Monday, 25th November 2024

ಮೇಘಾಲಯದ ಗುಹಾಲಯ

ಮಂಜುನಾಥ್‌ ಡಿ.ಎಸ್‌

ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದಾದ ಚಿರಾಪುಂಜಿಯು ಗುಹೆಗಳಿಗೂ ಪ್ರಸಿದ್ಧ ಎಂದರೆ ನಿಮಗೆ ಅಚ್ಚರಿಯೆ? ಇಲ್ಲಿನ ಬೆಟ್ಟ ಮತ್ತು ಪರ್ವತ ಶ್ರೇಣಿಗಳಲ್ಲಿ ಹಲವು ಗುಹೆಗಳು ರಚನೆಗೊಂಡಿವೆ. ಸುಣ್ಣದ ಕಲ್ಲಿನ ನಿರಂತರ ಕೊರೆಯುವಿಕೆಯಿಂದ ಸೃಷ್ಟಿಗೊಂಡ ಈ ಗುಹೆಗಳ ಚಿತ್ತಾರವೇ ಆಕರ್ಷಕ. ಇಂತಹ ಗುಹೆಗಳಲ್ಲಿ ಕೆಲವು ಮಾತ್ರ ಪ್ರವಾಸಿಗರಿಗೆ ತೆರೆದಿವೆ. ಪ್ರವಾಸೋದ್ಯಮದ ದೃಷ್ಟಿಯಲ್ಲಿ ಮೇಘಾಲಯದ ಗುಹೆಗಳು ಅನಂತ ಸಾಧ್ಯತೆಗಳನ್ನು ತೆರೆದಿಡಬಲ್ಲವು.

ಈಶಾನ್ಯ ರಾಜ್ಯ ಮೇಘಾಲಯವನ್ನು ಅನನ್ಯ ಪ್ರವಾಸೀ ಕೇಂದ್ರವನ್ನಾಗಿಸುವಲ್ಲಿ ಇಲ್ಲಿನ ಪ್ರಕೃತಿದತ್ತ ಬೆಟ್ಟಗುಡ್ಡಗಳ, ಅರಣ್ಯಗಳ, ಕಣಿವೆಗಳ, ಸರೋವರಗಳ, ಮತ್ತು ಜಲಪಾತಗಳ ಪಾತ್ರ ಹಿರಿದೆಂಬುದು ಸರ್ವವೇದ್ಯ. ಇಷ್ಟೇ ಅಲ್ಲದೆ ಈ ಸುಂದರ ಪ್ರದೇಶ ಸಾವಿರಾರು ಗುಹೆಗಳಿಗೂ ಆಶ್ರಯತಾಣವಾಗಿರುವುದು ವಿಶೇಷ ಎನಿಸುತ್ತದೆ. ಮೇಘಾಲಯದ ಮೂರೂ ಪರ್ವತಶ್ರೇಣಿಗಳಲ್ಲಿ ಸಾಕಷ್ಟು ಉದ್ದವಾದ ಹಾಗು ಬೃಹದಾಕಾರದ ಗುಹೆಗಳು ಕಂಡು ಬರುತ್ತವೆ.

ನಮ್ಮ ದೇಶದಲ್ಲಿನ ಹತ್ತು ಅತಿ ದೊಡ್ಡ ಗುಹೆಗಳಲ್ಲಿ ಒಂಬತ್ತು ಗುಹೆಗಳು ಮೇಘಾಲಯದಲ್ಲಿವೆ ಎಂಬುದು ಗಮನಾರ್ಹ. ಇವುಗಳಲ್ಲಿ ಕೆಲವು ವಿಶ್ವದ ಅತಿ ವಿಶಿಷ್ಟ ಗುಹೆಗಳ ಪಟ್ಟಿಯಲ್ಲೂ ಸ್ಥಾನ ಪಡೆದಿವೆ. ಖಾಸಿ ಹಿಲ್ಸ್‌ ಪ್ರದೇಶದ ಚಿರಾಪುಂಜಿ ಬಸ್ ನಿಲ್ದಾಣದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಅರ್ವಾ ಲುಂಶಿನ್ನಾ ಗುಹೆ ಅಧಿಕ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸುಣ್ಣಕಲ್ಲಿನ ಈ ಕುಹರ ದಟ್ಟ ಅರಣ್ಯದಿಂದ ಸುತ್ತುವರಿದಿದೆ. ಪ್ರವೇಶ ಶುಲ್ಕ ನೀಡಿ, ಟಿಕೆಟ್ ಪಡೆದು, ಕಾನನದ ಹಾದಿಯಲ್ಲಿ ಸಾಗುತ್ತಿದ್ದಂತೆ ಸಿಕ್ಕಿದ ಮರದ ಸೇತುವೆ, ಬೆಟ್ಟದಿಂದ ಕಣಿವೆಗೆ ಧುಮುಕುತ್ತಿದ್ದ ಜಲ ಪಾತದ ಭೋರ್ಗರೆತ, ಹಾಗು ನಂತರ ಕಂಡ ಜಲಧಾರೆಯ ಅಂದ ಗಮನಸೆಳೆದವು. ಈ ಆಕರ್ಷಣೆಗಳಿಂದ ಬಿಡಿಸಿಕೊಂಡು ಗಮ್ಯದತ್ತ ಮುಂದುವರಿದಾಗ ಗುಹೆಯ ಪ್ರವೇಶ ದ್ವಾರ ಇದಿರಾಯಿತು.

ಗೋಡೆಗೆ ಅಳವಡಿರುವ ಫಲಕದಲ್ಲಿ ಈ ಗುಹೆಯ ವಿಶೇಷತೆಗಳ ಸಂಕ್ಷಿಪ್ತ ಪರಿಚಯವಿತ್ತು. ? ನಿಸರ್ಗ ನಿರ್ಮಿತ ಕಲಾಕೃತಿಗಳು
ನಿಸರ್ಗ ನಿರ್ಮಿತ ಸಣ್ಣ ಸುರಂಗಗಳ ಮೂಲಕ ನಿಧಾನವಾಗಿ ನಡೆಯುತ್ತಿದ್ದಂತೆ, ಸುಣ್ಣಮಿಶ್ರಿತ ನೀರು ಹೆಪ್ಪುಗಟ್ಟಿ ಮೈದಳೆ ದಿರುವ ಹನಿಗಲ್ಲುಗಳು ಗವಿಯ ಗೋಡೆ ಹಾಗು ಚಾವಣಿಗಳಲ್ಲಿ ಗೋಚರಿಸಿದವು. ಈ ನೈಸರ್ಗಿಕ ರಚನೆಗಳಾದ ತೂಗು ತೊಂಗಲು ಗಳು (ಸ್ಟ್ಯಾಲಕ್ಟೈಟ್ಸ್‌) ಮತ್ತು ನೆಲತೊಂಗಲುಗಳು (ಸ್ಟ್ಯಾಲಗ್ಮೈಟ್ಸ್‌) ಪ್ರಕೃತಿ ಮೂಡಿಸಿದ ಕಲಾಕೃತಿಗಳಂತೆ ಕಂಗೊಳಿಸುತ್ತಿದ್ದವು.

ಸ್ವಲ್ಪ ದೂರದಲ್ಲಿನ ಕಮನೀಯ ಕಮಾನಿನಾಕರದ ಸುರಂಗಲ್ಲಿ ಸಣ್ಣ ಹೊಳೆಯೊಂದು ಮಂದಗತಿಯಲ್ಲಿ ಹರಿಯುತ್ತಿತ್ತು. ಮುಂದೆ ಹೋದಂತೆ ಸುರಂಗ ಮಾರ್ಗ ಮೂಲೆಗಳು ಮತ್ತು ತಿರುವುಗಳಿಂದ ಕೂಡಿತ್ತು. ಕೆಲವೆಡೆ ಕತ್ತಲೆ ಕವಿದಿತ್ತು. ಈ ನಡುವೆ ಸಣ್ಣದೊಂದು ಹೊಂಡವೂ ಇತ್ತು. ಇನ್ನೂ ಮುಂದೆ ಸಾಗಬೇಕಾದರೆ, ಸಾಕಷ್ಟು ಕಷ್ಟ ಎನಿಸುವ ಕಿರಿದಾದ ಸಂದಿಯಲ್ಲಿ ತೆವಳಿಕೊಂಡು ಮುಂದಕ್ಕೆ ಹೋಗಬೇಕಾಗಿತ್ತು. ಮಾರ್ಗಸೂಚಿ ಫಲಕಗಳ ಕೊರತೆ ಹಾಗು ಪೂರ್ವ ಸಿದ್ಧತೆ ಇಲ್ಲದ್ದರಿಂದ ಈ ಸಾಹಸಕ್ಕೆ ಮುಂದಾಗಲಿಲ್ಲ. ಸುಣ್ಣಕಲ್ಲು ಮಿಶ್ರಿ ನೀರಿನಿಂದ ಸೃಷ್ಟಿಯಾದ ಬಿಳಿ ಬಣ್ಣದ ನೊರೆಯ ತೊರೆಯೂ ಈ ಗುಹೆಯಲ್ಲಿ ಇದೆಯಂತೆ.

ಗತಕಾಲದ ಜೀವಿಗಳು ಪಳೆಯುಳಿಕೆಗಳ ರೂಪದಲ್ಲಿ ಗುಹೆಯ ಗೋಡೆಗಳ ಮೇಲೆ ಅಮರವಾಗಿರುವುದು ಇಲ್ಲಿನ ವಿಶೇಷತೆ. ಇಲ್ಲಿ ಕಂಡುಬರುವ ಅವ ಶೇಷಗಳಲ್ಲಿ ಬಹುತೇಕವು ಮೀನಿನ ಎಲುಬುಗಳು ಹಾಗು ಆಮೆ ಸಂಕುಲಕ್ಕೆ ಸೇರಿದ ಪ್ರಾಣಿಗಳ ಚಿಪ್ಪುಗಳು. ಕೆಲವು ಪ್ರಾಣಿಗಳ ತಲೆಬುರುಡೆಗಳ ಅವಶೇಷಗಳೂ ಇಲ್ಲಿವೆಯಂತೆ. ಈ ಪಳೆಯುಳಿಕೆಗಳು ಹಾಗು ನೈಸರ್ಗಿಕ ರಚನೆಗಳು ಅನೇಕ ದಶಲಕ್ಷ ವರ್ಷ ಗಳಷ್ಟು ಹಿಂದಿನದು ಎಂದು ತಜ್ಞರು ಗುರುತಿಸಿದ್ದಾರೆ.

ಮೇಘಾಲಯ ಅಡ್ವೆಂಚರ‍್ಸ್‌ ಅಸೋಸಿಯೇಷನ್ ಪ್ರತಿ ವರ್ಷ ಇಲ್ಲಿನ ಗವಿಗಳ ಅಧ್ಯಯನ ಯಾತ್ರೆ ಆಯೋಜಿಸುತ್ತದೆ. ಪ್ರಕೃತಿ
ಚರಿತ್ರೆ (ನ್ಯಾಚುರಲ್ ಹಿಸ್ಟರಿ) ಅರಿಯುವ ಹಂಬಲವುಳ್ಳವರ ಮತ್ತು ಸಾಹಸಪ್ರಿಯ ಪ್ರವಾಸಿಗರ ಅನುಕೂಲಕ್ಕಾಗಿ ಹೆರಿಟೇಜ್ ವಾಕ್ ಆಯೋಜಿಸುವ ಅನೇಕ ಸಂಸ್ಥೆಗಳೂ ಇವೆ. ಈ ದೊಡ್ಡ ಗುಹೆಯ ಸ್ವಲ್ಪ ಭಾಗ ಮಾತ್ರ ಈಗ ಪ್ರವಾಸಿಗರ ವೀಕ್ಷಣೆಗೆ ಲಭ್ಯವಿದೆ. ಭೇಟಿಯ ಸಮಯ ಬೆಳಗಿನ ಒಂಬತ್ತೂವರೆಯಿಂದ ಸಂಜೆ ಐದರವರೆಗೆ. ತಾರಸಿಯಿಂದ ಜಿನುಗುವ ನೀರ ಹನಿಗಳು, ತೊರೆಯ ನೀರು, ಸುಗಮವಲ್ಲದ ಸುರಂಗ ಮಾರ್ಗ, ಅಲ್ಲಲ್ಲಿ ಅಂಧಕಾರ, ಈ ಎಲ್ಲ ಸವಾಲುಗಳನ್ನು ಗಮನದಲ್ಲಿರಿಕೊಂಡು ಪೂರ್ವಸಿದ್ಧತೆಯೊಡನೆ ಆಗಮಿಸಿ ಮಾರ್ಗದರ್ಶಕರ ಜೊತೆಯಲ್ಲಿ ಗುಹೆಯನ್ನು ಸಂದರ್ಶಿದರೆ ಭೇಟಿ ಫಲಪ್ರದವಾಗುತ್ತದೆ.

ಇದು ಗುಹೆಗಳ ರಾಜ್ಯ
ಮೇಘಾಲಯದ ಖಾಸಿ ಪರ್ವತ ಶ್ರೇಣಿಯಲ್ಲಿ 1500ಕ್ಕಿಂತ ಹೆಚ್ಚಿನ ಗುಹೆಗಳು ರೂಪುಗೊಂಡಿರುವುದು ಈ ಪ್ರಕೃತಿಯ ಅಚ್ಚರಿ.
ಇಲ್ಲಿನ ಅತಿ ಉದ್ದನೆಯ ಗುಹೆಯಾಗಿರುವ ಕ್ರೆಮ್ ಲಿಯಾತ್ ಪ್ರಾಹ್ ಗುಹೆಯ ಉದ್ದ ಸುಮಾರು 34 ಕಿಮೀ! ಇದು ಜಗತ್ತಿನ ಅತಿ
ಉದ್ದನೆಯ ಗುಹೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ಪ್ರವಾಸಿಗರ ನೆಚ್ಚಿನ ತಾಣ ಎನಿಸಿದೆ. ಈ ಗುಹೆಯಲ್ಲಿ ಹರಿಯುವ ತೊರೆಗಳಲ್ಲಿ ಬೋಟಿಂಗ್ ಸಹ ಮಾಡುವ ಅವಕಾಶ ಇದೆ! ಮೇಘಾಲಯದ ಕೆಲವೇ ಕೆಲವು ಗುಹೆಗಳ ಪರಿಶೋಧನೆ ನಡೆದಿದ್ದು, ಪ್ರವಾಸಿಗರಿಗೆ ತೆರೆದಿವೆ.

ಅಪಾಯದಲ್ಲಿ ಗುಹೆಗಳು
ಮೇಘಾಲಯದ ಹೆಚ್ಚಿನ ಗುಹೆಗಳು ರೂಪುಗೊಳ್ಳುವುದಕ್ಕೆ ಅಲ್ಲಿನ ಸುಣ್ಣದ ಕಲ್ಲಿನ ರಚನೆ ಕಾರಣ. ಸಿಮೆಂಟ್ ತಯಾರಿಸಲು
ಸುಣ್ಣದ ಕಲ್ಲು ಅಗತ್ಯ. ಸಿಮೆಂಟ್‌ಗಾಗಿ ಸುಣ್ಣದ ಕಲ್ಲನ್ನು ಗಣಿಗಾರಿಕೆ ಮಾಡುವ ಉದ್ಯಮವು ಮೇಘಾಲಯದಲ್ಲಿ ಸಕ್ರಿಯ
ವಾಗಿದೆ. ಆ ರಾಜ್ಯದ ಹೆಮ್ಮೆ ಎನಿಸಿರುವ ಗುಹೆಗಳಿಗೆ, ಈ ಗಣಿಗಾರಿಕೆ ಅಪಾಯ ತಂದೊಡ್ಡುತ್ತಿವೆ. ಮೇಘಾಲಯದ ಏಳನೆಯ
ಅತಿ ಉದ್ದನೆಯ ಗುಹೆಯ ಭಾಗವು ಕುಸಿಯಲು ಅಲ್ಲಿ ನಡೆಸಿದ ಗಣಿಗಾರಿಕೆಯೇ ಕಾರಣ! ಗುಹೆಗಳಿಗೆ ಅಪಾಯವಾಗದಂತೆ
ಸುಣ್ಣದಕಲ್ಲು ಗಣಿಗಾರಿಕೆ ನಡೆಸಬೇಕೆಂದು ಅಲ್ಲಿನ ಸ್ಥಳೀಯರು ಮತ್ತು ಪರಿಸರತಜ್ಞರು ಸರಕಾರವನ್ನು ಒತ್ತಾಯಿಸಿದ್ದಾರೆ.