ಎಲ್ಲಾ ಸಂಸಾರಗಳೂ ಎದುರಿಸುವ ಸನ್ನಿವೇಶ ಇದು. ಪರಸ್ಪರ ಅನ್ಯೋನ್ಯವಾಗಿ ಸತಿ ಪತಿ ಇಬ್ಬರೂ ಜೀವನ ನಡೆಸು ತ್ತಿರುತ್ತಾರೆ. ಅದರ ಫಲವಾಗಿ ಮಗು ಜನಿಸಿದಾಗ, ಕುಟುಂಬದಲ್ಲಿ ಹೊಸ ಸದಸ್ಯನ ಸೇರ್ಪಡೆ. ಹೊಸ ಗಾಳಿ. ಆದರೆ ಈ ವಿದ್ಯಮಾನವು ಸತಿ ಪತಿಯರ ಬಾಂಧವ್ಯದ ಮೇಲೆ ತೀವ್ರ ಪರಿಣಾಮ ಬೀರಬಲ್ಲದು!
ಸುಪ್ರೀತಾ ವೆಂಕಟ್
ಒಂದು ಮಗುವಾಗಲಿ, ಗಂಡ ಹೆಂಡಿರ ಮನಸ್ತಾಪ ಸರಿಯಾಗುತ್ತೆ ಅನ್ನುವವರು ಒಂದು ಕಡೆಯಾದರೆ, ಮಗುವಾದರೆ ಗಂಡ ಹೆಂಡತಿ ನಿಧಾನಕ್ಕೆ ದೂರವಾಗುತ್ತಾರೆ ಅನ್ನುವವರೂ ಇನ್ನೊಂದು ಕಡೆ. ಇಬ್ಬರು ಮೂವರಾದಾಗ ಕೇವಲ ಸಂಖ್ಯೆಯೊಂದು ಜಾಸ್ತಿಯಾಗುವು ದಲ್ಲ. ಪತಿ ಮತ್ತು ಪತ್ನಿಯ ನವಿರಾದ ಸಂಬಂಧದ ಮೇಲೂ ಅದೇನೋ ಒಂದು ರೀತಿಯ ಪರಿಣಾಮ ಬೀರುತ್ತದೆ.
ಅಲ್ಲಿ ಸಂತೋಷ, ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತದೆ. ಮಗು ಹುಟ್ಟುವ ಮುಂಚಿನ ಜೀವನ ಮರೆತೇ ಹೋಗುವಂತೆ, ಕೇವಲ ಮಗುವೇ ಪ್ರಪಂಚವೆಲ್ಲಾ ಆವರಿಸಿ ದಂತೆ ಭಾಸವಾಗುತ್ತದೆ. ಸಾಂಸಾರಿಕ ಜೀವನಕ್ಕೆ ಕಾಲಿಟ್ಟಾಗ ಪತಿ ಪತ್ನಿ ಒಬ್ಬರಿಗೊಬ್ಬರು ಬೆಂಗಾವಲಾಗಿ, ಸುಖ ದುಃಖ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ.
ಮಾನಸಿಕವಾಗಿ ನಾನಿದ್ದೇನೆ ಎನ್ನುವ ಭರವಸೆ ನೀಡುತ್ತಾರೆ. ಮಗುವಾದ ಬಳಿಕ ಕೂಡ ಹೀಗೆಯೇ ಇರುವೆವು ಅಂದುಕೊಂಡಿರು ತ್ತಾರೆ. ಆದರೆ ಮಗು ಹುಟ್ಟಿದ ತಕ್ಷಣವೇ ಎಲ್ಲವೂ ಅದಲು ಬದಲು! ಹೆಂಡತಿ ಮೊದಲಿನಂತೆ ನನ್ನ ಬಗ್ಗೆ ವಿಚಾರಿಸುತ್ತಿಲ್ಲ ಎಂದು ಗಂಡ ಅಂದುಕೊಂಡರೆ, ಗರ್ಭಿಣಿಯಾಗಿದ್ದಾಗ ನನ್ನ ಮೇಲೆ ತೋರುತ್ತಿದ್ದ ಕಾಳಜಿ ಈಗಿಲ್ಲವಲ್ಲ ಎಂದು ನೊಂದುಕೊಳ್ಳುತ್ತಾಳೆ ಹೆಂಡತಿ. ಏಕೆಂದರೆ, ಇಬ್ಬರಿಗೂ ಅತಿಯಾಗಿ ಬೇಕಾದ, ಇಬ್ಬರ ಪ್ರೀತಿಯ ಫಲ ಎನಿಸಿರುವ ಮಗು ಎದುರಿನಲ್ಲಿದೆ! ಆ ಮಗುವನ್ನು ಮುದ್ದಿಸು ವುದೇನು, ಅಕ್ಕರೆ ಮಾಡುವುದೇನು!
ಅಕ್ಕರೆ ಪ್ರೀತಿ ಬೇಕೇ ಬೇಕು
ಮಗು ಹುಟ್ಟಿದ ನಂತರದ ದಾಂಪತ್ಯ ಜೀವನವನ್ನು ಆರೋಗ್ಯಕರ ರೀತಿಯಲ್ಲಿ ಕಾಪಾಡುವುದು ಪತಿ ಪತ್ನಿ ಇಬ್ಬರದ್ದೂ ಬಹುದೊಡ್ಡ ಕರ್ತವ್ಯ. ಮಗುವನ್ನು ಪ್ರೀತಿಸುವ, ಮುದ್ದಿಸುವ ಗಂಡನೊಡನೆ ಒರಟುತನ ತೋರದೆ, ಬೇಕಿದ್ದರೆ ಅವನೇ ಬಂದು ನನ್ನನ್ನು ವಿಚಾರಿಸಲಿ, ನಾನೇಕೆ ಎಲ್ಲಾ ಮಾಡಲಿ ಎಂಬ ಅಹಂ ತೋರದೆ, ಮೊದಲಿನಂತೆಯೇ ಗಂಡನೊಡನೆ ಇದ್ದು ಬಿಡಬೇಕು. ಪತಿಯಾದವನು ಕೂಡ ಪತ್ನಿಯನ್ನು ನಿರ್ಲಕ್ಷಿಸದೆ, ಮಗುವೇ ಇವಳ ಸರ್ವಸ್ವ ವಾಗಿದೆಯೆಂದು ಮತ್ಸರ ಪಡದೆ ಪತ್ನಿಯನ್ನು ಪ್ರೀತಿಸಬೇಕು, ಅಕ್ಕರೆಯಿಂದ ನೋಡಬೇಕು.
ಮಗು ಬಂದ ಮೇಲೆ ಅದುವೇ ತಾಯಂದಿರ ನಂಟು, ಅಂಟು, ಪ್ರತಿಯೊಂದೂ. ಮಗುವಿನ ಮೇಲಿನ ಪ್ರೀತಿ ಒಂಚೂರೂ ಪೋಲಾಗದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳುತ್ತಾರೆ. ಕೆಲವು ಅಮ್ಮಂದಿರು ತುಸು ಹೆಚ್ಚೇ ಪೊಸೆಸಿವ್ ನೆಸ್ ತೋರಿಸುವರು. ‘ನನ್ನ ಮಗು ನನ್ನಿಷ್ಟ, ನನ್ನನ್ನು ಮಾತ್ರವೇ ಪ್ರೀತಿಸಬೇಕು, ಎಲ್ಲದಕ್ಕೂ ಅಮ್ಮ ಅಮ್ಮ ಅಂತಿರಬೇಕು’ ಹೀಗೆ ಅತಿಯಾಗಿ ಆಡುವವರು ತಮ್ಮ ಗಂಡಂದಿರನ್ನು ಸ್ವಲ್ಪ ಮಟ್ಟಿಗೆ ಮರೆತೇ ಬಿಡುತ್ತಾರೆ. ಇದು ಹದಗೆಡುವ ದಾಂಪತ್ಯ ಜೀವನಕ್ಕೆ ನಾಂದಿಯಾಗುವ ಸಾಧ್ಯತೆ ಇದೆ.
ಮುಂದೆ ಮಗು ಬೆಳೆದು ತನ್ನ ಕಾಲ ಮೇಲೆ ನಿಂತಾಗ, ಅತ್ತ ಮಗು ಅದರ ಜೀವನ ನೋಡಿಕೊಳ್ಳುತ್ತದೆ, ಇತ್ತ ಗಂಡನ ಪ್ರೀತಿ ಕಳೆದುಕೊಂಡು ವರ್ಷಗಳೇ ಕಳೆದು ಕೊನೆಗೆ ಅವಳೊಬ್ಬಳೇ ಏಕಾಂಗಿಯಾಗುವ ಸನ್ನಿವೇಶವೂ ಎದುರಾಗಬಹುದು. ಅಂತಹ ಸಂದರ್ಭ ಎದುರಾದರೆ, ಅವಳು ಒಂಟಿಯಾಗಬಹುದು. ಇದು ಕೇವಲ ಹೆಂಡತಿಯರಿಗೆ ಅನ್ವಯಿಸುವುದಲ್ಲ. ಮಗು ಹೇರಲು ಹೆಂಡತಿ ಬೇಕು, ಮಗು ಹೆತ್ತ ಮೇಲೆ ನೋಡಿಕೊಳ್ಳಲು ತನ್ನ ಅಮ್ಮ ಅಪ್ಪ ಇದ್ದಾರೆಂದು ತಮ್ಮ ಮಡದಿಯರನ್ನು ಮೂಲೆ ಗುಂಪು ಮಾಡುವವರೂ ಇದ್ದಾರೆ ಈ ಸಮಾಜದಲ್ಲಿ.
ಇದು ಬೇಸರದ ವಿಷಯ. ಮಗು ಹೆತ್ತ ಮೇಲೆ ಹೆಂಡತಿಯಾದವಳಿಗೆ ಮೊದಲಿಗಿಂತಲೂ ಹೆಚ್ಚಿನ ಪ್ರಮಾಣದ ಮಾನಸಿಕ ಬೆಂಬಲ ಬೇಕಾಗುತ್ತದೆ. ಮುಂಚೆ ಮಾಡುತ್ತಿದ್ದ ಸಹಾಯಗಳು, ಅಕ್ಕರೆ, ಪ್ರೀತಿ ಎಲ್ಲವೂ ಕೂಡ ಮುಂದುವರಿಯಬೇಕು. ಉದ್ಯೋಗಸ್ಥ ಪತ್ನಿಯಾಗಿದ್ದಲ್ಲಿ ಸಮಾನ ಜವಾಬ್ದಾರಿಗಳನ್ನು ಪತಿಯೂ ತೆಗೆದುಕೊಳ್ಳಲಿ ಎಂದು ಅಪೇಕ್ಷಿಸುವುದು ತಪ್ಪಲ್ಲ. ಪತಿ ಪಾಲಿಸಲೇ ಬೇಕಾದ ಅಂಶವಿದು.
ಮಗು ಇಬ್ಬರನ್ನು ಬೆಸೆಯುವ ಕೊಂಡಿಯಾಗಬೇಕೇ ವಿನಹ, ದಂಪತಿಯಲ್ಲಿ ಸಣ್ಣ ಮಟ್ಟದ ಬೇಸರ ಸೃಷ್ಟಿಸಿ, ಪರಸ್ಪರ ದೂರ ಸರಿಸುವ ಅಡೆತಡೆ ಎನಿಸಬಾರದು. ಮಗುವಿನ ಲಾಲನೆ, ಪೋಷಣೆ, ಬೆಳೆಸುವ ಮಹತ್ತರ ಕೆಲಸಕ್ಕೆ ಇಬ್ಬರೂ ಒಂದುಗೂಡಿ, ಸಂಸಾರ ಹಾಗೂ ಕುಡಿಯನ್ನು ಬೇರೆ ಬೇರೆ ನೋಡದೆ ಬದುಕು ಸಾಗಿಸಬೇಕು. ಗಂಡ ಹೆಂಡತಿಯ ಮನಸ್ತಾಪಗಳು ಹೇಗೆ ಹುಟ್ಟು ತ್ತವೆ, ಹೇಗೆ ಕೊನೆಗೊಳ್ಳುತ್ತವೆ ಎಂಬುದನ್ನು ಖಚಿತವಾಗಿ ಹೇಳಿಕೊಳ್ಳಲು ಕಷ್ಟ. ಕಾಣೋಕೆ ಸಣ್ಣ ಪುಟ್ಟ ವಿಷಯಗಳಾದರೂ, ಅವೇ ನಿಧಾನವಾಗಿ ಬೆಳೆಯುತ್ತಾ ಹೋಗಿ, ಮುಂದೊಂದು ದಿನ ಸಂಸಾರದಲ್ಲಿ ಹುಳಿ ಹಿಂಡಿ, ಅಲ್ಲಿನ ನೆಮ್ಮದಿಗೆ ಮಾರಕವಾಗಿ ಪರಿಣಮಿಸಬಹುದು.
ಆದ್ದರಿಂದ ಮುಂಜಾಗೃತೆ ವಹಿಸಿ ಪತಿ ಪತ್ನಿ ಅರ್ಥೈಸಿಕೊಂಡು, ಸಹಬಾಳ್ವೆ, ಸಮರಸದಿಂದ ಮಗುವನ್ನು ಉತ್ತಮ ಪ್ರಜೆಯಾಗಿ
ಬೆಳೆಸಬೇಕಾಗಿದೆ. ಮಗು ಹುಟ್ಟಿದ ಮೇಲಿನ ದಾಂಪತ್ಯ ಜೀವನ ಮತ್ತಷ್ಟು ಸಿಹಿ ಸಿಹಿಯಾಗಿರಲಿ.