Wednesday, 27th November 2024

ಜೀವನದಲ್ಲಿ ಸಹಜತೆ

ಇಂದಿನ ಧಾವಂತದ ಬದುಕಿನಲ್ಲಿ ಈ ಬದುಕಿನ ಸರಳತೆಯನ್ನು, ಸಹಜತೆಯನ್ನು ಗಮನಿಸುವ ಕಲೆಯನ್ನು ನಾವು ಕಳೆದು ಕೊಂಡಿದ್ದೇವೆ. ಎಲ್ಲವೂ ಬೇಕು ಎಂಬ ಭ್ರಾಮಕತೆಯಲಿ ಬದುಕನ್ನು ಸಂಕೀರ್ಣಗೊಳಿಸುತ್ತಲೇ ಸಾಗುತ್ತೇವೆ. ಸಹಜತೆಯನ್ನು ಮರೆತು ಬಿಡುತ್ತೇವೆ. ಲಭ್ಯವಿರುವ ಇನ್ನೊಂದು ಸರಳ ದೃಷ್ಟಿಕೋನದಿಂದ ಮಗುವಿನ ಹಾಗೆ ಬದುಕನ್ನು ನೋಡಲು ಕಲಿತಾಗಲೇ, ಜೀವನ ಸಾರ್ಥಕ.

ಮಹಾದೇವ ಬಸರಕೋಡ

ನಿಸರ್ಗದಲ್ಲಿನ ಜೀವಿಗಳೆಲ್ಲ ಬದುಕಿನ ತುಂಬ ನಿಸರ್ಗ ನಿಯಮಗಳ ಜತೆ ಸರಳವಾಗಿ, ಸಹಜತೆಯಿಂದ ಬದುಕುತ್ತವೆ. ಅದರಲ್ಲಿ ಸಿಗುವ ಸಂಭ್ರಮವನ್ನು ಅನುಭವಿಸುತ್ತ ನೈಜ ಬದುಕನ್ನು ಬದುಕುತ್ತವೆ. ನಾವು ಮಾತ್ರ ನಮಗಿರುವ ವಿಶೇಷ ಬುದ್ಧಿಶಕ್ತಿಯ ಬಲ ದಿಂದಾಗಿ ಅವುಗಳಿಗಿಂತ ಭಿನ್ನವಾದ ಬದುಕನ್ನು ರೂಪಿಸಿಕೊಳ್ಳುವ ಭರದಲ್ಲಿ, ಮಹತ್ವಾಕಾಂಕ್ಷೆಗಳನ್ನು ಹೆಣೆಯುತ್ತೇವೆ.

ಅವುಗಳನ್ನು ನನಸಾಗಿಸುವ ಹಾದಿಯಲ್ಲಿ ಸಹಜತೆಯಿಂದ ದೂರಾಗುತ್ತ, ಜೀವನವನ್ನು ಪ್ರಯಾಸಮಯವಾಗಿಸಿಕೊಳ್ಳುತ್ತಲೇ
ಸಾಗುತ್ತೇವೆ. ಬಾಹ್ಯ ಪ್ರಪಂಚದ ಪರಿಮಿತತೆಯಲ್ಲಿ ನಮ್ಮ ತಿಳುವಳಿಕೆಯನ್ನು ಇನ್ನಷ್ಟು ಸೀಮಿತಗೊಳಿಸುತ್ತಾ ಭ್ರಾಮಕತೆಯಲ್ಲಿ ಸಿಲುಕುತ್ತೇವೆ. ಇದರಿಂದಾಗಿ ಸಹಜತೆಯ ಸಾನ್ನಿಧ್ಯದಲ್ಲಿ ಸಿಗುವ ಸಂಭ್ರಮ ನಮ್ಮಿಂದ ಮರಿಚೀಕೆಯಾಗುತ್ತದೆ.

ಸದಾ ಬಾಹ್ಯ ಮತ್ತು ತಾತ್ಕಾಲಿಕ ಸಂಗತಿಗಳಲ್ಲಿ ಸಂತಸವಿದೆ, ಅವುಗಳನ್ನು ನಮ್ಮದಾಗಿಸಿಕೊಳ್ಳಬೇಕು, ನಾಳೆಗೆ, ಮತ್ತೆ ಮುಂದಿನ ಜೀವನಕ್ಕೆ ಅದು ಬೇಕು, ಇದು ಬೇಕು, ಅದರಲ್ಲಿಯೇ ನೆಮ್ಮದಿಯಿದೆ ಬದುಕು ಇದೆ, ಎಂಬ ಭ್ರಮೆಯಲ್ಲಿಯೇ ದಿನನಿತ್ಯ ಹೋರಾಡುತ್ತ ಅದರಲ್ಲಿಯೇ ಮಗ್ನನಾಗಿ ಬಿಡುತ್ತೇವೆ. ಬದುಕು ಯಾಂತ್ರಿಕತೆಯತ್ತ ಮುಖ ಮಾಡುತ್ತದೆ. ಇನ್ನಿಲ್ಲದ ಬಯಕೆ ಗಳನ್ನು ಹಾಸಿ ಹೊದೆದು ಅವುಗಳ ಬಲೆಯೊಳಗೆ ಬಂಧಿಸಿ ನರಳುವಂತೆ ಮಾಡುತ್ತದೆ. ಸರಳವಾಗಿ ಸುಲಭವಾಗಿ ಬದುಕನ್ನು ಸಾಗಿಸುವುದನ್ನು ಮರೆತು ಬಿಡುತ್ತೇವೆ. ಈ ಕಾರಣದಿಂದಾಗಿ ಸಹಜತೆ ನಮ್ಮಿಂದ ದೂರದೂರಕ್ಕೆ ಸರಿಯುತ್ತಲೇ ಸಾಗುತ್ತದೆ.

ಅಚ್ಚರಿ ತಂದ ಚಾತುರ್ಯ
ಒಬ್ಬ ಇತಿಹಾಸ ವಿಷಯದ ಉಪನ್ಯಾಸಕ ಒಂದು ದಿನ ಕೆಲಸದ ಒತ್ತಡದಿಂದ ಬೇಜಾರಾಗಿ ಮನೆಗೆ ಮರಳುತ್ತಾನೆ. ಬಾಗಿಲಲ್ಲಿ ಅವನ ಸುಮಾರು ಆರು ವರುಷದ ಮಗ ನಗುತ್ತಾ ತಂದೆಯನ್ನು ಆಡಲು ಕರೆಯುತ್ತದೆ. ತುಂಬಾ ಬೇಜಾರಿನಲ್ಲಿದ್ದ, ದೈಹಿವಾಗಿ ಬಳಲಿದ್ದ ಉಪನ್ಯಾಸಕ ಮಗುವಿನ ಮನವಿಯನ್ನು ತಿರಸ್ಕರಿಸದ, ಮತ್ತು ಆಡಲೂ ಆಗದ ಉಭಯಸಂಕಟಕ್ಕೆ ಒಳಗಾಗುತ್ತಾನೆ. ಜಾಣತನದಿಂದ ತಪ್ಪಿಸಿಕೊಳ್ಳುವ ಉಪಾಯ ಯೋಚಿಸುತ್ತಿರುವಾಗಲೇ, ಅಲ್ಲೊಂದು ವಿಶ್ವದ ಭೂಪಟದ ಚಿತ್ರವಿರುವ
ನಿಯತಕಾಲಿಕೆಯ ಕಾಗದವೊಂದು ಬಿದ್ದಿರುವುದು ಕಾಣುತ್ತದೆ.

ಮಗನನ್ನು ಕರೆದು, ‘ನಾನು ನಿನ್ನ ಜತೆ ಆಡಬೇಕೆಂದರೆ ನಾನು ಹೇಳಿದಂತೆ ಕೇಳಬೇಕು’ ಎನ್ನುತ್ತಾನೆ. ಅವನು ಒಪ್ಪಿಕೊಳ್ಳುತ್ತಾನೆ. ಭೂಪಟದ ಚಿತ್ರ ತೋರಿಸಿ ಇದೇನು? ಎಂದು ಕೇಳುತ್ತಾನೆ. ಮಗ, ‘ಇದು ವಿಶ್ವದ ಭೂಪಟ’ ಎಂದು ಉತ್ತರ ನೀಡುತ್ತಾನೆ. ಸರಿ,
ಎನ್ನುತ್ತಾ ತಂದೆ ಅದನ್ನು ಹರಿದು ಕೆಲವು ತುಂಡುಗಳನ್ನಾಗಿ ಮಾಡಿ ನೆಲದ ಮೇಲೆ ಬೀಸಾಕಿ, ಇದನ್ನು ಮೊದಲಿನಂತೆ ಜೋಡಿಸಿದ ತಕ್ಷಣ ನಾನು ನಿನ್ನ ಜತೆ ಆಡಲು ಬರುತ್ತೇನೆ ಎಂದು ಹೇಳಿ ಒಳಗಡೆ ಹೋಗುತ್ತಾನೆ.

ಒಂದೆರೆಡು ನಿಮಿಷ ಕೂಡ ಕಳೆದಿರಲಿಲ್ಲ, ಕಷ್ಟಸಾಧ್ಯವಾದ ಕೆಲಸವನ್ನು ಕ್ಷಣಮಾತ್ರದಲ್ಲಿ ಮುಗಿಸಿದ ಮಗ ‘ಅಪ್ಪಾ ಬನ್ನಿ, ನಾನು ನೀವು ಹೇಳಿದಂತೆ ವಿಶ್ವದ ಭೂಪಟದ ಚಿತ್ರ ಜೋಡಿಸಿದೆ’ ಎಂದು ಕೂಗುತ್ತಾನೆ. ತಂದೆಗೆ ಪರಮಾಶ್ಚರ್ಯ, ಅದು ಹೇಗೆ ಸಾಧ್ಯ? ಇಷ್ಟು ಬೇಗ ಇಷ್ಟು ಚಿಕ್ಕ ಮಗು ಅದನ್ನು ಜೋಡಿಸಲು ಹೇಗೆ ಸಾಧ್ಯ? ಎಂದು ಹೊರಬಂದು ನೋಡಿದರೆ ಮಗುವಿನ ಮಾತು ನಿಜವಾಗಿತ್ತು.

ಅವನಿಗೆ ನಂಬಲಾಗಲಿಲ್ಲ. ಇತಿಹಾಸದ ಉಪನ್ಯಾಸಕನಾಗಿ ನನಗೆ ಮಾಡಲು ಕಷ್ಟವೆನಿಸುವ ಕೆಲಸವನ್ನು ಇಷ್ಟು ಚಿಕ್ಕ ಮಗು ಮಾಡಲು ಸಾಧ್ಯವಾಯಿತು? ಎಂಬ ಗೊಂದಲ. ಅದೇಷ್ಟೇ ಯೋಚಿಸಿದರೂ ಬಗೆಹರಿಯಲಿಲ್ಲ. ಕುತೂಹಲದಿಂದ ಮಗುವನ್ನೇ ಪ್ರಶ್ನಿಸಿದ ‘ಏನೋ ಪುಟ್ಟಾ, ಅದು ಹೇಗೆ ಇಷ್ಟು ಕಷ್ಟವಾದ ಕೆಲಸ ಇಷ್ಟು ಬೇಗ ಮಾಡಿ ಮುಗಿಸಿದೆ?’ ಎಂದ. ಮಗ ‘ಅಪ್ಪಾ ತುಂಬಾ ಸರಳ, ಭೂಪಟದ ಚಿತ್ರದ ಹಿಂಭಾಗದಲ್ಲಿ ಒಂದು ಮಗುವಿನ ಚಿತ್ರವಿತ್ತು.

ಅದರ ಕೈ, ಕಾಲು ಹೊಟ್ಟೆ ಮುಖ ತಲೆಗಳನ್ನು ಜೋಡಿಸಿದೆ’ ಅಷ್ಟೆ ಎಂದಿತು. ತಂದೆಗೆ ಅದರ ಮರ್ಮ ತಿಳಿಯಿತು. ಮಗು ಹಿಂಭಾಗದಲ್ಲಿರುವ ಮಗುವಿನ ಚಿತ್ರವನ್ನು ಜೋಡಿಸಿದಾಗ ಮುಂದಿನ ಭಾಗದಲ್ಲಿ ವಿಶ್ವದ ಭೂಪಟ ತಾನಾಗಿಯೇ ಜೋಡಿಸಲ್ಪಟ್ಟಿದೆ ಎಂಬ ಸತ್ಯ ತಿಳಿಯಿತು.

ಈ ಜೀವನ ಸರಳವಾಗಿರಲಿ
ಹೀಗೇನೇ ನಾವು ಉಪನ್ಯಾಸಕನ ಹಾಗೆ ಬದುಕಿನ ಸರಳತೆಯನ್ನು, ಸಹಜತೆಯನ್ನು ಗಮನಿಸುವದೇ ಇಲ್ಲ. ನಿತ್ಯವೂ ಬೇಕು ಎಂಬ
ಭ್ರಾಮಕತೆಯಲಿ ಬದುಕನ್ನು ಸಂಕೀರ್ಣಗೊಳಿಸುತ್ತಲೇ ಸಾಗುತ್ತೇವೆ. ಸಹಜತೆಯನ್ನು ಮರೆತು ಬಿಡುತ್ತೇವೆ. ಮಗುವಿನ ಹಾಗೆ ಲಭ್ಯವಿರುವ ಇನ್ನೊಂದು ಸರಳ ದೃಷ್ಟಿಕೋನದಿಂದ ನಾವು ನೋಡುವುದನ್ನು ಮರೆತುಬಿಡುತ್ತೇವೆ.

ಹಾಗಾಗಿ ಬದುಕಿನಲ್ಲಿ ಸಹಜತೆಯ ಸಾನಿಧ್ಯತೆಯನ್ನು, ಅದರಿಂದ ದೊರೆಯುವ ಸಂಭ್ರಮವನ್ನು ಬರಮಾಡಿಕೊಳ್ಳುವಲ್ಲಿ ಎಡವಿ ಬಿಡುತ್ತೇವೆ. ಅದಕ್ಕಾಗಿಯೇ ನಾವು ‘ಏನಾಗುತ್ತದೆಯೋ ಅದನ್ನು ಸ್ವೀಕರಿಸುವುದು’, ‘ಇಂದಿನ ದಿನ ಮಾತ್ರ ನನ್ನದು, ನಿನ್ನೆೆಯ ದಿನ
ಕಳೆದು ಹೋಗಿದೆ, ನಾಳೆ ಇನ್ನು ಬಂದಿಲ್ಲ’ ಎಂಬ ಸತ್ಯವನ್ನು ಅರ್ಥೈಸಿಕೊಳ್ಳುವದರ ಜೊತೆಯಲ್ಲಿ ಅದರೊಂದಿಗೆ ಬದುಕುವು ದನ್ನು ಕಲಿಯುವದರಿಂದ ಬದುಕಿನಲ್ಲಿ ನೈಜ ಆನಂದವನ್ನು ಅನುಭವಿಸಲು ಸಾಧ್ಯ. ‘ನಾನೇನಾಗಿರುವೆನೋ ಅದೇ ನಾನು’ ಎಂಬ ಅರಿವಿನ ಹಣತೆ ನಮ್ಮ ಹೃದಯ ಬಾಂದಳದಲ್ಲಿ ಬೆಳಕು ಬೀರಬೇಕು. ಅಹಂಕಾರ, ಎಲ್ಲದರಲ್ಲೂ ಶ್ರೇಷ್ಠತೆಯ ವ್ಯಸನ, ಮಾನ, ಸಮ್ಮಾನಗಳ ವ್ಯಾಮೋಹ, ಅಂಧಕಾರದ ತಾಮಸವನ್ನು ನಾವು ಕಳೆಯಲು ಸಾಧ್ಯವಾದಾಗ ಮಾತ್ರ ಸಹಜತೆಯ ಸಾನಿಧ್ಯ
ದಲ್ಲಿ ಬದುಕನ್ನು ಸಂಭ್ರಮಿಸಲು ಅವಕಾಶ ದೊರೆಯಬಲ್ಲದು.

ಹಸಿವಾದೆಡೆಊರೊಳಗೆ ಭಿಕ್ಷಾನ್ನಗಳುಂಟು,
ತೃಷೆಯಾದೊಡೆ ಕೆರೆ ಹಳ್ಳ ಭಾವಿಗಳುಂಟು,
ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು,
ಶಯನಕ್ಕೆ ಹಾಳು ದೇಗುಲಗಳುಂಟು
ಚೆನ್ನಮಲ್ಲಿಕಾರ್ಜುನಯ್ಯಾ
ಆತ್ಮಸಂಗಾತಕ್ಕೆ ನೀನೆನಗುಂಟು,

ಎಂಬ ನಿರ್ಲಿಪ್ತ ಭಾವ, ಅವರು ಅನುಸರಿಸುವ ಬದುಕಿನ ಮಾರ್ಗ ಜೀವನಪ್ರೀತಿಯನ್ನು ಹೆಚ್ಚಿಸುತ್ತದೆ. ಸಹಜತೆಯ ಸಾಂಗತ್ಯ
ಬದುಕಿನಲ್ಲಿ ಸಂಭ್ರಮ ತರುತ್ತದೆ, ಮನುಷ್ಯನ ಬದುಕು ಇನ್ನಷ್ಟು ಸುಂದರ, ಸಮೃದ್ಧಗೊಳ್ಳಲು ಪೂರಕವಾಗಿ ಅದು ನಿಲ್ಲುತ್ತದೆ.