ಡಾ.ಕಾರ್ತಿಕ ಜೆ.ಎಸ್.
ಕರಾವಳಿಯ ಕಾಡುಗಳ ನಡುವೆ ಇರುವ ಕಾರಿಂಜೇಶ್ವರ ಕ್ಷೇತ್ರಕ್ಕೆ ಭೇಟಿ ಎಂದರೆ ಪ್ರಕೃತಿಯ ನಡುವೆ ಮಿಂದು ಬಂದಂತೆ. ಈ ಬೆಟ್ಟ ಏರಿದಾಗ ಕಾಣಿಸುವ ಪಶ್ಚಿಮ ಘಟ್ಟಗಳ ನೋಟ ಬಹು ಸುಂದರ.
ನಮ್ಮ ಪಯಣ ಮುಂಜಾನೆ ಸುರತ್ಕಲ್ ನಿಂದ ಆರಂಭ. ಮಂಗಳೂರಿನಿಂದ ಧರ್ಮಸ್ಥಳಕ್ಕೆೆ ತೆರಳುವ ಹೆದ್ದಾರಿಯಲ್ಲಿ ವಗ್ಗ ಎಂಬ ಸ್ಥಳ ಸಿಗುತ್ತದೆ. ಅಲ್ಲಿ ಬಲಭಾಗದ ದೇಗುಲದ ಮಹಾದ್ವಾರ ಪ್ರವೇಶಿಸಿದರೆ, ಕಾಡಿನ ನಡುವೆ ಇರುವ, ಹಸಿರಿನ ಸಿರಿಯಲ್ಲಿ ಹುದುಗಿ ರುವ ಕಾರಿಂಜ ಬೆಟ್ಟ ಏರಬಹುದು.
ಬೆಟ್ಟದ ಬುಡದಲ್ಲಿರುವ ಗದಾತೀರ್ಥ ಕೊಳವನ್ನು ನೋಡಿ, ಅದರ ನೀರನ್ನು ತಲೆಗೆ ಸಿಂಪಡಿಸಿಕೊಂಡು, ಬೆಟ್ಟವೇರಲು ಆರಂಭಿಸಿ ದೆವು. ಸ್ವಲ್ಪ ಮುಂದೆ ಬಟ್ಟಿ ವಿನಾಯಕ ಗುಡಿ ಇದೆ. ಇನ್ನಷ್ಟು ಮೆಟ್ಟಿಲುಗಳನ್ನೇರಿ ಬೆಟ್ಟದ ಮಧ್ಯಭಾಗ ತಲಪಿದಾಗ ಪಾರ್ವತಿ ದೇವಾಲಯ ಮತ್ತು ಕ್ಷೇತ್ರದ ರಕ್ಷಣೆಯ ಕೆಲಸ ಮಾಡುವ ಕೊಡಾಣಿತ್ತಾಯ ಮತ್ತು ಪಿಲಿಚಾಮುಂಡಿ ದೈವಗಳು ನೆಲೆಯನ್ನು ಕಾಣುತ್ತೇವೆ. ಮುಂದೆ ಇರುವ ಬೃಹತ್ ಬಂಡೆಯಲ್ಲಿ ನಿರ್ಮಿಸಿದ 143 ಮೆಟ್ಟಿಲುಗಳನ್ನು ಹತ್ತಿದಾಗ ಉಕ್ಕುಡ ಬಾಗಿಲು ಕಾಣಸಿಗು ತ್ತದೆ. ಇದು ಕಲ್ಲಿನ ಬಾಗಿಲು. ಮೆಟ್ಟಿಲುಗಳ ಮೇಲೆ ಹಲವು ಅಕ್ಷರ ಕೊರೆದಿದ್ದಾರೆ.
ಪಶ್ಚಿಮ ಘಟ್ಟದ ದೃಶ್ಯ
ಇಲ್ಲಿಂದ ಮುಂದೆ ನೂರು ಮೆಟ್ಟಿಲುಗಳನ್ನು ಏರುವಾಗ, ಸುತ್ತ ಮುತ್ತಲಿನ ಹಸಿರು ಕಾನನ, ಭೂದೃಶ್ಯ, ದೂರದ ಪ್ರದೇಶಗಳು ನೋಡಲು ಸಿಕ್ಕಿ, ಬಹು ಆನಂದದ ಅನುಭವ ನೀಡುತ್ತವೆ. ಅಲ್ಲಿಂದ ಕಾಣುವ ಮೋಡಗಳಿಂದ ಆವೃತವಾದ ಪಶ್ಚಿಮ ಘಟ್ಟದ ಪ್ರಾಕೃತಿಕ ಸೌಂದರ್ಯದ ದೃಶ್ಯಗಳು ನಿಜಕ್ಕೂ ಫೋಟೋಜೆನಿಕ್.
ಏದುಸಿರು ಬಿಡುತ್ತಾ ಬೆಟ್ಟದ ತುದಿ ತಲುಪಿ ಕಾರಿಂಜೇಶ್ವರನ ದರ್ಶನ ಮಾಡಿದಾಗ ಸಂತೋಷ ಮತ್ತು ನೆಮ್ಮದಿಯ ಭಾವ ಉಂಟಾ ಯಿತು. ಅಲ್ಲಿಂದ ಬಹು ಸುಂದರವಾಗಿ ಕಾಣುವ ಪಶ್ಚಿಮ ಘಟ್ಟದ ಪ್ರಾಕೃತಿಕ ಸೌಂದರ್ಯವನ್ನು ಕಂಡು ಮಂತ್ರಮುಗ್ಧ ರಾದೆವು. ನೂರಾರು ಅಡಿ ಕೆಳಗಿರುವ ದಟ್ಟಾರಣ್ಯವನ್ನು, ಅಲ್ಲಲ್ಲಿ ಕಾಣುವ ಬೃಹದಾಕಾರದ ಬಂಡೆಗಳನ್ನು, ದೂರದಲ್ಲಿ ಕೆಲವೆಡೆ ಕಾಣುವ ಊರು ಕೇರಿಗಳನ್ನು ನೋಡಿ ಅಪೂರ್ವ ಅನುಭವ ದೊರೆಯಿತು.
ಮಂಗಗಳಿಗೆ ಅನ್ನದಾನ
ಇಲ್ಲಿನ ದೇವಸ್ಥಾನದ ಪ್ರಾಕಾರ ಗೋಡೆಯ ಬಳಿ ಕಲ್ಲುಚಪ್ಪಡಿ ಇದೆ. ಇಲ್ಲಿ ಪ್ರತಿದಿನ, ಮಧ್ಯಾಹ್ನದ ದೇವರ ಪೂಜೆಯ ಬಳಿಕ ನೈವೇದ್ಯವನ್ನು ಮಂಗಗಳಿಗೆ ನೀಡುವ ಸಂಪ್ರದಾಯ ವಾನರರಿಗೆ ಅನ್ನ ಸಂತರ್ಪಣೆ ಮಾಡಿದರೆ, ಸುತ್ತಲಿನ ತೋಟಗಳಲ್ಲಿ ತೊಂದರೆ ಕೊಡುವ ಮಂಗಗಳ ಉಪದ್ರವ ಕಡಿಮೆಯಾಗಬ ಹುದೆಂಬ ನಂಬಿಕೆಯಿದೆ. ಅರ್ಚಕರು ಅನ್ನಸಂತರ್ಪಣೆ ಮಾಡು ವಾಗ ಬಂದ ವಾನರ ಕುಟುಂಬವನ್ನು ನೋಡಿ ಸಂತಸಪಟ್ಟೆೆವು.
ದೇವಾಲಯದ ಸನಿಹದಲ್ಲಿರುವ ಪ್ರತಿಧ್ವನಿ ಕಲ್ಲು, ಐತಿಹಾಸಿಕ ಹಿನ್ನೆಲೆಯ ಸತ್ಯ ಪ್ರಮಾಣದ ಕಲ್ಲು, ಪಾರ್ವತಿ ದೇವಾಲಯದ ಸಮೀಪ ಇರುವ ಉಗ್ರಾಣಿ ಗುಹೆ ಇಲ್ಲಿನ ವೈಶಿಷ್ಟ್ಯಗಳು. ಮಹಾಶಿವರಾತ್ರಿಯಂದು ಜರಗುವ ಕಾರ್ಯಕ್ರಮಗಳು, ಆಷಾಡ ಮತ್ತು ಶ್ರಾವಣ ಅಮಾವಾಸ್ಯೆ ದಿನದಂದು ಗಧಾತೀರ್ಥದಲ್ಲಿ ತೀರ್ಥ ಸ್ನಾನ ಮಾಡುವ ಪದ್ಧತಿ ಇದೆ. ಹಿಂದಿುಗುವಾಗ, ದೇವಾಲಯದ ಕೆಳಗಿರುವ ಮೆಟ್ಟಿಲುಗಳ ಸುತ್ತ ಮುತ್ತ ಇರುವ ಉಂಗುಷ್ಠ ತೀರ್ಥ, ಜಾನು ತೀರ್ಥ ಕೊಳಗಳನ್ನು ನೋಡಿದೆವು.
ಸಮೀಪದಲ್ಲಿ ಹಂದಿ ಕೆರೆ ಸಹ ಇದೆ. ಇಲ್ಲಿರುವ ನಾಲ್ಕಾರು ಜಲಮೂಲಗಳು ಪುರಾತನ ಸಂಸ್ಕೃತಿಯ ಪ್ರತೀಕ. ಬೆಟ್ಟ ಇಳಿಯು ವಾಗ, ಪಾರ್ವತಿ ದೇವಸ್ಥಾನಕ್ಕೆ ಹೊಂದಿಕೊಂಡಂತೆ ನಿರ್ಮಿಸಿದ ದೈವೀ ವನಕ್ಕೆ ತೆರಳಿದೆವು. ಪುಟ ಕೊಳದ ಮಧ್ಯೆ ಇರುವ ಧ್ಯಾನಸ್ಥ ಶಿವನ ಮೂರ್ತಿ, ನಂದಿಯ ವಿಗ್ರಹ, ದೇವಿಯ ವಿಗ್ರಹ ನಮ್ಮ ಗಮನ ಸೆಳೆಯಿತು.
ಎಚ್ಚರ ಅಗತ್ಯ
ಕಾರಿಂಜ ಬೆಟ್ಟವನ್ನು ಏರುವಾಗಿ ಕಾಣಿಸುವ ಸುಂದರ ಪ್ರಾಕೃತಿಕ ದೃಶ್ಯಗಳನ್ನು ಸೆಲ್ಫಿ ಮೂಲಕ ಸೆರೆ ಹಿಡಿಯುವ ಚಪಲ ಮೂಡು ವುದು ಸಹಜ. ಆದರೆ, ಇಲ್ಲಿ ಜಾರುವ ಮೆಟ್ಟಿಲುಗಳಿರುವುದರಿಂದ, ಬಹು ಎಚ್ಚರಿಕೆಯಿಂದ ಸೆಲ್ಫಿ ತೆಗೆಯಬೇಕು. ಜತೆಯಲ್ಲೇ, ಅಲ್ಲಲ್ಲಿ ಕೀಟಲೆ ಮಾಡುವ ಮಂಗಗಳು ಮನಸ್ಸಿಗೆ ಮುದನೀಡುವ ಸಮಯದಲ್ಲೇ ಕೆಲವರಿಗೆ ಭಯ ಉಂಟು ಮಾಡಿದರೂ ಮಾಡಬಹುದು. ಇಲ್ಲಿಂದ ಕಾಣುವ ಪಶ್ಚಿಮಘಟ್ಟಗಳನ್ನು ನೋಡುವಾಗ, ಮೆಟ್ಟಿಲುಗಳಲ್ಲಿ ಜಾರಿ ಬೀಳದಂತೆ ಎಚ್ಚರಿಕೆ ಸದಾ ಇರಲಿ.