Wednesday, 27th November 2024

ಸರಳತೆಯ ಸಾಕಾರ ಬಸಪ್ಪ ಅಜ್ಜ

ಮಲ್ಲಿಕಾರ್ಜುನ ಹೆಗ್ಗಳಗಿ ಮುಧೋಳ

ಇದು ನನ್ನ ಕಣ್ಣೆೆದುರು ನಡೆದ ನೈಜ ಕಥೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಯಾದವಾಡ ನನ್ನ ಹುಟ್ಟೂರು. ಈಗ ಸುಮಾರು ಆರು ಸಾವಿರ ಜನಸಂಖ್ಯೆಯಿದೆ. ಕೃಷಿ ಇಲ್ಲಿಯ ಮುಖ್ಯ ಉದ್ಯೋಗ.

ಊರ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಣಮಟ್ಟದ ಸುಣ್ಣದ ಕಲ್ಲು (ಡೋಲಾಮೈಟ್) ಲಭಿಸುವದರಿಂದ ಗಣಿಗಾರಿಕೆ ಆರಂಭವಾಗಿದೆ. ಮಿನಿ ಸಿಮೆಂಟ್ ಕಾರ್ಖಾನೆಗಳು ತಲೆ ಎತ್ತಿವೆ. ಸುಮಾರು 60 ವರ್ಷಗಳ ಹಿಂದೆ ಯಾದವಾಡ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಕಾಲರಾ ಬೇನೆ ಹಾವಳಿ ಒಮ್ಮೆಲೆ ಕಾಣಿಸಿಕೊಂಡಿತು. ಒಂದೇ ದಿನ ಯಾದವಾಡ ಗ್ರಾಮದಲ್ಲಿ ನಾಲ್ಕು ಜನ ಕಾಲರಾ ಬೇನೆಯಿಂದ ಸತ್ತಿದ್ದರು.

ಆಗ ನಾನು ಸ್ಥಳೀಯ ಜಿ.ಎನ್.ಎಸ್. ಸ್ಕೂಲ್ ವಿದ್ಯಾರ್ಥಿಯಾಗಿದ್ದೆ. ನಮ್ಮ ಊರಿನಲ್ಲಿ ಬಸಪ್ಪ ಬೆಳಗಲಿ ಎಂಬ ಹಿರಿಯ ರೈತ
ನೊಬ್ಬನಿದ್ದ. ಆಗ ಅವನಿಗೆ 60-62 ವಯಸ್ಸು. ಅವನ ಪತ್ನಿ ಈ ಕಾಲರಾ ಬೇನೆಗೆ ತೀರಿಕೊಂಡಳು. ಬಸಪ್ಪನಿಗೆ ನಾಲ್ಕು ಜನ ಗಂಡುಮಕ್ಕಳು. ಮಕ್ಕಳೆಲ್ಲ ಸಮೀಪದ ಊರುಗಳಲ್ಲಿ ಕೃಷಿಕರಾಗಿ ಜೀವನ ಸಾಗಿಸುತ್ತಿದ್ದರು. ಬಸಪ್ಪನಿಗೆ ಮೊದಲಿನಿಂದಲೂ ಭಕ್ತಿಗೀತೆ, ಭಜನೆ ಹಾಡು ಹಾಡುವ ಹವ್ಯಾಸವಿತ್ತು. ಹೆಂಡತಿ ತೀರಿಕೊಂಡಮೇಲೆ ಕೃಷಿ ಕೆಲಸ ನಲ್ಲಿಸಿ ಮನೆಯಲ್ಲಿಯೇ ಕುಳಿತು ಭಜನೆ, ತತ್ವಪದ ಹಾಡುವದರಲ್ಲಿ ತಲ್ಲೀನನಾಗಿಬಿಟ್ಟ. ಕೆಲವರು ಅವನಿಗೆ ಊಟ ತಂದು ಕೊಡುತ್ತಿದ್ದರು.

ಒಮ್ಮೊಮ್ಮೆ ತಾನೇ ತನ್ನ ಪರಿಚಿತರ ಮನೆಗೆ ಹೋಗಿ ಕೇಳಿ ಊಟಮಾಡಿ ಬರುತ್ತಿದ್ದ. ಬಸಪ್ಪಜ್ಜ ಬಟ್ಟೆಯ ಒಂದು ಸಣ್ಣ ಚೀಲದಲ್ಲಿ ಬೂದಿಯನ್ನಿಟ್ಟುಕೊಂಡು, ದೇವರ ಪ್ರಸಾದ ಎಂದು ತನಗೆ ಊಟ ಕೊಟ್ಟವರಿಗೆ ಕೊಡುತ್ತಿದ್ದ. ಜನರಿಂದ ಹಣ ಇತರ ಯಾವ
ವಸ್ತುಗಳನ್ನೂ ಸ್ವೀಕರಿಸುತ್ತಿರಲಿಲ್ಲ. ಭಜನೆ, ತತ್ವಪದ ಹಾಡಿಕೊಂಡು ಸರಳವಾಗಿ ಬದುಕಿದ್ದ. ಜನರು ಬಸಪ್ಪಜ್ಜನ ಬಳಿ ಭವಿಷ್ಯ ಕೇಳತೊಡಗಿದರು. ‘ನಿಮಗೆ ಒಳ್ಳೆಯದಾಗುತ್ತದೆ, ದೇವರು ನಿಮಗೆ ಅನುಕೂಲ ಮಾಡುತ್ತಾನೆ’ ಎಂದು ಎಲ್ಲರಿಗೂ ಹೇಳುತ್ತಿದ್ದ.

ಕೆಲವು ಗರ್ಭಿಣಿ ಮಹಿಳೆಯರು ಕುತೂಹಲದಿಂದ ಭವಿಷ್ಯ ಕೇಳುತ್ತಿದ್ದರು. ‘ಗಂಡು ಮಗನೇ ಹುಟ್ಟುತ್ತಾನೆ’ ಎಂದು ಎಲ್ಲರಿಗೂ ಒಂದೇ ಉತ್ತರ ಹೇಳುತ್ತಿದ್ದನು. ಬಸಪ್ಪಜ್ಜ ಯಾರಿಗೂ ನಿನಗೆ ಹೆಣ್ಣು ಮಗು ಹುಟ್ಟಲಿದೆ ಎಂದು ಹೇಳುತ್ತಿರಲಿಲ್ಲ. ಗಂಡು ಮಗು
ಹಡೆದವರೆಲ್ಲ ‘ಬಸಪ್ಪಜ್ಜ ಹೇಳಿದ್ದ ಭವಿಷ್ಯ ಸತ್ಯವಾಯಿತು’ ಎಂದು ಸುದ್ದಿ ಮಾಡುತ್ತಿದ್ದರು. ಕ್ರಮೇಣ ಬಸಪ್ಪಜ್ಜನನ್ನು ಜನರು ಬಸವ ದೇವರು ಎಂದು ಕರೆಯತೊಡಗಿದರು.

ಗ್ರಾಮದ ಜನರು ಬಸಪ್ಪ ಬದುಕಿದ್ದಾಗಲೇ ಬಸವದೇವರ ಗುಡಿ ಹಾಗೂ ಅದಕ್ಕೆ ಹೊಂದಿಕೊಂಡು ದೊಡ್ಡ ಪೌಳಿ ಕಟ್ಟೆಗಳನ್ನು ಕಟ್ಟಿದ್ದರು. ಬಸಪ್ಪಜ್ಜ 1984 ರಲ್ಲಿ ತೀರಿಕೊಂಡನು. ಆ ದಿನ ಯಾದವಾಡ ಗ್ರಾಮದ ಜನತೆ ಶಾಲೆ ಹೈಸ್ಕೂಲ್‌ಗೆ ರಜೆ ಘೋಷಿಸಿ, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಗೌರವ ಸೂಚಿಸಿದರು. ಪಾರ್ಥಿವ ಶರೀರದ ಮೆರವಣಿಗೆ ಮಾಡಿ ಅಂತ್ಯಕ್ರಿಯೆ ನಡೆಸಿದರು. ಈಗ ಅಲ್ಲಿಯೂ ಒಂದು ದೊಡ್ಡ ಗದ್ದುಗೆ ಕಟ್ಟಿದ್ದಾರೆ. ಬಸಪ್ಪಜ್ಜನ ಹೆಸರಿನಲ್ಲಿ ಟ್ರಸ್ಟ್‌ ಕೂಡಾ ರಚಿಸಲಾಗಿದೆ.

ಮಹಿಳೆಯೊಬ್ಬರು ನಾಲ್ಕು ಎಕರೆ ಭೂಮಿದಾನ ನೀಡಿದ್ದಾರೆ. ನಿತ್ಯ ಪೂಜೆ, ಭಜನೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.
ಪ್ರತಿ ವರ್ಷ ಬಸಪ್ಪಜ್ಜನ ಭವ್ಯ ಉತ್ಸವ ಮೂರು ದಿನಗಳ ಕಾಲ ನಡೆಯುತ್ತದೆ. ಸಂಗೀತ, ನಾಟಕ, ಕ್ರೀಡೆ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ. ನಮ್ಮ ದೇಶದ ಬಹಳಷ್ಟು ದೇವರುಗಳು ಹುಟ್ಟಿಕೊಂಡ ಕಥೆ ಹೀಗೆಯೇ ಎಂದು ಅನಿಸುತ್ತದೆ. ಕಾಲರಾ
ಹಾವಳಿಯ ಸಂಕಷ್ಟ ರೈತ ಬಸಪ್ಪನನ್ನು ದೇವತ್ವಕ್ಕೆ ಏರಿಸಿದ ಕಥೆ ಇದು. ಕರೋನಾದ ಈ ಘಳಿಗೆಯಲ್ಲಿ, ದೈವಭಕ್ತ ಬಸಪ್ಪಜ್ಜ ದೈವತ್ವಕ್ಕೆ ಏರಿದ ಘಟನೆಯ ನೆನಪಾಯಿತು.