ಡಾ.ಉಮಾಮಹೇಶ್ವರಿ ಎನ್.
ಜನಸಂದಣಿಯ ರೇಜಿಗೆ ಇಲ್ಲದ, ವಾತಾವರಣ ಮಾಲಿನ್ಯವಿಲ್ಲದ, ಮನೆ ಮುಂದಿನ ಕೈತೋಟಗಳನ್ನು ನೋಡುತ್ತಾ ವಾಕಿಂಗ್ ಮಾಡಲು ಅವಕಾಶವಿರುವ ಪುಟ್ಟ ಪಟ್ಟಣವೇ ಜರ್ಮನಿಯ ಲಾಂಡಾವ್. ಶಾಂತ ಜೀವನ ನಡೆಸುವವರಿಗೆ ಇದು ಉತ್ತಮ ತಾಣ. ಹೆಚ್ಚಿನ ಮನೆಗಳ ಮುಂದಿರುವ ಕೈತೋಟದ ಹಸಿರು ಗಿಡಗಳು ಕಣ್ಣಿಗೆ ಅಂದ.
ನಗರ ಜೀವನದ ಜಂಜಡಗಳಿಂದ ಮುಕ್ತವಾಗಿರುವ, ವಾಯು ಮಾಲಿನ್ಯ ಇಲ್ಲದ, ವಾಹನ ದಟ್ಟಣೆ ಇಲ್ಲದ ಪಟ್ಟಣವೇ ಲಾಂಡಾವ್.
ಜರ್ಮನಿಯ ರೈನ್ ಲ್ಯಾಂಡ್ ಪಲಟಿನೇಟ್ ಪ್ರಾಂತ್ಯದಲ್ಲಿರುವ ಪುಟ್ಟ, ಸುಂದರ, ಪುರಾತನ ನಗರ. ಸುಮಾರು 50,000
ಜನಸಂಖ್ಯೆ ಉಳ್ಳ ಈ ಜಾಗ ವಿದ್ಯಾಭ್ಯಾಸ, ಸಾಂಸ್ಕೃತಿಕ, ಐತಿಹಾಸಿಕ, ಔದ್ಯೋಗಿಕ ಮಹತ್ವವುಳ್ಳದ್ದಾಗಿದೆ. ದ್ರಾಕ್ಷಿ ತೋಟಗಳು ಈ ನಗರದ ಸುತ್ತಲೂ ಯಥೇಚ್ಛವಾಗಿವೆ. ವೈನ್ ತಯಾರಿಕೆಯೂ ಇಲ್ಲಿನ ಮುಖ್ಯ ಉದ್ಯಮವೇ.
ಪ್ರಸಿದ್ಧವಾದ ಇಲ್ಲಿನ ವಿಶ್ವವಿದ್ಯಾಲಯ ಹಲವೆಡೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಇಲ್ಲಿ ಹಲವಾರು ಮೋಟಾರು ವಾಹನಗಳಿಗೆ ಸಂಬಂಧಿತ ಉದ್ದಿಮೆಗಳಿವೆ. ಇವುಗಳಲ್ಲಿ ಒಂದಾದ ಎ.ಪಿ.ಎಲ್.ನಲ್ಲಿ ನನ್ನ ಮಗ ವೃತ್ತಿನಿರತನಾದ್ದಾಗ ಭೇಟಿ ನೀಡುವ ಅವಕಾಶಗಳು ದೊರೆತವು. ಅವನ್ನು ಸದುಪಯೋಗ ಪಡಿಸಿಕೊಂಡೆ.
ಪುರಾತನ ಇತಿಹಾಸ
1106ರಲ್ಲೇ ಇಲ್ಲಿ ಪಟ್ಟಣವು ಬೆಳೆಯಲು ಆರಂಭಿಸದ ಉಲ್ಲೇಖಗಳಿವೆ. ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಹಲವಾರು ರಾಜರ ವಶದಲ್ಲಿದ್ದ ಇದು 1680 ರಿಂದ 1815ರ ವರೆಗೆ ಫ್ರೆಂಚರ ವಶದಲ್ಲಿತ್ತು. ತದನಂತರ ಸ್ವಲ್ಪ ಸಮಯ ಜರ್ಮನಿಯ ಬವೇರಿಯಾ ಪ್ರಾಂತ್ಯದ ಭಾಗವಾಗಿತ್ತು. ಎರಡನೇ ಮಹಾಯುದ್ಧದ ನಂತರ ಕೆಲ ಸಮಯ ಈ ನಗರ ಫ್ರೆಂಚ್ ಬ್ಯಾರಕ್ಗಳ ಸ್ಥಾನವಾಗಿತ್ತು. ಫ್ರಾನ್ಸ್ ನ ಗಡಿಯಿಂದ ಕೇವಲ 30 ಕಿ.ಮೀ. ದೂರದಲ್ಲಿದೆ.
ನಗರದ ಮುಖ್ಯ ಪ್ರದೇಶದಲ್ಲಿ ಆಡಳಿತ ಕಛೇರಿ ಹಾಗೂ ಮಾರ್ಕೆಟ್ ಹಾಲ್ ಗಳಿವೆ. ಇವುಗಳಿರುವ ಸ್ಥಳದಲ್ಲಿ ಸುತ್ತಲೂ ಅಲಂಕೃತ ಸುಂದರ ಕಟ್ಟಡಗಳ ಸೊಬಗು ಕಣ್ಸೆಳೆಯುತ್ತದೆ. ಹಾಗೆಯೇ ಕೋರ್ಟ್, ಫೆಸ್ಟ್ ಹಾಲ್ಲೆ ಎಂಬ ರಂಗಮಂದಿರ, ಪುರಾತನ ಪ್ರೊಟೆಸ್ಟೆಂಟ್ ಚರ್ಚ್ ನೋಡಬೇಕಾದ ಸ್ಥಳಗಳು. ಇಲ್ಲಿರುವ ಮೃಗಾಲಯವೂ ಮಕ್ಕಳಿಗೆ ಪ್ರಿಯ.
ಸುತ್ತಲೂ ಹಲವಾರು ಬೆಟ್ಟಗಳನ್ನು ಹೊಂದಿರುವ ಈ ಜಾಗದ ಯಾವ ಮೂಲೆಗೆ ಹೋದರೂ ಅದರದೇ ಸೌಂದರ್ಯ ಮನಸೆಳೆಯುತ್ತದೆ. ನಗರ ಮಧ್ಯದ ರಸ್ತೆಗಳು, ಇಕ್ಕೆಲಗಳಲ್ಲಿ ಕಲಾತ್ಮಕವಾಗಿ ಜೋಡಿಸಿರುವ ಹೂಕುಂಡಗಳು, ಎರಡೂ ಬದಿ ಗಳಲ್ಲಿರುವ ವಸತಿ ಹಾಗೂ ವ್ಯವಹಾರದ ಕಟ್ಟಡಗಳು, ನಗರಮಧ್ಯದಲ್ಲಿರುವ ಸರೋವರ, ಹೊರಗೆ ಹೋದಂತೆ ಎದುರಾಗುವ ಹುಲ್ಲುಗಾವಲುಗಳು, ಅಲ್ಲಿ ಮೇಯುವ ದನ-ಕುರಿಗಳು, ರಸ್ತೆಯ ಇಕ್ಕೆಲಗಳ ಮರಗಳು..
ನೋಡಿದಷ್ಟೂ ತೃಪ್ತಿಯಾಗದ ಹಸಿರು ಹೊದಿಕೆ, ಯಾವ ಕಲ್ಮಶಗಳೂ ಇಲ್ಲದ ಶುದ್ಧಗಾಳಿ, ಜುಳು..ಜುಳು..ಹರಿಯುವ
ಕಾಲುವೆಗಳು ಬೇಕರಿ, ರೆಸ್ಟೋರೆಂಟ್, ಸುರ್ಪ ಮಾರ್ಕೆಟ್ಗಳು ನಿಗದಿತ ಸಂಖ್ಯೆಯಲ್ಲಿವೆ. ಗಿಜಿಗುಡುವ ಜನಸಂದಣಿ ಎಲ್ಲೂ
ಕಾಣಿಸದು. ನಮ್ಮ ವಸತಿಯಿಂದ ಎರಡೇ ನಿಮಿಷಗಳ ನಡಿಗೆಯ ದೂರದಲ್ಲಿದ್ದ ಬಸ್ ನಿಲ್ದಾಣದಿಂದ ರೈಲ್ವೇ ನಿಲ್ದಾಣಕ್ಕೆ
ವಾರದ ದಿನಗಳಲ್ಲಿ ಗಂಟೆಗೊಂದು ಬಸ್ಸು. ಸಮಯಕ್ಕೆ ಸರಿಯಾಗಿ ಹೊರಡುವ ಬಸ್ಸು ತಪ್ಪಿದರೆ ಒಂದು ಗಂಟೆ ಕಾಯಬೇಕು ಇಲ್ಲದಿದ್ದರೆ ಎರಡು ಕಿ.ಮೀ.ನಡೆಯಬೇಕಿತ್ತು. ಈ ನಡಿಗೆಯೂ ಆಹ್ಲಾದಕರವಾಗಿದ್ದುದರಲ್ಲಿ ಸಂಶಯವಿಲ್ಲ.
ನಡೆಯುತ್ತಾ ಹೋದಂತೆ ಕಣ್ಣಿಗೆ ಬೀಳುವುದು ಪ್ರತಿ ಮನೆಯ ಮುಂಭಾಗದಲ್ಲಿರುವ ಕೈತೋಟ. ಕಲಾತ್ಮಕವಾಗಿ ನೆಟ್ಟ ರಂಗು
ರಂಗಾದ ಹೂಗಿಡಗಳು, ಹಣ್ಣಿನ ಗಿಡಮರಗಳು, ತರಕಾರಿಗಿಡಗಳು, ಹುಲ್ಲುಹಾಸು ತೋಟಗಳ ಭಾಗವಾಗಿದ್ದವು.
ಥೀಂ ಆಧಾರಿತ ಕೈತೋಟ
ಕೆಲವು ತೋಟಗಳಲ್ಲಿ ನೀರಿನ ಕೊಳಗಳಿದ್ದು ಅವುಗಳಲ್ಲಿ ಬಾತುಕೋಳಿಗಳು ಈಜಾಡುತ್ತಿದ್ದವು. ಕೆಲವರ ತೋಟಗಳು ಥೀಮ್ ಆಧಾರಿತವಾಗಿದ್ದವು. ಒಂದರಲ್ಲಿ ಬುದ್ಧನ ವಿಗ್ರಹವೂ ಇತ್ತು.
ಮನೆಗಳಿಗೆ ಕಾಂಕ್ರೀಟಿನ ಪಾಗಾರ ಇರಲಿಲ್ಲ. ಮರದ ತುಂಡುಗಳು ಹಾಗೂ ಕಬ್ಬಿಣದ ತಂತಿಯಿಂದ ರಚಿಸಿದ ಅಂಚುಗಳು ಕೆಲವು ಸೈಟುಗಳಲ್ಲಿದ್ದರೆ ಹೆಚ್ಚಿನವುಗಳು ಹಸಿರುಗಿಡಗಳ ಪಾಗಾರ ಹೊಂದಿದ್ದವು. ನಗರದ ಯಾವುದೇ ಭಾಗವನ್ನು ಗಿಡಮರಗಳಿಲ್ಲದೆ ಖಾಲಿ ಬಿಟ್ಟಿರಲಿಲ್ಲ.
ಮೂರು ಪ್ಲಾಟ್ ಫಾಮ್ಗಳುಳ್ಳ ರೈಲ್ವೇ ನಿಲ್ದಾಣದಿಂದ ಕಾಲ್ಸರ್ ರೂಹೆಗೆ ಹೋದರೆ ಅಲ್ಲಿಂದ ಜರ್ಮನಿಯ ಎಲ್ಲಾ ಭಾಗಗಳಿಗೂ ರೈಲು ಸಂಪರ್ಕವಿದೆ. ಫ್ರಾಂಕ್ ಫರ್ಟ್ ನಿಂದ ಮಾನ್ ಹೈಮ್, ನಾಯ್ ಸ್ಟಾಟ್ಗಳಲ್ಲಿ ರೈಲು ಬದಲಾಯಿಸಿ ಇಲ್ಲಿ ತಲುಪಬೇಕು.
ನಾಲ್ಕು ಚಕ್ರಗಳ ವಾಹನ
ಲಾಂಡಾವ್ ಎಂಬುದು ಪುರಾತನ ನಾಲ್ಕು ಚಕ್ರಗಳ ವಾಹನದ ಹೆಸರು. ಹದಿನೆಂಟನೆಯ ಶತಮಾನದಲ್ಲಿ ಇದನ್ನು ಮೊತ್ತ ಮೊದಲ ಬಾರಿಗೆ ತಯಾರಿಸಿದ್ದು ಈ ಊರಿನಲ್ಲಿ. ಎರಡು ಕುದುರೆ ಅಥವಾ ನಾಲ್ಕು ಜನರಿಂದ ಎಳೆಯಲ್ಪಡುತ್ತಿದ್ದ ಇದು ಸ್ಥಳೀಯ ಆಢ್ಯರ ಪ್ರವಾಸದ ಸೌಕರ್ಯವಾಗಿತ್ತು. ಕುಳಿತವರ ವೇಷಭೂಷಣ, ಅಲಂಕಾರಗಳು ನೋಡುಗರಿಗೆ ಸರಿಯಾಗಿ ಕಾಣುವಂತೆ
ಇದರ ವಿನ್ಯಾಸವಿರುತ್ತಿತ್ತು. ಬಿಸಿಲು ತಲೆಯ ಮೇಲೆ ಬೀಳದಂತೆ ಇರುವ ಕದಲಿಸಬಹುದಾದ ಛಾವಣಿಯೂ ಇದರಲ್ಲಿ ಇರುತ್ತಿತ್ತು. ಇಲ್ಲಿ ಮೊದಲಿಗೆ ತಯಾರಾಗಿ, ಕಾಲಾಂತರದಲ್ಲಿ ಯುರೋಪಿನೆಲ್ಲೆಡೆ ಈ ವಾಹನ ಜನಪ್ರಿಯವಾಯಿತು