Wednesday, 27th November 2024

ಕನ್ನಡಾಭಿಮಾನಿ ಮಲ್ಲಯ್ಯ

ಕೆ.ಶ್ರೀನಿವಾಸ ರಾವ್

ಕನ್ನಡನಾಡು, ನುಡಿಯ ಹಿರಿಮೆಗಾಗಿ ಹಲವರು ಹಲವು ರೀತಿಗಳಲ್ಲಿ ಕೈಂಕರ್ಯ ನಡೆಸಿದ್ದಾರೆ. ಆದರೆ ನಮ್ಮ ವಿಷ್ಣುವರ್ಧನ್
ಅಭಿಮಾನಿ ಮಲ್ಲಯ್ಯ ಮಳಲಿಮಠ್‌ರದ್ದೇ ವಿನೂತನ ಮಾದರಿ!

ತಮ್ಮ ಸ್ವಂತ ವಾಹನ ಆಕ್ಟೀವಾ ಕ್ಷ್ಕಿೂಟರಿನ ಸುತ್ತಲೂ ಬಲವಾದ ಕಾರ್ಡ್ ಬೋರ್ಡ್‌ನ ಆರಡಿ ಎತ್ತರದ ಕಟೌಟ್ ರಚಿಸಿ ಕೊಂಡಿದ್ದಾರೆ. ಮೇಲೆ ಕನ್ನಡ ಭುವನೇಶ್ವರಿಯ ಬಾವುಟ, ಕೆಳಗೆ ಮಾಸ್ಕ್‌ ಧರಿಸಿದ ‘ಸಾಹಸಸಿಂಹ’ನ ಚಿತ್ರ. ಉಳಿದಂತೆ ಸುತ್ತಲೂ ವಿಷ್ಣುವರ್ಧನ್ ಅಭಿನಯದ ನಾನಾ ಭಂಗಿಗಳು, ಕನ್ನಡ ಪರ ಘೋಷಣೆಗಳು, ಸಂಚಾರಿ ನಿಯಮಗಳು, ಕರೋನಾ ಜಾಗೃತಿ ಘೋಷಣೆಗಳು, ಶಿರಸ್ತ್ರಾಣದಲ್ಲೂ ಸಂಚಾರಿ ನಿಯಮಗಳು.

ಎಲ್ಲವೂ ಹಳದಿ ಕೆಂಪು. ಜೂನಿಯರ್ ವಿಷ್ಣು ವರ್ಧನ್ ಎಂದೇ ಖ್ಯಾತರಾದ ಮಳಲಿಮಠ್‌ರ ಈ ರಥಯಾತ್ರೆಗೆ ದಾರಿಯುದ್ದಕ್ಕೂ ಪ್ರತಿ ಊರುಗಳಲ್ಲಿಯೂ ನೂರಾರು ಜನ ಸೇರುತ್ತಾರೆ. ಅವರ ವಿಷ್ಣು ಕುರಿತ, ನಾಡು ಕುರಿತ ಅಭಿಮಾನಕ್ಕೆ ಪ್ರಯತ್ನಕ್ಕೆ ಹೃದಯತುಂಬಿ ಜೈಕಾರ ಹಾಕುತ್ತಾರೆ. ಸಾಲಾಗಿ ನಿಂತು ಹಸ್ತಲಾಘವ ನೀಡಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ.

ತಿಂಡಿ, ಊಟ, ತಿನ್ನಿಸುತ್ತಾರೆ ಕೈಗೆ ಹಣ ತುರುಕುತ್ತಾರೆ. ಹಾವೇರಿ ಜಿಲ್ಲೆ, ರಾಣೇಬೆನ್ನೂರು ತಾಲೂಕಿನ ಐರಣಿಯಲ್ಲಿ ಜನಿಸಿದ ಇವರು, ನಟ ವಿಷ್ಣುವರ್ಧನ್ ಅವರ ಪರಮ ಅಭಿಮಾನಿ. ಅವರದೇ ಶೈಲಿಯಲ್ಲಿ ನಡೆ, ನುಡಿ, ನೃತ್ಯ, ಸ್ಟೈಲ್‌ಗಳಿಂದ ಅವರ ಸಂಭಾಷಣೆಗಳಿಗೆ ತದ್ರೂಪು ಅವರಂತೆ ಅಭಿನಯಿಸುತ್ತಾರೆ. ಮದುವೆ, ಸಮಾರಂಭಗಳಲ್ಲಿ ಕಾರ್ಯಕ್ರಮ ಕೊಡುತ್ತಾರೆ. ವಿಷ್ಣು
ರಂತೆ ಕೈಕಡಗ ತಿರುವಿ ‘ಕಲ್ಲಾದರೆ ನಾನು’ ಹಾಗೂ ‘ಕನ್ನಡವೇ ನನ್ನಮ್ಮ’ ಎಂದು ಹೆಜ್ಜೆ ಹಾಕಿದಾಗ ಪ್ರೇಕ್ಷಕ ಗಣ ರೋಮಾಂಚಿತ ರಾಗಿ ಶಿಳ್ಳೆ ಹಾಕುತ್ತಾರೆ.

ಆರಕ್ಷಕ ಇಲಾಖೆಯ ಹಲವು ಕಾರ್ಯಕ್ರಮಗಳಲ್ಲಿ ಅವಕಾಶ ದಕ್ಕಿದೆ. ಪ್ರತಿ ವರ್ಷ ಏಳೆಂಟು ತಿಂಗಳು ಪ್ರವಾಸದಲ್ಲಿರುವ
ಇವರಿಗೆ ಇದೀಗ 6 ನೇ ವರ್ಷದ ಸಂಚಾರ, ‘ಕರ್ನಾಟಕದಲ್ಲಿ ಕನ್ನಡವೇ ಚಕ್ರವರ್ತಿ, ಆದರೆ ಇಂದು ನಮ್ಮವರೇ ಪರಭಾಷಾ ಪ್ರೇಮಿಗಳಾಗುತ್ತಿದ್ದಾರೆ.

ಕನ್ನಡ ಚಿತ್ರಗಳನ್ನೇ ವೀಕ್ಷಿಸಿ, ಸಂಚಾರಿ ನಿಯಮಪಾಲಿಸಿ, ಕನ್ನಡ ನಾಮಫಲಕಗಳನ್ನೇ ಹಾಕಿರಿ, ಕನ್ನಡ ಉಳಿಸಿ, ಬೆಳೆಸಿ,  ಕರೋನಾ ಬಗ್ಗೆ ಜಾಗೃತಿಯಿರಲಿ’ ಎನ್ನುವ ಮಳಲಿಮ ಠರು, ‘ಟಿ.ವಿ.ಮ್ಯಾಮ, ಪತ್ರಕರ್ತರು ಹಾಗೂ ಆರಕ್ಷಕ ಇಲಾಖೆಗಳವರಿಂದ
ಕನ್ನಡ ಇನ್ನೂ ಉಳಿದಿದೆ’ ಎನ್ನುತ್ತಾರೆ. ತಮ್ಮೊಂದಿಗೆ ಕಾರ್ಯಕ್ರಮ ನೀಡಲು (ಜೂನಿಯರ್ ಶಂಕರ್‌ನಾಗ್) ಹೊನ್ನಾಳಿಯ ಭೋಜ ರಾಜ್‌ರನ್ನೂ ಕರೆದುಕೊಂಡು ಹೋಗುವ ಇವರಂಥ ಕನ್ನಡ ಕಟ್ಟಾಳುಗಳನ್ನು ಗುರುತಿಸಿ ಸರ್ಕಾರ ಗೌರವಿಸೇಕು. ಇಂತಹ ಕನ್ನಡಾಭಿಮಾನಿಗಳಿಂದ ಕನ್ನಡದ ಪ್ರೇಮ ಜಾಸ್ತಿಯಾಗುತ್ತದೆ, ಕನ್ನಡವು ಇನ್ನಷ್ಟು ಬೆಳೆಯುತ್ತದೆ.