ಸಂತೋಷವನ್ನು ಹುಡುಕುತ್ತಾ ಹೋದರೆ ಸಿಗುತ್ತದೆಯೆ? ನಿಜಕ್ಕೂ ಸಂತೋಷ ಇರುವುದಾದರೂ ಎಲ್ಲಿ?
ಸಂದೀಪ್ ಶರ್ಮಾ
ಮನುಷ್ಯನಿಗೆ ಜೀವನದಲ್ಲಿ ಜಂಜಾಟಗಳು ಅತಿಯೇ. ಈ ಜಂಜಾಟಗಳ ಮಧ್ಯದಲ್ಲಿ ನಾವೆಲ್ಲಾ ಬದುಕಿನಲ್ಲಿ ಹುಡುಕುತ್ತಿರುವುದೇ ನು? ನಮಗರಿವಿಲ್ಲದ ಸಂತೋಷವನ್ನು. ಅದಕ್ಕಾಗಿ ಮಾಯಾಮೃಗದಂತೆ ಇಡೀ ಊರೆಲ್ಲ ಹುಡುಕುತ್ತೇವೆ; ಆದರೆ ಆ ಸಂತೋಷ ತನ್ನೊಳಗೇ ಇದೆ ಎಂಬುದನ್ನು ಮಾತ್ರ ನಾವು ಅರಿತಿರುವುದೇ ಇಲ್ಲ ; ಅಥವಾ ಆ ಅರಿವೇ ಇರದು.
ಒಬ್ಬ ಶ್ರೀಮಂತನಾದ ವ್ಯಾಪಾರಿ ಒಮ್ಮೆ ತನ್ನಲ್ಲಿದ್ದ ಒಡವೆ, ವಜ್ರ ಎಲ್ಲವನ್ನೂ ಚೀಲಕ್ಕೆ ತುಂಬಿಕೊಂಡು ಕುದುರೆಯೊಂದಿಗೆ ಸಂತೋಷವನ್ನು ಅರಸಿಕೊಂಡು ಹೊರಟ. ಎದುರು ಸಿಕ್ಕವರೆನ್ನೆಲ್ಲ ನಿಲ್ಲಿಸಿ ಕೇಳತೊಡಗಿದ. ಅವನಿಗೆ ಸಿಕ್ಕವರೆಲ್ಲ ‘ಊರ ಕೊನೆ ಯಲ್ಲಿ ಅರಣ್ಯವಿದೆ. ಅಲ್ಲಿ ಒಬ್ಬ ಸನ್ಯಾಸಿಯಿದ್ದಾನೆ, ಅವನು ನಿಮಗೆ ಸರಿಯಾದ ಮಾರ್ಗದರ್ಶನ ನೀಡಬಹುದು’ ಎಂದರು. ಅದರಂತೆ ಆತ ಅರಣ್ಯವನ್ನು ಹುಡುಕಿಕೊಂಡು ಬಂದ. ಬಹಳಷ್ಟು ಸುಸ್ತಾಯಿತು. ಆದರೂ ಸಂತೋಷವನ್ನು ಹುಡುಕುವ
ಉತ್ಸಾಹವಿತ್ತು.
ಮತ್ತಷ್ಟು ದೂರ ನಡೆದ ಮೇಲೆ ಕೊನೆಗೂ ಒಂದು ಗುಹೆ ಎದುರಾಯಿತು. ಅದರಲ್ಲಿ ಒಬ್ಬ ಸನ್ಯಾಸಿಯು ತನ್ನಷ್ಟಕ್ಕೆ ನೆಮ್ಮದಿ ಯಿಂದ ಹಾಗು ಸಂತೋಷದಿಂದ ಕಾಲ ಕಳೆಯುತ್ತಿದ್ದ. ವ್ಯಾಪಾರಿಯು ಅವನನ್ನು ಕಂಡವನೇ, ಸ್ವಾಮಿಗಳೇ, ನಾನು ಇಂಥವನು. ನನ್ನ ಬಯಕೆ ಇಂಥದ್ದು ಎಂದೆಲ್ಲ ಹೇಳಿದ. ನೀವು ನನಗೆ ಸಂತೋಷವನ್ನು ಹುಡುಕಿಕೊಟ್ಟರೆ ಈ ಎಲ್ಲ ನಗ-ನಾಣ್ಯಗಳನ್ನು ಕೊಟ್ಟು ಬಿಡುವೆ ಎಂದು ಗಂಟನ್ನು ಎದುರಿಗಿಟ್ಟ.
ಸನ್ಯಾಸಿಗೆ ಸಣ್ಣ ನಗೆ ಮೂಡಿತು, ತೋರಗೊಡಲಿಲ್ಲ. ಮಿಂಚಿನಂತೆ ಆ ಗಂಟನ್ನು ಬಾಚಿಕೊಂಡು ಓಡತೊಡಗಿದ. ಆ ಕ್ಷಣದಲ್ಲಿ ವ್ಯಾಪಾರಿಗೆ ಏನಾಗುತ್ತಿದೆ ಎಂದು ಅರ್ಥವಾಗಲೇ ಇಲ್ಲ. ಜನರೇ ‘ಸನ್ಯಾಸಿಯು ನನ್ನ ಗಂಟನ್ನು ಕದ್ದೊಯ್ಯತ್ತಿದ್ದಾನೆ. ದಯವಿಟ್ಟು ಅವನನ್ನು ಹಿಡಿಯಿರಿ’ ಎಂದು ಬೊಬ್ಬೆ ಹಾಕುತ್ತಾ ಸನ್ಯಾಸಿಯು ಹಿಂದೆ ವ್ಯಾಪಾರಿಯು ಓಡತೊಡಗಿದ. ಆದರೆ ಸನ್ಯಾಸಿಗೆ ಆ ಊರಿನ ಎಲ್ಲಾ ಬೀದಿಗಳು ಎಲ್ಲಿ ಮುಟ್ಟುತ್ತದೆ ಎಂಬುದನ್ನು ಅರಿತಿದ್ದ. ತಪ್ಪಿಸಿಕೊಂಡು ಕಣ್ಮರೆಯಾದ.
ವ್ಯಾಪಾರಿಯು ಅಲ್ಲಿ ಇಲ್ಲಿ ಸುತ್ತಾಡಿ ಸಪ್ಪೆ ಮೋರೆ ಹಾಕಿಕೊಂಡು ಮರಳಿ ಗುಹೆಗೆ ಬಂದ. ಆಶ್ಚರ್ಯ! ಸನ್ಯಾಸಿಯು ಕಣ್ಮುಚ್ಚಿ ನಗುತ್ತಾ ಕುಳಿತಿದ್ದಾನೆ, ಎದುರಿಗೆ ಆ ಗಂಟಿದೆ. ವ್ಯಾಪಾರಿಯು ತಕ್ಷಣವೇ ಆ ಗಂಟನ್ನು ಗಬಕ್ಕನೆ ಬಾಚಿಕೊಂಡ. ಬಹಳ ಖುಷಿಯಾ ಯಿತು. ಗಂಟು ಸಿಕ್ಕಿತಲ್ಲ ಎಂದು ಮಹದಾನಂದಪಟ್ಟ. ಇದನ್ನು ಕಣ್ಮುಚ್ಚಿಕೊಂಡೇ ಅನುಭವಿಸುತ್ತಿದ್ದ ಸನ್ಯಾಸಿಯು ಮೆಲು ದನಿಯಲ್ಲಿ, ‘ನಿನ್ನ ಗಂಟು ಸಿಕ್ಕಿದ್ದು ಖುಷಿಯಾಯಿತೇ?’ ಎಂದು ಕೇಳಿದ.
‘ಹೌದೌದು, ನನ್ನ ಬದುಕಿನಲ್ಲಿ ಇಷ್ಟೊಂದು ಖುಷಿ ಆಗಿಯೇ ಇರಲಿಲ್ಲ’ ಎಂದು ಹೇಳಿದ ವ್ಯಾಪಾರಿ. ಅದಕ್ಕೆ ಸನ್ಯಾಸಿಯು, ‘ಎಲ್ಲರೂ ತಮ್ಮಲ್ಲಿ ಏನಿದೆಯೋ ಅದರಲ್ಲೇ ಖುಷಿಯನ್ನು ಕಾಣುವುದಿಲ್ಲ, ಬೇರೆಯದರಲ್ಲೇ ಹುಡುಕುತ್ತಾರೆ. ಅದೇ ಸಮಸ್ಯೆ’ ಎಂದ. ಆಗ ವ್ಯಾಪಾರಿಗೆ ವಾಸ್ತವದ ಅರಿವಾಯಿತು. ಸನ್ಯಾಸಿಗೆ ಶಿರಬಾಗಿ ನಮಸ್ಕರಿಸಿ ಅಲ್ಲಿಂದ ವಾಪಸಾದ.
ನಾವೂ ಹಾಗೆಯೇ. ನಮ್ಮೊಳಗಿರುವ ಸಂತೋಷವೆಂಬ ಅಮೃತ ಹನಿಯನ್ನು ನಿರ್ಲಕ್ಷಿಸಿ ಮತ್ತೊಬ್ಬರ ಸಂತೋಷದ ವಿಷ ವರ್ತುಲ ಚಕ್ರವ್ಯೂಹದ ಒಳಗೆ ನುಸುಳಿ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ.