Tuesday, 26th November 2024

ನಗರ ಮಧ್ಯದಲ್ಲಿ ಪ್ರಶಾಂತ ವಿಹಾರ

ಡಾ.ಉಮಾಮಹೇಶ್ವರಿ ಎನ್‌.

ನಗರದ ಗಲಾಟೆ, ಗದ್ದಲಗಳಿಂದ ತಪ್ಪಿಸಿಕೊಂಡು, ಶಾಂತ ವಾತಾವರಣದಲ್ಲಿ ಧ್ಯಾನಸ್ಥರಾಗಲು ಪ್ರಶಸ್ತ ಸ್ಥಳ ಈ ಬೌದ್ಧ ದೇವಾಲಯ.

ಸಿಕಂದರಾಬಾದಿನ ಮಹೇಂದ್ರಗಿರಿ ಅಥವಾ ಮಹೇಂದ್ರ ಹಿಲ್ಸ್ ನತುತ್ತತುದಿಯಲ್ಲಿದೆ ಆನಂದವಿಹಾರ ಎಂಬ ಬೌದ್ದ ದೇವಾಲಯ. ಪೂರ್ವ ಮಾರೇಡ್ ಪಲ್ಲಿಯಿಂದ ಬಳುಕುತ್ತಾ ಸಾಗುವ ಏರುರಸ್ತೆಯ ಕೊನೆಯಲ್ಲಿದೆ ಸುಂದರ, ಪ್ರಶಾಂತ ವಾತಾವರಣ ಹೊಂದಿದ ಈ ವಿಹಾರ ಅಥವಾ ದೇವಾಲಯ.

1974ರಿಂದಲೇ ಇಲ್ಲಿ ಸಣ್ಣ ರೀತಿಯಲ್ಲಿ ತೊಡಗಿದ ಸಂಸ್ಥೆ 1996ರಲ್ಲಿ ಸಿಕಂದರಾ ಬಾದಿನಲ್ಲಿ ನೆಲೆಸಿರುವ ಬೌದ್ದ ಅನುಯಾಯಿಗಳ ಸಂಘದ ನೋಂದಣಿತ ಸಂಸ್ಥೆಯಾಯಿತು. 2002ರಲ್ಲಿ ಹದಿನಾಲ್ಕನೇ ದಲಾಯಿ ಲಾಮಾ ತೇನ್ ಜನ್ ಗ್ಯಾಟ್ಸೊರವರಿಂದ ಈ ದೇವಾಲಯ ಉದ್ಘಾಟನಗೊಂಡಿತು.

ಮುಖ್ಯ ದೇವಾಲಯ ವಿಶಾಲವಾದ ಸೌಧವಾಗಿದ್ದು ಕಮಾನು ಆಕಾರದ ಛಾವಣಿ ಯನ್ನು ಹೊಂದಿದೆ. ವೇದಿಕೆಯ ಮೇಲೆ ಧ್ಯಾನಮಗ್ನನಾಗಿರುವ ಬುದ್ದನ ಸ್ವರ್ಣವಿಗ್ರಹವಿದೆ. ಇಲ್ಲಿ ತಲುಪಲು ಹಲವಾರು ಮೆಟ್ಟಲು ಗಳನ್ನು ಏರಬೇಕು. ಸುಂದರ ಉದ್ಯಾನವನದ ಮಧ್ಯದಲ್ಲಿರುವ ಮೆಟ್ಟಲೇರವಾಗ ಹತ್ತುವ ಆಯಾಸ ಅರಿವಿಗೇ ಬರುವುದಿಲ್ಲ.

ಮೇಲೇರುವಾಗ ಉದ್ಯಾನದ ಕೆಲಸಗಳಲ್ಲಿ ಮತ್ತು ಸ್ವಚ್ಛತಾಕಾರ್ಯಗಳಲ್ಲಿ ತೊಡಗಿರುವ ಬೌದ್ದಭಿಕ್ಷುಗಳು ಎದುರಾಗುತ್ತಾರೆ. ದೇವಾಲಯದ ಒಳ ಹೊಕ್ಕಾಗ ಎದುರಾಗುವ ದಿವ್ಯಮೌನ ನಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ಯುವುದಂತೂ ಸತ್ಯ. ಬೌದ್ದ ಧರ್ಮದ ಬಗೆಗಿನ ಪುಸ್ತಕಗಳೂ ಇಲ್ಲಿ ಮಾರಾಟಕ್ಕೆ ಲಭ್ಯ.

ಬುದ್ಧನ ಹಲ್ಲು

ಧ್ಯಾನಮಂದಿರ, ಗ್ರಂಥಾಲಯ, ಭಿಕ್ಷುಗಳ ವಾಸಸ್ಥಳಗಳನ್ನೊಳಗೊಂಡ ವಿಶಾಲವಾದ ಸಂಕೀರ್ಣದಲ್ಲಿ ಗಮನಸೆಳೆಯುವ ಇನ್ನೆರಡು ನಿರ್ಮಿತಿಗಳು ಒಂದು ಸ್ತೂಪ ಮತ್ತು ಮರದ ಕೆಳಗೆ ಧ್ಯಾನದಲ್ಲಿ ಕುಳಿತ ಬುದ್ಧನ ವಿಗ್ರಹ.

ಸ್ತೂಪವಿರುವ ಜಾಗದಲ್ಲಿ ಮೊದಲು ನಿಂತಿರುವ ಬುದ್ಧನ ವಿಗ್ರಹವಿತ್ತು. ಈಗ ಥೈಲ್ಯಾಂಡಿನ ದಾನಿಯೊಬ್ಬರ ಸಹಾಯದಿಂದ ತರಿಸಲಾದ ಬುದ್ಧನ ಹಲ್ಲನ್ನು ಇಟ್ಟಿರುವ ಸುಂದರವಾದ ವರ್ತುಲಾಕಾರದ ಸ್ತೂಪದ ನಿರ್ಮಾಣವಾಗಿದೆ. ಈ ಪ್ರದೇಶದಲ್ಲಿ ಅನುಭವಕ್ಕೆ ಬರುವ ಮೌನವಂತೂ ಮನದಲ್ಲಿ ದಿವ್ಯಾನುಭವ ವನ್ನೇ ಮೂಡಿಸುತ್ತದೆ. ಸಾಕಷ್ಟು ಜನ ಪ್ರವಾಸಿಗರು ಮತ್ತು ಭಕ್ತರು ಇಲ್ಲಿಗೆ ನಿರಂತರವಾಗಿ ಬರುತ್ತಿದ್ದರೂ, ಸ್ತೂಪದ ಸರಹದ್ದಿನ ಜಾಗವನ್ನು ಮೌನವಾಗಿ ರಿಸುವಲ್ಲಿ ಸ್ಥಳೀಯ ದೇವಾಲಯ ಸಮಿತಿ ಯಶಸ್ವಿಯಾಗಿದೆ ಎಂದೇ ಹೇಳ ಬಹುದು.

ತುತ್ತತುದಿಯಿಂದ ಕಾಣುವ ನಗರದ ದೃಶ್ಯವಂತೂ ಸುಂದರ, ಮೋಹಕ. ಎಷ್ಟು ನೋಡಿದಷ್ಟೂ ಸಾಕೆನಿಸುವುದಿಲ್ಲ. ಸಂಜೆಯ ನಂತರ ಬಂದರೆ, ಈ ಜಾಗದಿಂದ ಕಾಣುವ ಸಾವಿರಾರು ವಿದ್ಯುದ್ದೀಪಗಳ ಸಾಲು ಮನಸ್ಸಿನಲ್ಲಿ ಅನಿರ್ವಚನೀಯ ಅನುಭವವನ್ನು ಮೂಡಿಸುತ್ತದೆ. ಗೌಜುಗದ್ದಲಗಳ ಮಹಾನಗರದ ಮಧ್ಯದಲ್ಲಿ ಕೆಲವು ಗಂಟೆಗಳ ಕಾಲ ಪ್ರಶಾಂತವಾಗಿ ಕಳೆಯಲು ಸೂಕ್ತ ಪ್ರದೇಶ.