Tuesday, 26th November 2024

ಯುದ್ದ ಮ್ಯೂಸಿಯಂ ಆದ ಭೂಗರ್ಭ ಕೋಟೆ

ಉಮಾಮಹೇಶ್ವರಿ ಎನ್‌

ಜರ್ಮನಿಯ ಸಂಭಾವ್ಯ ಆಕ್ರಮಣವನ್ನು ಎದುರಿಸಲು ದುರ್ಬಲ ಫ್ರಾನ್ಸ್‌ ಮಾಡಿದ ಉಪಾಯವೆಂದರೆ ಭೂಗರ್ಭ ಕೋಟೆಯ ನಿರ್ಮಾಣ. ನೆಲದಾಳದಲ್ಲೇ ಹರಡಿರುವ ಈ ವಿಸ್ತೃತ ಕೋಟೆಯು ಇಂದು ವಸ್ತುಸಂಗ್ರಹಾಲಯವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. 

ಮೊದಲ ಮಹಾಯುದ್ಧ ಮುಗಿದ ನಂತರ, ರಕ್ಷಣೆಯ ಉದ್ದೇಶದಿಂದ ಫ್ರಾನ್ಸ್‌ ದೇಶವು ಒಂದು ಭೂಗರ್ಭ ಕೋಟೆಯನ್ನು ನಿರ್ಮಿಸಿದ ಪ್ರಕರಣ ಕುತೂಹಲ ಕಾರಿ. ಫ್ರಾನ್ಸ್‌ ನ ಹುನ್ಸ್‌ ಪಾಖ್ ಎಂಬ ಜಾಗದಲ್ಲಿರುವ ಶೋನೆನ್ ಬೋರ್ಗ್ ಭೂಮಿಯ ಅಂತರ್ಗತ ಕೋಟೆಯನ್ನು ರಚಿಸುವ ತೀರ್ಮಾನವನ್ನು ಮೊದಲ ಮಹಾಯುದ್ಧದ ನಂತರ ಫ್ರಾನ್ಸ್‌ ನ ಆ ಕಾಲದ ಯುದ್ಧ ಮಂತ್ರಿಯಾದ ಆಂಡ್ರೆ ಮೆಜಿನೊ ಅವರ ನೇತೃತ್ವದಲ್ಲಿ ತೆಗೆದುಕೊಳ್ಳಲಾಯಿತು.

1930ರ ದಶಕದಲ್ಲಿ ಆರಂಭಗೊಂಡ ಮೆಜಿನೊಲೈನ್‌ಗಳ ನಿರ್ಮಾಣ 1939 ರಲ್ಲಿ ಪೂರ್ಣಗೊಂಡಿತು. ಸ್ವಿಟ್ಜರ್ಲೆಂಡ್, ಜರ್ಮನಿ ಮತ್ತು ಲಕ್ಸೆಂಬರ್ಗ್ ಗಡಿಭಾಗ ದಲ್ಲಿ ಫ್ರಾನ್ಸ್‌ ನೆಲದಲ್ಲಿ ನಿರ್ಮಾಣಗೊಂಡ ಈ ವ್ಯವಸ್ಥೆ ಅತ್ಯಂತ ಸುಸಜ್ಜಿತ. ಮೊದಲನೇ ಮಹಾಯುದ್ಧದಿಂದ ಆರ್ಥಿಕವಾಗಿ ಜರ್ಜರಿತವಾಗಿದ್ದ ಫ್ರಾನ್ಸ್‌, ಜರ್ಮನಿಯ ಸಂಭಾವ್ಯ ಆಕ್ರಮಣದ ವಿರುದ್ಧ ಮತ್ತು ಅಂತಹ ಸಂದರ್ಭದಲ್ಲಿ ಬಹಳಷ್ಟು ದಿನಗಳ ಕಾಲ ನಡೆಯಬಹುದಾದ ಘರ್ಷಣೆಯನ್ನು ತಾಳಿಕೊಳ್ಳಲು ಮಾಡಿದ ಉಪಾಯ ಇದು.

ಜರ್ಮನಿಯಲ್ಲಿ ಹೆಚ್ಚು ನಷ್ಟ ಆಗಿರದಿದ್ದ ಕಾರಣ ಆರ್ಥಿಕವಾಗಿ ಸದೃಢವಾಗಿತ್ತು. ಆ ಕಾಲದಲ್ಲಿ ಫ್ರಾನ್ಸ್ ‌‌ನ ಜನಸಂಖ್ಯೆ 35 ಮಿಲಿಯದಷ್ಟಿದ್ದರೆ ಜರ್ಮನಿಯದು 70 ಮಿಲಿಯ. ರಕ್ಷಣೆಗಾಗಿ ಸೈನಿಕರನ್ನು ಗುಪ್ತವಾಗಿ ತಯಾರು ಮಾಡುವುದು ನಿಶ್ಶಕ್ತ
ಫ್ರಾನ್ಸ್‌‌ಗೆ ಕಠಿಣವಾಗಿತ್ತು. ಹೀಗಾಗಿ ಭೂಗರ್ಭ ದೊಳಗೆ ಹೊಸ ಕೋಟೆ ನಿರ್ಮಿಸಿಕೊಂಡು ಸೈನಿಕರನ್ನು ತಯಾರು ಮಾಡುವ ಯೋಜನೆಯ ಅಂಗವಾಗಿ ರೂಪುಗೊಂಡ ವ್ಯವಸ್ಥೆ ಇದು.

ನೆಲದಾಳದ ರೈಲು ನಿಲ್ದಾಣ ಇಂದಿಗೂ ಮೂಲರೂಪದಲ್ಲಿ ಉಳಿದುಕೊಂಡಿರುವ ಈ ಕೋಟೆ ಮಾನವ ಶ್ರಮದಿಂದ ನಿರ್ಮಿತ

-30 mètres sous terre…(HDR).

ವಾದದ್ದು. 35,000 ಘನಮೀಟರ್ ಗಳಷ್ಟು ಕಾಂಕ್ರೀಟ್ ಬಳಸಿ 14,585 ಚದರಮೀಟರ್ ಒಳಾಂಗಣ ಹಾಗೂ ಸುಮಾರು
ಎರಡು ಮೈಲಿಗಳಷ್ಟು ಉದ್ದದ ಸಂಪರ್ಕ ವ್ಯವಸ್ಥೆಯನ್ನು ರಚಿಸಲಾಯಿತು. ಸುಸಜ್ಜಿತ ರೈಲು ನಿಲ್ದಾಣ, ರೈಲುಕಂಬಿಗಳು ಭೂಗತ ಲೋಕದಲ್ಲಿ ಅತಿ ಮುಖ್ಯ ಸಾಗಾಟಗಳನ್ನು ನಡೆಸುತ್ತಿದ್ದವು.

ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಪ್ರತ್ಯೇಕವಾದ ರೈಲು ನಿಲ್ದಾಣಗಳಿದ್ದವು. ಇವುಗಳು ಬೇರೆ ಬೇರೆ ಬ್ಲಾಕ್‌ಗಳ ಮಧ್ಯೆ, ನಗರ ದೊಳಗೆ, ಇತರ ಜಾಗಗಳ ಭೂಗರ್ಭ ವ್ಯವಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದವು. ವಿದ್ಯುಚ್ಚಕ್ತಿ ನಗರದಿಂದಲೇ ಬರುತ್ತಿತ್ತು.
ಕೋಟೆಗೆ 5 ಕಿ.ಮೀ. ದೂರದಲ್ಲಿ ಭೂಮಿಯೊಳಗಿಳಿಯುತ್ತಿದ್ದ ಲೈನುಗಳು ಅಂತರ್ಗತವಾಗಿ ಈ ಕೋಟೆ ಪ್ರವೇಶಿಸುತ್ತಿದ್ದವು. ವಿದ್ಯುತ್ ಸಂಪರ್ಕ ಕಡಿದರೆ ತಾತ್ಕಾಲಿಕವಾಗಿ ವಿದ್ಯುತ್ ಉತ್ಪಾದಿಸುವ ಜನರೇಟರ್‌ಗಳೂ, ಡೀಸೆಲ್ ಸಂಗ್ರಹಕ್ಕೆ ವ್ಯವಸ್ಥೆಯೂ ಇತ್ತು. ಅಗತ್ಯ ಎನಿಸುವ ಗಾಳಿ ಸಂಚಾರದ ವ್ಯವಸ್ಥೆೆಯನ್ನೂ ಮಾಡಲಾಗಿತ್ತು.

ನೀರಿನ ವ್ಯವಸ್ಥೆ ಕೋಟೆಯೊಳಗಿನ ಬಾವಿಗಳಿಂದಲೇ ಇತ್ತು. ಕುಡಿಯುವ ನೀರಿನ ಸಂಪರ್ಕ ಹಾಗೂ ಬೆಂಕಿ ನಂದಿಸುವ ನೀರಿನ ಸಂಪರ್ಕಗಳು ಪ್ರತ್ಯೇಕವಾಗಿದ್ದವು. ಅಗ್ನಿಶಾಮಕ ದಳಕ್ಕಾಗಿ ಒಂದು ನೀರಿನ ಕೊಳವೂ ನಿರ್ಮಾಣವಾಗಿತ್ತು. ಸುಮಾರು 600 ಸೈನಿಕರಿಗೆ ಹಾಗೂ ಸಂಬಂಧ ಪಟ್ಟ ಆಫೀಸರುಗಳಿಗೆ ವಸತಿ ಹಾಗೂ ತರಬೇತಿಯ ವ್ಯವಸ್ಥೆ ಇತ್ತು. ಹಿರಿಯ ಅಧಿಕಾರಿಗಳಿಗೋಸ್ಕರ ಪ್ರತ್ಯೇಕವಾದ, ಎಲ್ಲಾ ಸೌಕರ್ಯಗಳನ್ನೊಳಗೊಂಡ ಕೊಠಡಿಗಳಿದ್ದವು.

ದಿನನಿತ್ಯದ ಉಪಯೋಗಕ್ಕಾಗಿ ಶೌಚಾಲಯ, ಸ್ನಾನಗೃಹ, ಬಟ್ಟೆಗಳನ್ನು ತೊಳೆಯುವ ಸ್ಥಳಗಳಿದ್ದವು. ಕೊಳಚೆ ನೀರನ್ನು ಹೊರ ಹಾಕಲೂ ಸೂಕ್ತ ವ್ಯವಸ್ಥೆ ಇತ್ತು. ಗಾಯಗೊಂಡ, ಅಸ್ವಸ್ಥ ಸೈನಿಕರ ಉಪಚಾರಕ್ಕೆ ಪ್ರತ್ಯೇಕ ಸ್ಥಳ, ಪ್ರಥಮ ಚಿಕಿತ್ಸೆಗೆ ಅವಕಾಶ, ಯುದ್ಧದಲ್ಲಿ ಯಾರಾದರೂ ಗಾಯಗೊಂಡು ಹೊರಗೆ ಹೋಗುವುದು ಅಸಾಧ್ಯವಾದರೆ ಅಲ್ಲೇ ಶಸ್ತ್ರಚಿಕಿತ್ಸೆ ನಡೆಸಲು ಸುಸಜ್ಜಿತ ಕೊಠಡಿ ಹಾಗೂ ವೈದ್ಯಕೀಯ ತಂಡವಿತ್ತು.

ಮೃತ ಸೈನಿಕರನ್ನು ಸಮಾಧಿ ಮಾಡಲು ಬೇಕಾದ ಪರಿಕರಗಳೂ ಲಭ್ಯವಿದ್ದವು. ಸುಮಾರು ಮೂರು ತಿಂಗಳ ಕಾಲ ಒಳಗಿರುವ
ಸೈನಿಕರಿಗೆ ಬೇಕಾದ ಆಹಾರ ಪದಾರ್ಥಗಳ ಸಂಗ್ರಹ, ವ್ಯವಸ್ಥಿತವಾದ ಅಡಿಗೆ ಮನೆ, ಸೈನಿಕರು ಊಟಮಾಡಲು ಗೋಡೆಗೆ ಲಗತ್ತಿಸಲಾದ ಮಡಚಬಹುದಾದ ಊಟದ ಮೇಜುಗಳಿದ್ದವು.

ಸುಮಾರು 800 ಮೀಟರುಗಳ ದೂರದಲ್ಲಿ ಮದ್ದುಗುಂಡುಗಳನ್ನು ಸಂಗ್ರಹಿಸುವ ಸ್ಥಳ, ಭಾರವಾದ ವಸ್ತುಗಳನ್ನು ಚಲಿಸಲು ಸೂಕ್ತ ವ್ಯವಸ್ಥೆ. ಮೂರನೇ ಬ್ಲಾಕಿನಲ್ಲಿರುವ ಟುರೆಟ್ ಯಂತ್ರ, ಒಳಗಿನಿಂದಲೇ ಭೂಮಿಯ ಮೇಲಿರುವ ಶತ್ರು ಸೈನ್ಯದ ಮೇಲೆ
ಗುಂಡುಗಳನ್ನು ಸುರಿಸಲು ಸಮರ್ಥವಾಗಿತ್ತು. ರೈಲು ಕಂಬಿಗಳನ್ನು ಅಳವಡಿಸಿದ ಸುರಂಗ ಮಾರ್ಗದ ಇಕ್ಕೆಲಗಳು ಹಾಗೂ ಛಾವಣಿಗಳಲ್ಲಿ ವಿದ್ಯುಚ್ಛಕ್ತಿ, ನೀರಿನ ಲೈನುಗಳಿದ್ದವು. ಹಾಗೆಯೇ ಕೆಲವೆಡೆಗಳಲ್ಲಿ ಗೋಡೆಯ ಇಕ್ಕೆಲಗಳಲ್ಲೂ ಮದ್ದುಗುಂಡುಗಳ ಸಂಗ್ರಹದ ವ್ಯವಸ್ಥೆ ಇತ್ತು.

ಯುದ್ಧದ ಆಘಾತ
ಎರಡನೇ ಮಹಾಯುದ್ಧದಲ್ಲಿ 5 ದಿನಗಳ ಸತತ ಜರ್ಮನ್ ದಾಳಿಯಿಂದ ಮೇಲ್ಭಾಗದಲ್ಲಿ ಕೆಲವು ಬಿರುಕುಗಳುಂಟಾದರೂ ಮುಖ್ಯ ನಿರ್ಮಿತಿ ಯಾವುದೇ ಹಾನಿಗೊಳಗಾಗಿರಲಿಲ್ಲ. ಮೂಲರೂಪದಲ್ಲಿ ಉಳಿದುಕೊಂಡಿರುವ ಈ ಕೋಟೆ 1978 ನೇ ಇಸವಿಯಿಂದ ಮ್ಯೂಸಿಯಂ ಆಗಿ ಪರಿವರ್ತನೆಗೊಂಡಿದೆ. ಯುದ್ಧ ಎದುರಿಸಲು ನಿರ್ಮಾಣಗೊಂಡ ಈ ಭೂಗರ್ಭ ಕೋಟೆ ಇಂದು ಪ್ರವಾಸಿಗರ ಕುತೂಹಲ ಕೆರಳಿಸುವ ತಾಣ ಎನಿಸಿದೆ.

ಒಟ್ಟು ಒಂಬತ್ತು ಬ್ಲಾಕ್‌ಗಳ ಸಂಕೀರ್ಣವಾಗಿರುವ ಇದರ ಒಳಹೋಗುವ ದಾರಿ ಏಳನೇ ಬ್ಲಾಕಿನ ಮೂಲಕ ಇದೆ. ಮಧ್ಯಾಹ್ನ
ಎರಡರಿಂದ ನಾಲ್ಕು ಗಂಟೆಯ ವರೆಗೆ ಒಳಗೆ ಬಿಡುತ್ತಾರೆ. ಭಾನುವಾರ ಬೆಳೆಗ್ಗೆಯೂ ಪ್ರವೇಶ ಸಾಧ್ಯ. ಪ್ರವೇಶ ಶುಲ್ಕ 8 ಯೂರೋಗಳು. ಒಳಹೋದ ನಂತರ ಸಿಗುವ ಲಿಫ್ಟ್‌ ನಮ್ಮನ್ನು ಸುಮಾರು ಮೂವತ್ತು ಮೀಟರ್‌ಗಳ ಆಳಕ್ಕೆ ಒಯ್ಯುತ್ತದೆ. ಕೆಳಗಿನ ತಾಪಮಾನ ಸುಮಾರು 12 ಡಿಗ್ರಿಗಳಷ್ಟು. ವಿವರಣೆಗಳು ಇಂಗ್ಲಿಷ್‌ನಲ್ಲೂ ಲಭ್ಯ. ಎಲ್ಲಾ ವಿಭಾಗಗಳನ್ನು ನೋಡಲು ಸಾಕಷ್ಟು
ನಡೆಯಬೇಕಾಗುತ್ತದೆ.

ಹೌ ಟು ಗೋ

ಜರ್ಮನಿಯ ಫ್ರಾಂಕ್ಫರ್ಟ್, ಕಾಲ್ಸರ್ ರೂಹೆ, ವಿಂಡೆನ್, ವೀಸೆಂಬೋರ್ಗ್ ಮಾರ್ಗವಾಗಿ ಬಸ್ಸು, ರೈಲುಗಳ ಮುಖಾಂತರ ಇಲ್ಲಿ ತಲುಪಬಹುದು. ಬಸ್ಸು, ರೈಲುಗಳನ್ನಿಳಿದ ನಂತರ ಸ್ವಲ್ಪ ಕಾಲ್ನಡಿಗೆ.