Tuesday, 26th November 2024

ಪರಿಸರ ಸ್ನೇಹಿ ವಿಮಾನ

ಅಜಯ್ ಅಂಚೆಪಾಳ್ಯ

ವಿಮಾನಯಾನದಿಂದ ಬೃಹತ್ ಪ್ರಮಾಣದ ಕಲ್ಮಶ ಮತ್ತು ಇಂಗಾಲದ ಡೈಆಕ್ಸೈಡ್ ವಾತಾವರಣವನ್ನು ಸೇರುತ್ತಿದೆ ಎಂಬ ದೂರು ಮೊದಲಿನಿಂದಲೂ ಇದೆ. ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಅವರ ಒತ್ತಾಯಗಳಲ್ಲಿ ಇದೂ ಒಂದು – ವಿಮಾನ ಯಾನ ನಿಲ್ಲಿಸಿ, ರೈಲಿನಲ್ಲಿ ಪಯಣಿಸಿ ಎಂದು!

ಈಗ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಒಂದು ಸಂಶೋಧನೆಯು ಇಂತಹ ಪರಿಸರ ಪ್ರೇಮಿಗಳಿಗೆ ಹೊಸ ಆಸೆಯನ್ನು ಹುಟ್ಟಿಸಿದೆ. ಇಂಗಾಲದ ಡೈಆಕ್ಸೈಡ್‌ನ್ನು ವಿಮಾನ ಚಲಿಸುವ ಇಂಧನವನ್ನಾಗಿ ಪರಿವರ್ತಿಸುವ ಹೊಸ ಸಂಶೋಧನೆಯನ್ನು ಅಲ್ಲಿನ ವಿಜ್ಞಾನಿಗಳು ಕೈಗೊಂಡಿದ್ದು, ಅದರಲ್ಲಿ ತಕ್ಕ ಮಟ್ಟಿಗಿನ ಯಶಸ್ಸನ್ನು ಕಂಡಿದ್ದಾರೆ. ಈ ಸಂಶೋಧನೆಯು ಇನ್ನಷ್ಟು ಪರಿಷ್ಕೃತ ಗೊಂಡು, ದೊಡ್ಡ ಮಟ್ಟದಲ್ಲಿ ಜಾರಿಗೆ ಬಂದರೆ, ಕಲ್ಮಶಗಳನ್ನು ವಾತಾವರಣಕ್ಕೆ ಹೊರ ಬಿಡದೇ ಚಲಿಸುವ ವಿಮಾನಗಳನ್ನು ಮುಂದೊಂದು ದಿನ ನಾವು ಕಾಣಬಹುದು!

ಆರ್ಗಾನಿಕ್ ಕಂಬಷನ್ ವಿಧಾನದಲ್ಲಿ ಇಂಧನವನ್ನು ಸುಡುವ ಪ್ರಕ್ರಿಯೆಯನ್ನು ಈ ಹೊಸ ಸಂಶೋಧನೆ ರಿವರ್ಸ್‌ ಮಾಡ ಬಲ್ಲದು. ಸಿಟ್ರಿಕ್ ಆಸಿಡ್, ಹೈಡ್ರೋಜೆನ್ ಮತ್ತು ಕಬ್ಬಿಣ – ಮ್ಯಾಂಗನೀಸ್ – ಪೊಟಾಸಿಯಂ ಕ್ಯಾಟಲಿಸ್ಟ್‌ನ್ನು ಬಿಸಿ ಮಾಡುವ ಮೂಲಕ, ಇಂಗಾಲದ ಡೈಆಕ್ಸೈಡ್‌ನ್ನು ದ್ರವ ಇಂಧನವನ್ನಾಗಿ ರೂಪಿಸಲಾಗಿದ್ದು, ಈ ಇಂಧನವನ್ನು ಬಳಸಿ ಜೆಟ್ ವಿಮಾನಗಳು ಚಲಿಸಬಲ್ಲವು. ಈ ಸಂಶೋಧನೆಯ ವಿಶೇಷತೆ ಎಂದರೆ ಸಾಮಾನ್ಯ ಎನಿಸುವ ಪದಾರ್ಥಗಳನ್ನು ಬಳಸಿ ಈ ಪ್ರಕ್ರಿಯೆ ನಡೆಯುತ್ತದೆ. ಜತೆಗೆ ಇದು ಅಗ್ಗ ಕೂಡ.

ಹೈಡ್ರೊಜನ್ ಮತ್ತು ನೀರನ್ನು ಇಂಧನವನ್ನಾಗಿ ಪರಿವರ್ತಿಸುವುದಕ್ಕಿಂತ ಸಾಕಷ್ಟು ಕಡಿಮೆ ವೆಚ್ಚದಲ್ಲಿ ಈ ಹೊಸ ಇಂಧನವನ್ನು
ತಯಾರಿಸಬಹುದು. ಈ ಹೊಸ ಇಂಧನವನ್ನು ವಿಮಾನದಲ್ಲಿ ಪ್ರಾಯೋಗಿಕವಾಗಿ ಬಳಸಲು ಇನ್ನೂ ಸಾಕಷ್ಟು ಕೆಲಸ ನಡೆಯ ಬೇಕಿದೆ. ಪ್ರಯೋಗಾಲಯದಲ್ಲಿ ಇದನ್ನು ಸಣ್ಣ ಮಟ್ಟದಲ್ಲಿ ತಯಾರಿಸಲಾಗಿದ್ದು, ಇದರ ವಾಣಿಜ್ಯಕ ಉಪಯೋಗಕ್ಕೆ ದೊಡ್ಡ ಕಾರ್ಖಾನೆ ಬೇಕಾದೀತು. ಈ ಸಂಶೋಧನೆಯ ಕುರಿತು ಕೆಲವು ಕೈಗಾರಿಕಾ ವಲಯಗಳು ಆಸಕ್ತಿ ತೋರಿಸಿವೆ. ಜತೆಗೆ, ಈ ಸಂಶೋಧನೆ ಯನ್ನು ದೊಡ್ಡ ಮಟ್ಟದಲ್ಲಿ ಕಾರ್ಯರೂಪಕ್ಕೆ ತರಲು ಹೆಚ್ಚಿನ ವೈಜ್ಞಾನಿಕ ತೊಡಕುಗಳು ಇಲ್ಲ ಎಂದೇ ತಿಳಿಯಲಾಗಿದೆ.

ವಿಮಾನ ಓಡಿಸುವ ಸಂಸ್ಥೆಗಳಿಗೆ ಈ ಹೊಸ ಸಂಶೋಧನೆಯಿಂದ ಸಾಕಷ್ಟು ಲಾಭಗಳಿವೆ. ಪರಿಸರ ಸ್ನೇಹಿ ಎನಿಸಿರುವ ಈ ಇಂಧನ ವನ್ನು ಬಳಸಲು, ಈಗ ಇರುವ ವಿಮಾನಗಳನ್ನೇ ಸೂಕ್ತ ಮಾರ್ಪಾಡು ಮಾಡಿಕೊಳ್ಳಲು ಸಾಧ್ಯ. ಆ ಮೂಲಕ ವಾತಾವರಣಕ್ಕೆ ಕಾರ್ಬನ್ ಹೊರಸೂಸುವ ಪ್ರಮಾಣವನ್ನು ಕಡಿಮೆ ಮಾಡಬಹುದು.