರ್ ಅನ್ನು ಯಾವುದೇ ಮೊಬೈಲ್ನಲ್ಲಿ ಬಳಸುವಂತೆ ಬದಲಾಯಿಸುವ, ಅದಾದ ಮೇಲೆ ‘ಯುವರ್ ಫೋನ್’ ಅನ್ನುವ ಆಪ್ ಅನ್ನು ಲಾಂಛ್ ಮಾಡುವ ಮೂಲಕ ಫೋನ್ ಹಾಗೂ ವಿಂಡೋಸ್ ನಡುವಿನ ಕೊಂಡಿಯನ್ನು
ತರುವುದೂ ಅಲ್ಲದೇ ಇನ್ನೂ ಹಲವಾರು ವಿಧಾನಗಳ ಮೂಲಕ ಅದು ಆಂಡ್ರಾಯ್ಡ್ ಗೆ ಇರುವ ಭಾರಿ ಜನಪ್ರಿಯತೆಯ ಲಾಭ ವನ್ನು ಬಳಸಿಕೊಳ್ಳುವ ಹಾಗೂ ತನ್ನ ಗ್ರಾಹಕರನ್ನು ಬಳಸಿಕೊಳ್ಳುವ ಪ್ರಯತ್ನದಲ್ಲಿ ಇದೀಗ ಇನ್ನೊಂದು ಹೆಜ್ಜೆ ಇರಿಸಿದೆ.
ಅದುವೇ ಆಂಡ್ರಾಯ್ಡ್ ಆ್ಯಪ್ಗಳಿಗೆ ವಿಂಡೋಸ್ ಗಳಲ್ಲಿ ಸ್ಥಳವೊದಗಿಸುವುದು. ಇದೀಗ ತನ್ನ ಲಿಂಕ್ ಟು ವಿಂಡೋಸ್ ಫೀಚರ್ನ ಮೂಲಕ ಸ್ಯಾಮ್ಸಂಗ್ನ ಕೆಲ ಆ್ಯಪ್ಗಳಿಗೆ ಜಾಗ ನೀಡುತ್ತಿರುವ ವಿಂಡೋಸ್ 2021ರ ವೇಳೆಗೆ ತನ್ನ ಆಪ್ ಸ್ಟೋರ್ನಲ್ಲಿ ಆಂಡ್ರಾಯ್ಡ್ ಆ್ಯಪ್ ಗಳನ್ನು ಹಾಕಲು ಅನುಮತಿ ನೀಡುವ ವ್ಯವಸ್ಥೆಯನ್ನು ತಯಾರಿಸುತ್ತಿದೆ ಎನ್ನಲಾಗಿದೆ.
ಇದೀಗ ಸ್ಯಾಮ್ಸಂಗ್ನ ಕೆಲ ಫೋನ್ಗಳ ಕೆಲವೇ ಕೆಲವು ಆ್ಯಪ್ಗಳಿಗೆ ಮಾತ್ರ ವಿಂಡೋಸ್ನಲ್ಲಿ ಮಿರರಿಂಗ್ ಮೂಲಕ ಉಪಯೋ ಗಿಸುವ ಅವಕಾಶವನ್ನು ನೀಡಿರುವ ವಿಂಡೋಸ್ ಆಂಡ್ರಾಯ್ಡ್ ಆ್ಯಪ್ಗಳನ್ನು ಹೇಗೆ ಬಳಸಲು ನೀಡಲಿದೆ ಅನ್ನುವ ಕುರಿತು ಯಾವುದೇ ಸ್ಪಷ್ಟ ಚಿತ್ರಣವನ್ನು ನೀಡುತ್ತಿಲ್ಲ. ಈ ಮೂಲಕ ಇದೀಗ ಮೊಬೈಲ್ ಬಳಕೆದಾರರಿಂದ ದೂರವಾಗುವ ಭಯವನ್ನು ಹೋಗಲಾಡಿಸುವ ಪ್ರಯತ್ನವನ್ನು ವಿಂಡೋಸ್ ಮಾಡುತ್ತಿದೆ ಎನ್ನಲಾಗಿದೆ. ಹಾಗೂ ಆ್ಯಪಲ್ ತನ್ನ ಭದ್ರಕೋಟೆಯೊಳಗೆ ಯಾರನ್ನೂ ನುಸುಳದ ಹಾಗೆ ನೋಡಿಕೊಳ್ಳುತ್ತಿದ್ದರೆ ವಿಂಡೋಸ್ ಹಾಗೂ ಆಂಡ್ರಾಯ್ಡ್ ತಮ್ಮದೇ ಆದ ಕೋಟೆಯೊಂದನ್ನು ಕಟ್ಟುತ್ತಿ ವೆಯೇ ಎನ್ನುವ ಅನಿಸಿಕೆಯೂ ಮೂಡತೊಡಗಿದೆ.
ಯಾಕೆಂದರೆ ಇದೀಗ ಐಫೋನ್ ಹಾಗೂ ಮ್ಯಾಕ್ ಓಎಸ್ ಹಿಂದೆಂದಿಗಿಂತ ಉತ್ತಮವಾಗಿ ಒಂದಕ್ಕೊಂದು ಕನೆಕ್ಟೆೆಡ್ ಆಗಿದ್ದು, ಈ ಬದಿಯಲ್ಲಿ ಒಂದರ ಜೊತೆ ಇನ್ನೊಂದರ ಬಾಂಧವ್ಯ ಅಷ್ಟೊಂದು ಉತ್ತಮವಾಗಿರಲಿಲ್ಲ. ಇದರಿಂದ ಕಂಪೆನಿಗಳಿಗಾಗುವ ನಷ್ಟಕ್ಕಿಂತ, ಉಪಯೋಗ ಮಾಡುವವರಿಗಾಗುವ ಕಷ್ಟ ಹೆಚ್ಚಿನದಾಗಿತ್ತು. ಇನ್ನೇನು ಜನರ ಈ ನಾಡಿಮಿಡಿತವನ್ನು ಅರಿತಿರುವ ವಿಂಡೋಸ್ನಲ್ಲಿ ಫೋನಿನ ನೋಟಿಫಿಕೇಶನ್ ತರುವುದು, ಕರೆ ಮಾಡುವುದು ಹಾಗೂ ಕೆಲವೊಂದು ಆ್ಯಪ್ಗಳನ್ನು (ಉದಾ: ವಾಟ್ಸಾಪ್ ಅನ್ನು ಆ್ಯಪ್ ಅಥವಾ ಬ್ರೌಸರ್ನಲ್ಲಿ ಬಳಸುವುದು) ಬಳಸುವ ಅವಕಾಶವೂ ಬಂದಿದೆ. ಆದರೆ ಅದ್ಯಾವುದೂ ಆ್ಯಪಲ್
ನ ಉಪಯೋಗದಷ್ಟು ಸರಳವಾಗಿ ಕನೆಕ್ಟ್ ಆಗುವುದಿಲ್ಲ ಅನ್ನುವುದೇ ತೊಂದರೆಯಾಗಿತ್ತು. ಏನೇ ಆದರೂ ಫೋನಿಗೂ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರಿಗೂ ಇದ್ದ ದೂರವನ್ನು ನಿಧಾನವಾಗಿ ಯಾದರೂ ಕಡಿಮೆ ಮಾಡಿದರೆ ಅದರಿಂದ ಬಳಕೆದಾರರಿಗೆ ಖಂಡಿತಾ ಉಪಯೋಗವಾಗಲಿದೆ.
ಗೂಗಲ್ ಪೇ ಉಚಿತ
ಗೂಗಲ್ ಪೇಯಲ್ಲಿ ವ್ಯವಹಾರ ಮಾಡುವುದಕ್ಕೆ ಶುಲ್ಕ ನೀಡಬೇಕಾಗುತ್ತದೆ ಅನ್ನುವ ರೀತಿಯ ಸುದ್ದಿಗಳಿಗೆ ಇದೀಗ ಬ್ರೇಕ್ ಬಿದ್ದಿದ್ದು, ಅಮೆರಿಕದಲ್ಲಿ ಕಂಪೆನಿ ಶುರು ಮಾಡಿರುವ ಗೂಗಲ್ ಪೇಯ ಹೊಸ ರೀತಿಯ ಸೇವೆಗಳಿಗೂ ಭಾರತದ ಸೇವೆಗಳಿಗೂ ಜನ ತಳುಕು ಹಾಕಿದ್ದರಿಂದಾಗಿ ಈ ಗೊಂದಲ ಉಂಟಾಗಿದ್ದು ಸಹಜವೇ.
ಭಾರತದಲ್ಲಿ ಹಿಂದೆ ತೇಝ್ ಎನ್ನುವ ಹೆಸರಿನಿಂದಿದ್ದು, ನಂತರ ಅದರ ಅಮೆರಿಕನ್ ಹೆಸರು ಗೂಗಲ್ ಪೇ ಎಂದೇ ಬದಲಿಸಿದ ಮೇಲೆ ಹೊಸ ಫೀಚರ್ಗಳನ್ನು ಲಾಂಚ್ ಮಾಡುವಾಗ ಅದು ಯಾವ ದೇಶಕ್ಕೆೆ ಆಗಿರುವ ಲಾಂಚ್ ಅನ್ನುವ ಗೊಂದಲ ಸಹಜವಾಗಿಯೇ ಮೂಡುತ್ತದೆ. ಅಮೆರಿಕಾದ ಗೂಗಲ್ ಪೇ ವರ್ಶನ್ನಲ್ಲಿ ಜನವರಿಯಿಂದ ಹೊಸ ಶುಲ್ಕಗಳು ಜಾರಿಗೆ ಬರಲಿದ್ದು, ವೆಬ್ ವರ್ಶನ್ ಬದಲು ಕೇವಲ ಆ್ಯಪ್ ಮೂಲಕವೇ ವ್ಯವಹಾರ ಮಾಡಬೇಕಿದೆ.
ವೇರೆಬಲ್ಗಳ ದಾಖಲೆ ಮಾರಾಟ
ಭಾರತದಲ್ಲಿ ಜುಲೈನಿಂದ ಸೆಪ್ಟೆಂಬರ್ ವರೆಗೆ ಸ್ಮಾರ್ಟ್ ವಾಚ್ಗಳ ಮಾರಾಟದ್ದೇ ಭಾರಿ ಭರಾಟೆಯಂತೆ. ಇತ್ತೀಚೆಗೆ ಬಂದಿರುವ ವರದಿಗಳ ಪ್ರಕಾರ ಭಾರತದಲ್ಲಿ ಈ ಮೂರು ತಿಂಗಳಲ್ಲಿ ಸ್ಮಾರ್ಟ್ ವೇರೆಬಲ್ಗಳ ಮಾರಾಟದಲ್ಲಿ 165 ಶೇಕಡಾ ಏರಿಕೆ ಕಂಡು ಬಂದಿದೆ ಅನ್ನುವ ಸುದ್ದಿ ಬಂದಿದೆ. ಮನೆಯಿಂದ ಕೆಲಸ ಮಾಡುವುದರೊಂದಿಗೆ ಆರೋಗ್ಯದ ಕಾಳಜಿಯ ಮೇಲೆ ಜನರಿಗಿರುವ ಚಿಂತೆಯನ್ನು ಹೋಗಲಾಡಿಸಲು ಈ ಸ್ಮಾರ್ಟ್ ವೇರೆಬಲ್ಗಳು ಸಹಾಯ ಮಾಡುವುದೆಂಬ ನಂಬಿಕೆಯಿಂದಾಗಿ ಇವುಗಳ ಖರೀದಿಗೆ ಮುಗಿಬೀಳುವುದು ಕಂಡುಬಂದಿದೆ ಎನ್ನಲಾಗುತ್ತಿದೆ. ಈ ಮೂರು ತಿಂಗಳಲ್ಲಿ 1.18 ಕೋಟಿ ಸ್ಮಾರ್ಟ್ ವೇರೆಬಲ್ಗಳ ಮಾರಾಟ ವಾಗಿದ್ದು ಇದು ಮೂರು ತಿಂಗಳುಗಳಲ್ಲಿ ನಡೆದ ಸಾರ್ವತ್ರಿಕ ದಾಖಲೆ.
ವಾಚ್ ಅಲ್ಲದೇ ಇಯರ್ ಬಡ್ನಂತಹ ವೇರೆಬಲ್ಗಳ ಬೇಡಿಕೆ ಗಣನೀಯವಾಗಿ ಏರುವುದರೊಂದಿಗೆ ಅವುಗಳ ಬೆಲೆಯಲ್ಲೂ ಇಳಿಕೆಯಾಗುತ್ತಿದೆ. ಜತೆಗೆ ಹಲವಾರು ಸ್ಪರ್ಧಿಗಳು ಮಾರುಕಟ್ಟೆಗೆ ಇಳಿಯುತ್ತಿದ್ದಾರೆ. ಇವೆಲ್ಲವುಗಳ ಕಾರಣದಿಂದ ಕಿವಿಗೆ ಹಾಕಿ ಕೊಳ್ಳುವ ಸಾಧನಗಳ ಮಾರಾಟ ಕಳೆದ ವರ್ಷಕ್ಕೆ ಹೋಲಿಸಿದರೆ 262 ಶೇಕಡಾ ಹೆಚ್ಚು, ವಾಚ್ಗಳ ಮಾರಾಟ 119 ಶೇಕಡಾ ಹೆಚ್ಚು ಆಗಿರುವುದು ವರದಿಯಾಗಿದೆ.