Monday, 25th November 2024

ಮದುವೆ ನೋಟ ಪಂಕ್ತಿ ಊಟ

ನೆಲದ ಮೇಲೆ ಸಾಲಾಗಿ ಕುಳಿತು, ಮದುವೆ ಊಟ ಮಾಡುವ ಗಮ್ಮತ್ತೇ ಗಮ್ಮತ್ತು. ಈಗ ಅಂತಹ ಪಂಕ್ತಿ ಊಟ ಕಡಿಮೆ ಯಾಗುತ್ತಿದೆ.

ರಂಗನಾಥ ಎನ್ ವಾಲ್ಮೀಕಿ

ಯಾವ್ದೇ ಮದ್ವಿ ಇರಲಿ, ಶುಭ ಕಾರ್ಯ ಇರ್ಲಿ ಮಸ್ತ ಊಟ ಇರಬೇಕ ನೋಡ್ರಿ. ಬಹಳ ಮಂದಿ ಮದ್ವೆಗೆ ಹೋದಾಗ ಅಕ್ಕಿ ಕಾಳ ಹಾಕಿದ್ದ ತಡ ಊಟಕ್ಕ ಹಾಜರ. ಇನ್ನೂ ಕೆಲ್ವರು ಅಕ್ಕಿ ಕಾಳನೂ ಹಾಕಲ್ಲರೀ ಸೀದಾ ಊಟಕ್ಕ ಹೋಗ್ತಾರಾ. ಇರ್ಲಿ ಬಿಡ್ರಿ
ಅವರ ಅವರ ಇಷ್ಟ. ಮದ್ವಿಗೆ ಬಂದಾರಲ್ಲ ಅದ್ಕ ಖುಷಿ ಪಡೋಣ. ಮದ್ವೆಯಾಗ ಊಟದ್ದು ಪಾತ್ರ ಬಾಳ ನೋಡ್ರಿ…ಊಟದ ವ್ಯವಸ್ಥೆ ಚೊಲೊ ಆಯಿತಂದ್ರ ಅರ್ಧ ಮದ್ವಿ ಚೆಂದ ಆದ್ಹಂಗ. ಹಿಂಗಾಗಿ ಮದ್ವಿ ಮಾಡುವಾಗ ಊಟದ ಸಲುವಾಗಿ ಬಹಳ ತಲೆ ಕೆಡಿಸಿಕೊಳ್ಳಾತಾರಾ. ಏನೂ ಮಾಡಿಸ್ಬೇಕು, ಎಷ್ಟು ಮಾಡಿಸ್ಬೇಕು, ಪಲ್ಲೆ ಯಾವುದಿರಬೇಕು, ಎಷ್ಟ ತರಹ ಇರಬೇಕು, ರೊಟ್ಟಿ,
ಚಪಾತಿ ಎಷ್ಟ ಮಾಡಿಸಬೇಕು, ಸ್ವೀಟ್ ಯಾವುದು ಇರ್ಲಿ ಹೀಂಗ ಊಟದ ಪಟ್ಟಿ ತಯಾರಿ ಮಾಡುವರು.

ಅಲ್ಲದ ಹಳ್ಳಿ ಮದ್ವಿಯಾಗ ಅಡುಗೆ ಮಾಡೋವರಿಗೆ ರಾಜ ಮಯಾರ್ದೆ. ನೀನ ನಮ್ಮ ಅಪ್ಪ, ನಿನ್ನ ನಮ್ಮ ದೇವರು ಅಂತೆಲ್ಲಾ ಅವರಿಗೆ ಆಗ ಪುಂಗಿ ಊದುವರು. ಅವರು ತಮ್ಮ ಕೈಯಾಗ ಹತ್ತಾರು ಮಂದಿ ಆಳು ಇಟ್ಟಕೊಂಡು ಉಳ್ಳಾಗಡ್ಡಿ ಹೆಚ್ರಿ, ಟೊಮ್ಯಾಟೊ ಹೆಚ್ರಿ, ಕೊಬ್ಬರಿ ಸರಿ ಮಾಡಿ ಹೀಂಗ ಆದೇಶ ಮಾಡುವರು. ಅವರು ಆಗ ರಾಜ. ಉಳಿದವರು ಸೇವಕ. ರಾಜ
ಹೇಳಿದ ಮಾತಿಗೆ ಸೇವಕರು ತಲೆಯಾಡಿಸಬೇಕು.

ಹೀಂಗ ಮದ್ವೇ ಒಂದು ವಾರ ಇದ್ದಾಗ ಮದ್ವೆ ಮನಿಗೆ ಇವ್ರ ಬರ್ತಾರಾ. ಇವರ ತರಕಾರಿ, ದಿನಸಿ ಪಟ್ಟಿ ಮಾಡುವ ಮುಖ್ಯ ಮನುಷ್ಯಾ ಇವರ ನೋಡ್ರಿ. ಹಂಗೂ ಹೀಂಗೂ ಮದ್ವಿ ಮೊದ್ಲ ಮದ್ವಿ ದಿನ ಚೆಂದ ಅಡುಗಿ ಮಾಡಬೇಕು. ಮದ್ವಿಗೆ ಬಂದ ಜನಕ್ಕೆ ಎಲ್ಲಾ ಊಟ ಸರಿಯಾಗಬೇಕು. ಹಳ್ಳಿ ಮದ್ವಿಯಾಗ ಕೊನೆಗೆ ಊಟ ಮಾಡುವರಿಗೆ ಒಂದೆರಡೂ ಐಟಂ ಊಟ ಕಡ್ಮಿ ಆದ್ರೂ ಅದ
ದೊಡ್ಡ ಸುದ್ದಿ ಹಳ್ಳಿಯಾಗ. ಊಟನ ಸಿಗಲಿಲ್ಲ.

ಕಡ್ಮಿ ಮಾಡಿಸ್ಯಾರ ಅಂತ… ಹಿಂಗ ಆಗ ಬಾರ್ದು ಅಂತ ಎರಡು ಸಾವಿರ ಮಂದಿಗೆ ಹೇಳಿದ್ರ ಮೂರು ಸಾವಿರ ಮಂದಿಗೆ ಆಗುವಷ್ಟು ಅಡ್ಗೆ ಮಾಡಿಸ್ತಾರಾ ಹಳ್ಳಿಯಾಗ.

ಪಂಕ್ತಿ ಊಟ
ಈ ಸ್ವ ಸಹಾಯ ಪದ್ದತಿ ಊಟ ಜಾರಿಗೆ ಬರುಕಿನ ಮೊದ್ಲ ಹಳ್ಳಿಯಾಗ ಪಂಕ್ತಿ ಊಟ ಜಾರಿಯಲ್ಲಿತ್ತು. ಪಂಕ್ತಿಯಾಗ ಕುಂತು ಊಟ ಮಾಡೊ ಸುಖನಾ ಬೇರೆ ಬಿಡ್ರಿ. ನೀವೂ ಹಂಗ ಕುಂತು ಉಂಡಿರಬೇಕಲ್ಲ. ಅಕ್ಕಿ ಕಾಳ ಬೀಳಾನ. ನಿಗದಿತ ಜಾಗದಲ್ಲಿ ಎಷ್ಟು ಜನರ ಕುಳಿಕೊಳ್ಳುವರು ಅಷ್ಟು ಜನರು ಕುಂತ ತಕ್ಷಣ ಪಂಕ್ತಿ ಊಟ ಶುರು. ಒಮ್ಮೊಮ್ಮೆ ಈ ಪಂಕ್ತಿ ಊಟ ಏಳೆಂಟು ಸಲ ಆದ್ರೂ ಮುಗಿ ಯೋದಿಲ್ಲ. ಜನ ಏಕಕಾಲಕ್ಕೆ ಬರಲ್ಲ ಅದ್ಕ. ಪಂಕ್ತಿ ಊಟ ಅಂದ್ರ ಏಕಕಾಲಕ್ಕೆ ನೂರು, ಸಾವಿರ ಜನ ಸಾಲಾಗಿ ಊಟಕ್ಕ ಕುಳಿತು ಕೊಳ್ಳುವುದು.

ಕುಳಿತ ಎಲ್ಲರಿಗೂ ಬಾಳೆ ಎಲೆ ಹಾಕುವುದು. ನೀರು, ಉಪ್ಪಿನಕಾಯಿ, ಪಲ್ಲೆ, ರೊಟ್ಟಿ, ಚಪಾತಿ, ಸ್ವೀಟ, ಅನ್ನ, ಸಾರು ಹೀಂಗ ಏನೇನೋ ಮಾಡಿರುತ್ತಾರೋ ಅವನ್ನ ಎಲ್ಲಾ ರಿಗೂ ಬಡಿಸಿ ಊಟ ಮಾಡೊದು. ಮೊದಲ ಪಂಕ್ತಿಯಂತೂ ಮಸ್ತ ಇರುತ್ತೆ. ಇಲ್ಲಿ ಜಾಗ ಪಡೆಯಲು ಹರ ಸಾಹಸ ಮಾಡಬೇಕು. ಓಡಿ ಹೋಗಿ ಜಾಗ ಹಿಡಿಯಬೇಕು. ನಮಗ ಬೇಕಾದವರು, ಮದುವೆ ನೋಟ ಪಂಕ್ತಿ ಊಟ ನೆಲದ ಮೇಲೆ ಸಾಲಾಗಿ ಕುಳಿತು, ಮದುವೆ ಊಟ ಮಾಡುವ ಗಮ್ಮತ್ತೇ ಗಮ್ಮತ್ತು. ಈಗ ಅಂತಹ ಪಂಕ್ತಿ ಊಟ ಕಡಿಮೆಯಾಗುತ್ತಿದೆ.

ಪರಿಚಿತರು ಅಕ್ಕ ಪಕ್ಕ ಇದ್ರ ಇನ್ನೂ ಬಹಳ ಖುಷಿ ಉಣ್ಣಕ್ಕ. ಒಂದೆರಡು ತುತ್ತೂ ಜಾಸ್ತಿನ ಹೋಗುತ್ತ. ನೂರಾರು ಜನ ಒಂದೇ ಸಲ ಕುಂತ ಮೇಲೆ ಊಟಕ್ಕ ಹಾಕಾಕ ಶುರು ಮಾಡ್ತಾರಾ. ಫಸ್ಟ ಬಾಳೆ ಎಲೆ ಹಾಕ್ತಾರ. ಆಮೇಲೆ ಉಪ್ಪಿನಕಾಯಿ. ಆತ ಮುಂದೆ ಹೋಗುವುದ್ರಯೊಳಗೆ ಹಿಂದಿನವರ ನೆಕ್ಕಿ ಖಾಲಿನ ಮಾಡಿರತಾರಾ.

ಮಕ್ಕಳ ಮಾಡಿದ್ರ ಹೊಟ್ಯಾಗ ಹಾಕೋತಾರಾ. ದೊಡ್ಡವರ ಮಾಡಿದ್ರ ಉಳಿದವ್ರ ಕಣ್ಣು ಇವರತ್ತ. ಕಂಡನೋ ಇಲ್ಲೋ ಎಂದು ಮನದಲ್ಲಿ ಅನ್ನುವವರು. ಹಾಗೆ ಅನ್ನುವವರು ಮನದಾಗ ನಾನು ಯಾವಾಗ ಉಪ್ಪಿನಕಾಯಿ ತಿಂದೆನೊ ಅಂತ ಬಯಸುವರು. ಆಮೇಲೆ ಪಲ್ಲೆ ಹಾಕವರು. ಬಾಳೆ ಎಲೆ ಸರಿಯಿಲ್ಲ ಅಂದ್ರ ಊಟದ ರಂಪಾಟ ಬಾಳ. ಆಮೇಲೆ ರೊಟ್ಟಿ ಚಪಾತಿ, ಸ್ವೀಟ ಹಾಕಿ ಒಂದು ಮಂತ್ರ ಹೇಳಿ ಊಟ ಶುರು ಮಾಡ್ತಾರ.

ಬೇಗನೆ ಎಲೆ ಖಾಲಿ!
ಕೆಲವರು ಊಟ ಶುರುವಾದ ತಕ್ಷಣ ಪಟ ಪಟ ಖಾಲಿ ಮಾಡುವರು. ಇನ್ನು ಕೆಲವರು ನಿಧಾನ. ಆಗ ಊಟ ಬಡಿಸುವರ ಫಜೀತಿ ಕೇಳತೀರದು. ಒಂದೊಂದು ಐಟಂ ನಾಲ್ಕು ಐದು ಜನ ಬಡಿಸ್ತಾ ಇರ್ತಾರೆ. ಚೆಂದ ಕೆಲ್ಸ ಮಾಡ್ತಾನಾ ಅಂತ ಅನಿಸಿದ್ರ ಊರಾಗ ಯಾವ ಮದ್ವಿ ನಡೆದ್ರೂ ಈತ ತಿರುಗಾಡು ಹುಡುಗ್ರ ಲಿಸ್ಟನಲ್ಲಿ ಫಿಕ್ಸ. ಹೀಂಗ ಪಂಕ್ತಿ ಊಟದ ಸಣ್ಣ ಪುಟ್ಟ ಫಜೀತಿಗಳು. ಈ ಫಜೀತಿ ಹೊರತು ಪಡಿಸಿದ್ರೆ ಏಕ ಕಾಲದಲ್ಲಿ ಎಲ್ಲರೂ ಕುಳಿತುಕೊಂಡು ಊಟ ಮಾಡುವ ಆ ದೃಶ್ಯ ಬಹಳ ಚೆಂದ. ಇಂತಹ ಊಟದ ಪದ್ದತಿ ಈಗ ಬಹಳ ಕಡ್ಮೆ. ಪಂಕ್ತಿ ಊಟ ಹೀಂಗ. ಒಂದು ಪಂಕ್ತಿಯವರು ಮುಗಿಯುವರೆಗೆ ಉಳಿದವರೂ ಕಾಯಬೇಕು. ಎರಡನೇ
ಪಂಕ್ತಿಗೆ ಊಟಕ್ಕೆ ಕೂಡುವರು.

ಜಾಗ ಹಿಡಿಯಬೇಕು ಅಂತ ತಾವೂ ಎಲ್ಲ ಕೂಡಬೇಕು ಅಂದುಕೊಂಡಿರತಾರಾ ಅಲ್ಲಿಯೆ ಊಟ ಮಾಡುವರ ಹಿಂದೆ  ನಿಂತಿರಿ ತಾರಾ. ಎರಡು ಮೂರು ಪಂಕ್ತಿ ಊಟ ನಡೆಯುವಾಗ ಸ್ವಲ್ಪ ಅಸ್ತವ್ಯಸ್ತ ಆಗುತ್ತೆ. ಎಲ್ಲರೂ ಏಕ ಕಾಲಕ್ಕೆ ಊಟ ಮುಗಿಸದೇ ಇರುವ ಕಾರಣ ಬರಬರುತ್ತಾ ಜನರು ಕಡಿಮೆ ಆಗೋದ್ರಿಂದ ತಿರುಗಾಡೋ ಹುಡುಗ್ರ ಕೆಲಸ ಚೂರು ಕಡ್ಮಿ ಆರಾಮ.

ಅದೇನೆ ಇರ್ಲಿ, ಏಕ ಕಾಲಕ್ಕೆ ನೆಲದ ಮೇಲೆ ಕುಳಿತುಕೊಂಡು ಪಂಕ್ತಿಯಲ್ಲಿ ಊಟ ಮಾಡುವ ಸುಖನ ಪದಗಳ ಮೂಲಕ ಹೇಳಾಕ ಆಗಲ್ಲ. ಆ ನೋಟ, ಆ ಊಟ ಎರಡೂ ಬಲು ಇಷ್ಟ. ಅದನ್ನು ನೆನಿಸಿಕೊಂಡ್ರೆ ಬಾಯಿ ಚಪ್ಪರಿಸುತ್ತೆ. ಮನಸ್ಸು ಆ ಊಟ ಬೇಕೆಂದು ಬಯಸುತ್ತೆ.

ಊಟ ನೀಡುವವನಿಗೆ ಸೋಡಾ
ಹಂಗೂ ಹೀಂಗೂ ಅಡುಗೆ ರೆಡಿಯಾಯಿತು. ಅಕ್ಕಿ ಕಾಳು ಬಿತ್ತು ಅಂದ ತಕ್ಷಣ ಊಟಕ್ಕ ರೆಡಿ ಮಾಡಬೇಕು. ಊಟದ ಉಸ್ತುವಾರಿ ತಂಡದ ದೊಡ್ಡ ಕೆಲಸ ಹಿರಿಯರು ಅಲ್ಲಿಯೇ ಠಿಕಾಣಿ ಹೂಡಿರತಾರಾ. ಊಟಕ್ಕ ನೀಡಾಕಾ ದೊಡ್ಡ ಪಡೆ ಇರುತ್ತೆ. ಅದು ಮದ್ವಿ ಯೊಳಗೆ ಬಹಳ ಮುಖ್ಯ ಕೆಲಸ. ಈಗ ಆದ್ರ ಬಹಳ ಸುಲಭ ಐತಿ ಊಟಕ್ಕ ನೀಡೋದು. ಸ್ವ ಸಹಾಯ ಪದ್ದತಿ ಬಂದೈತಿ. ಎಲ್ಲಾ
ಅಡುಗೆ ಐಟಂ ಸರಿಯಾಗಿ ಇಟ್ಟುಕೊಂಡು ಒಂದು ಹತ್ತು ಹುಡುಗರು ನಿಂತ್ರ ಸಾಕು ಹಾಕಾಕ.

ಇನ್ನೊಂದಿಷ್ಟು ಹುಡುಗ್ರು ಖಾಲಿ ಆಗಿದ್ದ ಐಟಂ ತರಕಾ ಬೇಕು. ಇಷ್ಟ ಆದ್ರ ಸಾಕು. ಊಟ ಮಾಡೋವರು ಪಾಳಿ ಪ್ರಕಾರ ಬಂದು ತಮಗೆ ಬೇಕಾದಷ್ಟು ಹಾಕಿಸಿಕೊಂಡು ನಿಂತರ , ಇಲ್ಲಾ ಕುಂತಾರ ಊಟ ಮಾಡ್ತಾರಾ. ಅದರ ಪಾಲಿಗೆ ಆ ಕಾರ್ಯ ನಡಿತಾ ಇರ್ತದ. ಮೊದ ಮೊದಲು ಸ್ವಲ್ಪ ಗದ್ದಲ ಆಗುತ್ತಾ. ಆಮೇಲೆ ಸಂಡಲ ಆಗ್ತಾತೈತಿ ನೋಡ್ರಿ. ಆಗ ಅಡುಗೆ ನೀಡುವವರಿಗೆ ಸೋಡಾ ತಂದು ಕೊಡುವರು. ಈಗಲೂ ಕೂಡಾ.