ಮುಲ್ಲಾ ನಾಸಿರುದ್ದೀನನ ಕಥೆಗಳು
ನಾಸಿರುದ್ದೀನನು ವಾಸಿಸುತ್ತಿದ್ದ ಊರಿನ ಪಟೇಲನು ಬಹಳ ಕಠಿಣ ಮನೋಭಾವದವನೆಂದು ಹೆಸರಾಗಿದ್ದನು. ಒಂದು ದಿನ ಆತ ತನ್ನ ಗಡ್ಡಕ್ಕೆ ಒಳ್ಳೆಯ ರೂಪ ಕೊಡಲು ಕ್ಷೌರದ ಅಂಗಡಿಗೆ ಹೋಗಿದ್ದ. ಅವನ ಗಡ್ಡವನ್ನು ಕಂಡ ನಾಪಿತನು, ಅದನ್ನು ಟ್ರಿಮ್
ಮಾಡುತ್ತಾ, ‘ಸ್ವಾಮಿ, ನಿಮ್ಮ ಗಡ್ಡದಲ್ಲಿ ಕೆಲವು ಬಿಳಿ ಕೂದಲುಗಳು ಬಂದಿವೆ’ ಎಂದನು.
ಇದನ್ನು ಕೇಳಿದ ಊರಿನ ಪಟೇಲನಿಗೆ ಕೋಪ ಬಂತು. ಆ ನಾಪಿತನನ್ನು ಒಂದು ವರ್ಷ ಜೈಲಿಗೆ ಹಾಕುವಂತೆ ಸೇವಕರಿಗೆ
ಹೇಳಿದನು. ಪಟೇಲನಿಗೆ ಈಗ ಗೊಂದಲ. ನಿಜವಾಗಿಯೂ ತನ್ನ ಗಡ್ಡದಲ್ಲಿ ಬಿಳಿ ಕೂದಲುಗಳಿವೆಯೆ? ಪಕ್ಕದಲ್ಲಿದ್ದ ಒಬ್ಬ ಸೇವಕ ನನ್ನು ಕೇಳಿದನು ‘ನನ್ನ ಗಡ್ಡದಲ್ಲಿ ಬಿಳಿ ಕೂದಲು ಇವೆಯೆ?’ ‘ಇಲ್ಲ ಮಹಾಸ್ವಾಮಿ, ನಿಮ್ಮ ಗಡ್ಡವು ಬಹು ಮಟ್ಟಿಗೆ ಕಪ್ಪಾಗಿಯೇ ಇದೆ’ ಎಂದನು. ಪಟೇಲನಿಗೆ ಕೋಪ ಬಂತು. ‘ಬಹುಮಟ್ಟಿಗೆ ಎಂದರೇನು? ಬಿಳಿ ಕೂದಲು ಒಂದೆರಡು ಇದೆ ಎಂದರ್ಥವೆ? ಸೇವಕರೆ, ಇವನನ್ನು ಎರಡು ವರ್ಷ ಜೈಲಿನಲ್ಲಿಡಿ’ ಎಂದು ಆಜ್ಞಾಪಿಸಿದನು.
ಮತ್ತೊಬ್ಬ ಸೇವಕನ ಬಳಿ ಪಟೇಲನು ಇದೇ ಪ್ರಶ್ನೆ ಕೇಳಿದನು. ‘ಮಹಾಸ್ವಾಮಿ, ನಿಮ್ಮ ಗಡ್ಡವು ಹದಿನಾರು ವರ್ಷ ಹುಡುಗನ
ಗಡ್ಡದ ರೀತಿ ಕಪ್ಪಗೆ ಮಿಂಚುತ್ತಿದೆ’ ಎಂದ ಆ ಸೇವಕ. ‘ನೀನು ಸುಳ್ಳುಗಾರ! ಅದು ಹೇಗೆ ಸಾಧ್ಯ? ಇವನನ್ನು ಮೂರು ವರ್ಷ ಜೈಲಿಗೆ ಹಾಕಿ’ ಎಂದ ಆ ಪಟೇಲ. ಕೊನೆಗೆ, ಪಟೇಲನು ಅಲ್ಲೇ ಇದ್ದ ಮುಲ್ಲಾ ನಾಸಿರುದ್ದೀನನ ಬಳಿ ಕೇಳಿದನು ‘ನನ್ನ ಗಡ್ಡವು ಯಾವ ಬಣ್ಣದಲ್ಲಿದೆ?’ ಮುಲ್ಲಾ ನಾಸಿರುದ್ದೀನನು ಸಮಚಿತ್ತದಿಂದ, ‘ಪಟೇಲರೆ, ನಿಮಗೆ ಅವತ್ತೇ ನಾನು ಹೇಳಿದ್ದೆನಲ್ಲ, ನನಗೆ ಬಣ್ಣಗಳ ವ್ಯತ್ಯಾಸ ಕಾಣಿಸುವುದೇ ಇಲ್ಲ! ಆದ್ದರಿಂದ ಈ ಪ್ರಶ್ನೆಗೆ ಉತ್ತರ ಹೇಳಲು ನನ್ನಿಂದ ಆಗುವುದಿಲ್ಲ’ ಎಂದನು.
ಇಬ್ಬರೂ ಸರಿ, ಮುಲ್ಲಾ ನಾಸಿರುದ್ದೀನನು ನ್ಯಾಯಾಧೀಶನಾಗಿದ್ದ ದಿನಗಳವು. ಒಂದು ದೂರಿನ ಪ್ರಕರಣವನ್ನು ಆಲಿಸುತ್ತಾ, ದೂರು ನೀಡಿದವನ ಮನವಿಯನ್ನು ಕೇಳಿ ‘ ನೀನು ಹೇಳುವುದು ಸರಿಯಾಗೇ ಇದೆ’ ಎಂದನು. ನಂತರ, ಎದುರು ದೂರುದಾರನ ವಾದವನ್ನು ಆಲಿಸಿ, ಅವನಿಗೂ ‘ನಿಜ, ನೀನು ಹೇಳುವ ವಿಚಾರ ಸರಿಯಾಗಿದೆ’ ಎಂದನು. ಮುಲ್ಲಾ ನಾಸಿರುದ್ದೀನನ ಹೆಂಡತಿಯು ಈ ವಿಚಾರಣೆಯನ್ನು ನೊಡುತ್ತಾ ಇದ್ದಳು. ಅವಳಿಗೆ ಆಶ್ಚರ್ಯ! ದೂರುದಾರನೂ ಸರಿ, ಎದುರು ಪಾರ್ಟಿಯೂ ಸರಿ, ಇದು ಹೇಗೆ ಸಾಧ್ಯ? ಕೂಡಲೇ ತನ್ನ ಗಂಡನ ಬಳಿ ಕೇಳಿದಳು ‘ಇದು ನನಗೆ ಅರ್ಥವಾಗಿಲ್ಲ.
ಎರಡೂ ಕಡೆಯ ವಾದಗಳು ಹೇಗೆ ಸರಿಯಾಗಲು ಸಾಧ್ಯ?’ ನಾಸಿರುದ್ದೀನನು ಒಂದು ಕ್ಷಣ ಯೋಚಿಸಿ ‘ಇನ್ನೊಂದು ವಿಚಾರ ಗೊತ್ತಾ! ನೀನು ಹೇಳುತ್ತಿರುವುದೂ ಸರಿಯಾಗಿಯೇ ಇದೆ!’ ಎಂದು ನಸು ನಕ್ಕನು.