Thursday, 12th December 2024

ಬಂದಿದೆ ಹೊಸ ವರುಷ, ಚಿತ್ರರಂಗಕ್ಕೆ ತರಲಿದೆ ಹರುಷ

ಕಳೆದು ಹೋದ ವರ್ಷವನ್ನು ಮರೆತು, ಎಲ್ಲರೂ ಸಂಭ್ರಮದಿಂದ ಹೊಸ ವರುಷವನ್ನು ಬರಮಾಡಿಕೊಂಡಿದ್ದೇವೆ. ಹೊಸ ಹೊಸ ನಿರೀಕ್ಷೆ, ಗುರಿಗಳನ್ನು ಇಟ್ಟುಕೊಂಡಿದ್ದೇವೆ. ಈ ಹೊಸ ಸಂವತ್ಸರ ನಮ್ಮಲ್ಲಿ ಹೊಸತನ ತರುವ ಆಶಾ ಭಾವನೆಯೂ ಒಡಮೂಡಿದೆ. ಅಂತೆಯೇ ಈ ವರುಷ ಕನ್ನಡ ಚಿತ್ರರಂಗಕ್ಕೆ ಹರುಷ ತರುವುದಂತೂ ದಿಟ. 2020 ಚಿತ್ರ ರಂಗದ ಪಾಲಿಗೆ ಕರೋನಾ ಕರಿಛಾಯೆ ಮೂಡಿಸಿದ ವರ್ಷವಾದರೆ, 2021 ಚಿತ್ರರಂಗಕ್ಕೆ ವರವಾಗಲಿದೆ ಎಂಬ ನಿರೀಕ್ಷೆ ಯೂ ಇದೆ. ಕಳೆದ ವರ್ಷದಲ್ಲಿ ತೆರೆ ಕಾಣದೇ ಇರುವ ಸ್ಟಾರ್ ನಟರ ಸಾಲು ಸಾಲು ಚಿತ್ರಗಳು ಈ ವರ್ಷದಲ್ಲಿ ಭರ್ಜರಿ ಯಾಗಿ ಬಿಡುಗಡೆಯಾಗಲಿವೆ.

ಭಜರಂಗಿ ಅವತಾರದಲ್ಲಿ ಶಿವಣ್ಣ

ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’ ಈ ವರ್ಷ ತೆರೆ ಕಾಣಲಿದೆ. ಸೂಪರ್ ಹಿಟ್ ಆಗಿದ್ದ ‘ಭಜರಂಗಿ’ ಚಿತ್ರದ ಮುಂದುವರಿದ ಭಾಗ ಇದಾಗಿದ್ದು, ಚಿತ್ರದಲ್ಲಿ ದುಷ್ಟ ಶಕ್ತಿಗಳ ವಿರುದ್ಧದ ಹೋರಾಟ ಮುಂದುವರಿಯಲಿದೆ. ಚಿತ್ರದ ಟೀಸರ್ ನಿರೀಕ್ಷೆ ಹೆಚ್ಚಿಸಿದೆ. ಇದರಲ್ಲಿ ಮತ್ತೊಮ್ಮೆ ವಿಭಿನ್ನ ಪಾತ್ರದಲ್ಲಿ ಶಿವಣ್ಣ ಗಮನಸೆಳದರೆ, ಹಿರಿಯ ನಟಿ ಶ್ರುತಿ ವಿಶೇಷ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಅಂತು ಈ ವರ್ಷವೇ ಮತ್ತೊಮ್ಮೆ ‘ಭಜರಂಗಿ 2’ ಬೆಳ್ಳಿತೆರೆಯಲ್ಲಿ ಅಬ್ಬರ ತೋರಲಿದೆ. ಈ ಚಿತ್ರದ ಜತೆಗೆ ಶಿವಣ್ಣ, ‘ಶಿವಪ್ಪ’  ಚಿತ್ರ ದಲ್ಲೂ ನಟಿಸುತ್ತಿದ್ದು, ಈಗಷ್ಟೇ ವೈರಲ್ ಆಗಿರುವ ಚಿತ್ರದ ಹೊಸ ಲುಕ್ ಗಮನ ಸೆಳೆಯುತ್ತಿದೆ.

ಹವಾ ಸೃಷ್ಟಿಸಿದ ಯುವರತ್ನ
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ‘ಯುವರತ್ನ’ ತೆರೆಗೆ ಬರಲು ಸಿದ್ಧವಾಗಿದೆ. ಕನ್ನಡ ಮಾತ್ರವಲ್ಲದೇ ತೆಲುಗಿ ನಲ್ಲೂ ‘ಯುವರತ್ನ’ನ ಹವಾ ಶುರುವಾಗುವುದು ಖಚಿತವಾಗಿದೆ. ಚಿತ್ರದ ಪೋಸ್ಟರ್, ಡೈಲಾಗ್ ಟೀಸರ್, ಲಿರಿಕಲ್ ಹಾಡು ಎಲ್ಲವೂ ‘ಯುವರತ್ನ’ನ ಬಗ್ಗೆೆ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ಏಪ್ರಿಲ್ ಅಥವಾ ಮೇ ನಲ್ಲಿ ‘ಯುವರತ್ನ’ ತೆರೆಯಲ್ಲಿ ರಾರಾಜಿಸಲಿದೆ. ಇದರ ಜತೆಗೆ ಅಪ್ಪು ‘ಜೇಮ್ಸ್‌’ ಚಿತ್ರದಲ್ಲೂ ಬ್ಯುಸಿ ಯಾಗಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ‘ಜೇಮ್ಸ್‌‌’ ಕೂಡ ಈ ವರ್ಷವೇ ತೆರೆಗೆ ಬರಬಹುದು ಎಂದು ಪ್ರೇಕ್ಷಕರು ಕಾತರದಿಂದ
ಕಾಯುತ್ತಿದ್ದಾರೆ.

ರಾಬರ್ಟ್ ದರ್ಶನ
ಎಲ್ಲರೂ ಕಾತರದಿಂದ ಕಾಯುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿ ನಯದ ‘ರಾಬರ್ಟ್’ ಈ ಹಿಂದೆಯೇ ಚಿತ್ರೀಕರಣ ಪೂರ್ಣಗೊಳಿಸಿ, ತೆರೆಗೆ ಬರಲು ಸಿದ್ಧವಾಗಿದ್ದು ಟೀಸರ್ ಹಾಗೂ ಹಾಡುಗಳ ಮೂಲಕವೇ ಹೊಸ ಟ್ರೆಂಡ್ ಸೃಷ್ಟಿಸಿದೆ. ಇನ್ನೇನು ಚಿತ್ರ ತೆರೆಗೆ ಬರುತ್ತದೆ ಎಂದು ಕಾದು ಕುಳಿತಿರುವಾಗಲೇ ಚಿತ್ರದ ಬಿಡುಗಡೆಗೆ ಕರೋನಾ ಕಂಟಕ ಎದುರಾಗಿತ್ತು.

ಅಂತು ಹಳೆ ವರ್ಷ ಕಳೆದಿದ್ದು, ಈ ವರ್ಷವೇ ‘ರಾಬರ್ಟ್’ ಮೂಲಕ ದರ್ಶನ್ ತಮ್ಮ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ. ಇದರ ಜತೆಗೆ ‘ರಾಜ ವೀರ ಮದಕರಿ ನಾಯಕ’ ಚಿತ್ರದಲ್ಲೂ ಬ್ಯುಸಿಯಾಗಿರುವ ದಚ್ಚು, ಮತ್ತೊಮ್ಮೆ ಐತಿಹಾಸಿಕ ಚಿತ್ರದಲ್ಲಿ ‘ಮದಕರಿ ನಾಯಕನಾಗಿ ಕತ್ತಿ ಹಿರಿದು ತೆರೆಯಲ್ಲಿ ಘರ್ಜಿಸಲಿದ್ದಾರೆ.

ಕೋಟಿಗೊಬ್ಬನ ನಯ ಅವತಾರ
ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಈ ವರ್ಷ ಬಿಡುಗಡೆಯಾಗುವುದು ಖಚಿತ. ಚಿತ್ರದಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಗಮನ ಸೆಳೆದಿರುವ ಸುದೀಪ್, ಹಾಡಿನ ಮೂಲಕವೂ ಕ್ಯೂರಿಯಾಟಿ ಮೂಡಿಸಿದ್ದಾರೆ. ಬಿಡುಗಡೆಯಾಗಿರುವ ಚಿತ್ರದ ಟೀಸರ್ ಕೂಡ ಕುತೂಹಲ ಹುಟ್ಟಿಸಿದೆ. ಜತೆಗೆ ‘ಫ್ಯಾಂಟಮ್’ ಆಗಮನಕ್ಕೂ ವೇದಿಕೆ ಸಜ್ಜಾಗಲಿದೆ. ಅಂತಿಮ ಹಂತದ ಚಿತ್ರೀಕರಣದಲ್ಲಿರುವ ‘ಫ್ಯಾಂಟಮ್’ ಪೋಸ್ಟರ್ ಮೂಲಕವೇ ಗಮನಸೆಳೆದಿತ್ತು. ಅದರಲ್ಲೂ ಸ್ಪೆಷಲ್ ಗೆಟಪ್‌ನಲ್ಲಿ ಮಿಂಚಿದ ಕಿಚ್ಚ, ಅಭಿಮಾನಿಗಳಲ್ಲಿ ಕಿಚ್ಚಾಯಿಸಿದ್ದರು. ‘ಫ್ಯಾಂಟಮ್’ ಕೂಡ ಈ ವರ್ಷವೇ ತೆರೆಗೆ ಬರುವುದು ಬಹುತೇಕ ಖಚಿತ. ಇನ್ನು ಮತ್ತೆ ಚಿತ್ರ ನಿರ್ದೇಶನದತ್ತ ಒಲವು ತಾಳಿರುವ ಕಿಚ್ಚ, ಈ ವರ್ಷವೇ ಹೊಸ ಚಿತ್ರ ವನ್ನು ಘೋಷಿಸುವ ಸಾಧ್ಯತೆಯೂ ಇದೆ.

ಕೋಟೆ ಕಟ್ಟಿದ ರಾಕಿಬಾಯ್
ರಾಕಿಂಗ್ ಸ್ಟಾರ್ ಯಶ್ ಮತ್ತೊಮ್ಮೆ ಧೂಳ್ ಎಬ್ಬಿಸಲು ಸಜ್ಜಾಗಿದ್ದಾರೆ. ಚಿತ್ರರಂಗದಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ಕೆಜಿಎಫ್ ಚಾಪ್ಟರ್ 2’ ಚಿತ್ರ ಚಿತ್ರೀಕರಣ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ. ಕೋವಿಡ್ ನಡುವೆಯೂ ಭರದ ಚಿತ್ರೀಕರಣ ನಡೆಸಿದ ಚಿತ್ರತಂಡ, ವಿಶೇಷ ದಿನಗಳಲ್ಲಿ ಹೊಸ ಉಡುಗೊರೆ ನೀಡಿದೆ. ಫಸ್ಟ್ ಲುಕ್‌ನಲ್ಲಿಯೇ ಚಿತ್ರದ
ಬಗೆಗಿನ ಕುತೂಹಲ ಇಮ್ಮಡಿಗೊಂಡಿದ್ದು, ಯಶ್ ಬರ್ತ್‌ಡೆಗೆ, ಮತ್ತೊಂದು ವಿಶೇಷ ಉಡುಗೊರೆ ನೀಡಲು ಸಜ್ಜಾಗಿದೆ, ‘ಕೆಜಿಎಫ್’ ಟೀಂ. ಬಾಲಿವುಡ್ ನಟ ಸಂಜಯ್ ದತ್, ನಟಿ ರವಿನಾಟಂಡನ್ ಹೀಗೆ ತಾರಾಗಣದ ಮೂಲಕವೇ ಗಮನ ಸೆಳೆದ ‘ಕೆಜಿಎಫ್ 2’, ಈ ವರ್ಷ ಶುಭದಿನದಂದೇ ಶುಭಾರಂಭ ಮಾಡಲಿದೆ.

ಘೀಳಿಡಲಿದೆ ಸಲಗ
ಸ್ಯಾಂಡಲ್‌ವುಡ್ ಕರಿಚಿರತೆ ದುನಿಯಾ ವಿಜಿ ನಟಿಸಿ, ನಿರ್ದೇಶಿಸುತ್ತಿರುವ ‘ಸಲಗ’, ತೆರೆಗೆ ದಾಂಗುಡಿ ಇಡಲು ಸನ್ನದ್ಧವಾಗಿದೆ. ಚಿತ್ರೀಕರಣ ಪೂರ್ಣ ಗೊಳಿಸಿರುವ ಚಿತ್ರತಂಡ, ‘ಸಲಗ’ನನ್ನು ತೆರೆಗೆ ಕರೆತರಲು ಎದಿರು ನೋಡುತ್ತಿದೆ. ಹಿಂದೆಯೇ ಬಿಡುಗಡೆ ಯಾದ ‘ಸಲಗ’ನ ‘ಸೂರಿಯಣ್ಣನ…’ ಹಾಡು, ಜನಜನಿತ ವಾಗಿದೆ.

ಇನ್ನು ಚಿತ್ರದ ಮತ್ತೊಂದು ಹಾಡನ್ನು ಮಳೆಯಲ್ಲಿಯೇ ಚಿತ್ರೀಕರಿಸಿದ್ದು,  ‘ಸಲಗ’ನ ವಿಶೇಷ. ಈ ಹಾಡನ್ನು ಹೊಸ ವರ್ಷದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ಕಳೆದ ವರ್ಷವೇ ‘ಸಲಗ’ನ ಆಗಮನವಾಗ ಬೇಕಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಈ ಬಾರಿ ‘ಸಲಗ’ ಸ್ಯಾಂಡಲ್ ವುಡ್‌ನಲ್ಲಿ ಹೆಜ್ಜೆ ಗುರುತು ಮೂಡಿಸುವುದು ಪಕ್ಕಾ.

ಪೊಗರು ಖದರು
ಆ್ಯಕ್ಷನ್ ಪ್ರಿನ್ಸ್‌ ಧ್ರುವಸರ್ಜಾ ಚಂದನವನದಲ್ಲಿ ಹೊಸ ಅವತಾರ ಎತ್ತಿದ್ದು, ‘ಪೊಗರು’ ಚಿತ್ರದ ಮೂಲಕ ಖದರ್ ತೋರಲು ಬರಲಿದ್ದಾರೆ. ಚಿತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿ ತಮ್ಮ ಅಭಿಮಾನಿಗಳಿಗೆ ಹೊಸ ಉಡುಗೊರೆ ನೀಡಲು ಸಜ್ಜಾಗಿದ್ದರು. ಬೆಳಕಿನ ಹಬ್ಬಕ್ಕೆ ‘ಪೊಗರು’ ಬರಲಿದೆ ಎಂಬ ನಿರೀಕ್ಷೆಯೂ ಇತ್ತು. ಆದರೆ ಕರೋನಾ ಅಡ್ಡಿಯಾಗಿತ್ತು. ಈಗ ಎಲ್ಲಾ ಅಡ್ಡಿ ಆತಂಕಗಳನ್ನು ದಾಟಿ ‘ಪೊಗರು’ ಈ ವರ್ಷವೇ ಅಬ್ಬರ ತೋರಲಿದೆ.

ಅದಾಗಲೇ ಚಿತ್ರದ ಟೈಟಲ್ ಹಾಡು ಬಿಡುಗಡೆಯಾಗಿದ್ದು, ಹುಚ್ಚೆದ್ದು ಕುಣಿ ಯುವಂತೆ ಮಾಡಿದೆ. ಖಡಕ್ ಡೈಲಾಗ್‌ನ ಟೀಸರ್ ರಿಲೀಸ್ ಆಗಿದ್ದು, ಯುವಕರ ಮನಸೂರೆಗೊಂಡಿದೆ. ಈಗ ಈ ಟೀಸರ್ ತೆಲುಗಿನಲ್ಲಿಯೂ ಬಿಡುಗಡೆಯಾಗ ಲಿದೆ.

ತೋತಾಪುರಿ ಹಿಡಿದ ಜಗ್ಗಣ್ಣ
ಆ್ಯಕ್ಷನ್, ಥ್ರಿಲ್ಲರ್, ಸಸ್ಪೆನ್ಸ್‌ ಚಿತ್ರಗಳ ನಡುವೆ ನವರಸ ನಾಯಕ ಜಗ್ಗೇಶ್ ಮತ್ತೆ ನಮ್ಮನ್ನೆಲ್ಲ ನಗಿಸಲು ಬರಲಿದ್ದಾರೆ. ಈ ಬಾರಿ ‘ತೋತಾಪುರಿ’ಯ ಸವಿ ಹೊತ್ತು ತರಲಿದ್ದಾರೆ. ಕಳೆದ ಬಾರಿ ‘ಕಾಳಿದಾಸ’ನಾಗಿ ಮನಸೆಳೆದ ಜಗ್ಗಣ್ಣ, ಈಗ ಭರಪೂರ ಹಾಸ್ಯದ ಮಜಲನ್ನು ಹೊತ್ತ ‘ತೋತಾಪುರಿ‘ ತಿನಿಸುತ್ತಾ ನಗೆಗಡಲಲ್ಲಿ ತೇಲಿಸಲಿದ್ದಾರೆ. ಇದರ ಜತೆಗೆ ಕೋಮಲ್ ಕೂಡ ಮತ್ತೆ ಕಾಮಿಡಿ ಕಮಾಲ್ ಮಾಡಲು ಸಿದ್ಧವಾಗಿದ್ದು, ‘2020’ ಚಿತ್ರದ ಮೂಲಕ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಲಿದ್ದಾರೆ.

ರಿಯಲ್ ಸ್ಟಾರ್ ಕಬ್ಜ
ಹಿಂದೆ ಐ ಲವ್ ಯು ಎಂದ ರಿಯಲ್ ಸ್ಟಾರ್ ಉಪ್ಪಿ ಈಗ ‘ಕಬ್ಜ’ ಚಿತ್ರದ ಮೂಲಕ ಅಂಡರ್‌ವರ್ಲ್ಡ್‌ ಡಾನ್ ಅವತಾರ ತಾಳಿದ್ದಾರೆ. ಅದ್ಧೂರಿ ಸೆಟ್ ಹಾಕಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಬಹುತೇಕ ಚಿತ್ರೀಕರಣವನ್ನು ಮುಗಿಸಿದೆ. 1980ರ ಕಾಲಘಟ್ಟದ
ಕಥೆ ಇದಾಗಿದ್ದು, ಗನ್ ಹಿಡಿದ ಉಪ್ಪಿ ಗಮನಸೆಳೆಯುತ್ತಾರೆ. ‘ಕಬ್ಜ’ ಈ ವರ್ಷವೇ ತೆರೆಗೆ ಬರಲಿದೆ. ಇದರ ಜತೆಗೆ ‘ಬುದ್ದಿವಂತ 2’ ಚಿತ್ರ ಚಿತ್ರೀಕರಣ ಕೂಡ ನಡೆ ಯುತ್ತಿದ್ದು, ಆ ಚಿತ್ರದ ಮೂಲಕ ಉಪ್ಪಿ ಮತ್ತಷ್ಟು ಮನರಂಜನೆ ನೀಡಲಿದ್ದಾರೆ.

ಈ ಚಿತ್ರಗಳ ಜತೆಗೆ ರಕ್ಷಿತ್ ಶೆಟ್ಟಿ ನಟನೆಯ ‘ಚಾರ್ಲಿ 777’, ‘ರಿಶಬ್ ಶೆಟ್ಟಿ ಅಭಿ ನಯದ ‘ಹೀರೋ’, ರಮೇಶ್ ಅರವಿಂದ್ ನಿರ್ದೇಶಿಸಿ ನಟಿಸುತ್ತಿರುವ ‘100’, ಪ್ರಜ್ವಲ್ ದೇವರಾಜ್ ಮುಖ್ಯಪಾತ್ರದಲ್ಲಿರುವ ‘ಅಬ್ಬರ’, ‘ಇನ್ಸ್ಪೆಕ್ಟರ್ ವಿಕ್ರಂ’ ಕೂಡ ಈ ವರ್ಷವೇ ತೆರೆಗೆ ಬರಲಿದೆ. ಜತೆಗೆ ಹೊಸಬರ ಹೊಸ ಪ್ರಯತ್ನ ಈ ವರ್ಷವೂ ಮುಂದುವರಿಯ ಲಿದೆ. ಚಂದನವನಕ್ಕೆ ಮತ್ತಷ್ಟು ಹೊಸ ಪ್ರತಿಭೆಗಳ ಪರಿಚಯವಾಗಲಿದೆ.