Monday, 25th November 2024

ಯುದ್ದದಲ್ಲಿ ನಾಶಗೊಂಡ ಬಂಗಾರದ ನಗರ

ಎರಡನೆಯ ಮಹಾಯುದ್ಧದಲ್ಲಿ ವೈರಿಪಡೆಗಳ ದಾಳಿಗೆ ನಾಶಗೊಂಡ ಈ ನಗರ ಮತ್ತೆ ತಲೆ ಎತ್ತಿ ನಿಂತಿರುವ ರೀತಿಯೇ
ಅಪೂರ್ವ.

ಬ್ಲ್ಯಾಕ್ ಫಾರೆಸ್ಟ್‌‌‌ನ ಗೇಟ್ ವೇ ಎಂದೇ ಪ್ರಸಿದ್ಧವಾಗಿರುವ ಜರ್ಮನಿಯ ಫೋರ್ಝ್ ಹೈಮ್ ಎನ್ಜ್, ನಗೋಲ್ಡ್ ಮತ್ತು ವುರ್ಮ್ ನದಿ ಗಳ ಸಂಗಮಸ್ಥಳದಲ್ಲಿದೆ. ಇದನ್ನು ಮೂರು ಕಣಿವೆಗಳ ನಗರವೆಂದೂ ಕರೆಯುತ್ತಾರೆ.

ಕಪ್ಪು ಅರಣ್ಯದೊಳಕ್ಕೆ ಹೋಗಲು ಸೂಕ್ತವಾದ ಅವಕಾಶವನ್ನು ನೀಡುವ ಈ ಸ್ಥಳ ಚಾರಣಿಗರಿಗೆ ಮತ್ತು ಸೈಕ್ಲಿಸ್ಟ್’ಗಳಿಗೆ ಪ್ರಿಯ.
ಹದಿನೆಂಟನೆ ಶತಮಾನದಿಂದ ಆಭರಣ ಮತ್ತು ಗಡಿಯಾರ ತಯಾರಿಕೆಯಲ್ಲಿ ಪ್ರಸಿದ್ಧವಾದ ಈ ನಗರಕ್ಕೆ ‘ಬಂಗಾರದ ನಗರ’ ಎಂಬ ಅನ್ವರ್ಥನಾಮವೂ ಇದೆ. ಪ್ರಸ್ತುತ ಜನಸಂಖ್ಯೆ 1,20,000. ಇದು ಪುರಾತನ ತಾಣ.

ಕ್ರಿ.ಶ. 90ರ ನಂತರ ರೋಮನ್ನರ ವಸಾಹತು ಇದ್ದುದಕ್ಕೆ ಪುರಾವೆಗಳಿವೆ. 13-14 ನೇ ಶತಮಾನದಲ್ಲಿ ಸ್ಥಳೀಯ ಗುಂಪೊಂದು
ಆರ್ಥಿಕವಲಯದಲ್ಲಿ ಸಾಕಷ್ಟು ಸಾಧನೆ ಮಾಡಿತ್ತು. ಪ್ರಸಿದ್ಧ ಯೋಹಾನ್ನಿಸ್ ರೂಖ್ಲಿನ್ ಇದೇ ನಗರದಲ್ಲಿ 1455ರಲ್ಲಿ ಜನಿಸಿದ.  ವಕೀಲ ಹಾಗೂ ಬರಹಗಾರನಾಗಿದ್ದ ಈತ ಗ್ರೀಕ್ ಮತ್ತು ಹೀಬ್ರೂ ಭಾಷೆಗಳಲ್ಲಿ ಪಾರಂಗತನಾಗಿದ್ದ. ಅವನ ಪ್ರತಿಕೃತಿ ಹಾಗೂ ಮ್ಯೂಸಿಯಂಗಳನ್ನು ತೆರೆಯಲಾಗಿದ್ದು, ಕೇಂದ್ರಭಾಗದಲ್ಲಿರುವ ರೂಖ್ಲಿನ್ ಹೌಸ್ ಇವನ ಗೌರವಾರ್ಥವಾಗಿ ರೂಪುಗೊಂಡಿದೆ.

1718ರಲ್ಲಿ ಅನಾಥಾಶ್ರಮ, ಆಸ್ಪತ್ರೆ, ಮಾನಸಿಕ ರೋಗಿಗಳ ವಸತಿ ಆರಂಭವಾದವು. 1767ರಲ್ಲಿ ಪ್ರಥಮ ವಾಚ್ ಮತ್ತು ಆಭರಣಗಳ ಕಾರ್ಖಾನೆ ಆರಂಭವಾಯಿತು. ಮರು ವರ್ಷವೇ ಆಭರಣ ಮತ್ತು ಗಡಿಯಾರ ತಯಾರಿಕೆಯ ತರಬೇತಿಯನ್ನು ಕೊಡುವ ಸಂಸ್ಥೆ ಯೂ ಕಾರ್ಯಪ್ರವೃತ್ತವಾಯಿತು. ಹತ್ತೊಂಬತ್ತನೆಯ ಶತಮಾನದಲ್ಲಿ ಕಾರ್ಖಾನೆಯ ಕಾರ್ಮಿಕರ ದಂಗೆಯಿಂದಾಗಿ ಸಾಕಷ್ಟು ಹಿಂಸಾಚಾರ ನಡೆದಿತ್ತು.

ಯುದ್ಧದ ಬಿಸಿಗೆ ಸಾವಿರಾರು ಸಾವು ಎರಡನೇ ಮಹಾಯುದ್ಧದಲ್ಲಿ ನಗರದ ಕೇಂದ್ರಭಾಗ ಪೂರ್ತಿ ನಾಶವಾಗಿತ್ತು. ಜರ್ಮನಿಯ
ವೈರಿಪಡೆ ಇಲ್ಲಿ ನಡೆಸಿದ ಮಾರಣಹೋಮ ಭೀಕರ. 22 ನಿಮಿಷಗಳ ಅವಧಿಯಲ್ಲಿ 20000 ಜನರು ಪರಲೋಕವಾಸಿಯಾಗಿದ್ದರು. ನಂತರದ 20 ವರ್ಷಗಳಲ್ಲಿ ನಗರದ ಮರು ನಿರ್ಮಾಣ ವಾಯಿತು. ರೂಖ್ಲಿನ್ ಹೌಸ್ ನಲ್ಲಿರುವ ಆಭರಣಗಳ ಮ್ಯೂಸಿಯಂ ಸುಂದರ. ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ವಿವಿಧ ಮನಮೋಹಕ ಆಭರಣಗಳ ಸಂಗ್ರಹವಿದೆ. ಆಭರಣ ಮತ್ತು ಗಡಿಯಾರಗಳನ್ನು ತಯಾರಿಸುವ ಕಾರ್ಖಾನೆಯೂ ವೀಕ್ಷಣೆಗೆ ಲಭ್ಯ. ಆಭರಣಗಳನ್ನು ವಿಕ್ರಯಿಸುವ ಮಾಲ್ ಆಕರ್ಷಕ.

ಇದಲ್ಲದೆ ಗ್ಯಾಸೋಮೀಟರ್ ಎಂಬ ಕಟ್ಟಡದಲ್ಲಿ ಯೆಡಗಾರ್ ಅಸಿಸಿ ಎಂಬ ಕಲಾವಿದನ 360 ಡಿಗ್ರಿ ಕಲಾಕೃತಿ (ಪನೋರಮ ಕೃತಿ) ವೀಕ್ಷಣೆಗೆ ಲಭ್ಯ. ‘ದ ಗ್ರೇಟ್ ಬ್ಯಾರಿಯರ್ ರೀಫ್’ ಎಂಬ ಈ ಕಲಾಕೃತಿ ಮೈ ಒದ್ದೆ ಮಾಡಿಕೊಳ್ಳದೆಯೇ, ಉಪಕರಣಗಳ ಸಹಾಯ ವಿಲ್ಲದೆಯೇ ಸಾಗರತಳದ ಹವಳದ್ವೀಪದಲ್ಲಿ ಓಡಾಡಿದ ಅನುಭವ ನೀಡುತ್ತದೆ.

ಬ್ಲ್ಯಾಕ್ ಫಾರೆಸ್ಟ್‌‌ನ ಆವರಣದಲ್ಲಿರುವ ವನ್ಯ ಜೀವಿಗಳ ಸಂಗ್ರಹಾಲಯವಿದೆ. ನೈಸರ್ಗಿಕ ವಾತಾವರಣದಲ್ಲಿ 70ಕ್ಕೂ ಹೆಚ್ಚು ಪ್ರಭೇದಗಳ ಪ್ರಾಣಿಗಳನ್ನು ಹೊಂದಿದ್ದು , ಪ್ರಾಣಿಗಳಿಗೆ ವೀಕ್ಷಕರೇ ತಿನಿಸು ನೀಡುವ ಆಯ್ಕೆಯೂ ಇದೆ. ‘ನ್ಯಾಷನಲ್ ಜಿಯೋ ಗ್ರಫಿಕ್’ ಇದನ್ನು ಅತ್ಯುತ್ತಮ ವನ್ಯಜೀವಿ ಸಂಗ್ರಹಾಲಯ ಎಂದು ಗುರುತಿಸಿದೆ. ಭಾರತೀಯರ ಅನುಕೂಲಕ್ಕೆಂದು ದೇವಿಯ ದೇವಸ್ಥಾನವೂ ಇಲ್ಲಿದೆ. ನಗರ ವೀಕ್ಷಣೆಗೆ ಟ್ರಾಮ್ ಮತ್ತು ಬಸ್ಸುಗಳನ್ನು ಬಳಸಬಹುದು. ಹೆಚ್ಚಿನ ಸ್ಥಳಗಳು ರೈಲುನಿಲ್ದಾಣಕ್ಕೆ ಹತ್ತಿರವಿವೆ.

ಚರ್ಚ್ ಆಕರ್ಷಣೆ
ಇಲ್ಲಿರುವ ಶ್ಲಾಸ್ ಕಿರ್ಶೆ ಎಂಬ ಚರ್ಚ್ 13 ನೇ ಶತಮಾನದಲ್ಲಿ ನಿರ್ಮಾಣವಾದದ್ದು. ಎರಡನೇ ಮಹಾಯುದ್ಧದ ಸಮಯದ ದಾಳಿಯಿಂದ ಇದು ಬಚಾವಾಯಿತು. ನಂತರ ಸಾಕಷ್ಟು ರಿಪೇರಿ ಮಾಡಿ, ಆಕರ್ಷಕ ಸ್ವರೂಪ ನೀಡಿದ್ದಾರೆ. ಇದರ ಆಸುಪಾಸಿನಲ್ಲೇ ರೂಖ್ಲಿನ್ ಸ್ಮಾರಕ ಮತ್ತು ಮ್ಯೂಸಿಯಂ ಇವೆ. ಇವಲ್ಲದೆ ಇನ್ನೂ ಹಲವು ಚರ್ಚುಗಳು, ಮ್ಯೂಸಿಯಂಗಳು ಇಲ್ಲಿನ ಪ್ರವಾಸಿ ಆಕರ್ಷಣೆಗಳು.