Monday, 25th November 2024

ನಮ್ಮೂರು ನಮಗೆ ಇಷ್ಟ

ಬಿ.ಕೆ.ಮೀನಾಕ್ಷಿ ಮೈಸೂರು

ನಿಜಕ್ಕೂ ಕಾಲುಗಳು ಜಡ್ಡುಗಟ್ಟಿವೆ. ಎಲ್ಲಿಗೆ ಹೋಗಲಿ ? ಏನು ಮಾಡಲಿ? ಎಂದು ದೇಹ ಮನಸ್ಸು ತಹತಹಿಸುತ್ತಿವೆ.

ಕಾಲುಗಳಂತೂ ಶತಪಥ ಹಾಕುತ್ತಲೇ ಇವೆ. ರಾತ್ರಿ ಮಲಗಿದರೆ ಸಾಕು, ಬಸ್ಸಿನಲ್ಲಿ ಓಡಾಡಿದಂತೆ, ರಶ್‌ನಲ್ಲಿ ನಿಂತಿದ್ದಂತೆ, ರೈಲಿನಲ್ಲಿ ಲಾಂಗ್ ಜರ್ನಿ ಹೋದಂತೆ…..ಹೀಗೇ..ಏನೇನೋ ಕನಸುಗಳು! ಮನೆಯಲ್ಲೇ ಕೂತೂ ಕೂತೂ ಹುಚ್ಚು ಹಿಡಿದಂತಾಗಿರುವುದಂತೂ ಖಂಡಿತ.

ಈಗ ನಿಧಾನಕ್ಕೆ ಜಗಕ್ಕೆ ಜನ ತೆರೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಮೊದಲು ಮೈಸೂರನ್ನೆಲ್ಲ ಮನದಣಿಯೆ ಸುತ್ತು ಹಾಕೋಣ ವೆನಿಸಿದೆ. ನಂತರ ಸುಮ್ಮನೆ ಬಸ್ಸು ಹತ್ತಿ ಮಲೆನಾಡಿನ ದಾರಿಯಲ್ಲಿ ಸಾಗಿ ಹೋಗೋಣವೆನಿಸಿದೆ. ಕರಾವಳಿಯುದ್ದಕ್ಕೂ ಸಮುದ್ರ ವನ್ನು ನೋಡುತ್ತಾ ಬಸ್ಸಿನಲ್ಲಿ ಹಾಗೇ ತೇಲಿ ಹೋಗೋಣವೆನಿಸುತ್ತಿದೆ. ಧರ್ಮಸ್ಥಳದಲ್ಲಿ ಪ್ರಸಾದಕ್ಕೆ ಕುಳಿತು ಹೊಟ್ಟೆ ಬಿರಿಯುವ ಹಾಗೆ ಊಟ ಮಾಡೋಣವೆನಿಸಿದೆ. ಶೃಂಗೇರಿಯ ನದೀತೀರದಲ್ಲಿ ಕುಳಿತು ಸುಮ್ಮನೆ ನೀರನ್ನು ನೋಡೋಣ ವೆನಿಸಿದೆ.

ಕುದುರೆಮುಖದ ಬೆಟ್ಟಗಳನ್ನು ಮನಸೇಚ್ಛೆ ಆಸ್ವಾದಿಸಬೇಕೆನಿಸಿದೆ. ಉತ್ತರ ಭಾರತದ ಪ್ರವಾಸದ ಯೋಜನೆಯಿದ್ದ ನನಗೆ, ಇಂತಹ
ಅವೇಳೆಯಲ್ಲಿ ಅದು ಸಾಧ್ಯವೇ ಅನಿಸುತ್ತಿದೆ. ಅದಕ್ಕೆ ದಕ್ಷಿಣ ಭಾರತದ ಪ್ರವಾಸಕ್ಕಾದರೂ ಹೋಗಲು ಆಸೆಯಾಗುತ್ತಿದೆ. ಅದರಲ್ಲೂ ತಿರುವನಂತಪುರ, ಶ್ರೀರಂಗಂ, ರಾಮೇಶ್ವರಂ ನೋಡಲೇಬೇಕೆಂಬ ಮನದಾಸೆಯನ್ನು ಖಂಡಿತ ಬಚ್ಚಿಡಲು ಸಾಧ್ಯ ವಾಗುತ್ತಿಲ್ಲ. ಹೋದರೆ ಇದೇ ಪ್ರವಾಸಕ್ಕೆ ಹೋಗಬೇಕು. ಈ ಕರೋನಾ ಕಾಲದಲ್ಲಿ ಏಕಾಏಕಿ ಹೊರಡಲು ಸಾಧ್ಯವೇ ಇಲ್ಲ. ಪೂರ್ವ ಸಿದ್ಧತೆ ಅತ್ಯಗತ್ಯವಾಗಿದೆ.

ಹಾಳಾಗದ ಚಪಾತಿ, ಅವಲಕ್ಕಿ, ಒಂದಷ್ಟು ಕುರುಕಲು ಇವು ಆಹಾರಕ್ಕೆ ಸಾಕು. ಬಿಸಿಬಿಸಿ ನೀರನ್ನು ಜೊತೆಯಲ್ಲಿರುವಂತೆ ನೋಡಿ ಕೊಳ್ಳುವುದು, ಬಿಸಿಬಿಸಿ ಟೀ ಕಾಫಿ ಸಿಕ್ಕಾಗ ಕುಡಿಯುವುದು, ಸ್ಯಾನಿಟೈಸರ್, ಸೋಪನ್ನು ಜೊತೇಲಿಟ್ಟುಕೊಳ್ಳುವುದು. ತೀರ್ಥಸ್ನಾನ ಗಳನ್ನು ಮಾಡುವುದು ಕ್ಷೇಮವಲ್ಲ ಎಂಬುದು ಗಮನದಲ್ಲಿದ್ದೇ ಇರುವುದು. ಎಲ್ಲದಕ್ಕಿಂತ ಹೆಚ್ಚಾಗಿ ಅಂತರ ಕಾಯ್ದುಕೊಂಡು ಪ್ರವಾಸ ಮಾಡುವುದು. ಅಷ್ಟರಲ್ಲೇನಾದರೂ ಕೊರೋನಾ ನಿರ್ಮೂಲವಾದರೆ, ನಿರ್ಭಿಡೆಯಿಂದ ಪ್ರವಾಸ ಹೋಗಿಬರುವುದು.

ಅದೇನಾದರಾಗಲಿ, ಮೊದಲು ಮೈಸೂರನ್ನೇ ಸುತ್ತುಹಾಕುವುದು ನನ್ನ ಗುರಿ.