Wednesday, 27th November 2024

ಕನ್ನಡಿ ಗಂಟಾದ ನಿನ್ನ ಪ್ರೀತಿ

ಲಕ್ಷ್ಮೀಕಾಂತ್ ಎಲ್. ವಿ.

ಪ್ರೀತಿಯ ಕನವರಿಕೆ ಇನ್ನೂ ಮುಗಿದಿಲ್ಲ ಅನ್ನೋದಕ್ಕೆ ಇದೇ ಉದಾಹರಣೆ ಗೆಳತಿ. ಪ್ರೇಮದ ಅಮಲಲ್ಲಿ ಆದ ನೋವಿನ ಗಾಯ
ಇನ್ನೂ ಮಾಗಿಲ್ಲ ಕಣೆ. ಹಳೆಯದಾಗಿದೆ ಅಷ್ಟೆ. ಆದರೆ ಕೆರೆತ ಮಾತ್ರ ಹೊಸದು. ಸುತ್ತಮುತ್ತ ಎಷ್ಟೇ ಜನರಿದ್ದರೂ ಸಹ ತೀರಾ ಒಂಟಿತನ ಕಾಡಿಬಿಡುತ್ತದೆ.

ಒಮ್ಮೆ ಮನಸ್ಸಿನ ಪುಟವನ್ನು ತಿರುವಿ ಹಾಕಿದರೆ ಸಾಕು, ಧುತ್ತೆಂದು ಜಾರಿಬೀಳುತ್ತವೆ ನಿನ್ನೊಲವಿನ ಸವಿನೆನಪುಗಳು. ಅದೇಕೋ ಏನೋ ನೆನಪಿನ ಕಪಾಟಿನ ಕೀಲಿಕೈ ಸಿಗದಂತೆ ದೂರ ಎಸೆದರೂ ಮತ್ತೆ ಮತ್ತೆ ಸಿಗುತ್ತಿದೆ. ಏನು ಮಾಡಬೇಕೆಂದು ತೋಚದೆ ಸುಮ್ಮನಾಗಿ ದ್ದರೂ ನಿನ್ನ ನಗುವಿನ ಸದ್ದು ಕಿವಿಗಪ್ಪಳಿಸಿ ಮತ್ತೆ ನನ್ನನ್ನು ಎಚ್ಚರಗೊಳಿಸುತ್ತದೆ.

ನಿನ್ನೊಂದಿಗೆ ಕಳೆದ ಆ ಮಧುರ ಕ್ಷಣಗಳು ಅದೆಷ್ಟೇ ಮರೆಯಬೇಕೆಂದರೂ ಕೂಡ ಮರೆ ಯುವ ಪ್ರಯತ್ನಕ್ಕೆ ಸವಾಲೆಸೆದು, ಮತ್ತೆ ಮತ್ತೆ ಪುಟಿದು ಬೆನ್ನಿಗೆ ಬೀಳುತ್ತವೆ. ಇಂತಹ ಸಂದರ್ಭದಲ್ಲಿ ನಿನ್ನ ನೆನಪಿನ ಜತೆಯಲ್ಲೇ ಮಾತನಾಡುವ ಬಯಕೆ ಮೂಡುತ್ತದೆ. ಬಾರದ ಪದಗಳೆಲ್ಲ ಕವಿತೆಗಳಾಗಿ ಹುಟ್ಟುವುದಲ್ಲದೆ ಹಾಗೆಯೇ ಗುನುಗಲು ಶುರುವಾಗುತ್ತವೆ. ಬಹುಶಃ ಮಧುರ ನೆನಪೆಂದರೆ ಹೀಗೇನಾ? ಜೀವನದ ಕವಲುದಾರಿಯಲ್ಲಿ ಕಂಗಾಲಾಗಿ ಅಲೆಯುತ್ತಾ ದಿಕ್ಕೆಟ್ಟು ದಾರಿಕಾಣದೆ ನಿಂತಿದ್ದವನ ಬದುಕಲ್ಲಿ ಅನಿರೀಕ್ಷಿ ತವಾಗಿ ಸಿಕ್ಕವಳು ನೀನು. ನೋಡಿದ ಕೂಡಲೆ ಎದೆಯಲ್ಲಿ ಯಾವುದೋ ಬೆಳಕಿನ ಕಿರಣದ ಸ್ವಿಚ್ ಮೂಡಿ ದಂತಾಗಿತ್ತು. ಕೊನೆಗೂ ಕರೆಂಟ್ ಬರಲಿಲ್ಲ ಅನ್ನೋದು ಬೇರೆ ವಿಚಾರ. ಆದರೆ ಮೊದಲ ನೋಟದಲ್ಲೇ ಪ್ರೀತಿ ಮೂಡಿದ್ದಂತೂ ಸುಳ್ಳಲ್ಲ.

ಕನಸಲ್ಲೂ ನಿದ್ದೆ ಕದಿಯುವ ಹುಡುಗಿ ನೀನು. ನಿನಗಾಗಿ ಬೊಗಸೆ ಕೈಗಳಲ್ಲಿ ತುಂಬಿ ಪ್ರೀತಿಯ ಮನಸ್ಸು ಕೊಟ್ಟಿದ್ದೆ. ಆದರೆ ನೀನು ಕೊಟ್ಟಿದ್ದು ಮಾತ್ರ ವಿರಹದ ನೆನಪಿನ ನೋವು ಮಾತ್ರ. ಅದ್ಭುತ ಎಕ್ಸಚೇಂಜ್ ಆಫರ್ ಅಲ್ವಾ!

ನಿನ್ನ ನೋಡುವ ಕಾತುರ, ಮಾತನಾಡಿಸುವ ತುಡಿತ ಎಲ್ಲವೂ ಇದೀಗ ರಿಪೇರಿ ಮಾಡಲಾಗದೆ ನೆನಪಿನ ಗ್ಯಾರೇಜ್ ಸೇರಿಬಿಟ್ಟಿವೆ. ಬಹುಶಃ ಅಂದು ನೀನು ಕಾರಣ ಹೇಳಿ ಹೋಗಿದ್ದರೆ ಬೇಜಾರು ಆಗ್ತಿರಲಿಲ್ವೇನೋ! ಆದರೆ ಒಂದೇ ಒಂದು ಮಾತು ಹೇಳದೆ ಹೋದೆ ಯಲ್ಲ ಅದು ಬಹಳಷ್ಟು ಬೇಜಾರು ಮಾಡಿದೆ. ನೆನಪಿದೆಯಾ ನಿನಗೆ ಅಂದು ಹೇಳಿದ ಮಾತು? ಸಾವಿರ ಸಲ ಹೇಳಿದ ಮಾತು!

ಸೆರೆಯಾದೆ ಯಾಕೋ ನನಗೇನು ತೋಚದೆ ಈ ಪ್ರೀತಿ ನೀಡುವೆ ನಿನ್ನ ಒಂದು ಮಾತಿಗೆ ಕಳೆದುಕೊಂಡ ಮನಸನಿಂದು ಹುಡುಕಿ ಅಲೆದೆ ನನ್ನೆದೆಯಲಿ ಬರೆದ ನಿನ್ಹೆಸರ ಸವಿಪ್ರೀತಿಗೆ ಒಮ್ಮೆಯಾದರೂ ನೀನು ಒಪ್ಪಿ ಅಪ್ಪಿದ ಪ್ರೀತಿಗೆ ಉತ್ತರಿಸುವೆಯೆಂದು ಕಾಯುತ್ತಾ ಇರುತ್ತಿದ್ದೆ. ಬ್ರಹ್ಮ ಬರೆದ ಹಣೆಬರಹದಲ್ಲಿ ನೀನೇ ನನಗೆಂದು ಬದಲಿಸುವ ಆಸೆಯನ್ನು ಅದೆಷ್ಟೋ ಬಾರಿ ನಿನ್ನೊಂದಿಗೆ ಹಂಚಿಕೊಂಡಿದ್ದೆ. ಆದರೆ ನೀನು ಮಾತ್ರ ನಿನ್ನೆದೆಯಲಿ ನನ್ನ ಹೆಸರನ್ನು ಬರೆಯದೆ, ನನ್ನುಸಿರಿಗೆ ಮರೀಚಿಕೆ
ಯಾಗಿಬಿಟ್ಟೆ.

ಕತ್ತಲಲ್ಲಿ ಹುಣ್ಣಿಮೆ ಚಂದಿರನಿಗಾಗಿ ಅಮಾವಾಸ್ಯೆಯಂದೂ ಕಾಯುವ ಸ್ಥಿತಿ ಬರುತ್ತದೆಯೆಂದು ಊಹಿಸಿಯೂ ಇರಲಿಲ್ಲ.
ಇವತ್ತಿಗೂ ಪುಸ್ತಕದ ಕೊನೆ ಪುಟದಲ್ಲಿ ಗೀಚಿದ ನಿನ್ನ ಹೆಸರು ಹಾಗೆಯೇ ಉಳಿದಿದೆ. ಅಕ್ಷರಗಳೆಲ್ಲವೂ ನೆನಪಿನ ಕದ ತೆರೆಯುವ ಕೀಲಿಗಳಾಗಿ ಬಿಟ್ಟಿವೆ.

ಒಮ್ಮೆ ಹೇಳಿಬಿಡು ಗೆಳತಿ, ನನಗೂ ನಿನಗೂ ನಂಟೇನು? ನನ್ನ ಬದುಕಿಗೊಲಿಯದ ಕನ್ನಡಿ ಒಳಗಿನ ಗಂಟಾದ ನಿನ್ನ ಆಗಮನಕೆ ನೆನಪಿನ ದೀವಳಿಗೆ ಹಿಡಿದು ಇಂದಿಗೂ ಕಾಯುತ್ತಿರುವೆ; ನೆನಪಿನ ಕೋಣೆಯ ಬಾಗಿಲು ತೆಗೆದು ಒಮ್ಮೆ ಹೆಜ್ಜೆಯಿಟ್ಟು ಬಿಡು. ಸೋತ ಮನಸ್ಸಿನ ಅಂಗಳದಲ್ಲಿ ಮತ್ತೊಮ್ಮೆ ಪ್ರೀತಿಯ ಮಲ್ಲಿಗೆ ಚಿಗುರಿಬಿಡಲಿ. ಬರುತ್ತೀಯಾ ತಾನೆ?