Wednesday, 27th November 2024

ಮನಕಿರಲಿ ಮಿತಿಯ ಮತಿ

ಈ ಜೀವನ ರಥ ನಡೆಸುವಾಗ ಎದುರಾಗುವ ಸವಾಲುಗಳು, ಸನ್ನಿವೇಶಗಳು, ತೊಡಕುಗಳು ಒಮ್ಮೊಮ್ಮೆ ಖಿನ್ನತೆ ಯನ್ನೂಮೂಡಿಸುತ್ತವೆ. ಸಾಧ್ಯತೆಗಳ ಮಿತಿಯ ಅರಿವು ನಮ್ಮ ಮನಕ್ಕಿದ್ದರೆ, ಅಂತಹ ತೊಡಕಿನ ಸನ್ನಿವೇಶದಿಂದ ಹೊರಬಂದು, ಹೊಸ ದಾರಿಯನ್ನು ಹುಡುಕಲು ಸಾಧ್ಯ.

ಮಹಾದೇವ ಬಸರಕೋಡ

ಬದುಕಿನಲ್ಲಿ ಎಲ್ಲ ಸಮಯ, ಸಂದರ್ಭಗಳು ನಮ್ಮ ನಿರೀಕ್ಷೆಗಳಂತೆ ಇರುವುದಿಲ್ಲ. ನಮ್ಮ ಮನಸ್ಸು ಯಾವಾಗಲೂ ಸಂತೋಷ, ನೆಮ್ಮದಿ ಮತ್ತು ಸುರಕ್ಷತೆಯ ಕ್ಷಣಗಳನ್ನು ಮಾತ್ರ ಎದರುಗೊಳ್ಳಲು ಬಯಸುತ್ತದೆ. ಇಷ್ಟಪಡದ, ನೋವು ನೀಡುವ ಸಮಯ,
ಸನ್ನಿವೇಶ ಎದುರಿಸುವುದು ಅನಿವಾರ‍್ಯ ಎಂಬ ವಾಸ್ತವ ಸಂಗತಿಯನ್ನು ಮರೆಮಾಚುವ ಪ್ರಯತ್ನದಲ್ಲಿಯೇ ಅದು ತಲ್ಲೀನವಾಗಿ ಬಿಡುತ್ತದೆ.

ಆತಂಕ, ನೋವು, ದುಃಖ ಮತ್ತು ಅಸುರಕ್ಷತೆಯ ದಿನಗಳು ಬಾರದಿರಲಿ ಎಂದು ಬಯಸುತ್ತಲೆ ಸಾಗುತ್ತದೆ. ನಾವು ಇಷ್ಟಪಡದ, ನಿರೀಕ್ಷಿಸದ ಸಮಯ ಸನ್ನಿವೇಶಗಳು ಕೂಡಾ ಬದುಕಿನ ಅವಿಭಾಜ್ಯತೆ ಅಂಗ ಎಂಬ ಸತ್ಯವನ್ನು ಅರಿಯುವುದು, ಅಂತಹ ಅನಿವಾರ‍್ಯತೆಯನ್ನು ನೈಜತೆಯಲಿ ಒಪ್ಪಿಕೊಳ್ಳುವುದು ಮಾತ್ರವಲ್ಲದೆ ಅದನ್ನು ಅಪ್ಪಿಕೊಳ್ಳಬೇಕಿರುವುದು ನಮ್ಮೆಲ್ಲರ ಪಾಲಿನ
ಜವಾಬ್ದಾರಿಯಾಗಿದೆ. ಇಂತಹ ನೈಜ ಸ್ಥಿತಿಯನ್ನು ಅರಿತು ಸ್ವೀಕರಿಸಿದರೆ, ಅಪ್ಪಿಕೊಂಡರೆ ಮನದಲ್ಲಿ ಹತಾಶೆ, ನಿರಾಸೆ ದುಃಖದ ತೀವೃತೆಯ ಭಾವವನ್ನು ಶಮನಗೊಳಿಸಲು ಸಾಧ್ಯ.

ಕಿಸಾಗೌತಮಿ ಎಂಬ ಮಹಿಳೆಯೊಬ್ಬಳು ತನ್ನ ಸತ್ತ ಮಗುವನ್ನು ಎದೆಗೆ ಅಪ್ಪಿಕೊಂಡು ರೋಧಿಸುತ್ತ ಬುದ್ಧನ ಬಳಿ ಬಂದು ಅತ್ಯಂತ ದೈನ್ಯತೆಯಿಂದ ಬುದ್ಧನ ಬಳಿ ತನ್ನ ಜೀವನಕ್ಕೆ ಆಧಾರವಾಗಿರುವ, ವಂಶೋದ್ಧಾರಕ, ಕರುಳಕುಡಿಯನ್ನು ಬದುಕಿಸಿ ಕೊಡುವಂತೆ ಪರಿಪರಿಯಾಗಿ ಬೇಡಿಕೊಂಡಳು. ‘ಅದು ಅಸಾಧ್ಯ, ಮರಣವನ್ನು ಎಲ್ಲರೂ ಒಪ್ಪಿಕೊಳ್ಳಲೆಬೇಕು’ ಎಂದು ಬುದ್ಧನ
ಶಿಷ್ಯರೆಲ್ಲ ಹೇಳಿದರೂ ಅವಳು ಮತ್ತೆ ಮತ್ತೆ ತನ್ನ ಮಗನನ್ನು ಬದುಕಿಸಿಕೊಡುವಂತೆ ಬುದ್ಧನಿಗೆ ಬೇಡಿಕೊಳ್ಳತೊಡಗಿದಳು.

ಬುದ್ಧ ಅತ್ಯಂತ ಸಮಾಧಾನದಿಂದ, ನಗುಮೊಗದಿಂದ ಶಾಂತಚಿತ್ತನಾಗಿ ಅವಳನೊಮ್ಮೆ ನೋಡಿ, ‘ಸರಿ ತಾಯಿ, ನಾನು ನಿನ್ನ ಮಗನನ್ನು ಬದುಕಿಸಿಕೊಡಬಲ್ಲೆ, ಆದರೆ ನೀನು ನಾನು ಹೇಳಿದ ಸಣ್ಣ ಕೆಲಸವನ್ನು ಮಾಡಬೇಕು’ ಎಂದ. ಅವಳು ಅತ್ಯಂತ
ಸಂತಸದಿಂದ ‘ಸರಿ, ಅದೇನು ಹೇಳಿ, ನಾನು ನೀವು ನನ್ನ ಮಗನನ್ನು ಬದುಕಿಸಿ ಕೊಡುವುದಾದರೆ ನಾನು ಯಾವ ಕೆಲಸವನ್ನಾದರೂ ಮಾಡಬಲ್ಲೆ’ ಎಂದಳು.

ಆಗ ಬುದ್ಧ ‘ಸಾವಿಲ್ಲದ ಮನೆಯಿಂದ ಸ್ವಲ್ಪ ಸಾಸಿವೆ ಕಾಳು ತಂದು ಕೊಡು. ನಾನು ನಿನ್ನ ಮಗನನ್ನು ಬದುಕಿಸಿಕೊಡುತ್ತೇನೆ’ ಎಂದ. ಆಕೆ ಅತ್ಯಂತ ಉತ್ಸಾಹದಿಂದ ಹೊರಟಳು. ಆತುರತೆಯಿಂದ ಮನೆ ಮನೆಯ ಬಾಗಿಲು ತಟ್ಟಿ ‘ಸಾಸಿವೆಯು ಬೇಕು ನನಗೆ ಸಾಸಿವೆಯು ಬೇಕು. ಸಾವಿಲ್ಲದ ಮನೆಯ ಸಾಸಿವೆಯು ಬೇಕು’ ಎಂದು ಅಂಗಲಾಚಿ ಬೇಡಿದಳು. ಸಾಸಿವೆಯನ್ನು ಕೊಡಲು
ಎಲ್ಲರೂ ಸಿದ್ಧ; ಆದರೆ ಸಾವಿಲ್ಲದ ಮನೆ ಯಾವುದು? ಎಲ್ಲರ ಮನೆಯಲ್ಲೂ ಒಂದಲ್ಲ ಒಂದು ಕಾಲಘಟ್ಟದಲ್ಲಿ ಸಾವು ನಡೆದಿತ್ತು. ಮನೆ ಮನೆ, ಕೇರಿ ಕೇರಿ ಊರು ಊರು ಅಲೆದು ಸಾವಿಲ್ಲದ ಮನೆಯಲ್ಲಿ ಸಾಸಿವೆ ಬೇಡುವಾಗ ‘ಸಾವಿಲ್ಲದ ಮನೆಯೇ ಇಲ್ಲ’ ಎಂಬ ಸತ್ಯ ಅವಳಿಗೆ ಅರಿವಾಗಿತ್ತು.

ಹುಟ್ಟಿದ ಮೇಲೆ ಸಾವು ಎಲ್ಲರಿಗೂ ಅನಿವಾ‍ರ‍್ಯ. ಅದಕ್ಕಾಗಿ ಪರಿತಪಿಸುವುದರಲ್ಲಿ ಯಾವುದೇ ಅರ್ಥವಿಲ್ಲ, ಎಲ್ಲರ ಬದುಕಿನ
ಅನಿವಾ‍ರ‍್ಯತೆಯನ್ನು ನೈಜತೆಯನ್ನು ಅವಳು ಒಪ್ಪಿಕೊಂಡಿದ್ದಳು. ಅವಳಿಗೆ ಸತ್ಯದ ದರ್ಶನವಾಗಿತ್ತು. ಅನಿವಾ‍ರ‍್ಯತೆಯನ್ನು ಒಪ್ಪಿಕೊಳ್ಳುವುದು ಮತ್ತು ಅದನ್ನು ಸಹಿಸಿಕೊಳ್ಳುವುದು ಮಾತ್ರ ನಮಗೆ ಇರುವ ಏಕೈಕ ರಹದಾರಿ. ಅದು ಮಾತ್ರ ಹತಾಶೆ,
ನೋವುಗಳ ತೀವ್ರತೆಯನ್ನು ಶಮನಗೊಳ್ಳಿಸಬಲ್ಲದು. ಮನದಲ್ಲಿ ಶಾಂತಿ ನೆಲೆಸಬಲ್ಲ ಮಾರ್ಗ ತೋರಿಸಬಲ್ಲದು. ಆ ಕ್ಷಣದ ಅಪಾಯದಿಂದ ಪಾರುಮಾಡಬಲ್ಲ ಉಪಾಯವಾಗಬಲ್ಲದು.

ಸುಂದರ ಬದುಕಿಗೆ ಮುನ್ನುಡಿಯನ್ನು ಕೂಡ ಬರೆಯಬಲ್ಲದು. ನೈಷ್ಕರ್ಮೋಪನಿಷತ್‌ನಲ್ಲಿ ಹೇಳಿರುವಂತೆ, ಯಾವುದನ್ನು ಒಪ್ಪಿಕೊಳ್ಳಲಾರೆವೋ ಅದಕೆ ನಾವು ಬಂಧಿಯಾಗುತ್ತೇವೆ. ಯಾವುದನ್ನು ಒಪ್ಪಿಕೊಳ್ಳುತ್ತೇವೆಯೋ ಅದರಿಂದ ಬಿಡುಗಡೆ ಯಾಗುತ್ತೇವೆ. ಅನಿವಾರ‍್ಯತೆಯನ್ನು ಒಪ್ಪಿಕೊಳ್ಳುವುದು ನಮ್ಮ ಬದುಕಿನ ವಿವೇಚನೆಯ ಮತ್ತು ಅತ್ಯಂತ ಜಾಣತನದ ಸಿದ್ಧಾಂತ ವಾಗಬಲ್ಲದು.

ಅದು ಪ್ರತಿಯೊಂದು ಸನ್ನಿವೇಶವನ್ನೂ ನಿಭಾಯಿಸಬಲ್ಲ ಎಲ್ಲ ಸಾಧ್ಯತೆ ಹಾಗೂ ಧೈರ್ಯವನ್ನು ತಂದು ಕೊಡಬಲ್ಲದು. ಇದು ಮಾತ್ರ ಪೂರ್ವಗ್ರಹ ಪಾರುವಶ್ಯದಿಂದ ನಮ್ಮನ್ನು ಪಾರುಮಾಡಬಲ್ಲ ದಿವ್ಯ ಮಂತ್ರವಾಗಬಲ್ಲದು. ಬದುಕನ್ನು ಜಡತ್ವದಿಂದ ಹೊರತಂದು, ಚಲನಶೀಲಗೊಳಿಸಬಲ್ಲದು. ಹೊಸತನದ ಭಾವ ಚಿಮ್ಮಿಸಬಲ್ಲದು. ಬದುಕನ್ನು ಇನ್ನಷ್ಟು ಸಮೃದ್ಧಗೊಳಿಸ ಬಲ್ಲದು.