ಕವಿತಾ ಭಟ್
ಕುಮಾರವ್ಯಾಸನೆಂದೇ ಖ್ಯಾತನಾಗಿರುವ, ಮಹಾಭಾರತವನ್ನು ಕಾವ್ಯ ರೂಪದಲ್ಲಿ ರಚಿಸಿದ ನಾರಣಪ್ಪನ ಹುಟ್ಟೂರು ಕೋಳಿವಾಡ, ಆತ ಕಾವ್ಯ ರಚಿಸಿದ್ದು ಗದಗದಲ್ಲಿ, ಅಂತಹ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವುದೆಂದರೆ, ಕಾವ್ಯಲೋಕದಲ್ಲಿ ಒಂದು ಸುತ್ತು ಹಾಕಿದಂತೆ.
ವ್ಯಾಸರಾಜರ ಮಹಾಭಾರತ ಓದಿ ಅದನ್ನು ಕನ್ನಡಕ್ಕಿಳಿಸುವ ಬಯಕೆಯಲ್ಲಿದ್ದ ಗದುಗಿನ ನಾರಾಣಪ್ಪನ ಕನಸಿಗೆ ಬಂದು ಆಶೀರ್ವದಿಸಿದ ವೀರ ನಾರಾಯಣನ ಸನ್ನಿಧಿಗೆ ನಾವು ಹೋದಾಗ ಬೆಳಗಿನ ಎರಡನೇ ಪ್ರಹರ.
ಕಾವ್ಯ ರಚಿಸುವಾಗ ಆಗಷ್ಟೇ ವೀರಗಚ್ಚೆಯುಟ್ಟು ಅಲಂಕರಿಸಿಕೊಳ್ಳುತ್ತಿದ್ದ ಸಮಯವದು. ಅವನಿಗೊಂದು ಕೈಮುಗಿದು, ಯಾವ ಕಂಬಕ್ಕೆ ಒರಗಿ ಕುಳಿತು ನಾರಾಣಪ್ಪ ಕರ್ಣಾಟ ಭಾರತ ಕಥಾಮಂಜರಿ ಎಂಬ ಮಹಾನ್ ಕಾವ್ಯವನ್ನು ಬರೆದು ಕುಮಾರವ್ಯಾಸ ರಾದರೋ ಅದೇ ಕಂಬಕ್ಕೆ ನಮಿಸಿ, ಅದರ ಕೆಳಗೆ ಕುಳಿತು ಒಂದಷ್ಟು ಸೆಲ್ಫಿ, ಫೋಟೋ ತೆಗೆದುಕೊಂಡು ಮತ್ತೆ ದೇವಸ್ಥಾನದ ಅಂತರಂಗ ಹೊಕ್ಕಾಗ ವೀರನಾರಾಯಣ ಸರ್ವಾಲಂಕಾರ ಭೂಷಿತನಾಗಿ, ಇನ್ನೇನು ಯುದ್ಧಕ್ಕೆ ಹೊರಡುವ ಭಂಗಿಯಲ್ಲಿ ಸಿದ್ಧನಾಗಿ ನಿಂತಿದ್ದ.
ಅಬ್ಬಾ…ಅದೆಂತಹ ಚೆಲುವು ಅವನದ್ದು! ನೀಲಮೇಘ ಶ್ಯಾಮ ವರ್ಣದ ಏಕ ಶಿಲೆಯಲ್ಲಿ ಕಡೆದಿಟ್ಟ ಐದಡಿ ಎತ್ತರದ ಸುಮನೋ ಹರ ವಿಗ್ರಹ. ಕರ್ಣಕುಂಡಲ, ಕಿರೀಟ ತೊಟ್ಟು, ಶಂಖ, ಚಕ್ರ, ಪದ್ಮ, ಅಭಯಾಸ್ತ ಭೂಷಿತನಾಗಿ, ವೀರಗಚ್ಚೆೆ ಹಾಕಿ ನಿಂತಿದ್ದಾನೆ. ವಕ್ಷಸ್ಥಳದಲ್ಲಿ ಲಕ್ಷ್ಮೀ ನೆಲಸಿರುವುದರಿಂದ ಎರಡನೇ ತಿರುಪತಿ ಎಂತಲೂ, ಬದರಿಯಿಂದ ಬಂದಿದ್ದರಿಂದ ದಕ್ಷಿಣ ಬದರಿ ಕ್ಷೇತ್ರ ವೆಂತಲೂ ಕರೆಯುತ್ತಾರಂತೆ. ಪ್ರಭಾವಳಿಯಲ್ಲಿರುವ ದಶಾವತಾರ ಕೆತ್ತನೆ, ಮೂರ್ತಿಯ ಮೈಮೇಲಿನ ಆಭರಣಗಳ ಸೂಕ್ಷ್ಮ ಕೆತ್ತನೆ ಯನ್ನು ನೋಡುತ್ತಾ ನಿಂತಂತೆ ಇಹವೇ ಮರೆತಂತಾಗಿ ಧನ್ಯತೆ ಆವರಿಸಿಕೊಳ್ಳುತ್ತದೆ.
ಇಂತಹ ಗದುಗಿನ ವೀರ ನಾರಾಯಣ ಸ್ವಾಮಿ ದೇವಸ್ಥಾನದ ಇತಿಹಾಸವೇ ಬಲು ರೋಚಕ. ದೇವಸ್ಥಾನದ ಪ್ರಕಾರದಲ್ಲಿ ಕುಮಾರ ವ್ಯಾಸ ಮಂಟಪ, ಅವರು ಮಿಂದೇಳುತ್ತಿದ್ದ ಬಾವಿ, ಜನಮೇಜಯ ಸರ್ಪಯಾಗ ಮಾಡಿದ್ದರ ಸಾಕ್ಷಿಯಾಗಿರುವ, ದೂರದಿಂದ ನಾಗನಂತೆ ಕಾಣುವ ವಿಶಿಷ್ಟವಾದ ಶಿವಲಿಂಗದ ಮಂಟಪ ಮತ್ತು ಮೊದಲಿಗೆ ಪೂಜೆಗೊಳ್ಳುವ ಮೂಲ ದೇವರು ಲಕ್ಷ್ಮಿನರಸಿಂಹನ ವಿಗ್ರಹವಿದೆ.
ಲಕ್ಷ್ಮೀನರಸಿಂಹನ ದರ್ಶನಕ್ಕೆ ಬಂದ ಗುರು ರಾಘವೇಂದ್ರ ಸ್ವಾಮಿಗಳ ನೆನಪಿಗಾಗಿ ಬೃಂದಾವನ ಕೂಡ ಉಂಟು. ಈ ದೇವಸ್ಥಾನ ಮೂಲತಃ ಹೊಯ್ಸಳ ದೊರೆ ಬಿಟ್ಟದೇವನಿಂದ ಸ್ಥಾಪಿತಗೊಂಡು, ಚಾಲುಕ್ಯರ ವಶದಲ್ಲಿಯೂ ಇದ್ದು, ಕಾಲಾನಂತರ ಕೃಷ್ಣದೇವ ರಾಯರ ಕಾಲದಲ್ಲಿ ಜೀರ್ಣೋದ್ಧಾರಗೊಂಡದ್ದರಿಂದ ಈ ಮೂರು ವಾಸ್ತು ಶಿಲ್ಪ ಶೈಲಿಗಳ ಮಹಾಸಂಗಮದಂತೆ ಕಾಣುತ್ತದೆ.
ಕುಮಾವ್ಯಾಸರು ದೇವಸ್ಥಾನದ ಆವರಣದಲ್ಲಿರುವ ಬಾವಿಯಿಂದ ನೀರೆತ್ತಿ, ಮಿಂದು ಮಡಿಪಂಚೆಯಲ್ಲಿ ಗದುಗಿನ ಭಾರತ ಬರೆಯಲು ಕೂಡುತ್ತಿದ್ದರಂತೆ. ಅದೂ ಪಂಚೆ ಒಣಗುವವರೆಗೆ ಮಾತ್ರ. ಒಮ್ಮೆ ಬರೆದದ್ದು ತಿದ್ದಿದ್ದಿಲ್ಲ, ಬದಲಿಸಿದ್ದಿಲ್ಲ. ಹಾಗೆ ಬರೆದ ಮಹಾಕಾವ್ಯದ ನಿಜವಾದ ಕರ್ತೃ ವೀರನಾರಾಯಣ, ನಾನು ಕೇವಲ ಲಿಪಿಕಾರ ಮಾತ್ರ ಎಂದು ಹೇಳಿಕೊಂಡ ಅವರ ವಿನಮ್ರತೆ ತುಂಬಾ ದೊಡ್ಡದು.
ಕುಮಾರವ್ಯಾಸರು ಬರೆದದ್ದು ಹತ್ತು ಪರ್ವಗಳಷ್ಟೇ. ಮುಂದಿನ ಎಂಟು ಪರ್ವಗಳು ಕೃಷ್ಣದೇವರಾಯರ ಕಾಲದಲ್ಲಿ ನಂದಿ ತಿಮ್ಮಣ್ಣ ಅವರು ಪೂರ್ಣಗೊಳಿಸಿದ್ದಾರೆ. ಇದನ್ನೇ ಆಧಾರವಾಗಿಟ್ಟು ಸಾಕಷ್ಟು ಕಥೆಗಳಿರುವುದು ಕಾಣಬಹುದು. ಸಾಮಾನ್ಯ ಮನುಷ್ಯನಾಗಿದ್ದ ನಾರಾಣಪ್ಪನ ಮೇಲೆ ವೀರನಾರಾಯಣ ಕೃಪಾಕಣಾಕ್ಷ ಬೀರಿದ್ದರಿಂದಾಗಿ ಆತ ಮಹಾಕಾವ್ಯವನ್ನೇ ಬರೆದನಂತೆ. ಹೀಗಾಗಿ ಈ ದೇಗುಲ ದರ್ಶನ ಮಾಡಿದರೆ ವಿದ್ಯೆ, ಸದ್ಬುದ್ಧಿ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಇಂತಹ ಇತಿಹಾಸವಿರುವ, ಐತಿಹ್ಯವಿರುವ, ಸಾಕಷ್ಟು ಪ್ರತೀತಿಗಳಿರುವ ವೀರನಾರಾಯಣ ದೇವಾಲಯವನ್ನು ಒಮ್ಮೆಯಾದರೂ ಕಾಣಬೇಕು.
ಮೂಲ ತಾಳೆಗರಿ ಪ್ರತಿ
ಗದಗಿನಿಂದ ಮೂವತ್ತೈದು ಕಿಲೋಮೀಟರ್ ದೂರದಲ್ಲಿರುವ ಕುಮಾರವ್ಯಾಸರು ಹುಟ್ಟಿದ ಊರು ಕೋಳಿವಾಡ. ಅಲ್ಲಿ ಈಗಲೂ ಅವರ ಮನೆಯಿದೆ ಮತ್ತು ವಂಶಸ್ಥರಿದ್ದಾರೆ. ಕುಮಾರವ್ಯಾಸರಿಂದ ವಿರಚಿತ ಕರ್ಣಾಟ ಭಾರತ ಕಥಾಮಂಚರಿ ಕೃತಿಯ ತಾಳೆಗರಿ ಗಳೂ ನೋಡುವುದಕ್ಕೆ ಲಭ್ಯವಿದೆ. ಎಂಥಹ ಸೌಭಾಗ್ಯವಲ್ಲವೇ ಕನ್ನಡಿಗರದ್ದು?
ಇನ್ನು ಗದಗಕ್ಕೆ ಹೋದರೆ ವೀರನಾರಾಯಣನ ದರ್ಶನದ ಜೊತೆಗೆ ಸೃಷ್ಟಿ, ಸ್ಥಿತಿ, ಲಯಗಳ ತ್ರಿಮೂರ್ತಿ ತತ್ವ ಸಾರುವ ತ್ರಿಕೂಟೇ ಶ್ವರ ದೇವಸ್ಥಾನಕ್ಕೆೆ ಭೇಟಿ ನೀಡುವುದನ್ನು ಮರೆಯಬೇಡಿ. ಕೇವಲ ಧಾರ್ಮಿಕ ಕ್ಷೇತ್ರವಾಗಿ ಅಷ್ಟೇ ಅಲ್ಲದೆ ಅನುಪಮ ಶಿಲ್ಪಕಲೆ ಯಿಂದ ಶ್ರೀಮಂತವಾದ ತ್ರಿಕೂಟೇಶ್ವರ ದೇವಾಲಯವನ್ನು ನೋಡುವುದೇ ಸೊಗಸು.
ತ್ರಿಕೂಟೇಶ್ವರ ಪ್ರಕಾರದಲ್ಲಿಯೇ ಸರಸ್ವತಿ, ಗಾಯಿತ್ರಿ, ಸಾವಿತ್ರಿ ಮತ್ತು ಅಷ್ಟಭುಜ ಗಣಪತಿಯ ದೇವಾಲಯಗಳ ಸಮುಚ್ಛಯ ಗಳುಂಟು. ಕಲ್ಯಾಣಿ ಚಾಲುಕ್ಯರ ವಾಸ್ತುಶಿಲ್ಪ ಶೈಲಿಯ ಅನನ್ಯತೆ ಮೈದುಂಬಿಕೊಂಡ ಈ ದೇವಾಲಯದ ಆವರಣದಲ್ಲಿರುವ ಮಂಟಪಗಳನ್ನು ಕಣ್ತುಂಬಿಕೊಂಡಷ್ಟೂ ಸಾಲದು.
ಕಣ್ಣು ಹಾಯ್ದಲ್ಲೆಲ್ಲಾ ಶಿಲ್ಪಕಲೆಯ ಉತ್ತುಂಗವನ್ನು ಸಾರುವ ಸೂಕ್ಷ್ಮ ರಚನೆ. ಸರಸ್ವತಿ ದೇವಾಲಯದಲ್ಲಿ ಕಡೆದಿಟ್ಟ ಕಂಬ ಗಳಂತೂ ಒಂದಕ್ಕಿಂತ ಒಂದು ಭಿನ್ನ. ಕೆತ್ತನೆಯಲ್ಲಿ ಒಂದಕ್ಕಿಂತ ಮತ್ತೊಂದು ಚಂದ. ನೋಡುತ್ತಾ ಹೋದಂತೆ ನಮ್ಮ ಪ್ರಾಚೀನ ಕಾಲದ ವೈಭವೋಪೇತ ಸಂಸ್ಕ್ರತಿಯ, ಕಲಾಶ್ರೀಮಂತಿಕೆಯ ಸಾಕಾರ ಕಣ್ಣು ಮುಂದೆ ಹಾಯ್ದು ಹೋಗುತ್ತದೆ.