Tuesday, 26th November 2024

ಗ್ರಾಮೀಣ ಶಿಕ್ಷಕನಿಗೆ ಜಾಗತಿಕ ಪ್ರಶಸ್ತಿ

ಸುರೇಶ ಗುದಗನವರ

ಗ್ಲೋಬಲ್ ಟೀಚರ್ ಪ್ರಶಸ್ತಿಗೆ ಭಾಜನರಾಗಿರುವ ರಂಜಿತ ಸಿಂಹ ದಿಸಾಳೆಯವರು, ಆದಿವಾಸಿ ಜನರು ವಾಸಿಸುವ ಹಳ್ಳಿಯಲ್ಲಿ ವಿದ್ಯಾಭ್ಯಾಸ ನೀಡುವ ಅಭಿಯಾನ ನಡೆಸಿ, ಪುಟ್ಟ ಕ್ರಾಂತಿ ನಡೆಸಿದ್ದಾರೆ. ಹಳ್ಳಿಯವರಿಗೆ ಶಿಕ್ಷಣ ನೀಡಿ, ಶಿಕ್ಷಿತರನ್ನಾಗಿಸಿದ್ದಾರೆ. ಇವರಿಂದ ಸ್ಫೂರ್ತಿ ಪಡೆದ ಆ ಹಳ್ಳಿಯ ಜನರು ಬಾಲ್ಯವಿವಾಹದ ಪದ್ಧತಿಗೆ ತಿಲಾಂಜಲಿ ಇತ್ತದ್ದು ವಿಶೇಷ.

ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಹೊಸ ಹೊಸ ಕಲಿಕಾ ಕ್ರಮಗಳಿಂದ ಶಿಕ್ಷಕರು ಮಕ್ಕಳ ಮನ ಗೆಲ್ಲಬೇಕಾಗುತ್ತದೆ. ಕರ್ನಾಟಕದ ಗಡಿ ಭಾಗದ ವಿದ್ಯಾರ್ಥಿಗಳಿಗೆ ಕನ್ನಡದ ಹೊರತಾಗಿ ಬೇರೆ ಭಾಷೆ ತಿಳಿಯುತ್ತಿರಲಿಲ್ಲ. ಹೀಗಾಗಿ ಅಲ್ಲಿನ ಕನ್ನಡ ಮಾಧ್ಯಮ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಪಠ್ಯಪುಸ್ತಕಗಳನ್ನು ಮರು ವಿನ್ಯಾಸ ಮಾಡುವ ಮೂಲಕ ಗುರುತಿಸಿಕೊಂಡಿದ್ದಾರೆ ಶಿಕ್ಷಕ ರಂಜಿತ ಸಿಂಹ ದಿಸಾಳೆಯವರು.

ಇವರು ಮೂಲತಃ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬಾರ್ಶಿ ಪಟ್ಟಣ ದವರು. ರಂಜಿತ ಸಿಂಹ ಅವರು ಎಲ್ಲರಂತೆ ಇಂಜನಿ ಯರ್ ಆಗುವ ಕನಸನ್ನು ಕಂಡವರು. ಆದರೆ ಇಂಜನಿಯರ್ ಸೀಟು ಸಿಗದೇ ನಿರಾಶರಾಗಿ ಕುಳಿತಾಗ ತಂದೆ ಮಹಾದೇವ ಅವರು ಧೈರ್ಯ ತುಂಬಿದರು. ತಂದೆಯವರ ಸಲಹೆಯಂತೆ ಶಿಕ್ಷಕ ವೃತ್ತಿಯ ತರಬೇತಿಯನ್ನು ಮುಗಿಸಿದರು. ನಂತರ 2009ರಲ್ಲಿ ಸೊಲ್ಲಾಪುರ ಜಿಲ್ಲೆಯ ಪರಿಟೆವಾಡಿ ಕುಗ್ರಾಮದ ಶಾಲೆಯ ಶಿಕ್ಷಕರಾಗಿ ಆಯ್ಕೆಗೊಂಡರು.

ಆದಿವಾಸಿ ಜನರಿಗೆ ಶಿಕ್ಷಣ

ಆದಿವಾಸಿ ಬುಡಕಟ್ಟು ಜನಾಂಗ ದವರು ವಾಸಿಸುವ ಪರಿಟೆವಾಡಿಯಲ್ಲಿ ದನದ ಕೊಟ್ಟಿಗೆ ಮತ್ತು ಗೋದಾಮುಗಳಿಂದ ಕೂಡಿದ ಗಲೀಜು ಪ್ರದೇಶದಲ್ಲಿ ಶಾಲೆ ಯಿತ್ತು. ಅಲ್ಲಿ ಎಲ್ಲರೂ ಅನಕ್ಷರಸ್ಥರಾಗಿದ್ದರಿಂದ ಹಾಗೂ ಬಡತನದ ಕುಟುಂಬಗಳು ಇದ್ದುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸದೇ ತಮ್ಮ ಜೊತೆಗೆ ದುಡಿಯಲು ಕರೆದುಕೊಂಡು ಹೋಗುತ್ತಿದ್ದರು. ಹೆಣ್ಣುಮಕ್ಕಳನ್ನು ಅಕ್ಷರಶಃ ಶಾಲೆಗೆ ಕಳುಹಿಸುತ್ತಿರಲಿಲ್ಲ. ಇಂತಹ ವಾತಾವರಣದಲ್ಲಿ ರಂಜಿತ ಸಿಂಹ ಅವರು ಧೃತಿಗೆಡದೇ ಶಾಲೆಯ ಆವರಣವನ್ನು ಸ್ವತಃ ಶುಚಿಗೊಳಿಸಿ ಗ್ರಾಮದ ಎಲ್ಲ ಕುಟುಂಬದವರನ್ನು ಭೇಟಿ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ವಿನಂತಿಸಿಕೊಂಡರು. ಪಾಲಕರೊಂದಿಗೆ ಮಕ್ಕಳು ಹೊಲಗಳ ಕೆಲಸಕ್ಕೆ ಹೋಗುತ್ತಿದ್ದವರನ್ನು ಶಾಲೆಗೆ ಬರುವಂತೆ ಮಾಡಿದರು.

ಪಠ್ಯಗಳಿಗೆ ಕ್ಯು ಆರ್ ಕೋಡ್
ಕರ್ನಾಟಕ ಗಡಿಯಿಂದ ಆಚೆಗೆ ಸುಮಾರು 50 ಕಿ.ಮೀ. ದೂರದಲ್ಲಿರುವ ಪುಟ್ಟ ಹಳ್ಳಿ ಪರಿಟೆವಾಡಿ. ರಂಜಿತ ಸಿಂಹರವರ ಮನ ವೊಲಿಕೆಯಿಂದ ಶಾಲೆಗೆ ಮಕ್ಕಳು ಬರಲಾರಂಭಿಸಿದರು. ಆದರೆ ಹೆಚ್ಚಿನ ಮ ಕ್ಕಳು ಕನ್ನಡ ಭಾಷೆ ಬಲ್ಲವರಾಗಿದ್ದರು. ಅವರ
ಪಠ್ಯವು ಮರಾಠಿ ಭಾಷೆಯಲ್ಲಿ ಇದ್ದ ಕಾರಣ ಮಕ್ಕಳ ಕಲಿಕೆ ಸಾಧ್ಯವಾಗುತ್ತಿರಲಿಲ್ಲ. ಇದು ಮಕ್ಕಳಿಗೆ ಒಂದು ಸವಾಲು ಎನಿಸಿತ್ತು. ಪುಟಾಣಿ ಮಕ್ಕಳ ಈ ಸವಾಲನ್ನು ಎದುರಿಸಲು ರಂಜಿತ ಸಿಂಹ ಹೊಸ ಅಭಿಯಾನಕ್ಕೆ ತಾವೇ ಚಾಲನೆ ನೀಡಿದರು.

ಒಂದರಿಂದ ನಾಲ್ಕನೆಯ ತರಗತಿವರೆಗಿನ ಎಲ್ಲಾ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ತಿಳಿಯುವ ಹಾಗೇ ಮರುವಿನ್ಯಾಸ ಮಾಡಿದರು. ಅದರಲ್ಲಿರುವ ಹಾಡುಗಳನ್ನು ಧ್ವನಿ ಮುದ್ರಿಸಿದರು. ಪಾಠಗಳ ವೀಡಿಯೋ ಮಾಡಿದರು. ಅವುಗಳನ್ನೆಲ್ಲಾ ಕ್ಯುಆರ್ ಕೋಡ್‌ಗೆ ಅಳವಡಿಸಿದರು. ಶಿಕ್ಷಕ ರಂಜಿತಸಿಂಹ ದಿಸಾಳೆಯವರ ಪ್ರಯತ್ನಕ್ಕೆ ಫಲ ಲಭಿಸಿತು. ಮಕ್ಕಳೆಲ್ಲ ಸಂತಸದಿಂದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳತೊಡಗಿದರು.

ಹಳ್ಳಿಯಲ್ಲಿ ಆನ್‌ಲೈನ್ ಪಾಠ 
ಕರೋನಾ ಸಮಯದಲ್ಲಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಅನಿವಾರ್ಯವಾದಾಗ ಮೊಬೈಲ್ ನಲ್ಲಿಯೇ ಓದುವ ವ್ಯವಸ್ಥೆ ಮಾಡಿದರು. ಎಲ್ಲ ಮಕ್ಕಳಿಗೆ ಡಿಜಿಟಲ್ ಶಿಕ್ಷಣ ದೊರೆಯುವಂತೆ ನೋಡಿಕೊಂಡ ರಂಜಿತಸಿಂಹರವರು ಶಿಕ್ಷಣದಲ್ಲಿ ಒಂದು ರೀತಿಯ ಕ್ರಾಂತಿ ಮೂಡಿಸುವಲ್ಲಿ ಯಶಸ್ವಿಯಾದರು. ಅವರು ಕಳೆದ ಹನ್ನೊಂದು ವರ್ಷಗಳ ಹಿಂದೆ ಶಾಲೆಗೆ ಶಿಕ್ಷಕರಾಗಿ ನೇಮಕಗೊಂಡು ಬಂದಾಗ ಮಕ್ಕಳ ಶಾಲಾ ಹಾಜರಾತಿ ಪ್ರಮಾಣ ಕೇವಲ ಶೇ.2ರಷ್ಟಿತ್ತು. ಈಗ ಅದು ಶೇ. ನೂರರಷ್ಟು ಆಗಿದೆ. ಅಲ್ಲದೇ ಹೆಣ್ಣು ಮಕ್ಕಳ
ಹಾಜರಾತಿಯನ್ನು ಶೇಕಡಾ ನೂರರಷ್ಟು ಸಾಧಿಸಿದ್ದಾರೆ.

ಕಳೆದ ಬಾರಿಯ ವಾರ್ಷಿಕ ಪರೀಕ್ಷೆಗಳಲ್ಲಿ ಈ ಶಾಲೆಯ ಶೇ.85ರಷ್ಟು ವಿದ್ಯಾರ್ಥಿಗಳು ಎ ಗ್ರೇಡ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಆದ್ದರಿಂದ ಪರಿಟೆವಾಡಿ ಪ್ರಾಥಮಿಕ ಶಾಲೆಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿಯೂ ಲಭಿಸಿದೆ. ಗ್ಲೋಬಲ್ ಟೀಚರ್ ಆಗಿ ಆಯ್ಕೆ ಶಿಕ್ಷಕ ರಂಜಿತಸಿಂಹ ದಿಸಾಳೆಯವರಿಗೆ 2016ರಲ್ಲಿ ನಾವೀನ್ಯತೆ ಸಂಶೋಧಕ ಮತ್ತು 2018ರಲ್ಲಿ ರಾಷ್ಟ್ರೀಯ ನಾವೀನ್ಯತೆ ಸಂಶೋಧಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಲ್ಲದೇ ಮೈಕ್ರೋಸಾಫ್ಟ್ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸತ್ಯ ನಾಡೆಲ್ಲಾರವರು ‘ಹಿಟ್ ಫ್ರೆಶ್’ ಪುಸ್ತಕದಲ್ಲಿ ರಂಜಿತ ಸಿಂಹರವರ ಕಾರ‌್ಯವೈಖರಿ ಕುರಿತು ಉಲ್ಲೇಖಿಸಿ ಪ್ರಶಂಸಿಸಿದ್ದಾರೆ.

ಇತ್ತಿಚಿಗೆ ರಂಜಿತ ಸಿಂಹರವರು ಜಾಗತಿಕ ಪ್ರಶಸ್ತಿಯಾದ ಗ್ಲೋಬಲ್ ಟೀಚರ್ ಪ್ರಶಸ್ತಿಗೆ ಆಯ್ಕೆಯಾಗಿ ಭಾರತದ ಹೆಮ್ಮೆಯನ್ನು
ಹೆಚ್ಚಿಸಿದ್ದಾರೆ. ಲಂಡನ್ ಮೂಲದ ವರ್ಕಿ ಫೌಂಡೇಶನ್ ನೀಡುವ ಈ ಪ್ರಶಸ್ತಿಯು ಹತ್ತು ಲಕ್ಷ ಡಾಲರ್ ನಗದು ಬಹುಮಾನವನ್ನು ಹೊಂದಿದೆ.

ವರ್ಕಿ ಫೌಂಡೇಶನ್ ಸ್ಥಾಪಿಸಿದ ಈ ಪ್ರಶಸ್ತಿಯನ್ನು ಯುನಸ್ಕೋ ಸಹಯೋಗದೊಂದಿಗೆ ನೀಡಲಾಗುತ್ತಿದೆ. ಅವರು ಪ್ರತಿಷ್ಠಿತ ಗ್ಲೋಬಲ್ ಟೀಚರ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವುದು ದೇಶದ ಇಡೀ ಪ್ರಾಥಮಿಕ ಶಾಲಾ ಶಿಕ್ಷಕ ಸಮುದಾಯಕ್ಕೆ ಸಂದ
ಗೌರವವಾಗಿದೆ. ಹಾಗೆಯೇ ಎಲ್ಲ ಶಿಕ್ಷಕರು ಪ್ರಾಮಾಣಿಕವಾಗಿ ರಂಜಿತಸಿಂಹರವರ ಮಾದರಿಯನ್ನು ಅಳವಡಿಸಿಕೊಳ್ಳುವ ಅಗತ್ಯತೆ ಯಿದೆ.

ಶಿಕ್ಷಕರಲ್ಲಿ ಸಾಕಷ್ಟು ಸೃಜನಶೀಲ ಶಕ್ತಿ, ಸಾಮರ್ಥ್ಯವಿದೆ. ಗ್ರಾಮೀಣ ಶಾಲೆಗಳಲ್ಲಿ ಅಲ್ಲಲ್ಲಿ ಈ ರೀತಿ ಪ್ರಯತ್ನ ನಡೆದಿದೆ. ಮಕ್ಕಳ ಮನಸ್ಸನ್ನು ಮುಟ್ಟುವ ಪ್ರಯತ್ನ ನಾಡಿನೆಲ್ಲೆಡೆ ವಿಸ್ತರಿಸಬೇಕಾಗಿದೆ. ಈ ದಿಸೆಯಲ್ಲಿ ಪ್ರಯತ್ನಿಸಿದ ಮೂವತ್ತೆರಡು ವಯಸ್ಸಿನ ಯುವಕ ರಂಜಿತಸಿಂಹ ದಿಸಾಳೆಯವರು ದೇಶಕ್ಕೆ ಗೌರವದ ಹಿರಿಮೆಯನ್ನು ತಂದಿದ್ದಾರೆ. ಅವರ ಮಹಾನ್ ಸಾಧನೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿರುವದಲ್ಲದೆ, ಒಬ್ಬ ಶಿಕ್ಷಕನ ದೃಢ ಸಂಕಲ್ಪದ ಪ್ರಭಾವ ಹೇಗೆ ಇತರರ
ಜೀವನವನ್ನು ಬದಲಾಯಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.