ಟೆಕ್ ಟಾಕ್
ಬಡೆಕ್ಕಿಲ ಪ್ರದೀಪ
ಸ್ಮಾರ್ಟ್ಫೋನ್, ಲ್ಯಾಪ್ಟಾಪ್, ಇಲೆಕ್ಟ್ರಿಕ್ ಕಾರ್ ಮೊದಲಾದವುಗಳಲ್ಲಿರುವ ಬ್ಯಾಟರಿಗೆ ಮೂಲ ಶಕ್ತಿಯೇ ಲೀಥಿಯಂ
ಅಯಾನ್ ತಂತ್ರಜ್ಞಾನ. ಈ ಬ್ಯಾಟರಿ ತಯಾರಿಸಲು ಲೀಥಿಯಂ ಎಂಬ ಲೋಹ ಬೇಕು. ಇದು ಎಲ್ಲಿ ಸಿಗುತ್ತದೆ? ಪೆಟ್ರೋಲ್ ರೀತಿಯೇ ಇದೂ ಕ್ರಮೇಣ ಖಾಲಿಯಾದರೆ ಮುಂದೇನು? ಈ ಕುರಿತು ಬೆಳಕು ಚೆಲ್ಲುವ ಲೇಖನವಿದು.
ಜಗತ್ತು ಚಲಿಸುವ ಹಾಗೂ ಸಂವಹನ ನಡೆಸುವ ವೇಗಕ್ಕೆ ತಕ್ಕ ಹಾಗೇ ಅದರ ಹಿಂದಿರುವ ತಂತ್ರಜ್ಞಾನವೂ ಬೆಳೆಯುತ್ತಿರುವುದೂ ಸಹಜವೇ. ಅದು ನಮ್ಮ ಕಣ್ಣಿಗೆ ಕಾಣುತ್ತಿರುವ ವಸ್ತುಗಳ ಕಥೆಯಾಯ್ತು. ಆದರೆ ನಮಗೆ ಕಾಣದ, ಅದು ಇಲ್ಲದಿದ್ದರೆ ಇಂದಿನ ಹೆಚ್ಚಿನೆಲ್ಲಾ ಗ್ಯಾಜೆಟ್ಗಳೂ ಕಸವಾಗುವ ಒಂದು ಅತಿ ಮುಖ್ಯ ವಸ್ತುವೇ ಅದರೊಳಗಿರುವ ಬ್ಯಾಟರಿಗಳು.
ಇವನ್ನು ನಡೆಸಲು ಬೇಕಾಗಿರುವ ಲೀಥಿಯಂ ಎನ್ನುವ ಲೋಹವನ್ನು ಬಳಸಿದ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ತಯಾರಿಸಲು ಆ ಖನಿಜವು ಅನಿ ವಾರ್ಯ ಹಾಗೂ ವಿಶ್ವಕ್ಕೆ ವಿಶ್ವವೇ ಈ ಬ್ಯಾಟರಿಗಳಿಂದ ಮಾಡಿದ ಇಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಕಾರ್ಗಳ ಬಳಕೆಗೆ ಶುರುವಿಟ್ಟು ವರ್ಷಗಳೇ ಸಂದಿವೆ.
ಇದೀಗ ಇದರ ಬೇಡಿಕೆ ಎಷ್ಟು ಹೆಚ್ಚುತ್ತಿದೆ ಅಂದರೆ ಮುಂದೊಂದು ದಿನ ಈ ಖನಿಜವೂ ಮುಗಿದು ಹೋದೀತೋ ಅನ್ನುವಷ್ಟರ ಮಟ್ಟಿಗೆ. ಈಗ ನಾವು ಪೆಟ್ರೋಲಿಯಂ ಉತ್ಪನ್ನ ಗಳನ್ನು ಹೇಗೆ ಬಳಸುವಾಗ ಉಳಿಕೆಯ ವಿಷಯದ ಬಗ್ಗೆಯೂ ಗಮನ ಹರಿಸುತ್ತಿದ್ದೇವೋ ಅದೇ ರೀತಿ ಈ ಲೀಥಿಯಂ ಲೋಹವನ್ನು ಬಳಸುವಾಗಲೂ ಯೋಚಿಸಿ ಬಳಸುವುದು ಉತ್ತಮ ಅನ್ನುವ ಮಾತುಗಳು ಚಾಲ್ತಿಯಲ್ಲಿದೆ. ಈ ಖನಿಜ ಹೇರಳವಾಗಿ ದೊರಕುವಂಥದ್ದೇ. ಆದರೂ ಎಲ್ಲೆಡೆಯಲ್ಲೂ ಲಭ್ಯವಿಲ್ಲ ಹಾಗೂ ಈ ಖನಿಜ ನಿಕ್ಷೇಪ ಸಿಕ್ಕ ಕನಿಷ್ಟ 5ರಿಂದ 7 ವರ್ಷಗಳ ಕಾಲ ಅದನ್ನು ಅಲ್ಲಿ ಗಣಿಗಾರಿಕೆ ಮಾಡಬೇಕಾಗುತ್ತದೆ.
ಮಂಡ್ಯದಲ್ಲಿದೆ ಲೀಥಿಯಂ!
ಇದೀಗ ನಮ್ಮೂರಲ್ಲೂ, ಹೌದು, ನಮ್ಮದೇ ದೇಶ, ಅದರಲ್ಲೂ ನಮ್ಮದೇ ರಾಜ್ಯ, ಅದರಲ್ಲೂ ಬೆಂಗಳೂರಿನ ಪಕ್ಕದಲ್ಲೇ ಇರುವ
ಮಂಡ್ಯದಲ್ಲೇ ಇದರ ನಿಕ್ಷೇಪ ಸಿಕ್ಕಿದ್ದು, ಇದು ಭಾರತದಲ್ಲೇ ಮೊದಲ ಬಾರಿಗೆ ಲೀಥಿಯಂ ಖನಿಜದ ನಿಕ್ಷೇಪ ಸಿಕ್ಕಿರುವುದು.
ಸುಮಾರು 16 ಸಾವಿರ ಟನ್ಗಳಷ್ಟು ಲೀಥಿಯಂ ಕೊಡಬಲ್ಲ 30 ಸಾವಿರ ಟನ್ ಲೀಥಿಯಂ ಅದಿರು ಇರುವ 0.5 ರಿಂದ 2 ಚದರ
ಕಿಲೋ ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಪರಮಾಣು ಖನಿಜ ನಿರ್ದೇಶನಾಲಯ ಮಂಡ್ಯದಲ್ಲಿ ಗುರುತಿಸಿದೆ.
ಅಂದ ಹಾಗೆ ಇದು ಈಗಾಗಲೇ ಸಿಕ್ಕಿರುವ ನಿಕ್ಷೇಪಗಳಿಗೆ ಹೋಲಿಸಿದರೆ ಕಿಂಚಿತ್ ಅಷ್ಟೇ. ಯಾಕೆಂದರೆ ದಕ್ಷಿಣ ಅಮೆರಿಕಾದಲ್ಲಿ ಲೀಥಿಯಂ ತ್ರಿಕೋನ ಎಂದು ಕರೆಸಿಕೊಳ್ಳುವ ಬೊಲಿವಿಯಾ-ಅರ್ಜೆಂಟಿನಾ-ಚಿಲಿಯಲ್ಲಿ ಕ್ರಮವಾಗಿ 210 ಲಕ್ಷ ಟನ್, 170 ಲಕ್ಷ ಟನ್ ಹಾಗೂ 90 ಲಕ್ಷ ಟನ್ ನಿಕ್ಷೇಪಗಳು ಈಗಾಗಲೇ ಪತ್ತೆಯಾಗಿವೆ. ಇವನ್ನು ಬಿಟ್ಟರೆ ಯುಎಸ್ಏನಲ್ಲಿ 68 ಲಕ್ಷ ಟನ್, ಆಸ್ಟ್ರೇಲಿ ಯಾದಲ್ಲಿ 63 ಲಕ್ಷ ಟನ್, ಹಾಗೂ ಚೀನಾದಲ್ಲಿ 45 ಲಕ್ಷ ಟನ್. ಇದಕ್ಕೆ ಹೋಲಿಸಿದರೆ ನಮ್ಮ ದೇಶದ ಹದಿನಾರು ಸಾವಿರ ಟನ್ ಕಿಂಚಿತ್ ಅನ್ನೋದರಲ್ಲಿ ಡೌಟೇ ಇಲ್ಲ. ಆದರೂ ಇದು ಇಷ್ಟು ವರ್ಷಗಳಲ್ಲಿ ಒಂದು ಹಿಡಿಯಷ್ಟೂ ಲೀಥಿಯಂ ನಿಕ್ಷೇಪ ಕಾಣದ ಭಾರತಕ್ಕೆ ಮರುಭೂಮಿಯಲ್ಲಿ ಸಿಕ್ಕ ಓಯಸಿಸ್ ಥರವೇ ಅನ್ನೋೋಣ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ನಿಕ್ಷೇಪಗಳು ಸಿಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಏನಿದು ಲೀಥಿಯಂ ಅಯಾನ್ ಬ್ಯಾಟರಿ?
ಹಿಂದೆ ನಿಕ್ಕೆಲ್ ಕ್ಯಾಡ್ಮಿಯಂ ಬ್ಯಾಟರಿಗಳ ಬಳಕೆ ಚಾಲ್ತಿಯದ್ದವು. 1990ರ ವೇಳೆಗೆ ಬಳಕೆಗೆ ಬಂದ ಲೀಥಿಯಂ ಅಯಾನ್
ಬ್ಯಾಟರಿಗಳಲ್ಲಿರುವುದು ಲೀಥಿಯಂ ಅನ್ನುವ ಲೋಹ. ಇದುವ ಅತಿ ಹಗುರ ಲೋಹ ಮತ್ತು ಹೆಚ್ಚಿನ ಇಲೆಕ್ಟ್ರೋಕೆಮಿಕಲ್ ಸಾಧ್ಯತೆಯನ್ನು ಹೊಂದಿ ತನ್ನ ಭಾರಕ್ಕೆ ಹೋಲಿಸಿದರೆ ಶಕ್ತಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇದರಲ್ಲಿ ಅತಿ ಹೆಚ್ಚು.
1900 ಆರಂಭದಲ್ಲೇ ಪ್ರಯತ್ನಿಸಿದ್ದರೂ, 1970ರ ದಶಕದ ವೇಳೆ ಮೊದಲ ಲೀಥಿಯಂ ಬ್ಯಾಟರಿಗಳ ಬಳಕೆ ಆರಂಭವಾಯಿತು. ಆದರೆ ಅದು ರೀಚಾರ್ಜೆಬಲ್ ಆಗಿರಲಿಲ್ಲ. ಕಾರಣ ಲೀಥಿಯಂ ಲೋಹವನ್ನು ಮಾತ್ರ ಬಳಸುವುದು ಅಷ್ಟೊಂದು ಸುರಕ್ಷಿತ ಅಲ್ಲ, ಹಾಗಾಗಿ ನಂತರದ ದಿನಗಳಲ್ಲಿ ಅದರ ಅಯಾನ್ಗಳನ್ನು ಬಳಸಿ ಬ್ಯಾಟರಿಗಳನ್ನು ತಯಾರಿಸಲಾಯಿತು.
ಇದು ಲೋಹಕ್ಕಿಂತ ಕಡಿಮೆ ಶಕ್ತಿ ಸಂಗ್ರಹ ಸಾಮರ್ಥ್ಯ ಹೊಂದಿದ್ದರೂ, ಸುರಕ್ಷತೆಯಲ್ಲಿ ಮುಂದು. ಚಾರ್ಜ್-ಡಿಸ್ಚಾರ್ಜ್ ಮಾಡು ವಾಗ ಸ್ವಲ್ಪ ಜೋಪಾನವಾಗಿದ್ದರಾಯ್ತಷ್ಟೆ. 1991ರಲ್ಲಿ ಮೊದಲ ರೀಚಾರ್ಜೇಬಲ್ ಬ್ಯಾಟರಿಯನ್ನು ಜಪಾನಿನ ಸೋನಿ ಸಂಸ್ಥೆ ಹೊರತಂದಿತು. ಇನ್ನು ಈ ಬ್ಯಾಟರಿಯ ಕಡಿಮೆ ಭಾರ-ಹೆಚ್ಚು ಶಕ್ತಿ ಸಾಮರ್ಥ್ಯ ಇದನ್ನು ಎಲ್ಲೆಲ್ಲಾ ಕೊಂಡೊಯ್ದಿದೆ ಅಂದರೆ ಅಚ್ಚರಿಯೇ ಸರಿ. ನಾವು ಇದನ್ನು ಒಂದಿಲ್ಲೊಂದು ರೀತಿ ನಿತ್ಯವೂ ಬಳಕೆ ಮಾಡುತ್ತಲೇ ಇರುತ್ತೇವೆ. ಎಲ್ಲಾ ಪೋರ್ಟೆಬಲ್ ಡಿವೈಸ್ ಗಳ ಬ್ಯಾಟರಿಗಳಲ್ಲಿರುವುದು ಇದೇ ಲೀಥಿಯಂ ಅಯಾನ್ ಬ್ಯಾಟರಿ.
ಸ್ಮಾರ್ಟ್ಫೋನ್, ಲ್ಯಾಪ್ಟಾಪ್, ಟ್ಯಾಬ್ಲೆಟ್, ಡಿಜಿಟಲ್ ಕ್ಯಾಮರಾ, ಹ್ಯಾಂಡ್ ಹೆಲ್ಡ್ ಗೇಮ್ ಕನ್ಸೋಲ್, ಟಾರ್ಚ್, ಕಾರ್ಡ್ಲೆಸ್ ಡ್ರಿಲ್, ಟ್ರಿಮರ್, ಇಲೆಕ್ಟ್ರಿಕ್ ಹೈಬ್ರಿಡ್ ಕಾರ್ಗಳು, ಇಲೆಕ್ಟ್ರಿಕ್ ಬೈಕ್, ಇಲೆಕ್ಟ್ರಿಕ್ ಗಾಲಿಕುರ್ಚಿ, ಏರೋ ಪ್ಲೇನ್ ಅಲ್ಲದೇ ಮಂಗಳನ ಅಂಗಳದಲ್ಲಿಳಿದ ಕ್ಯೂರಿಯಾಸಿಟಿ ರೋವರ್ನಲ್ಲು ಇದೇ ಬ್ಯಾಟರಿಯನ್ನು ಬಳಸಲಾಗಿದೆ!
ಲೀಥಿಯಂಗೆ ಪರ್ಯಾಯ ಏನು?
ಇದೀಗ ಈ ಲೀಥಿಯಂ ಅದಿರಿನ ಒಟ್ಟಾರೆ ಸರಬರಾಜು ಈಗಿನ ಅವಶ್ಯಕತೆಯನ್ನೂ ಮೀರಿ ಇದೆ ಎನ್ನಲಾಗುತ್ತಿದ್ದು, ಅದರ ಬೆಲೆ
ಸಾಕಷ್ಟು ಇಳಿಕೆಯಾಗಿದೆ. ಆದರೆ ಮುಂದಿನ ದಿನಗಳಲ್ಲಿ, ಅಂದರೆ ಇನ್ನು ಹತ್ತು ವರ್ಷಗಳ ಅವಧಿಯಲ್ಲಿ ವಿಶ್ವದ ಕಾರುಗಳ
ಮಾರಾಟದ ಪೈಕಿ 99 ಶೇಕಡಾದಷ್ಟು ಇಲೆಕ್ಟ್ರಿಕ್ ಕಾರುಗಳೇ ಆಗಲಿದ್ದು ಅವುಗಳೆಲ್ಲದಕ್ಕೂ ಬ್ಯಾಟರಿ ಬೇಕು, ಹಾಗೂ ಇಂದು
ಈ ಎಲ್ಲಾ ಕಾರುಗಳ ಬ್ಯಾಟರಿಗಳಲ್ಲಿ ಇರುವುದು ಇದೇ ಲೀಥಿಯಂ ಅಯಾನ್ ಬ್ಯಾಟರಿ. ಆದ್ದರಿಂದ ಈ ಅವಶ್ಯಕತೆಗೆ ತಕ್ಕಷ್ಟು ಲೀಥಿಯಂ ಅದಿರು ಸಿಗದೇ ಹೋಗಬಹುದು ಎನ್ನುವ ಕಾರಣಕ್ಕೆ ಹೆಚ್ಚು ಖನಿಜ ನಿಕ್ಷೇಪಗಳನ್ನು ಹುಡುಕಲಾಗುತ್ತಿದೆ ಹಾಗೂ ಅವುಗಳನ್ನು ಅಗೆಯುವ ಕಾರ್ಯಕ್ಕೆ ತಯಾರಿಗಳು ನಡೆಯುತ್ತಿವೆ.
ಒಂದು ಅಂದಾಜಿನ ಪ್ರಕಾರ ಒಟ್ಟೂ ಅದಿರು ಅಗೆಯುವಿಕೆ 2025ರ ವೇಳೆಗೆ ಇಂದಿನ ಮೂರು ಪಟ್ಟು ಆಗಲಿದೆ ಎನ್ನುವ ನಿರೀಕ್ಷೆ ಇದ್ದರೂ, ಅಂದಿಗೆ ಇರಲಿರುವ ಬೇಡಿಕೆಗೆ ಹೋಲಿಸಿದರೆ ಅದೂ ಕಡಿಮೆಯೇ ಆದೀತು ಅನ್ನುವ ಮಾತುಗಳೂ ಕೇಳಿ ಬರುತ್ತಿವೆ.
ಆದರೂ ಈ ಲೀಥಿಯಂ ಅಯಾನ್ ಬ್ಯಾಟರಿಗಳಿಗೆ ಕೆಲವು ಬದಲಿ ವ್ಯವಸ್ಥೆಗಳೂ ಇಲ್ಲದಿಲ್ಲ. ಅಲ್ಲದೇ ಇದೇ ಲಿಥಿಯಂ ಅಯಾನ್ ಬ್ಯಾಟರಿಗಳ ಬೇರೆ ಬೇರೆ ರಾಸಾಯನಿಕ ಕಾಂಬಿನೇಶನ್ಗಳ ಟೆಸ್ಟಿಂಗ್ ಜಾರಿಯಲ್ಲಿದೆ.
ಹಾಗಾಗಿ ಅವುಗಳೂ ಮುಂದಿನ ದಿನಗಳಲ್ಲಿ ಈಗಿನ ಬ್ಯಾಟರಿಗಳಿಗಿಂತ ಹೆಚ್ಚಿನ ಶಕ್ತಿ, ಕಾರ್ಯಕ್ಷಮತೆ ಹಾಗೂ ಹೆಚ್ಚು ಬಾಳಿಕೆ ಬರುವ ಸಾಧ್ಯತೆ ಇದೆ. ಇದರೊಂದಿಗೆ ಈಗಾಗಲೇ ಬಳಕೆಯಲ್ಲಿದ್ದ ನಿಕ್ಕೆಲ್ ಕ್ಯಾಡ್ಮಿಯಂ ಅನ್ನುವ ಕಡಿಮೆ ಕ್ಷಮತೆಯ ಬ್ಯಾಟರಿ
ಕಾಂಬಿನೇಶನ್ ಅಲ್ಲದೇ, ಸೋಡಿಯಂ ಅಯಾನ್ ಬ್ಯಾಟರಿಗಳ ಹೆಸರು ಕೇಳಿಬರುತ್ತಿದೆ. ಅದಲ್ಲದೇ ಝಿಂಕ್-ಆಮ್ಲಜನಕ,
ಸೋಡಿಯಂ-ಸಲ್ಫರ್, ಹೈಡ್ರೋಜನ್ ಫುಯೆಲ್ ಸೆಲ್, ಹೀಗೆ ಹಲವು ಕಾಂಬಿನೇಶನ್ಗಳನ್ನು ಪ್ರಯತ್ನಿಸಲಾಗುತ್ತಿದೆ, ಬಳಸ ಲಾಗುತ್ತಿದೆ. ಆದರೆ ಸದ್ಯದ ಮಟ್ಟಿಗೆ ಅತಿ ಹೆಚ್ಚು ಬಳಕೆಯಲ್ಲಿರುವ ಜನಪ್ರಿಯ ಲೀಥಿಯಂ ಅಯಾನ್ ಬ್ಯಾಟರಿಗಳನ್ನು
ಸುಲಭದಲ್ಲಿ ಬದಲಿಸುವ ಸಾಧ್ಯತೆಗಳು ಕ್ಷೀಣ.