Wednesday, 27th November 2024

ಒಳಮನಸ್ಸಿನ ಮಾತುಗಳಿಗೆ ಕಿವಿಗೊಡಿ

ನಾಗೇಶ್ ಜೆ. ನಾಯಕ ಉಡಿಕೇರಿ

ಮರೆವು ಎಂಬುದು ಮನುಷ್ಯನಿಗೆ ಬಹುದೊಡ್ಡ ವರ. ಆದರೆ ಒಮ್ಮೊಮ್ಮೆ ಅವನು ಯಾವುದನ್ನು ಮರೆಯಬೇಕೆಂದು ಕೊಳ್ಳುತ್ತಾನೋ ಅಷ್ಟು ಸುಲಭವಾಗಿ ಮರೆಯಲಾಗುವುದಿಲ್ಲ. ಯಾವುದನ್ನು ನೆನಪಿಟ್ಟುಕೊಳ್ಳಬೇಕೆಂದು ಶತಾಯಗತಾಯ ಪ್ರಯತ್ನಿಸುತ್ತಾನೋ ಅದು ಸುತರಾಂ ನೆನಪಾಗುವುದಿಲ್ಲ.

ನಮ್ಮ ಬದುಕಿನ ಬಹುಪಾಲು ಸಮಯನ್ನು ಕಹಿ ಘಟನೆಗಳನ್ನು ಪನರ್ ಮನನ ಮಾಡಿಕೊಳ್ಳುವದರಲ್ಲಿಯೇ ಕಳೆಯುತ್ತೇವೆ. ನಮ್ಮ ನೆನಪಿನ ಸಂಪುಟದಿಂದ ಅವುಗಳನ್ನು ಬೇರುಸಮೇತ ಕಿತ್ತೆಸೆಯಲು ಸಾಧ್ಯವಾಗುವುದೇ ಇಲ್ಲ. ಅದು ಮನುಷ್ಯನ ಅಸಹಾಯಕತನ. ಒಮ್ಮೊಮ್ಮೆ ಬಹಿರಂಗದಲ್ಲಿ ತುಂಬಾ ಇಷ್ಟವಾಗುವ ಸಂಗತಿಗಳು ಅಂತರಂಗಕ್ಕೆ ಸಹ್ಯವೆನಿಸುವುದಿಲ್ಲ. ಕೊರಳಿನ ಹಾರವು ಅನೇಕ ಸಲ ನೇಣಿನ ಕುಣಿಕೆಯಂತೆ ಭಾಸವಾಗುತ್ತದೆ.

ನಿಮ್ಮ ಮನಸ್ಸಿಗೆ ಕಿರಿಕಿರಿ ಉಂಟು ಮಾಡುವ ಸಂಗತಿಗಳನ್ನು ತೊಡೆದು ಹಾಕಿ. ಮನದ ದುರಾಸೆಗಳ ಬೇರುಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತುಹಾಕಿ. ಹೃದಯಕ್ಕೆ ಇಷ್ಟವಾಗದ ಸಂಗತಿಗಳು ನಡೆದವೆಂದರೆ ಅಂತರಂಗ ಅವುಗಳನ್ನು ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ. ಯಾರೋ ಒಬ್ಬರು ಇಷ್ಟಪಟ್ಟು ಹಾಕುವ ಕೊರಳಹಾರ ಕೂಡ ಮನಸು ಒಪ್ಪದಿದ್ದರೆ ನೇಣಿನ ಕುಣಿಕೆಯ ರೀತಿ ಹಿಂಸೆ ನೀಡುತ್ತದೆ. ಇನ್ನೊಬ್ಬರ ದಯೆ, ದಾಕ್ಷಿಣ್ಯಕ್ಕೆ ಒಳಗಾಗಿ ಒತ್ತಾಯದಿಂದ ಮಾಡಿದ ಕೆಲಸ ಬಹುಕಾಲದವರೆಗೂ ಮನಸನ್ನು ಹಿಂಡಿ ಹಿಪ್ಪೆ ಮಾಡುತ್ತದೆ.

ಮನದ ಮೂಲೆಯಲ್ಲಿ ಕಟ್ಟಿದ ಅಸಮಾಧಾನದ, ಅತೃಪ್ತಿಯ ಸಣ್ಣ ಜೇಡರ ಬಲೆ ಕೂಡ ಇಡೀ ದಿನದ ಸಂತಸವನ್ನು ತಿಂದು ತೇಗುತ್ತದೆ. ಕಳೆಗುಂದಿದ ಮನೆಯ ಗೋಡೆಯನ್ನು ಅದು ಹೇಗೋ ಸುಣ್ಣ ಬಣ್ಣ ಹೊಡೆಸಿ ಅಂದಗಾಣಿಸಬಹುದು. ಆದರೆ ಮನದ ದೇಗುಲವೇ ಕಳೆರಹಿತವಾದರೆ ಹೊಳಪು ನೀಡುವುದೆಂತು? ಅದಕ್ಕೆ ಇತರರ ಮಾತಿಗೆ ಸುಮ್ಮನೆ ತಲೆಯಾಡಿಸುವ ಮುನ್ನ ಸಾವಿರ ಸಲ ಆಲೋಚನೆ ಮಾಡಿ, ಅದು ನನ್ನಿಂದ ಸಾಧ್ಯವಾ? ಅದನ್ನು ನೆರವೇರಿಸಿ ಕೊಟ್ಟರೆ ನನ್ನ ಒಳಗಿನ ಮನಸಿಗೆ ಖುಷಿಯಾಗು ತ್ತದಾ? ಸಮಾಜಕ್ಕೆ ಅದರಿಂದ ಆಗುವ ಒಳಿತೆಷ್ಟು? ಎಲ್ಲವನ್ನೂ ವಿವೇಕದಿಂದ ಯೋಚಿಸಿ ನಿರ್ಧಾರ ಕೈಗೊಂಡರೆ ನೋವಿಗೆ, ಕೊರಗಿಗೆ ಆಸ್ಪದವಿರುವುದಿಲ್ಲ. ಖುಷಿಯಲ್ಲಿದ್ದಾಗ , ಹಿಂದೆ ಮುಂದೆ ನೋಡದೇ ಯಾರಿಗೂ ವಾಗ್ದಾನ ಮಾಡಬಾರದು, ದುಃಖದಲ್ಲಿದ್ದಾಗ ಯಾರನ್ನೂ ಅನ್ಯಥಾ ದೂಷಿಸಬಾರದು ಎನ್ನುತ್ತಾರೆ ಹಿರಿಯರು.

ಖುಷಿಯ ಮೂಲಗಳನ್ನು ಹುಡುಕಿ ಅವುಗಳನ್ನು ಅಪ್ಪಿಕೊಂಡಾಗ ಚಿಂತೆ ಹಣಿಯುವುದಿಲ್ಲ. ಕೊರಗಿನ ಕುರುಹುಗಳನ್ನು  ಕಂಡುಕೊಂಡು ಹತ್ತಿರ ಸುಳಿಯದಂತೆ ಎಚ್ಚರವಹಿಸಿದಾಗ ಸಂತಸ ಎಂದಿಗೂ ಬಿಟ್ಟು ಹೋಗುವುದಿಲ್ಲ. ಇಷ್ಟವಿಲ್ಲದ ಸ್ಥಳ, ಮನಸಿಗೊಪ್ಪದ ಕಾರ್ಯ ಯಾವತ್ತೂ ಮಾಡಬಾರದು ಎನ್ನುತ್ತಾರೆ.

ಇನ್ನೊಬ್ಬರನ್ನು ತೃಪ್ತಿಪಡಿಸಲು ಆ ಕ್ಷಣಕ್ಕೆ ದಾಕ್ಷಿಣ್ಯಕ್ಕೆ ಗುರಿಯಾಗಿ ಅದನ್ನು ಒಪ್ಪಿಕೊಂಡರೂ, ಒಳಗಿನ ಮನಸ್ಸು ಅದನ್ನು ನಿರಾಕರಿಸುತ್ತೆ. ಆದ್ದರಿಂದ, ಏನೇ ಕೆಲಸ ಮಾಡಿದರೂ ಇಷ್ಟಪಟ್ಟು ಮಾಡಿ. ಒಳ ಮನಸ್ಸಿನ ಮಾತುಗಳನ್ನು ಕೇಳಿಸಿಕೊಳ್ಳಿ. ಮನಸ್ಸಿಗೆ ಸದಾ ದುಃಖ ನೀಡುವ ಸಂಗತಿಗಳನ್ನು ಹೊರಹಾಕಿ ನಿರುಮ್ಮಳವಾಗಿರಿ. ದುರಾಸೆಯ ಬೆನ್ನು ಹತ್ತಬೇಡಿ. ಬದುಕು ಚೆಂದವೆನಿಸುತ್ತದೆ.