ಡಾ.ಕೆ.ಎಸ್.ಪವಿತ್ರ
ಹಳೆಯ ಸವಿ ನೆನಪುಗಳನ್ನು ಮೂಡಿಸುವ ಮಾಲ್ಗುಡಿ ಡೇಸ್ ಧಾರಾವಾಹಿ ಚಿತ್ರೀಕರಣಗೊಂಡ ಶಿವಮೊಗ್ಗ ಜಿಲ್ಲೆಯ
ಅರಸಾಳು ರೈಲು ನಿಲ್ದಾಣದಲ್ಲಿ ಇಂದು ರೂಪುಗೊಂಡಿದೆ, ಮಾಲ್ಗುಡಿ ಮ್ಯೂಸಿಯಂ!
ಮಾಲ್ಗುಡಿ ಮ್ಯೂಸಿಯಂ ಮಾಡಿದ್ದಾರಂತೆ. ಇಲ್ಲೇ ‘ಅರಸಾಳು’ ಹತ್ತಿರ ಅಂತೆ’. ಮಕ್ಕಳು ಪತ್ರಿಕೆಯಲ್ಲಿ ಓದಿ ಆಸೆಯ ದನಿಯಲ್ಲಿ ಹೇಳಿದಾಗ ಅರೆಮನಸ್ಸಿ ನಿಂದಲೇ ಕಿವಿಕೊಟ್ಟಿದ್ದೆ. ಈಗಾಗಲೇ ಹೋಗಿ ಬಂದವರು ಅಭಿಪ್ರಾಯಗಳ ಮಿಶ್ರಣವನ್ನು ಕೊಟ್ಟಿದ್ದರು!
ಕೆಲವರ ಪ್ರಕಾರ ‘ತುಂಬಾ ಚೆನ್ನಾಗಿ ಮಾಡಿದ್ದಾರೆ’ ಆದರೆ ಇನ್ನು ಕೆಲವರ ಪ್ರಕಾರ ‘ಜಾಸ್ತಿ ಏನಿಲ್ಲ, ಹಾಗೇ ನೋಡಿ ಬರಬಹುದು ಅಷ್ಟೆ’. ಸರಿ ಹೊಸ ವರ್ಷದ ಮೊದಲ ದಿನದಂದೇ ದಿನದ ಕೆಲಸದ ಮಧ್ಯೆ ಎರಡು ಗಂಟೆಗಳ ಸಮಯ ತೆಗೆದು ಹೊರಟು ನಿಂತೆ. ಬಾಲ್ಯದಲ್ಲಿ ನಾನು ನೋಡಿದ ‘ಮಾಲ್ಗುಡಿ ಡೇಸ್’ ಧಾರಾವಾಹಿ, ‘ಸ್ವಾಮಿ ಮತ್ತು ಅವನ ಗೆಳೆಯರ ಕಥೆ’, ಮಕ್ಕಳು ಈಗ ಸಿಡಿ ತಂದು ನೋಡಿದ ಪೂರ್ತಿ ಸೀರಿಯಲ್ ಎಲ್ಲದರ ಬಗೆಗೂ ಮಾತಾಡಿಕೊಂಡೆವು.
ಮೂಲ ಕಥೆ ಇದ್ದ ಆರ್.ಕೆ.ನಾರಾಯಣ್ರ ಪುಸ್ತಕವನ್ನು ಓದಿದ್ದೆವು. ಜನವರಿ ಒಂದನೆಯ ತಾರೀಕು, ಚಳಿ ಬಿಸಿಲಿನಲ್ಲಿ ಹಸುರಿನ
ಮಧ್ಯೆೆ, ಹೊಸನಗರದ ದಾರಿಯಲ್ಲಿರುವ ‘ಅರಸಾಳು’ ಊರಿನ ಹತ್ತಿರ ಬಂದಿಳಿದಿದ್ದೆವು. ಏನಿದು ಮಾಲ್ಗುಡಿ ಮ್ಯೂಸಿಯಂ!
ಶಂಕರ್ನಾಗ್ ನಿರ್ದೇಶಿಸಿದ ‘ಮಾಲ್ಗುಡಿ ಡೇಸ್’ ಟಿ.ವಿ. ಧಾರಾವಾಹಿಯ ಕೆಲವು ಭಾಗಗಳ ಚಿತ್ರೀಕರಣ ನಡೆದದ್ದು ಶಿವಮೊಗ್ಗೆ ಯಿಂದ 30ಕಿ. ಮೀ. ದೂರದಲ್ಲಿರುವ ‘ಅರಸಾಳು’ ಗ್ರಾಮದಲ್ಲಿ. ಅರಸಾಳುವಿನ ಹಳೆಯ ರಐಲು ನಿಲ್ದಾಣ ಈ ಧಾರಾವಾಹಿಯ ರೈಲು ಸೀನ್ಗಳಲ್ಲಿ ಕಾಣಿಸುವ ನಿಲ್ದಾಣ. ಚಿತ್ರೀಕರಣದ ನಂತರ, 1986 ರಲ್ಲಿ ಈ ಹಳೆಯ ರೈಲು ನಿಲ್ದಾಣದ ಕಟ್ಟಡ ಪಾಳು ಬಿದ್ದ ಹಾಗಿತ್ತು. ನೈರುತ್ಯ ರೇಲ್ವೆೆ ಇದನ್ನು ಪುನರುತ್ಥಾನ ಮಾಡಲು, ಹಳೆದ ಮಧುರ ನೆನಪುಗಳ ಪುನರ್ ಸೃಷ್ಟಿಸಲು ನಿರ್ಧಾರ
ಮಾಡಿತು.
ಪುಸ್ತಕದಲ್ಲಿದ್ದ ಕಥೆ, ಶಂಕರ್ನಾಗ್ರ ನಿರ್ದೇಶನದಲ್ಲಿ ದೃಶ್ಯಕಾವ್ಯವಾಗಿ ಅರಳಿತ್ತಷ್ಟೆ. ಅರಸಾಳುವಿನ ‘ಮಾಲ್ಗುಡಿ ಮ್ಯೂಸಿಯಂ’ ನಲ್ಲಿ ಅದು ಶಿಲ್ಪಕಾವ್ಯ ವಾಗಿ ಸ್ಥಿರವಾಗಿದೆ. ಟಿಕೆಟ್ ಇಟ್ಟು ಒಂದು ಮಟ್ಟದ ಶಿಸ್ತು ರೂಪಿಸಿರುವುದರಿಂದ ಸ್ವಚ್ಛವಾದ ವಾತಾವರಣ, ಹೊರಾಂಗಣದಲ್ಲಿ ರೈಲು ಬೋಗಿಯ ಪ್ರತಿಕೃತಿ.
ಒಳ ಹೊಕ್ಕರೆ, ಮಲೆನಾಡಿನ ಹಳೆಯ ಮನೆಯ ವಾತಾವರಣ. ‘ಸ್ವಾಮಿ’ ಯಾಗಿ ಅಭಿನಯಿಸಿ ಇನ್ನೂ ನಮ್ಮ ಮನದಲ್ಲಿ ಉಳಿದಿರುವ ಮಾಸ್ಟರ್ ಮಂಜುನಾಥನ ದೊಡ್ಡ ಫೋಟೋ, ಸ್ವಾಮಿಯ ತಂದೆ ಓಡಿಸುತ್ತಿದ್ದ ಸೈಕಲ್, ಧಾರಾವಾಹಿ ಯಲ್ಲಿ ಬರುವ ಹಳೆಯ ಗಡಿಯಾರ ಎಲ್ಲವೂ ಇಲ್ಲಿವೆ. ಮ್ಯೂಸಿಯಂನ ಒಂದು ಪ್ರತ್ಯೇಕ ಕೋಣೆ ದಿವಂಗತ ಶಂಕರ್ನಾಗ್ರ ನೆನಪಿಗೆ ಮೀಸಲಾಗಿದೆ.
ಮಲೆನಾಡಿನ ನೆನಪು
ಇದನ್ನು ರೂಪಿಸಿದ ಕಲಾವಿದ ಜಾನ್ ದೇವರಾಜ್ ರವರು ಹೇಳಿರುವ ಹಾಗೆ 120 ವರ್ಷಗಳಷ್ಟು ಹಳೆಯದಾದ ಈ ರೈಲು ನಿಲ್ದಾಣದ ಕಟ್ಟಡದ ಪ್ರತಿ ಇಟ್ಟಿಗೆಯನ್ನು ಕಟ್ಟಿ ಹಿಡಿದು, ಅವರು ಜೀವ ತುಂಬುವ ಸಾಹಸ ಮಾಡಬೇಕಾಯಿತು. ಸುತ್ತಮುತ್ತಲ ಪ್ರಾಣಿ-ಪಕ್ಷಿಗಳ ಜೀವಸಂಕುಲವೇ ಇಲ್ಲಿರುವ, ಹೊರಗೆ ನಿಂತಿರುವ ಪ್ರಾಣಿ ಗೊಂಬೆಗಳಿಗೆ ಸ್ಫೂರ್ತಿ. ಮಲೆನಾಡಿನ ಮನೆಗಳಲ್ಲಿ
ಉಪಯೋಗಿಸುತ್ತಿದ್ದ ಪಾರಂಪರಿಕ ಸಾಧನಗಳನ್ನೂ ಇಲ್ಲಿ ಇಡಲಾಗಿದೆ. ಮಕ್ಕಳಿಗೆ ಸಂತಸವಾಗುವಂತೆ ಒಂದು ರೈಲ್ವೆ ಟಿಕೆಟ್ ಕೌಂಟರ್ ರೂಪಿಸಲಾಗಿದೆ.
ಹೊರಗೆ ಬಂದರೆ ಅಂಗಳದಲ್ಲಿ ರಾಜಂ, ಮಣಿ ಮತ್ತು ಸ್ವಾಮಿಯ ಪ್ರತಿಕೃತಿಗಳು. ಜೊತೆಗೇ ‘ಮಾಲ್ಗುಡಿ ಚಾಯ್’ ಎನ್ನುವ ಕ್ಯಾಂಟಿನ್. ಇದನ್ನು ರೈಲು ಬೋಗಿ ಯೊಳಗೆ ನಿರ್ಮಿಸಲಾಗಿದೆ. ಈ ಇಡೀ ಕಲಾಕೃತಿಯ ನಿರ್ಮಾಣಕ್ಕೆ ತೆಗೆದು ಕೊಂಡ ಕಾಲ 15 ತಿಂಗಳುಗಳು ಎಂದಾಗ ನನಗೆ ಅಚ್ಚರಿಯೇ ಎನಿಸಿತು. ಸೂಕ್ಷ್ಮತೆಯ, ಅಭಿರುಚಿಯ, ಸುಂದರತೆಯ ಕೆಲಸಕ್ಕೆ ಇದು ಕಡಿಮೆ ಸಮಯ ಎನಿಸಿತು. ರೂಪಿಸಿದ ಕಲಾವಿದರು ಕೇವಲ ಪ್ರತಿಭಾವಂತರಷ್ಟೇ ಅಲ್ಲ ಕಠಿಣ ಪರಿಶ್ರಮ ಪಡುವವರು ಅನ್ನಿಸಿತು.
ಬಿಸಿ ಚಹಾದ ಸವಿ
ನಾವೆಲ್ಲರೂ ಅಲ್ಲಿನ ಬೋಗಿಯಲ್ಲಿ ಕುಳಿತು ‘ಮಾಲ್ಗುಡಿ ಚಹಾ’ ಸವಿದೆವು. ಮಲೆನಾಡಿನಲ್ಲಿ ಉಪಯೋಗಿಸುವ ಏಡಿ ಹಿಡಿಯುವ
ಕೂಳೆ, ರುಬ್ಬುಕಲ್ಲು, ಮೊರ ಇತ್ಯಾದಿಗಳನ್ನು ಕುತೂಹಲದಿಂದ ನೋಡಿದರು. ಸುಸ್ತಾದಾಗ ಸ್ವಲ್ಪ ಹೊತ್ತು ನೆರಳಲ್ಲಿ ಕುಳಿತು ಕೊಂಡರು. ಒಂದು ಗಂಟೆಯಲ್ಲಿ ಇವಿಷ್ಟನ್ನೂ ಮುಗಿಸಿದ್ದೆವು.
ವಾಪಸ್ ಬರುವಾಗ ಮಕ್ಕಳಲ್ಲಿ ಮಾತುಕತೆ ನಡೆಯುತ್ತಿತ್ತು. ಚಿಕ್ಕವರಾದ ಸುಮೇರು-ಸುಧನ್ವ ಮಾಲ್ಗುಡಿ ಮ್ಯೂಸಿಯಂ ಒಂದು ಬಾರಿ ಈಗಾಗಲೇ ನೋಡಿದ್ದವರು. ಎರಡನೇ ಸಲ ನೋಡುವುದಕ್ಕೂ ಇದು ‘ಓಕೆ’ ಎಂದರು. ಭರತನಿಗೆ ಸ್ವಾಮಿ-ರಾಜಂ-ಮಣಿಯ ಪ್ರತಿಕೃತಿ ನೋಡಿ, ಇಡೀ ‘ಸ್ವಾಮಿ’ ಸೀರಿಯಲ್ ಕಥೆ ನೆನಪಾಗಿ ಹೋಗಿತ್ತು. ಭೂಮಿ ಮಾತ್ರ ಗಂಭೀರವಾಗಿ ಹೇಳಿದ್ದಳು – ‘ನಾವೆಲ್ಲಾ ಪುಣ್ಯವಂತರು ಕಣ್ರೋ. ಇದೇ ನೋಡಿ ಅಮೇರಿಕಾದಲ್ಲೋ, ಯೂರೋಪ್ ನಲ್ಲೋ ಆಗಿದ್ರೆ ಎಷ್ಟೋ ಡಾಲರ್ ತೆತ್ತು, ಹಾಫ್ಡೇ ಟೂರ್ ಅಂತ ಇಲ್ಲಿಗೆ ಹೋಗ್ಬೇಕಾಗಿತ್ತೋ ಏನೋ! ಇಲ್ಲಿ ನೋಡಿ, ಆರಾಮವಾಗಿ ಬಂದು ಹೇಗೆ ನೋಡಿಕೊಂಡು ಹೋಗ್ತಿದೀವಿ’ ಅಂತ!.
ಕಲಾವಿದನ ಕೈಚಳಕ
ನೈಋತ್ಯ ರೇಲ್ವೆ ತನಗಿತ್ತ ಆಹ್ವಾನವನ್ನು ಮನ್ನಿಸಿ, ಈ ಶಿಲ್ಪ ಕಾವ್ಯವನ್ನು ರೂಪಿಸಿರುವವರು ‘ಮಾಲ್ಗುಡಿ ಡೇಸ್’ ಕಲಾವಿದರೂ, ಕಲಾ ನಿರ್ದೇಶಕರೂ ಆಗಿದ್ದ ಜಾನ್ ದೇವರಾಜ್. ಪುನರ್ ನಿರ್ಮಾಣದ ಕಲೆಯ ಬಗ್ಗೆ ಅವರ ಮಾತುಗಳಲ್ಲೇ ಹೇಳುವುದಾದರೆ, ‘ಈ ಸಂಗ್ರಹಾಲಯದ ಪ್ರತಿ ಕಲಾಕೃತಿಯೂ ಕೈಯಿಂದ ಮಾಡಿರುವಂಥದ್ದು. ಶ್ರದ್ಧೆಯಿಂದ ಕೆಲಸ ಮಾಡುವ ಮನೋಭಾವದ ಕಲಾವಿದರಿಂದ ಸೃಷ್ಟಿಸಲ್ಪಟ್ಟದ್ದು. ಅರಸಾಳು-ಆಗುಂಬೆ ಮತ್ತು ಇಡೀ ಮಲೆನಾಡಿನ ಸಸ್ಯ-ಜೀವ ಸಂಕುಲವನ್ನು ಜನ ತಿಳಿಯಲು, ಈ ಮ್ಯೂಸಿಯಂ ಒಂದು ಆರಂಭದ ಬಾಗಿಲಾಗಬೇಕು’. ಈ ವಸ್ತುಸಂಗ್ರಹಾಲಯವನ್ನು ನೈರುತ್ಯ ರೇಲ್ವೆಯು ಅರಸಾಳು ಗ್ರಾಮದ ಜನರಿಗೆ ಅರ್ಪಿಸಿರುವುದು ವಿಶೇಷ.