Thursday, 28th November 2024

ಒಂಟಿಯಾಗದ ಏಕಾಂತ

ಮಹೇಶ್ ಪುಲಿಕೇಶಿ

ಒಂದು ಜಗಳವೂ ಇಲ್ಲದ ಪ್ರೇಮವಿರಲು ಸಾಧ್ಯವಿಲ್ಲ. ಹಾಗೇನಾದರೂ ನಿಮ್ಮ ಪ್ರೀತಿಯಲ್ಲಿ ಕಿಂಚಿತ್ತೂ ಪಿರಿಪಿರಿ
ಇಲ್ಲವೆಂದರೆ ಅದು ಪ್ರೇಮ ಅಲ್ಲವೇ ಅಲ್ಲ!

ಇಡೀ ಪ್ರಪಂಚವೇ ಜೊತೆಯಲ್ಲಿದ್ದರೂ ಪ್ರೀತಿಸಿದವರು ನಿಮ್ಮೊಡನೆ ಇರದಿದ್ದರೆ ಅದಕ್ಕಿಂತ ನರಕ ಇನ್ನೊಂದಿಲ್ಲ! ಹಾಗೇ
ಯಾರೂ ಇಲ್ಲದೇ ನೀವೊಬ್ಬರೆ ಅನಾಥವಾಗಿ ಮೂಲೆಯಲ್ಲಿದ್ದರೂ ಪ್ರೇಮಿಸುವವರ ಅಥವಾ ಅವರ ನೆನಪೊಂದಿದ್ದರೆ ಸಾಕು! ಅದಕ್ಕಿಂತ ಸ್ವರ್ಗ ಬೇಕಿಲ್ಲ.

ಜೊತೆಯಲ್ಲಿದ್ದು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವುದಕ್ಕಿಂತ ಎಲ್ಲೋ ದೂರದಲ್ಲಿದ್ದು ನಮಗಾಗಿ ಚಡಪಡಿಸುವ ಜೀವ.. ಹೆಚ್ಚು ಆತ್ಮೀಯ ಹಾಗೂ ಅಮೂಲ್ಯವಾದದ್ದು. ಅಂಥವೇ ನಮ್ಮನ್ನೂ ಗಾಢವಾಗಿ ಕಾಡುವುದು. ಬೆಟ್ಟ ಹತ್ತೋರು ಕಾಲು ನೋವಿಗೆ ಹೇಗೆ
ಸಿದ್ಧರಿರಬೇಕೋ, ಹಾಗೆ ಪ್ರೀತಿಸಿದ ಮೇಲೆ ಸಿಹಿ ಸಂಕಟವನ್ನು ಅನುಭವಿಸಲು ಸನ್ನದ್ಧರಾಗಿರಬೇಕು.

ಒಂದು ಜಗಳವೂ ಇಲ್ಲದ ಪ್ರೇಮವಿರಲು ಸಾಧ್ಯವಿಲ್ಲ. ಹಾಗೇನಾದರೂ ನಿಮ್ಮ ಪ್ರೀತಿಯಲ್ಲಿ ಕಿಂಚಿತ್ತೂ ಪಿರಿಪಿರಿ ಇಲ್ಲವೆಂದರೆ ಅದು ಪ್ರೇಮ ಅಲ್ಲವೇ ಅಲ್ಲ. ಪ್ರತಿ ತಿಂಗಳು ಇ.ಎಂ.ಐ ಕಟ್ಟಿದ ಹಾಗೆ. ನಂತರ ಅದಕ್ಕೂ ನಿಮಗೂ ಸಂಬಂಧವಿಲ್ಲ. ಎಲ್ಲದಕ್ಕೂ
ಹೂಂ ಗುಟ್ಟುವ ಪ್ರೀತಿಗಿಂತ, ಪ್ರತಿಯೊಂದಕ್ಕೂ ತಕರಾರು ತೆಗೆದು ನಕರಾತ್ಮಕ ತಂತ್ರಗಳನ್ನು ಬಳಸಿ ಪ್ರೇಮಿಯನ್ನು ಗೋಳು ತಿನ್ನುವ ಪ್ರೀತಿಯೇ ಹೆಚ್ಚು ಜೀವಂತ. ಅಂಥಾ ತರಲೆಗಳೇ ನಮ್ಮ ಇರುವಿಕೆಯನ್ನು ಗೊತ್ತುಪಡಿಸುವುದು.

ಅತೀ ತುಂಟ ಪ್ರೇಮಿ ಎಳೆ ತುಂಡು ಮೆಣಸಿನಕಾಯಿಯ ಹಾಗೆ ನೋಡಲೂ ಚೆಂದ… ಕಚ್ಚಿದರೆ (ಕೆಣಕಿದರೆ) ಅಬ್ಬಾ… ಆ
ಪರಮಾತ್ಮನೇ ಕಾಪಾಡಬೇಕು. ಮೂರು ದಿನ ದಂಗೆ, ಎರಡು ದಿನ ಮೌನಾಚರಣೆ ಹಾಗೂ ಅವರ ಭಾವನೆಗೆಳು ಮತ್ತೆ ಸಹಜ ವಾಗುವವರೆಗೂ ಶೋಕಾಚರಣೆ!

ಇದಕ್ಕಾಗಿ ನೀವು ಪೂಸಿ ಹೊಡೆದು ಕೈ ಕಾಲು ಹಿಡಿದುಕೊಂಡರೆ ಅಲ್ಲಿಗೆ ಮುಗಿಯಬಹುದು. ಇಲ್ಲದಿದ್ದರೆ ಇನ್ನೊಂದು ಶೀತಲ ಸಮರ… ಮತ್ತೆ ಕೋಲಾಹಲ. ಆದರೆ, ಮತ್ತೆ ಪ್ರೇಮಿಯನ್ನು ಒಲಿಸಿಕೊಳ್ಳುವುದು ಅಥವಾ ಸಹಜ ಸ್ಥಿತಿಗೆ ತರುವುದು ಇದೆಯಲ್ಲ, ಆ ಪ್ರಕ್ರಿಯೆಯೇ ಮತ್ತಷ್ಟು ಚೆಂದ. ಮತ್ತೆ ಮೊದಲಿನಿಂದ ಮೋಹಿಸಿದ ಹಾಗೇ… ಹೊಸದಾಗಿ ಪ್ರೀತಿಯ ಖೆಡ್ಡಾಗೆ ಬೀಳಿಸಿದಂತೆ. ಹೊಸ ಚಿಗುರು, ಹೊಸ ತುಂಟತನ, ಹೊಸ ತರಲೆ, ಕೊಂಚ ಮುನಿಸು, ಕೊಂಚ ಮುಂಗೋಪ. ಮತ್ತೆ ರಾಟೆಯಂತೆ ಸುತ್ತಿ ಸುತ್ತಿ
ಅಲ್ಲಿಗೆ ಬಂದು ನಿಲ್ಲುತ್ತದೆ.

ಪ್ರಬುದ್ಧ ಪ್ರೇಮ ನಿನ್ನ ಸರ್ವಸ್ವವನ್ನು ಕೇಳುವುದಿಲ್ಲ. ಅರೆಕ್ಷಣದ ನೋಟ ಸಾಕು.. ಒಂದೆರೆಡು ಪಿಸುಮಾತು ಸಾಕು, ಅವೇ ಮನ ದಲ್ಲಿ ಪ್ರತಿಧ್ವನಿಸುತ್ತವೆ. ಬೆಟ್ಟದ ಬುಡದಲ್ಲೆಲ್ಲೋ ಹುಟ್ಟಿದ ನದಿಯ ನೀರು ಯಾವುದೋ ಬಡವನ ದಣಿವಾರಿಸಿದಂತೆ, ಎಲ್ಲಿಯೋ ಇರುವ ಜೀವಗಳ ಒಂಟಿತನದ ದಣಿವನ್ನು ಈ ಪ್ರೀತಿ ಪೂರೈಸುವುದು.

ಪ್ರೀತಿಸಿದವಳು ದಿನಾ ಬೆಳಗ್ಗೆ ಎದ್ದು ಕಾಫಿ ಕೊಡಬೇಕಿಲ್ಲ. ಕೈ ತುತ್ತು ತಿನ್ನಿಸಬೇಕಿಲ್ಲ… ನೆತ್ತಿಗೆ ಎಣ್ಣೆ ತಿಕ್ಕಬೇಕಿಲ್ಲ. ಕಾಲು ಒತ್ತ ಬೇಕಿಲ್ಲ. ಭೀಮನ ಅಮಾವ್ಯಾಸೆಗೆ ಪಾದ ತೊಳೆಯಬೇಕಿಲ್ಲ. ಒಂದು ಕ್ಷಣ ನೆನೆದರೆ ಸಾಕು. ಬರಗಾಲಕ್ಕೆ ಬಾಯಿ ಬಿಟ್ಟ ವಸುಂಧರೆಗೆ ನೀರು ತಾಕಿದಂತೆ ಹೃದಯ ತಂಪಾಗುವುದು. ಪುನಹಃ ಪ್ರೀತಿ ಮೊಳಕೆಯೊಡೆಯುವುದು, ಮತ್ತೆ ಹೊಸ ಚಿಗುರು, ಹೊಸ ಕನಸು. ಮತ್ತೆ ಅವಳ ನೆನಪು. ಮತ್ತೆ ಒಬ್ಬಟಿಯಾಗದ ಏಕಾಂತ! ಅವಳ ನೆನಪು ಜೊತೆಗಿದ್ದಾಗ ಮತ್ತೆಲ್ಲಿಯ ಏಕಾಂತ?