Wednesday, 27th November 2024

ಪ್ರಕೃತಿ ಚಿಕಿತ್ಸೆಯಲ್ಲಿ ಶ್ರೇಷ್ಠ ಸಾಧನೆ

ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ ಮತ್ತು ಆಸ್ಪತ್ರೆ

ಪ್ರಕೃತಿ ಚಿಕಿತ್ಸೆಯಲ್ಲಿ ಉನ್ನತ ಸಾಧನೆ ನಡೆಸಿದ ಈ ಸಂಸ್ಥೆಯು, ಆ ವಿಭಾಗದಲ್ಲಿ ಪದವಿ ತರಗತಿಗಳನ್ನು ಸಹ ನಡೆಸು ತ್ತಿದೆ. ಇಲ್ಲಿ ಪದವಿ ಪಡೆದವರು ದೇಶದ ವಿವಿಧ ಭಾಗಗಳಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ನೀಡುತ್ತಿದ್ದಾರೆ.

ಜಿತೇಂದ್ರ ಕುಂದೇಶ್ವರ

ಭಾರತದ ಇತಿಹಾಸದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪುನಶ್ಚೇತನ ಹಾಗೂ ಉನ್ನತೀಕರಿಸಿ ಅದರ ಮಹತ್ವವನ್ನು ಸಾಮಾನ್ಯ ಜನತೆಯಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತಮ್ಮ ದೂರದೃಷ್ಟಿತ್ವದ ಫಲವಾಗಿ 1986 ರಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಸಂಪೂರ್ಣ ಅಭಿವೃದ್ಧಿಗಾಗಿ
‘ಶಾಂತಿವನ ಟ್ರಸ್ಟ್‌‌‘ ಎಂಬ ವಿಶ್ವಸ್ಥ ಮಂಡಳಿಯನ್ನು ಸ್ಥಾಪಿಸಿದರು.

ಇದಕ್ಕೆ ಪೂರಕವಾಗಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ 2 ಹಾಸಿಗೆಗಳ ಚಿಕಿತ್ಸಾ ಲಯವನ್ನು ಸ್ಥಾಪಿಸಿದ ಕೆಲವೇ ದಿನಗಳಲ್ಲಿ ಚಿಕಿತ್ಸೆಯ ಪರಿಣಾಮವನ್ನು ಸಂಪೂರ್ಣವಾಗಿ ಅರಿತುಕೊಂಡ ಹೆಗ್ಗಡೆಯವರು ಈ ಚಿಕಿತ್ಸಾ ಪದ್ಧತಿಗೆ ಕಾಯಕಲ್ಪ ಕೊಡುವ ನಿಟ್ಟಿನಲ್ಲಿ ನೇತ್ರಾವತಿ ನದಿ ತೀರದ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಅನುಸರನೆಗೆ ಅಗತ್ಯವಾಗಿ ಪರಿಸರದಲ್ಲಿ ಪ್ರಕೃತಿ ಚಿಕಿತ್ಸೆಯ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಿ 75 ಹಾಸಿಗೆಗಳುಳ್ಳ ಸುಸಜ್ಜಿತವಾದ ಆಸ್ಪತ್ರೆ ಯನ್ನು 1994 ರಲ್ಲಿ ಪ್ರಾರಂಭಿಸಿದರು.

ಈ ಆಸ್ಪತ್ರೆ ಇಂದು 300 ಹಾಸಿಗೆಗಳ ಸಾಮರ್ಥ್ಯವುಳ್ಳ ಜನರಲ್ ವಾರ್ಡ್, ಸ್ಪೆೆಷಲ್ ವಾರ್ಡ್, ಡಿಲಕ್ಸ್ ವಾರ್ಡ್ ಹಾಗೂ ಕಾಟೇಜು ಗಳುಳ್ಳ ಆಸ್ಪತ್ರೆಯಾಗಿ ಮಾರ್ಪಟ್ಟು ಇಂದು ಪ್ರಪಂಚದಾದ್ಯಂತ ಯೋಗ ಹಾಗೂ ಪ್ರಕೃತಿ ಚಿಕಿತ್ಸೆಯನ್ನು ಹುಡುಕಿಕೊಂಡು ಭಾರತಕ್ಕೆ ಬರುವ ಅನೇಕ ಪ್ರಕೃತಿ ಚಿಕಿತ್ಸಾ ಅಭಿಮಾನಿಗಳಿಗೆ ಆಶ್ರಯತಾಣವಾಗಿ ಮಾರ್ಪಟ್ಟಿದೆ.

ಈ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಸೌಲಭ್ಯವು ದಿನದಿಂದ ದಿನಕ್ಕೆ ಪ್ರಸಿದ್ಧಿ ಪಡೆದು ಉಡುಪಿ ಜಿಲ್ಲೆಯಲ್ಲೂ ಸಹ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಬೇಡಿಕೆಯನ್ನು ಅಲ್ಲಿ ಜನರು ಮುಂದಿಟ್ಟಾಗ ಸಂತೋಷದಿಂದ ಒಪ್ಪಿ ಹೆಗ್ಗಡೆಯವರು ಇನ್ನೊಂದು ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಆಸ್ಪತ್ರೆಯನ್ನು ಮಣಿಪಾಲದ ಸಮೀಪವಿರುವ ‘‘ಪರೀಕ’’ ಎಂಬ ಸ್ಥಳದಲ್ಲಿ ಯೋಗ ಮತ್ತು ಪ್ರಕೃತಿಗೆ ಅತ್ಯಂತ ಪೂರಕವಾದ ವಾತಾವರಣವನ್ನು ಕಲ್ಪಿಸಿ 2007 ರಲ್ಲಿ ಸುಸಜ್ಜಿತವಾದ ಹಾಗೂ ಎಲ್ಲಾ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಯ ಸೌಲಭ್ಯವನ್ನು ಹೊಂದಿರುವ ಆಸ್ಪತ್ರೆಯನ್ನು ಪ್ರಾರಂಭ ಮಾಡಿದರು.

ಇದು ಉಡುಪಿ ಜಿಲ್ಲೆಯಲ್ಲಿ ಆ ರೀತಿಯ ಮೊದಲ ಆಸ್ಪತ್ರೆ ಎಂದು ಹೆಸರಾಯಿತು. ಈ ಎರಡು ಆಸ್ಪತ್ರೆಗಳು ದೇಶದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಳ ಪ್ರಮುಖ ಆಸ್ಪತ್ರೆಗಳಾಗಿ ಪ್ರಸಿದ್ಧಿ ಪಡೆದಿವೆ. ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಮಹತ್ವವನ್ನು ಅರಿತ ಕರ್ನಾಟಕ ಸರ್ಕಾರ 2009ರಲ್ಲಿ ಹೊರರೋಗಿಗಳಿಗೂ ಈ ಚಿಕಿತ್ಸೆಯ ಸೌಲಭ್ಯವನ್ನು ನೀಡುವ ದೃಷ್ಟಿಯಿಂದ ರಾಜ್ಯದ ಹತ್ತು ತಾಲೂಕು ಆಸ್ಪತ್ರೆಗಳಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ವಿಭಾಗವನ್ನು ಪ್ರಾರಂಭಿಸಿ ಶಾಂತಿವನ ಟ್ರಸ್ಟ್ನ ಆಡಳಿತ ಮತ್ತು ಸರಕಾರದ ಅನುದಾನದೊಂದಿಗೆ ಕಳೆದ ಒಂಭತ್ತು ವರ್ಷಗಳಿಂದ ಈ ಕೇಂದ್ರವನ್ನು ನಡೆಸು ತ್ತಿರುವುದು ಈ ಚಿಕಿತ್ಸಾ ಪದ್ಧತಿಗೆ ಸರ್ಕಾರದ ಮಾನ್ಯತೆಗೆ ಒಂದು ನಿದರ್ಶನ.

ಪ್ರಕೃತಿ ಚಿಕಿತ್ಸೆಯಲ್ಲಿ ಪದವಿ ಕೋರ್ಸ್
ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯನ್ನು ಪ್ರಾರಂಭಿಸಿದ ನಂತರ ಚಿಕಿತ್ಸೆ ಪಡೆದವರ ಫಲಿತಾಂಶ ಹಾಗೂ ಮನದಾಳದ ಉತ್ಕೃಷ್ಟ ಅನುಭವಗಳನ್ನು ಗಮನಿಸಿ ಭಾರತೀಯ ಮೂಲದ ಈ ಶ್ರೇಷ್ಠ ಚಿಕಿತ್ಸಾ ಪದ್ಧತಿಗೆ ಉಜ್ವಲ ಭವಿಷ್ಯವಿದೆಯೆಂದು ಮನಗಂಡ ಡಾ.ಹೆಗ್ಗಡೆಯವರು ಈ ಚಿಕಿತ್ಸಾ ಪದ್ಧತಿಗೆ ವೈದ್ಯಕೀಯ ವಿಜ್ಞಾನದ ಮಹತ್ವವನ್ನು ನೀಡುವ ಉದ್ದೇಶದಿಂದ ಹಲವಾರು ನುರಿತ ವೈದ್ಯರ ತಂಡದೊಂದಿಗೆ ಚರ್ಚಿಸಿ ಇತರೆ ವೈದ್ಯಕೀಯ ಪದವಿಗಳಿಗೆ ಸರಿಸಮಾನ ವಾದ ಮಂಗಳೂರು ವಿಶ್ವವಿದ್ಯಾಲಯದ ಸಂಯೋಜನೆ ಹಾಗೂ ಕರ್ನಾಟಕ ಸರ್ಕಾರದ ಅನುಮತಿಯೊಂದಿಗೆ ಬಿ.ಎನ್.ವೈ.ಎಸ್. ಎನ್ನುವ ಪದವಿಯನ್ನು ನೀಡುವ, ದೇಶದಲ್ಲಿಯೇ ಮೊದಲ ಬಾರಿಗೆ 1989ರಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯವನ್ನು ಉಜಿರೆಯಲ್ಲಿ ಪ್ರಾರಂಭಿಸಿದರು.

ಅಂದು 15 ವಿದ್ಯಾರ್ಥಿಗಳ ಪ್ರವೇಶಾತಿಯೊಂದಿಗೆ ಪ್ರಾರಂಭವಾದ ಕಾಲೇಜು ಇತ್ತು 120 ಪ್ರವೇಶಾತಿಯೊಂದಿಗೆ ಸ್ನಾತಕೋತ್ತರ
ಶಿಕ್ಷಣ ಹಾಗೂ ಪಿ.ಹೆಚ್.ಡಿ ಕೋರ್ಸ್‌ಗಳು ಪ್ರಾರಂಭವಾಗಿ ಇಂದು ದೇಶದ ಎಲ್ಲಾ ರಾಜ್ಯದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಪ್ರಕೃತಿ ಚಿಕಿತ್ಸೆಯಲ್ಲಿ ಅಧಿಕೃತ ಪದವಿ ಪಡೆಯಲು ಇದು ಉತ್ತಮ ವಿದ್ಯಾಲಯ ಎಂಬ ಹೆಸರನ್ನು ಪಡೆದಿದೆ. ಈ ಮಹಾ ವಿದ್ಯಾ ಲಯದಿಂದ 1000ಕ್ಕೂ ಮೀರಿ ವೈದ್ಯರು ಪದವಿಯನ್ನು ಮುಗಿಸಿ ದೇಶದ ಉದ್ದಗಲಕ್ಕೂ ಹಾಗೂ ವಿದೇಶಗಳಲ್ಲಿ ಸೇವೆ ಸಲ್ಲಿಸು ತ್ತಿರುವುದು ಸಂಸ್ಥೆಯ ಅಧ್ಯಕ್ಷರಿಗೆ ಧನ್ಯತಾ ಭಾವನೆಯನ್ನು ನೀಡಿದೆ.

ವಿದ್ಯಾರ್ಥಿಗಳ ಸಾಧನೆ

ಇಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ಪ್ರಪಂಚದಾದ್ಯಂತ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಸಂಸ್ಥೆಯ ಹೆಗ್ಗಳಿಕೆ ಯನ್ನು ದುಪ್ಪಟ್ಟು ಮಾಡಿದ್ದಾರೆ.

ಹಲವು ವೈದ್ಯರು ಸುಪ್ರಸಿದ್ಧ ಅಲೋಪತಿ ಆಸ್ಪತ್ರೆಗಳಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಭಾಗವನ್ನು ನಡೆಸುತ್ತಿದ್ದಾರೆ. ಅನೇಕ ವೈದ್ಯರು ಪ್ರತ್ಯೇಕವಾದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಯನ್ನು ಸ್ಥಾಪಿಸಿ ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

*ಕೆಲವು ವೈದ್ಯರು ವೆಲ್ನೆಸ್ ಸೆಂಟರ್, ಸ್ಪಾ ಹಾಗೂ ಯೋಗ ಚಿಕಿತ್ಸೆಯನ್ನು ಮಾಡುತ್ತಿದ್ದಾರೆ.

*ಸಂಶೋಧನ ಕ್ಷೇತ್ರದಲ್ಲಿ ಅಲೋಪತಿಗೆ ಸರಿಸಮಾನವಾಗಿ ಇಲ್ಲಿಯ ಕೆಲವು ವೈದ್ಯರುಗಳು ಉತ್ತಮವಾದ ಸಾಧನೆಯನ್ನು
ಮಾಡಿದ್ದಾರೆ. ಈ ವೈದ್ಯಕೀಯ ವಿಷಯವು ದೇಶದ ಹಾಗೂ ಪ್ರಪಂಚದ ಯಾವುದೇ ವೈದ್ಯಕೀಯ ವಿಷಯದಿಂದ ಕಡಿಮೆ ಅಲ್ಲ ಎಂದು ತೋರಿಸುವುದಕ್ಕೆ ಅನೇಕ ಸಂಶೋಧನೆಗಳು ನಡೆಯುತ್ತಿವೆ.

*ಇಲ್ಲಿ ಕಲಿತ ಅನೇಕ ವೈದ್ಯರುಗಳು ಅಧ್ಯಾಪಕರಾಗಿ ಸಂಸ್ಥೆಯ ಮುಖ್ಯಸ್ಥರಾಗಿ ಅನೇಕ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕ್ಷೇತ್ರದ ಅವಕಾಶಗಳನ್ನು ತೋರಿಸಿಕೊಡುತ್ತಿದೆ.

ವಿಶ್ವದಾಖಲೆ

*ಏಕಕಾಲದಲ್ಲಿ 47 ಸ್ಥಳಗಳಲ್ಲಿ ಯೋಗ ತರಗತಿಯನ್ನು 62,827 ವಿದ್ಯಾರ್ಥಿಗಳಿಗೆ ಏರ್ಪಡಿಸಿ 2013ರಲ್ಲಿ ಶಾಂತಿವನ ಟ್ರಸ್ಟ್‌‌‌ಗೆ
ಗಿನ್ನೆಸ್ ವಿಶ್ವದಾಖಲೆಯ ಪ್ರಾಪ್ತಿಯಾಯಿತು.
*ದೇಶದಲ್ಲಿಯೇ ಮೊದಲ ಬಾರಿಗೆ ಪ್ರಕೃತಿ ಚಿಕಿತ್ಸಾ ವಿಭಾಗದಲ್ಲಿ ಸಂಶೋಧನೆಗೆ ಶ್ರೇಷ್ಠತ ಕೇಂದ್ರ (ಸೆಂಟರ್ ಫಾರ್ ಎಕ್ಸಲೆನ್ಸ್) ಎಂದು ಭಾರತ ಸರ್ಕಾರದ ಆಯುಷ್ ಮಂತ್ರಾಲಯ ಘೋಷಿಸಿದೆ.
*ದೇಶದ ಬೃಹತ್ ಪ್ರಕೃತಿ ಚಿಕಿತ್ಸಾ ಸಂಸ್ಥೆ ಎಂಬ ಹೆಗ್ಗಳಿಕೆ ಇದೆ.
*ಪ್ರತಿಷ್ಠಿತ ಜಿಂದಾಲ್ ಸಂಸ್ಥೆ ಜಿಂದಾಲ್ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿ ನೀಡಿದೆ.
*ದೇಶದ ಮೊದಲ ಪದವಿ, ಸ್ನಾತಕೋತ್ತರ ಹಾಗೂ ಪಿಹೆಚ್‌ಡಿ ಪದವಿ ನೀಡುವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಎಂದು ಪ್ರಸಿದ್ದಿ ಹೆಸರುವಾಸಿಯಾಗಿದೆ.