Monday, 25th November 2024

ಝರಣಿ ನರಸಿಂಹ ಒಂದು ಅದ್ಭುತ ಅನುಭವ

ಶೋಭಾ ಪುರೋಹಿತ್

ಕರ್ನಾಟಕದಲ್ಲಿರುವ ಅತಿ ಅಪರೂಪದ ಸ್ಥಳಗಳಲ್ಲಿ ಝರಣಿ ನರಸಿಂಹ ಒಂದು. ಕತ್ತಲಿನ ಸುರಂಗದಲ್ಲಿ, ಎದೆ ಮಟ್ಟದ ನೀರಿನಲ್ಲಿ ಮುಕ್ಕಾಲು ಕಿ.ಮೀ.ಸಾಗುವ ಆ ಅನುಭವವೇ ಅನಿರ್ವಚನೀಯ!

ಬೀದರ್ ಪಟ್ಟಣದ ಹೊರವಲಯದಲ್ಲಿರುವ ಇದೊಂದು ಗುಹಾಂತರ್ಗತ ದೇವಸ್ಥಾನ. ಅಷ್ಟು ಹೇಳಿದರೆ ಏನೂ ಹೇಳಿದಂತಾ ಗದು. ಸುರಂಗದಲ್ಲಿ ನಡೆದು ಹೋಗುವಾಗ, ಸುಮಾರು ಐದು ಅಡಿ ಆಳದ ಎದೆ ಮಟ್ಟದ ನೀರಿನಲ್ಲಿ ನಡೆದೇ ಹೋಗಬೇಕು. ನಸು ಗತ್ತಲಿನಲ್ಲಿ, ಸುರಂಗದಲ್ಲಿ ಉದ್ದಕ್ಕೂ ಸಾಗುವಾಗ ಎದೆಮಟ್ಟ ನೀರು!

ಅದೆಂತಹ ಅದ್ಭುತ, ರೋಚಕ ಅನುಭವ. ಕರ್ನಾಟಕದ ಬಹು ವಿಶಿಷ್ಟ ಪ್ರವಾಸಿ ಸ್ಥಳಗಳಲ್ಲಿ ಇದೂ ಒಂದು ಎಂಬುದರಲ್ಲಿ ಎರಡು ಮಾತಿಲ್ಲ. ಮತ್ತೊಂದು ಅಚ್ಚರಿ ಎಂದರೆ ಬೀದರ್‌ನ ಝರಣಿ ನರಸಿಂಹನ ಈ ಪುಟಾಣಿ ದೇಗುಲಕ್ಕೆ ಸಾಗುವ ಸುರಂಗಕ್ಕೆ ನೀರು ಎಲ್ಲಿಂದ ಬರುತ್ತದೆ ಯಾರಿಗೂ ತಿಳಿದಿಲ್ಲ! ವರ್ಷದ ಬಹುಕಾಲ ಸಾಕಷ್ಟು ನೀರಿನಿಂದ ತುಂಬಿರುವ ಈ ಸುರಂಗದಲ್ಲಿ, ಕಡು ಬೇಸಿಗೆಯ ಕೆಲವು ದಿನಗಳಲ್ಲಿ ಮಾತ್ರ ನೀರು ಕಡಿಮೆಯಾಗುತ್ತದೆ. ಆಗಲೂ ಸುರಂಗದಲ್ಲಿ ನೀರಿನಲ್ಲಿ ನಡೆಯುವ ರೋಚಕ ಅನುಭವಕ್ಕೆ ಕೊರತೆ ಇಲ್ಲ!

ನಮ್ಮನ್ನೇ ತಳ್ಳುವ ನೀರಿನ ಪ್ರವಾಹ ಗುಹೆಯ ಪ್ರವೇಶ ದ್ವಾರದಿಂದ ನಾಲ್ಕಾರು ಮೆಟ್ಟಿಲು ಇಳಿಯುತ್ತಿದ್ದಂತೆ, ಸುರಂಗದ ರೀತಿ ಸಾಗುವ ದಾರಿಯುದ್ದಕ್ಕೂ ನೀರು ಆವರಿಸಿಕೊಳ್ಳುತ್ತದೆ. ಆ ಭಾಗ ಪ್ರವೇಶಿಸುತ್ತಿದ್ದಂತೆ, ಸಣ್ಣಗೆ ಮೈ ಬೆವರಿ ಸ್ವಲ್ಪ ಭಯವೂ ಆಗಬಹುದು! ಈ ಸುರಂಗದಲ್ಲಿ ಬಾವಲಿ ಗಳು ಇರುತ್ತವೆ ಅಂತ ಕೇಳಿದ್ದೆ! ನಮಗೆ ಅಂತಹುದ್ದೇನೂ ಕಾಣಿಸಲಿಲ್ಲ!

ನೀರಿನಲ್ಲೇ ನಡೆಯುತ್ತಾ ಗರ್ಭಗುಡಿ ತಲುಪಲು, ಸುಮಾರು ಮುಕ್ಕಾಲು ಕಿ.ಮೀ ನಡೆಯಬೇಕು! ಎದುರಿನಿಂದ ಹರಿದು ಬರುವ ನೀರಿನ ರಭಸಕ್ಕೆ ಆಯ ತಪ್ಪಿ ಬೀಳುವಂತಾಗುತ್ತದೆ! ಅಲ್ಲಲ್ಲಿ ಕಂಬಿಗಳನ್ನು, ಆಸರೆಗಾಗಿ ಹಿಡಿದಕೊಳ್ಳಲು ಹಗ್ಗಗಳನ್ನು ಬಿಗಿದಿ ದ್ದಾರೆ! ಆದರೂ ಧರಿಸಿದ ಬಟ್ಟೆಗಳು ನೆನೆದು ಭಾರವಾಗಿ, ನೀರಿನ ಸೆಳೆತಕ್ಕೆ, ನಮ್ಮನ್ನು ಹಿಂದಕ್ಕಳೆಯುವಾಗ, ಪ್ರವಾಹಕ್ಕೆ ವಿರುದ್ಧ ವಾಗಿ ಸಣ್ಣಗೆ ಈಜಿದಂತೆ ಭಾಸವಾಗುತ್ತದೆ.

ನಾವು ಆ ಝರಣಿಯಲ್ಲಿ ಸಾಗಿದ ದಿನ ಒಂದು ಭಾನುವಾರ. ಕರೋನಾಕ್ಕಿಂತ ಮುಂಚಿನ ದಿನಗಳು ಅವು. ಜನ ಸಂದಣಿಯೂ ಹೆಚ್ಚಾಗಿತ್ತು. ಅದೂ ಅಲ್ಲದೇ, ಮುಂದೆ ಹೋಗಿದ್ದ ಜನರು ಬೇಗನೆ ವಾಪಸಾ ಗದೇ ಅಲ್ಲೇ ನಿಂತಿರುವುದರಿಂದ, ನೀರಿನಲ್ಲೇ ನೆನೆದು ಕಾಯುವ ಪಾಡು. ನಾವು ಭೇಟಿ ಮಾಡಿದ ವೇಳೆ ಸಂಜೆ ಆಗಿದ್ದರಿಂದ ಚಳಿಯಿಂದ ನಡುಗುವ ಹಾಗಾಯ್ತು. ಸುರಂಗದ ಉದ್ದಕ್ಕೂ ಅಲ್ಲಲ್ಲಿ ವಿದ್ಯುದ್ದೀಪಗಳನ್ನು ಅಳವಡಿಸಲಾಗಿತ್ತು! ಆ ಬೆಳಕಿನಿಂದಾಗಿ ನಮಗೆಲ್ಲಾ ಸಾಕಷ್ಟು ಧೈರ್ಯ. ಕಾಲ ಕೆಳಗೆ ನೀರು, ಸಣ್ಣಗೆ ಚಳಿ, ನಸು ಗತ್ತಲಿನಲ್ಲಿ ಸಾಗುವ ಅಪರೂಪದ ಅನುಭವ ಅದು.

ಒಂದು ಗಂಟೆ ಕಾದ ನಂತರ, ನಾವೂ ಗರ್ಭ ಗುಡಿಯ ಹತ್ತಿರ ಬಂದೆವು. ನೀರಿ ನಿಂದ ಮೇಲಕ್ಕೆ ಬಂದು, ಮೆಟ್ಟಿಲೇರಿ ಹೋಗಿ, ದರ್ಶನ ಪಡೆದಾಗ ಶ್ರಮ ಸಾರ್ಥಕ ಎನಿಸಿತು. ಗರ್ಭಗುಡಿಯಲ್ಲಿ ಶಿವಲಿಂಗ ಮತ್ತು ಗುಹೆಯ ಕೊನೆಯಲ್ಲಿ ಕಲ್ಲಿನ ಗೋಡೆಯ ಮೇಲೆ ಕೆತ್ತಲಾದ ನರಸಿಂಹನ ಮೂರ್ತಿ ಇದೆ.

ಝರಣಿ ನರಸಿಂಹನನ್ನು ನೋಡಿ, ಹಿಂದಿರುಗುವಾಗ ಅಷ್ಟೇನೂ ಶ್ರಮ ಅನಿಸಲಿಲ್ಲ. ಯಾಕೆಂದರೆ ನಾವು ಹೋಗುವ ದಿಕ್ಕಿಗೇ ಹರಿದು ಬರುತ್ತಿದ್ದ ನೀರಿನ ಪ್ರವಾಹವು ನಮ್ಮನ್ನು ಸಣ್ಣಗೆ ತಳ್ಳುತ್ತಿತ್ತು! ಬೇಗ ಬೇಗ ಸಾಗಿ ಕಾಲು ಗಂಟೆಯಲ್ಲಿ ಆಚೆಗೆ ಬಂದೆವು.
ನಿಜವಾಗಿಯೂ ಇದೊಂದು ಅಚ್ಚರಿಯ, ವಿಸ್ಮಯದ ಸ್ಥಳ. ನೀರನಿಂದ ತುಂಬಿದ ಆ ಸುರಂಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಓಡಾಡಿ ಬಂದಿರುವುದು ನನ್ನ ಜೀವನದ ಅವಿಸ್ಮರಣೀಯ ಪ್ರವಾಸೀ ಅನುಭವಗಳಲ್ಲಿ ಒಂದು ಎನಿಸಿದೆ!