Tuesday, 26th November 2024

ಪುರುಷೋತ್ತಮನಿಗೆ ಕುಂಬಳಕಾಯಿ

ನೂರ ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಜಿಮ್ ರವಿ ಮೊದಲ ಬಾರಿಗೆ ಪುರುಷೋತ್ತಮ ಚಿತ್ರದ ಮೂಲಕ ನಾಯಕನಾಗಿ ಕಾಣಿಸಿ
ಕೊಳ್ಳುತ್ತಿದ್ದಾರೆ. ಮೈಸೂರು ಸುತ್ತ ಚಿತ್ರೀಕರಣ ಮುಗಿಸಿದ ಚಿತ್ರತಂಡ ನೂರಾರು ಟೆನ್ಷನ್ ಇದ್ದರೆ ಇರಲಿ ಲೈಫಲ್ಲಿ, ಎಲ್ಲ ಮರೆಸೋ ತಾಕತ್ತು ಐತೆ ಹೆಂಡ್ತಿಗೆ ಎನ್ನುವ ಹಾಡಿನ ಸಾಲಿನೊಂದಿಗೆ ಚಿತ್ರೀಕರಣ ಮುಗಿಸಿದೆ.

ಶೂಟಿಂಗ್ ಪೂರ್ಣಗೊಳಿಸಿದ ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಎಸ್.ವಿ.ಅಮರನಾಥ್ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಅವರ ನಿರ್ದೇಶನದ ಮೂರನೇ ಚಿತ್ರವಾಗಿದೆ. ಗಂಡ-ಹೆಂಡತಿ ನಡುವಿನ ಪ್ರೇಮಕಥೆಗಷ್ಟೇ ಚಿತ್ರ ಸೀಮಿತವಾಗಿಲ್ಲ. ಬದಲಾಗಿ ಚಿತ್ರದಲ್ಲಿ ಕೌಟುಂಬಿಕ ಕಥೆಯಿದೆ. ಮೈಸೂರು, ಮಂಗಳೂರು ಮತ್ತು ಉಡುಪಿಯ ಸುತ್ತಮುತ್ತ ನಲವತ್ತು ದಿನಗಳ ಕಾಲ ಪುರುಷೋತ್ತಮನ ಚಿತ್ರೀಕರಣ ನಡೆಸಲಾಗಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದರು.

ಜಿಮ್ ರವಿ ಚಿತ್ರದ ನಾಯಕ ಎಂದಾಕ್ಷಣ, ಹೊಡಿ ಬಡಿಯ ಕಥೆ ಚಿತ್ರದಲ್ಲಿ ಇರಬಹುದು ಎಂದು ಅನ್ನಿಸಬಹುದು. ಆದರೆ ಚಿತ್ರದಲ್ಲಿ ಯಾರನ್ನು ವಿಜೃಂಭಿಸಿಲ್ಲ. ಎನ್ನುತ್ತಾರೆ ಜಿಮ್ ರವಿ. ನಾನು ನಾಯಕ ಅನ್ನುವ ಬದಲು ಒಂದು ಒಳ್ಳೆ ಪಾತ್ರ ಮಾಡಿದ್ದೇನೆಂದು ಹೇಳಬಹುದು. ಸ್ನೇಹಿತರು ಉತ್ತೇಜನ ನೀಡಿದ್ದರಿಂದಲೇ ನಾಯಕನಾಗಲು ನಿರ್ಧರಿಸಿದೆ. ಸುಂದರ ಸಂಸಾರ ಹೇಗಿರುತ್ತ ದೆಂದು ತಿಳಿಸಲು ಸಂಗೀತ ನಿರ್ದೇಶಕ ಶ್ರೀಧರ್.ವಿ.ಸಂಭ್ರಮ್ ಅವರೊಂದಿಗೆ ಸೇರಿಕೊಂಡು ಸಾಹಿತ್ಯ ರಚಿಸಲಾಗಿದೆ. ರವಿಸ್ ಜಿಮ್ ಪ್ರೊಡಕ್ಷನ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ.

ದೀಪಾವಳಿ ಹೊತ್ತಿಗೆ ಪುರುಷೋತ್ತಮನನ್ನು ತೆರೆಗೆ ತರಲು ಚಿಂತನೆ ನಡೆಸಲಾಗಿದೆ ಎಂದು ರವಿ ತಿಳಿಸಿದರು. ಕಲೈ ನೃತ್ಯ ಸಂಯೋಜನೆ, ಕುಮಾರ್ ಛಾಯಾ ಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಚಿತ್ರಕ್ಕಿದೆ.