ಸಂತೋಷ್ ರಾವ್ ಪೆರ್ಮುಡ
ಝೆನ್ ಗುರು ಒಬ್ಬರು ತಾನು ಪ್ರತಿದಿನ ಕೆಲಸ ಮಾಡದೇ ಊಟ ಮಾಡುವುದಿಲ್ಲ ಎಂಬ ನಿಯಮ ಹಾಕಿಕೊಂಡಿದ್ದರು.
ಏಕೆ? ಅಂತಹ ನಿಮಯವನ್ನು ನಾವು, ನೀವು ಸಹ ಹಾಕಿಕೊಳ್ಳಬಹುದಲ್ಲವೆ!
ಜಪಾನ್ ದೇಶದ ಝೆನ್ ಬೌದ್ಧ ತತ್ವಜ್ಞಾನದಲ್ಲಿ ಒಂದು ಕಥೆಯಿದೆ. ಬೌದ್ಧ ಝೆನ್ಗಳ ಆಶ್ರಮದಲ್ಲಿ ಗುರುಗಳಾದ ಯಾಕೋ ಜೋ ಎಂಬಾತ ವಾಸವಿರುತ್ತಾನೆ. ಆತನಿಗೆ ಬಹುದೊಡ್ಡ ಆಪ್ತ ಶಿಷ್ಯರ ಬಳಗವಿರುತ್ತದೆ.
ಯಾಕೋ ಜೋಗೆ 80-90 ವರ್ಷ ವಯಸ್ಸಾಗಿ ಮುದಿಯಾಗಿ ಕೆಲಸ ಮಾಡಲು ಸಾಧ್ಯವೇ ಇಲ್ಲದಂತಹ ದೈಹಿಕ ಶಕ್ತಿಹೀನತೆ ಸ್ಥಿತಿಗೆ ತಲುಪುತ್ತಾನೆ. ಆದರೂ ತಾನು ಮೂರು ಹೊತ್ತು ಮಾಡುವ ಊಟಕ್ಕಾಗಿ ಕನಿಷ್ಠ ಕೆಲಸವನ್ನಾದರೂ ಮಾಡಬೇಕೆಂಬ ಉದ್ದೇಶ ದಿಂದ ಆತನಿದ್ದ ಮನೆಯ ಅಂಗಳವೆಲ್ಲ ಅಲೆದಾಡುತ್ತಾ ಸಣ್ಣದಾದ ಕತ್ತಿ ಮತ್ತು ಗುದ್ದಲಿಗಳಿಂದ ಅಂಗಳವನ್ನು ಸ್ವಚ್ಛಗೊಳಿ ಸುವ ಕೆಲಸಗಳನ್ನು ಮಾಡುತ್ತಿರುತ್ತಾನೆ.
ವಯಸ್ಸಾದ ತಮ್ಮ ಗುರುಗಳು ಕಷ್ಟಪಟ್ಟು ಕೆಲಸ ಮಾಡುವುದನ್ನು ಗಮನಿಸಿದ ಶಿಷ್ಯಂದಿರು ಮರುಕಪಡುತ್ತಾರೆ. ಹಲವು ದಿನಗಳ ಕಾಲ ಗುರುಗಳ ಈ ಕಾರ್ಯವೈಖರಿಯನ್ನು ಗಮನಿಸಿದ ಶಿಷ್ಯಂದಿರು ಗುರುವಿನ ನಿರಂತರ ಕೆಲಸದ ಹಿಂದಿನ ಮರ್ಮವನ್ನು ಅರಿ
ಯುವ ಪ್ರಯತ್ನವನ್ನು ಮಾಡುತ್ತಾರೆ. ಕೊನೆಗೂ ಉತ್ತರ ದೊರಕದೇ ಇದ್ದಾಗ ಗುರುವಿನ ದೈನಂದಿನ ಕೆಲಸದ ಗುದ್ದಲಿ ಮತ್ತು ಸಣ್ಣ ಕತ್ತಿಯನ್ನು ಅಡಗಿಸಿಡುವ ನಿರ್ಧಾರವನ್ನು ಮಾಡಿ ಅವುಗಳನ್ನು ಗುರುಗಳಿಗೆ ಕಾಣಿಸದಂತೆ ಎತ್ತಿಡುತ್ತಾರೆ.
ಎಂದಿನಂತೆ ಗುರುಗಳು ಬೆಳಗ್ಗೆ ಎದ್ದಾಗ ಅವರ ಗುದ್ದಲಿ, ಬುಟ್ಟಿ ಮತ್ತು ಸಣ್ಣ ಕತ್ತಿ ಕಾಣಿಸುವುದಿಲ್ಲ. ತನ್ನ ನಿತ್ಯದ ಕೆಲಸದ
ಸಾಮಗ್ರಿಗಳು ಕಾಣಿಸದೇ ಇರುವುದನ್ನು ಗಮನಿಸಿದ ಗುರುಗಳು ಎಲ್ಲೆೆಡೆ ತೀವ್ರ ಹುಡುಕಾಟವನ್ನು ನಡೆಸುತ್ತಾರೆ. ಆದರೂ ತನ್ನ ಕೆಲಸದ ಪರಿಕರಗಳು ಸಿಗದಿದ್ದಾಗ ಬೇಸರದಿಂದ ತನ್ನ ಆಶ್ರಮಕ್ಕೆ ಬಂದು ಮುಸುಕು ಹಾಕಿ ಮಲಗುತ್ತಾರೆ.
ಊಟದ ಸಮಯವಾದಾಗ ಆಶ್ರಮದ ಶಿಷ್ಯಂದಿರು ಗುರುಗಳನ್ನು ಊಟಕ್ಕೆ ಕರೆಯುತ್ತಾರೆ. ಆದರೆ ಗುರುಗಳು ನನಗೆ ಹಸಿವಿಲ್ಲ, ನಾನು ಊಟ ಮಾಡುವುದಿಲ್ಲವೆಂದು ಹೇಳಿ ಮತ್ತೆ ನಿದ್ದೆ ಮಾಡುತ್ತಾರೆ. ಇವತ್ತೊಂದು ದಿನವಷ್ಟೇ ಗುರುಗಳು ಊಟ ಮಾಡಿಲ್ಲ, ಪರವಾಗಿಲ್ಲ ನಾಳೆ ಮಾಡಬಹುದು ಮತ್ತು ಎಲ್ಲವೂ ಸರಿಹೋಗುತ್ತದೆ ಎಂಬ ಆಶಾಭಾವದೊಂದಿಗೆ ಶಿಷ್ಯಂದಿರು ಸುಮ್ಮನಾಗು ತ್ತಾರೆ. ಹೀಗೆ ಒಂದು ದಿನ ಕಳೆದು ಹೋಗುತ್ತದೆ.
ಎರಡನೇ ದಿನವೂ ಗುರುಗಳು ಮುಸುಕು ಹಾಕಿ ನಿದ್ದೆ ಮಾಡುತ್ತಿರುತ್ತಾರೆ. ಊಟದ ಸಮಯದಲ್ಲಿ ಎಬ್ಬಿಸಿದಾಗ ಮತ್ತೆ ಅದೇ ರೀತಿ ನನಗೆ ಹಸಿವಿಲ್ಲ ಎಂಬ ಉತ್ತರವನ್ನು ಹೇಳುತ್ತಾರೆ. ಇದೇ ರೀತಿ ನಿರಂತರವಾಗಿ ಮೂರು ದಿನಗಳು ಕಳೆದು ಹೋಗುತ್ತವೆ. ನಾಲ್ಕನೇ ದಿನ ಶಿಷ್ಯಂದಿರು ಕಳಕಳಿಯಿಂದ ಗುರುಗಳಿಗೆ ಏನು ಸಮಸ್ಯೆಯಾಗಿದೆ ಎಂದು ಭಾವಿಸಿ ‘ಏಕೆ ತಾವು ಊಟ ಮಾಡುತ್ತಿಲ್ಲ’ವೆಂದು ಪ್ರಶ್ನೆಯನ್ನು ಹಾಕುತ್ತಾರೆ.
ಆಗ ಗುರುಗಳು ಬೇಸರದಿಂದ ‘ನಾನು ನಿತ್ಯ ಕೆಲಸ ಮಾಡುವ ಕೆಲಸದ ಪರಿಕರಗಳು ಕಾಣುತ್ತಿಲ್ಲ. ಅದಕ್ಕಾಗಿ ನಾನು ಊಟವನ್ನು ಮಾಡದೆ ನಿದ್ದೆ ಮಾಡುತ್ತಿದ್ದೇನೆ’ ಎನ್ನುತ್ತಾರೆ. ಶಿಷ್ಯಂದಿರು ತಾವು ಅಡಗಿಸಿಟ್ಟ ಗುರುಗಳ ನಿತ್ಯ ಕೆಲಸದ ಪರಿಕರಗಳನ್ನು ಮರಳಿ ನೀಡುತ್ತಾರೆ. ಇದರಿಂದ ಖುಷಿಯಾದ ಗುರುಗಳು ಮತ್ತೆ ನಿತ್ಯ ತನ್ನ ಆಶ್ರಮದ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸುವ ಮೈಮುರಿದು ಕೆಲಸ ಮಾಡುತ್ತಾ ಊಟವನ್ನು ಮಾಡುತ್ತಾರೆ.
ಅಂದರೆ ಯಾಕೋ ಜೋ ತಾನು ಮೈಮುರಿದು ಕೆಲಸವನ್ನು ಮಾಡದ ಹೊರತಾಗಿ ನನಗೆ ಉಣ್ಣುವ ಹಕ್ಕಿಲ್ಲ ಎಂಬ ತತ್ವದೊಂದಿಗೆ ಶ್ರಮ ಜೀವಿಯಾಗಿ ಬೆವರಿನ ಅನ್ನದ ಪರಿಕಲ್ಪನೆಯಡಿಯಲ್ಲಿ ಜೀವನ ಸಾಗಿಸುತ್ತಾರೆ. ನಾವೆಲ್ಲರೂ ಮೈಮುರಿದು ಕೆಲಸವನ್ನು ಮಾಡಿಯೇ ಹೊಟ್ಟೆ ತುಂಬಾ ಉಣ್ಣುವಂತಹ ವ್ಯವಸ್ಥೆಗೆ ಒಳಪಟ್ಟಲ್ಲಿ ತಿಂದುಂಡು ಸೋಮಾರಿಗಳಂತೆ ಅಲೆದಾಡುವುದು ತಪ್ಪು ತ್ತದೆ.
ಇಂತಹ ವ್ಯವಸ್ಥೆಯನ್ನು ಸೃಷ್ಟಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ನಾವೇ ನಮಗೆ ಒಂದು ಮಿತಿಯನ್ನು ಹಾಕಿಕೊಳ್ಳಬೇಕು. ಈ ದಿನ ಇಷ್ಟು ಕೆಲಸ ಮಾಡದೇ ಊಟ ಮಾಡುವುದಿಲ್ಲ ಎಂದು. ಕೆಲಸ ಎಂದ ಕೂಡಲೆ ಮಣ್ಣು ಕಡಿಯುವ ಕೆಲಸವೇ ಆಗ ಬೇಕೆಂದಿಲ್ಲ. ಓರ್ವ ವಿದ್ಯಾರ್ಥಿಗೆ, ಪಠ್ಯಗಳನ್ನು ಓದುವುದು, ಹೊಸ ವಿಷಯವನ್ನು ಕಲಿಯುವುದೇ ಕೆಲಸ. ಓರ್ವ ಕುಶಲ ಕರ್ಮಿಗೆ ಆ ದಿನ ಇಂತಿಷ್ಟು ಹೊತ್ತು ತನ್ನ ಕೌಶಲವನ್ನು ಪ್ರಯೋಗ ಮಾಡುವುದೇ ಕೆಲಸ.
ಸಂಗೀತ ಕಲಿಯುವವನಿಗೆ, ಆ ದಿನ ಎಷ್ಟು ಸಾಧ್ಯವೋ ಅಷ್ಟು ಹಾಡುವುದೇ ಕೆಲಸ. ಇಂತಹ ನಿಯಮವನ್ನು ನಾವೇ ಹಾಕಿ ಕೊಂಡು, ಆಯಾ ದಿನ ಮೈ ಮುರಿಯು ವಷ್ಟು ಕೆಲಸ ಮಾಡುವ ಶಿಸ್ತನ್ನುಬೆಳೆಸಿಕೊಳ್ಳಬೇಕು. ಇದರಿಂದ ನಮ್ಮ ಕೌಶಲವೂ ವೃದ್ಧಿಸುತ್ತದೆ, ಯಶಸ್ಸಿನ ಹಾದಿಯೂ ಸುಗಮ ಎನಿಸುತ್ತದೆ.