Thursday, 12th December 2024

ಒಂದೇ ವೇದಿಕೆಯಲ್ಲಿ ತಾಯಿ ಮಗಳ ವಿವಾಹ

ಮಗಳು ಮದುವೆಯಾದ ದಿನವೇ ತಾಯಿಯೂ ಮದುವೆಯಾದರೆ ಹೇಗಿರುತ್ತದೆ! ಇಂತಹದೊಂದು ಅಪರೂಪದ ವಿವಾಹ ಮಹೋತ್ಸವವು ಕಳೆದ ವಾರ ಉತ್ತರ ಪ್ರದೇಶದಲ್ಲಿ ನಡೆದು ಹೊಸ ದಾಖಲೆ ನಿರ್ಮಾಣವಾಯಿತು.

ಸುರೇಶ ಗುದಗನವರ

ಮದುವೆ ಎಂಬುದು ಜೀವನದಲ್ಲಿ ಸ್ಮರಣೀಯ ವಿದ್ಯಮಾನ. ಎಷ್ಟೋ ಮಂದಿಗೆ ಮದುವೆಯ ನಂತರ, ತಮ್ಮ ಬದುಕೇ ಬದಲಾಗಿ ಬಿಡುತ್ತದೆ. ಅದ್ಯಾವುದೋ ಊರಿನಲ್ಲಿ, ವಿಭಿನ್ನ ಹಿನ್ನೆಲೆಯಲ್ಲಿ ಬೆಳೆದ ಯುವತಿಯು, ಸಂಪೂರ್ಣ ಹೊಸ ಪದ್ಧತಿಯನ್ನು ಹೊಂದಿರುವ ಕುಟುಂಬದ ಸದಸ್ಯಳಾಗಿ ರೂಪಾಂತರ ಹೊಂದಬೇಕಾಗುತ್ತದೆ. ಅಪರಿಚಿತರಾಗಿದ್ದವರು ವಿವಾಹ ಮಾಡಿಕೊಂಡು, ಸತಿ ಪತಿಯರಾಗಿ ಜೀವನ ನಡೆಸಿಕೊಂಡು ಹೋಗಬೇಕಾದ ಅನಿವಾರ್ಯತೆಯೂ ಅಲ್ಲಲ್ಲಿ ಕಂಡು ಬರುತ್ತದೆ.

ಮದುವೆ ಎಂಬುದು ವಿಧಿ ಲಿಖಿತ ಎಂಬ ಮಾತು ಇಂತಹ ವಿದ್ಯಮಾನವನ್ನು ಕಂಡೇ ರೂಪುಗೊಂಡಿರಬೇಕು! ತಂದೆ ತಾಯಿಯರು ತಮ್ಮ ಮಕ್ಕಳಿಗೆ ಮದುವೆ ಮಾಡಿಸುವುದು ನಮ್ಮ ದೇಶದಲ್ಲಿ ಸಾಮಾನ್ಯವಾದ ಸಂಪ್ರದಾಯ. ಮಗಳ ಮದುವೆ ಎಂದರೆ, ಅವಳ
ಹೆತ್ತವರು ಅದೆಷ್ಟು ತಯಾರಿ ನಡೆಸಬೇಕು! ಅದೆಷ್ಟು ತಲ್ಲಣ ಅನುಭವಿಸಬೇಕು! ಕೊನೆಗೂ ಮದುವೆಯು ಸುಸೂತ್ರವಾಗಿ ನಡೆದು, ಹುಡುಗಿ ಮತ್ತು ಹುಡುಗ ಇಬ್ಬರೂ ಸಂತೃಪ್ತ ಸತಿಪತಿಯರಾಗಿ ಹೊರಹೊಮ್ಮಿದಾಗಿ, ಆ ಮದುವೆ ಸಾರ್ಥಕ. ಆ ಕ್ಷಣವೇ ತಂದೆ ತಾಯಿಯರಲ್ಲಿ ಸಂತಸದ ನಗುವನ್ನು ಮೂಡಿಸುವ ಕ್ಷಣ.

ಮದುವೆ ಎಂಬುದೇ ಒಂದು ವಿಶಿಷ್ಟ ಲೋಕ. ಆ ಲೋಕದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ನಿದರ್ಶನ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಮದುವೆಯ ಸಮಾರಂಭ. ಒಂದೇ ದಿನ, ಒಂದೇ ವೇದಿಕೆಯಲ್ಲಿ ತಾಯಿ ಮತ್ತು ಮಗಳು ಇಬ್ಬರೂ, ತಮಗೆ ಅನುರೂಪ ಎನಿಸಿದವರನ್ನು ಮದುವೆಯಾಗಿ ಒಂದು ದಾಖಲೆ ನಿರ್ಮಿಸಿದರು! ಒಂದೇ ದಿನ ತಾಯಿ ಮತ್ತು ಮಗಳು ಇವರಿಬ್ಬರಿಗೆ ಮದುವೆಯಾದ ಸನ್ನಿವೇಶ ಬಹಳ ಅಪರೂಪ, ಅನನ್ಯ, ತುಸು ವಿಚಿತ್ರವೂ ಹೌದು! ಸಾಮಾನ್ಯವಾಗಿ ಯಾರೂ ತಮ್ಮ ಜೀವನದಲ್ಲಿ ಮರುಮದುವೆ ಆಗಬೇಕೆಂದು ತೀರ್ಮಾನಿಸಿರುವುದಿಲ್ಲ.

ಆದರೆ ಕೆಲವರಿಗೆ ಪರಿಸ್ಥಿತಿಗಳ ಒತ್ತಡಗಳಿಂದ ಮರುಮದುವೆಯಾಗಲೇ ಬೇಕಾದ ಸ್ಥಿತಿ ಉದ್ಭವಿಸುತ್ತದೆ. ಹಾಗೆಯೇ ಮರು ಮದುವೆಗಳ ಅವಶ್ಯಕತೆ ಬರುವುದು ಮಹಿಳೆಗೆ ವೈಧವ್ಯ ಹಾಗೂ ಪುರುಷನಿಗೆ ವಿಧುರತ್ವ ಪ್ರಾಪ್ತವಾದಾಗ, ವಿಚ್ಛೇದನ ನಡೆದಾಗ. ಆದರೆ ವಿಚಿತ್ರ ಬೆಳವಣಿಗೆಯೊಂದರಲ್ಲಿ ತಾಯಿ ಮತ್ತು ಮಗಳು ಒಂದೇ ವೇದಿಕೆಯಲ್ಲಿ ಒಂದೇ ಸಮಯದಲ್ಲಿ ದಾಂಪತ್ಯ
ಜೀವನಕ್ಕೆೆ ಕಾಲಿಟ್ಟಿದ್ದಾರೆ.

ಹೌದು ! ಇದು ಸತ್ಯವೂ ಕೂಡ. ಉತ್ತರಪ್ರದೇಶದ ಗೋರಖ್‌ಪುರದ ಪಿಪ್ರೌಲಿ ಬ್ಲಾಕ್ ನಲ್ಲಿ ಸಾಮೂಹಿಕ ವಿವಾಹ ಯೋಜನೆಯಡಿ ನಡೆದ ಸಮಾರಂಭದಲ್ಲಿ 53 ವರ್ಷದ ತಾಯಿ ಮತ್ತು 27 ವರ್ಷದ ಮಗಳು ತಮ್ಮ ತಮ್ಮ ಇನಿಯರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವಿವಾಹ ಸಮಾರಂಭದಲ್ಲಿ ವಿಧವೆಯಾಗಿರುವ ಮಹಿಳೆ ತನ್ನ ಗಂಡನ ಕಿರಿಯ ಸಹೋದರ ಜಗದೀಶನನ್ನು ಮದುವೆಯಾದರೆ, ಆಕೆಯ ಮಗಳು ಕೂಡಾ ಇದೇ ಸಮಾರಂಭದಲ್ಲಿ ರಾಹುಲ್ ಎಂಬ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆೆ ಕಾಲಿಟ್ಟರು.

ರೈತನನ್ನು ಮದುವೆಯಾದ ಬೇಲಿದೇವಿ ಬೇಲಿದೇವಿ ಅವರು ಈ ಹಿಂದೆ ಹರಿಹರ ಅವರನ್ನು ಮದುವೆಯಾಗಿದ್ದರು. ಅವರಿಗೆ ಮೂವರು ಪುತ್ರಿಯರು ಮತ್ತು ಇಬ್ಬರು ಪುತ್ರರು ಇದ್ದಾರೆ. ಬೇಲಿದೇವಿಯವರು 25 ವರ್ಷಗಳ ಹಿಂದೆಯೇ ಗಂಡನನ್ನು ಕಳೆದು ಕೊಂಡಿದ್ದರು. ತಮ್ಮ ಮೂವರು ಪುತ್ರಿಯರನ್ನು ಬೆಳೆಸಿ ಇಬ್ಬರನ್ನೂ ಮದುವೆ ಮಾಡಿಕೊಟ್ಟಿದ್ದಾರೆ ಬೇಲಿದೇವಿ. ಈಗ ಕಿರಿಯ ಮಗಳು ಇಂದೂ ಹೊರತುಪಡಿಸಿ ಅವಳ ಎಲ್ಲ ಮಕ್ಕಳು ವಿವಾಹವಾಗಿ ತಮ್ಮ ಕುಟುಂಬಗಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ತನ್ನ ಉಳಿದ ಜೀವನವನ್ನು ಗಂಡನ ಕಿರಿಯ ಸಹೋದರ ಜಗದೀಶ ಜೊತೆಗೆ ಕಳೆಯಲು ನಿರ್ಧರಿಸಿ ವಿವಾಹ ವಾಗಿದ್ದಾರೆ.

ಜಗದೀಶ (55) ರೈತನಾಗಿದ್ದು ಮತ್ತು ಅವಿವಾಹಿತನಾಗಿದ್ದಾನೆ. ಮಗಳು ಇಂದೂ, 29 ವರ್ಷದ ರಾಹುಲ್ ಅವರನ್ನು ವಿವಾಹ ವಾದರು. ‘ತಂದೆಯ ನಿಧನದ ನಂತರ ನನ್ನ ತಾಯಿ ಮತ್ತು ಚಿಕ್ಕಪ್ಪ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಈಗ ಅವರಿ ಬ್ಬರೂ ವಿವಾಹವಾಗಿರುವುದು ನಮಗೆಲ್ಲರಿಗೂ ಸಂತೋಷ ತಂದಿದೆ’ ಎಂದು ಕಿರಿಯ ಪುತ್ರಿ ಇಂದೂ ಹೇಳಿದ್ದಾರೆ.

ಸಾಮೂಹಿಕ ವಿವಾಹ ಸಮಾರಂಭದಲ್ಲಿ 63 ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಸಾಮೂಹಿಕ ವಿವಾಹ ಕಾರ್ಯ ಕ್ರಮದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು. ವಿಧವಾ ವಿವಾಹ ಹಾಗೂ ಎಲ್ಲಾ ಧರ್ಮದವರಿಗೂ ಸಾಮೂಹಿಕ ಯೋಜನೆಯಡಿ ಉತ್ತೇಜನ ನೀಡಿರುವುದರಿಂದಾಗಿ, ಈ ಸಾಮೂಹಿಕ ವಿವಾಹ ಜನಪ್ರಿಯ ಎನಿಸಿದೆ.