ಪೂಜಶ್ರೀ ತೋಕೂರು
ಕರಾವಳಿಯ ಜನಪದ ವೀರರೆನಿಸಿರುವ ಕೋಟಿ ಮತ್ತು ಚೆನ್ನಯರ ಕುರಿತಾದ ವಸ್ತು ಸಂಗ್ರಹಾಲಯವು ಸ್ಥಳೀಯ
ಸಂಸ್ಕೃತಿಯ ಪರಿಚಯ ಮಾಡಿ ಕೊಡುವ ವಿಶಿಷ್ಟ ಥೀಮ್ ಪಾರ್ಕ್.
ಕರಾವಳಿಯ ತುಳುನಾಡಿನ ಜನಪದ ಚರಿತ್ರೆಯಲ್ಲಿ ಪ್ರಮುಖ ಹೆಸರು ಅವಳಿ ಸಹೋದರರಾದ ಕೋಟಿ ಮತ್ತು ಚೆನ್ನಯ. ಸುಮಾರು 450 ವರ್ಷಗಳ ಹಿಂದೆ ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ದೇಯಿ ಬೈದೆತಿಯ ಗರ್ಭದಲ್ಲಿ ಜನ್ಮ ತಳೆದ ಕೋಟಿ-
ಚೆನ್ನಯ ಸಾಮಾಜಿಕ ವ್ಯವಸ್ಥೆಯ ತಾರತಮ್ಯದ ವಿರುದ್ಧ ಹೋರಾಡಿದ ಧೀರರು.
ಇವರ ಜೀವನಗಾಥೆ ತುಳುನಾಡಿನ ಮಣ್ಣಿನಲ್ಲಿ ಇಂದಿಗೂ ಜೀವಂತ. ಈ ವೀರ ಪುರುಷರ ಕಥೆಯನ್ನು ಆಧಾರವಾಗಿಟ್ಟುಕೊಂಡು ಕಾರ್ಕಳದಲ್ಲಿ ಕೋಟಿ ಚೆನ್ನಯ ಹೆಸರಿನ ಥೀಮ್ ಪಾರ್ಕ್ ಅನ್ನು 2012ನೆಯ ಇಸವಿಯಲ್ಲಿ ನಿರ್ಮಿಸ ಲಾಯಿತು. ಕರಾವಳಿ ಭಾಗದಲ್ಲಿ ಕೋಟಿ ಚೆನ್ನಯರನ್ನು ದೇವರು ಎಂದು ಪೂಜಿಸಿಕೊಂಡು ಬಂದಿದ್ದಾರೆ.
ಇವರ ಚರಿತ್ರೆ ಹಾಗೂ ತುಳುನಾಡಿನ ಪರಂಪರೆಗಳನ್ನು ಥೀಮ್ ಪಾರ್ಕ್ ವಸ್ತು ಸಂಗ್ರಹಾಲಯದಲ್ಲಿ ರೂಪಿಸಲಾಗಿದೆ. ಜತೆಗೆ ತುಳುವರ ಸಾಂಪ್ರದಾಯಿಕ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಕೆಲಸವೂ ನಡೆದಿದೆ. ಐತಿಹಾಸಿಕ ವಸ್ತು ಸಂಗ್ರಹಾಲಯ ದೊಂದಿಗೆ, 5 ಅಡಿ ಎತ್ತರದ ಪೀಠದ ಮೇಲೆ ಸ್ಥಾಪಿಸಲಾದ ಹತ್ತು ಅಡಿ ಎತ್ತರವುಳ್ಳ ಕೋಟಿ ಚೆನ್ನಯರ ಶಿಲಾ ಮೂರ್ತಿಗಳು ಇಲ್ಲಿನ
ಪ್ರಮುಖ ಆಕರ್ಷಣೆ. ಕಾರ್ಕಳದ ಶಿಲ್ಪಿ ಜಯರಾಜ ಆಚಾರ್ಯ ಈ ಶಿಲ್ಪಗಳನ್ನು ಕೆತ್ತಿರುತ್ತಾರೆ.
ಹೆಬ್ಬಾಗಿಲು ಚಾವಡಿ
ಥೀಮ್ ಪಾರ್ಕ್ ವಸ್ತು ಸಂಗ್ರಹಾಲಯ ಪ್ರವೇಶಿಸುತ್ತಿದ್ದಂತೆ ‘ಗುತ್ತಿನಮನೆ ಹೆಬ್ಬಾಗಿಲು ಚಾವಡಿ’ಯನ್ನು ಕಾಣಬಹುದು. ಮೊದಲನೆ ಹಂತದಲ್ಲಿ ಮುಖದ್ವಾರ, ಅದನ್ನು ಅನುಸರಿಸಿ ಕೋಟಿ- ಚೆನ್ನಯರ ಕಲ್ಲಿನ ಮೂರ್ತಿಗಳು, ಗರೋಡಿ ಮಾದರಿ, ಅದರ ಸುತ್ತ ಆವರಣ.
ಆವರಣದಲ್ಲಿ ಕೋಟಿ- ಚೆನ್ನಯರ ಹುಟ್ಟಿನಿಂದ ಅವಸಾನದವರೆಗಿನ ಕಥೆ ಹೇಳುವ 34 ತೈಲಚಿತ್ರಗಳ ರಚನೆ, ಕೋಟಿ-ಚೆನ್ನಯರ ಬದುಕಿನ ಘಟನಾವಳಿಯನ್ನು ನೆನಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಗೋಡೆಗಳ ಮೇಲೆ ತುಳು ಪರಂಪರೆಯ ಕಂಬಳ (ಕ್ರೀಡೆ) ಹಾಗೂ ಇನ್ನಿತರ ಜೀವನಶೈಲಿಗಳ ಚಿತ್ರಗಳನ್ನು ಇಡಲಾಗಿದೆ.
ಕರಾವಳಿಯ ಕಲೆ
ಸ್ಥಳೀಯ ಕಲೆ ಎನಿಸಿದ ಕಾವಿ ಕಲೆ ಮತ್ತು ಸಾಂಪ್ರದಾಯಿಕ ಮನೆಗಳ ರಚನಾ ಶೈಲಿಯನ್ನೇ ಇಲ್ಲಿನ ವಸ್ತು ಸಂಗ್ರಹಾಲಯದ ರಚನೆಯಲ್ಲಿ ಬಳಸಲಾಗಿದೆ. ನಂದಿಕೇಶ್ವರ, ವೀರಭದ್ರ, ಗೊಮ್ಮಟ ಮಲ್ಲ, ಸಂಸಾರ ಬ್ರಹ್ಮ, ಹಾಗೂ ಇನ್ನಿತರ ಮೂರ್ತಿಗಳನ್ನು, ದಿನನಿತ್ಯ ಉಪಯೋಗದ ಹಳೆ ಸಾಮಗ್ರಿಗಳನ್ನು ವಸ್ತು ಸಂಗ್ರಹಾಲಯದಲ್ಲಿ ಓರಣವಾಗಿ ಜೋಡಿಸಲಾಗಿದೆ. ಆಕರ್ಷಣ ಕೇಂದ್ರ ವಾಗಿದೆ.
ವೀರರ ನೆನಪಿನಲ್ಲಿ
ಜನಪದ ವೀರರಾದ ಕೋಟಿ ಚೆನ್ನಯರ ಬೇಟೆಯ ಪರಿಕರಗಳು, ತರ್ಕತ್ತಿ, ಕೈತಲೆ, ಕಾರತಲೆ, ಕೋಲು, ತಾಮ್ರದ ಬುತ್ತಿ, ಕೌಳಿಗೆ, ಕಂಚಿನ ಉರುಳಿ, ಯುದ್ಧಕ್ಕೆ ಬಳಸುತ್ತಿದ್ದ ಖಡ್ಗ, ಚೆನ್ನಮಣೆ, ಬೀಸುಗತ್ತಿ ಬೇಟೆ ಪರಿಕರಗಳು, ಕಂಚಿನ ಬುಟ್ಟಿ, ಮರದ ಶ್ಯಾವಿಗೆ ಸೇರು, ಮೊಸರು ಕಡಿಯುವ ವಿವಿಧ ಮರದ ಸಲಕರಣೆಗಳು, ಕೊಂಬು, ಕಹಳೆ, ವಾಲಗ, ನದಿಯ ದೋಣಿ, ಎತ್ತಿನ ಗಾಡಿಯ ಚಕ್ರಗಳು, ಹಳೆ ಕಾಲದ ವಿಭಿನ್ನ ಮಾದರಿಯ ವಿಗ್ರಹಗಳು, ಗರಡಿ ಮನೆಗಳ ಜೋಕಾಲಿಗಳು ಇವೆಲ್ಲವೂ ಥೀಮ್ ಪಾರ್ಕ್‌ಗೆ ಕಳೆಕಟ್ಟಿವೆ. ಥೀಮ್ ಪಾರ್ಕ್ನಲ್ಲಿ ದೈವಾರಾಧನೆಯ ಗುಡಿಯಾದ ‘ಗರೋಡಿ’ಯ (ಗರಡಿ) ಮಾದರಿಯೂ ಇದ್ದು, ಕೋಟಿ ಚೆನ್ನಯರ ಜೀವನವನ್ನು ಬಿಂಬಿಸುವ 143 ಚಿತ್ರಣಗಳನ್ನು ಕಾಣಬಹುದಾಗಿದೆ.
ಕೋಟಿ ಚೆನ್ನಯ ಥೀಮ್ ಪಾರ್ಕ್
ಕಾರ್ಕಳದಿಂದ ಐದು ಕಿಲೋಮೀಟರ್ ದೂರದಲ್ಲಿದ್ದು, ಮಂಗಳೂರಿನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿದೆ. 9ರಿಂದ ಸಂಜೆ 7ರವರೆ ತೆರೆದಿರುತ್ತದೆ. ಉಚಿತ ಪ್ರವೇಶ.