Wednesday, 27th November 2024

ಮಡ್‌ ರೇಸ್‌ ಹಿನ್ನೆಲೆಯ ಮಡ್ಡಿ ಸಿನೆಮಾ

ಹೊಸಬರ ಹೊಸ ಪ್ರಯತ್ನಗಳು ಸಿನಿಮಾರಂಗದಲ್ಲಿ ಆಗಾಗ ಆಗುತ್ತಿರುತ್ತವೆ. ಇದೀಗ ಅಂಥದ್ದೆ ಮತ್ತೊಂದು ಪ್ರಯತ್ನದೊಂದಿಗೆ
ಆಗಮಿಸುತ್ತಿದ್ದಾರೆ ನಿರ್ದೇಶಕ ಪ್ರಗ್ಬಾಲ್.

ಭಾರತೀಯ ಸಿನಿಮಾ ಇತಿಹಾಸದಲ್ಲಿ ಸಂಪೂರ್ಣ ಮಡ್ ರೇಸ್‌ನ ಸಿನಿಮಾ ಸಿದ್ಧವಾಗಿಲ್ಲ. ಇದೀಗ ಆ ಸಾಹಸಕ್ಕೆ ಪ್ರಗ್ಬಾಲ್
ಆ್ಯಂಡ್ ಟೀಮ್ ಕೈ ಹಾಕಿದೆ. ಅಂತಾರಾಷ್ಟ್ರೀಯ ಮಟ್ಟದ ಫೀಲ್ ಕೊಡುವ ಸಿನಿಮಾ ನೀಡಬೇಕೆಂಬ ಉದ್ದೇಶದಿಂದ ಅಷ್ಟೇ ದುಬಾರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಅದಕ್ಕೆ ಮಡ್ಡಿ ಎಂಬ ಶೀರ್ಷಿಕೆ ನೀಡಿದ್ದಾರೆ. ಬೆಟ್ಟ, ಗುಡ್ಡ, ಕೆಸರು ಹೀಗೆ ಕಡಿದಾದ ರಸ್ತೆಯಲ್ಲಿ ಈ ರೇಸ್ ನಡೆಯುವುದರಿಂದ
ಅದಕ್ಕೆ ಮಡ್ಡಿ ಎಂದು ಶೀರ್ಷಿಕೆ ಇಡಲಾಗಿದೆ. ಭಾರತದ ಮೊದಲ ಮಡ್ ರೇಸ್ ಸಿನಿಮಾ ಇದಾಗಿರಲಿದೆ ಎಂದು ಹೆಮ್ಮೆಯಿಂದಲೇ ಹೇಳಿಕೊಳ್ಳುವ ತಂಡ, ಅಷ್ಟೇ ರೋಚಕವಾದ ಕಥೆಯನ್ನೂ ಈ ಸಿನಿಮಾದಲ್ಲಿ ಹೆಣೆದಿದೆ. ಅಂದಹಾಗೆ ಈ ಚಿತ್ರವನ್ನು ಪಿಕೆ7 ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ಪ್ರೇಮಾ ಕೃಷ್ಣದಾಸ್ ಬಂಡವಾಳ ಹೂಡಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ಸಿದ್ಧವಾಗಿದ್ದು, ಅಡ್ವೆಂಚರಸ್ ಆ್ಯಕ್ಷನ್ ಶೈಲಿಯ
ಚಿತ್ರವಾಗಿದೆ. ಇನ್ನೇನು ಶೀಘ್ರದಲ್ಲಿ ಟೀಸರ್ ಮೂಲಕ ಆಗಮಿಸಲಿದೆ ತಂಡ ಸಜ್ಜಾಗಿದೆ. ಈ ಚಿತ್ರದ ಕಲಾವಿದರೆಲ್ಲ ಯಾವುದೇ ಡ್ಯೂಪ್ ಬಳಸದೆ ಹಲವು ಶೈಲಿಯ ಮಡ್ ರೇಸ್‌ನಲ್ಲಿ ಪರಿಣಿತಿ ಪಡೆದಿದ್ದಾರೆ. ಒಟ್ಟು 13 ಕ್ಯಾಮರಾಗಳನ್ನು ಶೂಟಿಂಗ್ ನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ.

ಕೆಜಿಎಫ್ ಸಿನಿಮಾ ಖ್ಯಾತಿಯ ರವಿ ಬಸ್ರೂರು ಸಂಗೀತ ನೀಡಿರುವ ಈ ಚಿತ್ರಕ್ಕೆ ಸ್ಯಾನ್ ಲೋಕೇಶ್ ಸಂಕಲನದ ಜವಾಬ್ದಾರಿ
ಹೊತ್ತಿದ್ದಾರೆ. ಅದೇ ರೀತಿ ಹಾಲಿವುಡ್ ಸಿನಿಮಾಗಳ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ ಮಾಡಿರುವ ಕೆ.ಜಿ ರತೀಶ್ ಈ ಸಿನಿಮಾಕ್ಕೆ ಕ್ಯಾಮರಾಮನ್ ಆಗಿದ್ದಾರೆ.

ಕಲರಿಸ್ಟ್‌ ಆಗಿ ರಂಗ ಕೆಲಸ ಮಾಡಿದ್ದಾರೆ. ಕಳೆದ ಐದು ವರ್ಷಗಳ ಕಾಲ ಮಡ್ ರೇಸ್ ಬಗ್ಗೆ ಅಧ್ಯಯನ ನಡೆಸಿ ಈ ಸಿನಿಮಾ ಮಾಡಿರುವ ಪ್ರಗ್ಬಾಲ್, ಎರಡು ತಂಡಗಳ ನಡುವಿ ಸ್ಪರ್ಧೆಯನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರೆ. ಇದರ ಜತೆಗೆ ಫ್ಯಾಮಿಲಿ ಸೆಂಟಿ ಮೆಂಟ್, ಭಾವ ನಾತ್ಮಕ ಅಂಶಗಳು ಮತ್ತು ಅಡ್ವೆಂಚರಸ್ ತಿರುವು ಗಳನ್ನೂ ಈ ಸಿನಿಮಾದಲ್ಲಿ ಮಿಶ್ರಣ ಮಾಡಿದ್ದಾರೆ.
ನೈಜ ಅರಣ್ಯ ಪ್ರದೇಶದಲ್ಲಿ ಇಡೀ ಸಿನಿಮಾದ ಶೂಟಿಂಗ್ ಆಗಿದ್ದು, ಸಿಂಕ್ ಸೌಂಡ್ ಟೆಕ್ನಾಲಜಿ ಬಳಸಿ ಸಿನಿಮಾ ಮೂಡಿಬಂದಿದ್ದು, ಬಹುತೇಕ ಹೊಸಬರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಯುವನ್, ರಿಧಾನ್ ಕೃಷ್ಣ, ಅನುಷಾ ಸುರೇಶ್, ಅಮಿತ್ ಶಿವದಾಸ್ ನಾಯರ್, ಪೆರಾಡಿ, ವಿಜಯನ್, ರೆಂಜಿ ಪೆನಿಕರ್
ತಾರಾಗಣದಲ್ಲಿದ್ದಾರೆ.