Wednesday, 27th November 2024

ಕವನದಲ್ಲೇ ಕಾರ್ಯಕ್ರಮ ನಿರೂಪಣೆ

ರವಿ ಮಡೋಡಿ, ಬೆಂಗಳೂರು

ಸಭಾ ಕಾರ್ಯಕ್ರಮವನ್ನು ನಿರೂಪಿಸುವಾಗ, ಕವನ ಮತ್ತು ಕಾವ್ಯ ಬಳಸುವ ಪ್ರಯೋಗ ಮಾಡಿ, ಅದರಲ್ಲಿ ಯಶಸ್ವಿ ಯಾಗಿದ್ದಾರೆ ಸುಧಾಕಿರಣ್ ಅಧಿಕಶ್ರೇಣಿ.

ಒಂದು ಕಾರ್ಯಕ್ರಮವು ಯಶಸ್ವಿಯಾಗಬೇಕಿದ್ದರೆ ಅಲ್ಲಿ ಅನೇಕ ಅಂಶಗಳು ಪೂರಕವಾಗಿರಬೇಕು. ಇದರಲ್ಲಿ ಸಭಾ ನಿರೂಪಕನ ಪಾತ್ರವೂ ಒಂದು. ಕೆಲವರು ನಿರೂಪಣೆಯನ್ನು ಗಂಭೀರವಾಗಿ ಮಾಡಿದರೆ, ಕೆಲವರು ತುಸು ಹಾಸ್ಯ ಶೈಲಿಯನ್ನು ಅಳವಡಿಸಿ ಕೊಂಡಿರುತ್ತಾರೆ.

ಆದರೆ ಇಲ್ಲೊಬ್ಬರು ತೀರಾ ಭಿನ್ನವಾದ ರೀತಿಯಲ್ಲಿ ಸಭಾ ನಿರೂಪಣೆಯನ್ನು ಮಾಡಿ ಗಮನ ಸೆಳೆಯುತ್ತಿದ್ದಾರೆ. ಅದು ಕನ್ನಡ ಕಾವ್ಯ ಮತ್ತು ಕವಿತೆಗಳಲ್ಲಿ ಕಾರ್ಯಕ್ರಮವನ್ನು ನಿರ್ವಹಿಸಿ ನಿರೂಪಣೆಗೆ ಹೊಸ ಆಯಾಮವನ್ನು ನೀಡು ತ್ತಿದ್ದಾರೆ. ಅವರೇ ಸುಧಾಕಿರಣ್ ಅಧಿಕ ಶ್ರೇಣಿ. ಸುಧಾಕಿರಣ್ ಅಧಿಕಶ್ರೇಣಿ ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರಿ ನವರು.

ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದು ಸೋಲಾರ್ ಸಂಸ್ಥೆಯೊಂದನ್ನು ಸ್ನೇಹಿತರೊಂದಿಗೆ ಸ್ಥಾಪಿಸಿ ಉದ್ಯಮಿ ಎನಿಸಿಕೊಂಡಿ ದ್ದಾರೆ. ಕವಿತೆಗಳನ್ನು ರಚಿಸುವುದು ಅವರ ನೆಚ್ಚಿನ ಹವ್ಯಾಸವಾಗಿದೆ. ಈಗಾಗಲೇ ನೂರಾರು ಕವಿತೆ ಗಳನ್ನು ರಚಿಸಿರುವ ಸುಧಾ ಕಿರಣ್ ಅವರು ನಾಲ್ಕು ಕಾವ್ಯ ಸಂಕಲನ ಗಳನ್ನು ಹೊರತಂದಿದ್ದಾರೆ.

ನಿರೂಪಣೆಯಲ್ಲಿ ಕವಿತೆಗಳನ್ನು ಬಳಸಿಕೊಳ್ಳುವುದು ಅವರ ಅನನ್ಯತೆ. ಕವಿತೆಗಳ ಆಪ್ತತೆಯನ್ನು ಹತ್ತಿರವಾಗಿಸುವುದಕ್ಕೆ
ಹಂಬಲಿಸುತ್ತಿರುವಾಗ ಅವರು ಸಭಾ ನಿರೂಪಣೆಗೆ ಭಿನ್ನವಾದ ಆಯಾಮವನ್ನು ನೀಡುವುದಕ್ಕೆೆ ಆಲೋಚಿಸಿದರು. ಈ ನಿಟ್ಟಿನಲ್ಲಿ
ಕಂಡುಕೊಂಡ ಹೊಸ ಮಾರ್ಗವೇ ‘ಕಾವ್ಯ ನಿರೂಪಣೆ’. ಸಭೆಗೆ ಅತಿಥಿಗಳನ್ನು ಆಹ್ವಾನಿಸುವುದು, ಅತಿಥಿಗಳನ್ನು ಸಭೆಗೆ ಪರಿಚಯಿಸುವುದಿರಬಹುದು, ಕಾರ್ಯಕ್ರಮದ ಸ್ವರೂಪದ ಬಗ್ಗೆ ತಿಳಿಸುವುದಿರಬಹುದು ಎಲ್ಲವೂ ಇಲ್ಲಿ ಕಾವ್ಯಮಯ.

ತಮ್ಮ ಕವಿತೆಗಳಿಂದ ಇಡೀ ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಣೆ ಮಾಡುವುದು ವಿಶೇಷವಾಗಿದೆ. ಈಗಾಗಲೇ ನೂರಾರಕ್ಕೂ ಅಧಿಕ ಇಂತಹ ಕಾವ್ಯ ನಿರೂಪಣೆಯನ್ನು ನಿರ್ವಹಿಸಿರುವ ಸುಧಾಕಿರಣ್‌ರವರು ನಿರೂಪಣೆಗೆ ಹೊಸತನವನ್ನು, ಹೊಸ ಹೊಳಹನ್ನು ತಂದಿದ್ದಾರೆ.

ಕವಿತ್ವ ಅಂತಃಸ್ಥವಾಗಿದ್ದಾರೆ ಮಾತ್ರ ಇಂತಹ ನಿರೂಪಣೆ ಸಾಧ್ಯ. ಈ ನಿರೂಪಣೆ ಬಹಳ ಶ್ರಮವನ್ನು ಅಪೇಕ್ಷಿಸುತ್ತದೆ. ಇಡೀ ಕಾರ್ಯಕ್ರಮದ ಸ್ವರೂಪ, ಬರುವ ಅತಿಥಿಗಳು, ಅವರ ಪರಿಚಯ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಅದಕ್ಕೆ ತಕ್ಕಂತೆ ಮೊದಲೇ ಕವನ ರಚಿಸಿಕೊಂಡಿರಬೇಕಾಗುತ್ತದೆ.

ಅದನ್ನು ಆ ಸಭೆಯಲ್ಲಿ ರಸವತ್ತಾಗಿ ನಿರೂಪಿಸಬೇಕು. ಯಾವುದೇ ಕಾರ್ಯಕ್ರಮಗಳು ಅಂದುಕೊಂಡಂತೆ ನಡೆಯುತ್ತದೆ ಎನ್ನುವು ದನ್ನು ಹೇಳಲು ಸಾಧ್ಯವಿಲ್ಲ. ಕೊನೆಯ ಕ್ಷಣದಲ್ಲಿ ಬದಲಾಗುವ ಸಾಧ್ಯತೆಗಳು ದಟ್ಟವಾಗಿರುತ್ತದೆ. ಈ ನಿಟ್ಟಿನಲ್ಲಿ ಕಾವ್ಯ ನಿರೂಪಣೆ ಯನ್ನು ಮಾಡುವವರು ಈ ಬದಲಾವಣೆಯನ್ನು ಸ್ವೀಕರಿಸಿಕೊಂಡು ಆ ಕ್ಷಣದಲ್ಲಿಯೇ ಕವಿತೆಗಳನ್ನು ರಚಿಸಿ, ಪ್ರಸ್ತುತಪಡಿಸಬೇಕು!

ಕೇವಲ ಕವಿತೆಗಳನ್ನು ರಚಿಸಿದರೆ ಮಾತ್ರ ಸಾಲದು. ಸ್ಪಷ್ಟ ಉಚ್ಛಾರ, ಭಾಷೆಯ ಮೇಲೆ ಹಿಡಿತ, ಕಾರ್ಯಕ್ರಮಗಳನ್ನು ಗೊಂದಲ ವಿಲ್ಲದೇ ನಿರೂಪಿಸುವ ಜಾಣ್ಮೆ ಇದ್ದರೆ ಮಾತ್ರ ಒಳ್ಳೆಯ ನಿರೂಪಕರಾಗಲು ಸಾಧ್ಯ. ಈ ಗುಣಗಳು ಸುಧಾಕಿರಣ್ ಅವರಿಗೆ ಸಿದ್ಧಿಸಿದೆ. ಕೇವಲ ಗಂಭೀರವಾಗಿ ಕಾವ್ಯವನ್ನು ನಿರೂಪಣೆಯನ್ನು ಮಾಡದೆ ಅಲ್ಲಿ ರಸ ಸೃಷ್ಠಿಯ ಬಗ್ಗೆಯೂ ಇವರು ಲಕ್ಷ್ಯ ವಹಿಸುತ್ತಾರೆ. ಸಂದರ್ಭಕ್ಕೆ ಸರಿಯಾಗಿ ತಿಳಿ/ ಲಘು ಹಾಸ್ಯವನ್ನು ಕಾವ್ಯ ನಿರೂಪಣೆಯಲ್ಲಿ ಅಳವಡಿಸಿಕೊಂಡು ಸಭೆಯನ್ನು ನಿಯಂತ್ರಿಸುವುದು ಹಾಗೂ ಅದಕ್ಕಾಗಿ ಇವರು ಕಾವ್ಯ ಶಕ್ತಿಯನ್ನು ಬಳಸಿಕೊಳ್ಳುವುದು ಇವರ ಹೆಚ್ಚುಗಾರಿಕೆ.

ಇಂತಹ ಕಾವ್ಯ ನಿರೂಪಣೆಗಾಗಿಯೇ ಇಲ್ಲಿಯವರೆಗೆ ಸುಮಾರು 5,000ಕ್ಕೂ ಅಧಿಕ ಪದ್ಯಗಳನ್ನು ರಚಿಸಿದ್ದಾರೆ. ಅವರು ಒಂದು ಕಾರ್ಯಕ್ರಮದಲ್ಲಿ ಬಳಸಿದ ಪದ್ಯಗಳನ್ನು ಮತ್ತೊಂದು ಕಾರ್ಯಕ್ರಮದಲ್ಲಿ ಬಳಸುವುದಿಲ್ಲ. ಹೊಸತಾಗಿ ಆ ಕಾರ್ಯಕ್ರಮಕ್ಕೆ ಅಗತ್ಯ ಎನಿಸುವ ರಚನೆಯನ್ನು ಮಾಡಿಕೊಂಡು ಕಾವ್ಯದಲ್ಲಿ ನಿರೂಪಣೆ ಮಾಡುತ್ತಾರೆ.

ಪ್ರಾಸಕ್ಕಾಗಿ ಪ್ರಾಸವನ್ನು ಬಳಸಿ ಕವಿತೆಯನ್ನು ಶುಷ್ಕವಾಗಿಸದೆ ಭಾವದ ಬಗ್ಗೆ ಹೆಚ್ಚು ಆದ್ಯತೆಯನ್ನು ನೀಡುವುದು ಇವರ ಕವಿತೆ ಗಳಲ್ಲಿ ಕಾಣಬಹುದಾಗಿದೆ. ಇದರಜತೆ ಅವರು ಜೀವನದ ಭಾಗವಾಗಿಯೇ ಕಾವ್ಯವನ್ನು ಸ್ವೀಕರಿಸಿರುವುದನ್ನು ನೋಡ ಬಹುದು. ಆರೋಗ್ಯ ಸರಿವಿಲ್ಲವೆಂದು ಆಸ್ಪತ್ರೆಗೆ ಹೋದರೆ ಅಲ್ಲಿಯೂ ಕೂಡ ಅವರು ಕಾವ್ಯದಲ್ಲಿ ತನಗೆ ಏನಾಗಿದೆ ಎನ್ನುವುದನ್ನು
ಹೇಳುತ್ತಾರೆ.

ಸಾಧನೆಯನ್ನು ಮಾಡಿರುವವರಿಗೆ ಶುಭಾಶಯ, ಅಭಿನಂದನೆಗಳನ್ನು ತಿಳಿಸುವುದು, ಹೊಸ ಪುಸ್ತಕಗಳನ್ನು ಓದಿ ಆ ಬಗೆಗಿನ ಅಭಿಪ್ರಾಯವನ್ನೂ ಹೇಳುವುದು, ಪುಸ್ತಕಗಳಿಗೆ ಮುನ್ನುಡಿಯನ್ನು ಬರೆಯುವುದು ಹೆಚ್ಚೇಕೆ ತಮ್ಮ ಆಫೀಸ್ ಮೀಟಿಂಗ್ ನಡೆಸುವ ಸಂದರ್ಭಗಳಲ್ಲಿ ಕೂಡ ಕಾವ್ಯಸುಧೆಯನ್ನು ಹರಿಸಿ ತಮ್ಮ ಕಾವ್ಯ ಪ್ರೀತಿಯನ್ನು ಪ್ರಕಟಿಸುತ್ತಾರೆ.

ಒಟ್ಟಿನಲ್ಲಿ ಕಾವ್ಯವೇ ಅವರ ಮಾತಾಗಿದೆ ಅಥವಾ ಮಾತೇ ಕಾವ್ಯವಾಗಿದೆ!! ಕನ್ನಡವನ್ನು ಪ್ರೀತಿಸಿ, ಅದನ್ನು ಬಳಸಿ ಬೆಳೆಸುವುದಕ್ಕೆ ಕಂಡುಕೊಂಡ ಹೊಸ ಮಾರ್ಗದ ಬಗ್ಗೆ ಸುಧಾಕಿರಣ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು. ಇದರ ಜೊತೆಗೆ ಅವರ ಕುಟುಂಬದ ಸಾಹಿತ್ಯ ಪ್ರೇಮವನ್ನು ಮೆಚ್ಚಲೇಬೇಕು. ಸುಧಾಕಿರಣ್ ಅವರ ಮಡದಿ ಸುಮ ಸುಧಾಕಿರಣ್ ಅವರು ಸಸ್ಯ ಹಾಗೂ
ಪ್ರಾಣಿಗಳ ಜಗತ್ತಿನ ಬಗ್ಗೆ ಕುತೂಹಲವನ್ನು ಹೊಂದಿದ್ದು, ಮಲೆನಾಡಿನ ಮಳೆಗಾಲದ ಅತಿಥಿಗಳು ಎಂಬ ವೈಜ್ಞಾನಿಕ ಲೇಖನಗಳ ಸಂಕಲನವನ್ನು ಪ್ರಕಟಿಸಿದ್ದಾರೆ.

ಇವರು ಹವ್ಯಾಸಿ ಬರಹಗಾರ್ತಿಯೂ ಹೌದು. ಅವರ ಪುತ್ರಿ ಇಂಚರ ಎಸ್ ಅಧಿಕಶ್ರೇಣಿ ಅವರು ‘ದ ಬರ್ನಿಂಗ್ ಬ್ರೀಝ್’ ಎನ್ನುವ
ಹೊತ್ತಿಗೆಯನ್ನು ಹೊರ ತಂದಿದ್ದಾರೆ. ಇಂತಹ ಸಾಹಿತ್ಯದ ಅಭಿಮಾನ ಹೊಂದಿರುವ ಕುಟುಂಬಕ್ಕೆೆ ಅಭಿನಂದನೆಗಳು.