Wednesday, 27th November 2024

ಕಲಾ ಸೇವೆಯೇ ನನ್ನ ಬದುಕು – ರಾಘವೇಂದ್ರ ರಾಜ್’ಕುಮಾರ್‌

ಪ್ರಶಾಂತ್‌ ಟಿ.ಆರ್‌.

ದೊಡ್ಮನೆ ಮಗ ರಾಘವೇಂದ್ರ ರಾಜ್ ಕುಮಾರ್ ‘ರಾಜತಂತ್ರ’ ಗೆದ್ದ ಖುಷಿಯಲ್ಲಿದ್ದಾರೆ.

ಕ್ಯಾಪ್ಟನ್ ರಾಜಾರಾಮ್ ಆಗಿ ಅವರು ತೋರಿದ ನಟನೆಯನ್ನು ಕರುನಾಡಿನ ಜನಮೆಚ್ಚಿದ್ದಾರೆ. ಪ್ರೋತ್ಸಾಹಿಸಿ ದ್ದಾರೆ. ಈ ಪಾತ್ರ ರಾಘಣ್ಣ ಅವರಿಗೆ ಬಲು ಇಷ್ಟವಾಗಿದೆ. ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಮಾತಿಗೆ ಸಿಕ್ಕ ರಾಘಣ್ಣ ಬಿಡುವು ಮಾಡಿಕೊಂಡು, ಒಂದಷ್ಟು ಹೊತ್ತು ನಮ್ಮೊಂದಿಗೆ ಹರಟಿದರು. ತಮ್ಮ ಸಿನಿ ಪಯಣ, ತಾವು ನಿರ್ವಹಿಸುತ್ತಿರುವ ಪಾತ್ರಗಳು ಅಷ್ಟೇ ಅಲ್ಲದೆ ಸಮಾಜಮುಖಿ ಕಾರ್ಯಗಳ ಬಗ್ಗೆಯೂ ನಮ್ಮೊಂದಿಗೆ ವಿಚಾರ ಹಂಚಿಕೊಂಡರು.

ರಾಘಣ್ಣ ಅವರಲ್ಲಿ ಇನ್ನೂ ನಟಿಸಬೇಕೆಂಬ ಹುಮ್ಮಸ್ಸಿದೆ. ಅದಕ್ಕೆ ಪೂರಕವೆಂಬಂತೆ ಹಲವು ಚಿತ್ರಗಳು ಅವರನ್ನು ಅರಸಿ ಬರುತ್ತಿವೆ. ನಾನೊಬ್ಬ ಕಲಾವಿದ, ಕಲಾಸೇವೆಯೇ ನನ್ನ ಬದುಕು. ಕೊನೆಯವರೆಗೂ ನಾನು ನಟಿಸಲು ಬಯಸುತ್ತೇನೆ ಎಂದು ಸಂತಸದಿಂದಲೇ ನುಡಿಯುತ್ತಾರೆ ರಾಘಣ್ಣ. ಈ ನಟನಾ ಬದುಕಿ ನಲ್ಲಿ ಕ್ಯಾಪ್ಟನ್ ರಾಜಾರಾಮ್ ಪಾತ್ರ ನನಗೆ ಸಿಕ್ಕ ಪ್ರಮುಖ ಪಾತ್ರಗಳಲ್ಲಿ ಒಂದು. ಅದು ಚಿರಸ್ಮರಣೀಯ. ದೇಶದ ಗಡಿಯಲ್ಲಿ ಚಕಮಕಿಯಾದಾಗ, ತೊಂದರೆ ಎದುರಾದಾಗ ಯೋಧರ ಸೇವೆ, ಬಲಿದಾನ ನಮಗೆ ಅರ್ಥವಾಗುತ್ತದೆ. ಆ ಬಳಿಕ ನಾವು ಅದನ್ನು ಮರೆತು ಬಿಡುತ್ತೇವೆ. ಹಾಗಾಗಬಾರದು ಅವರ ನಿಸ್ವಾರ್ಥ ಸೇವೆ
ನಮ್ಮ ಮನದಲ್ಲಿ ಸದಾ ಉಳಿಯಬೇಕು. ಈ ನಿಟ್ಟಿನಲ್ಲಿ ನನಗೆ ಅಂತಹ ಪಾತ್ರ ಸಿಕ್ಕಿದ್ದು ಸಂತಸ ತಂದಿದೆ.

ಅಂದು ಬಯಸಿದ ಪಾತ್ರ ಇಂದು ಸಿಕ್ಕಿದೆ

ಆಗಷ್ಟೇ ಕಾರ್ಗಿಲ್ ಯುದ್ದ ಮುಗಿದಿತ್ತು. ಅದೆಷ್ಟೋ ಯೋಧರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದರು. ಮತ್ತಷ್ಟು ಸೈನಿಕರು ಗಾಯಗೊಂಡು ಆಸ್ತ್ರೆ ಸೇರಿದ್ದರು. ಇದೇ ಸಮಯದಲ್ಲಿ ಸಂಬಂಧಿಕರ ಆರೋಗ್ಯ ವಿಚಾರಿಸಲು ನಾನು ಮತ್ತು ಅಪ್ಪಾಜಿ ರಾಮಯ್ಯ ಆಸ್ಪತ್ರೆಗೆ ತೆರಳಿದ್ದೆವು. ಈ ವೇಳೆ ನಮ್ಮ ಆತ್ಮೀಯರು, ಅಪ್ಪಾಜಿ ಅವರ ಬಳಿ ಬಂದು, ಕಾರ್ಗಿಲ್ ಯುದ್ದದಲ್ಲಿ ಹೋರಾ ಡಿದ ಯೋಧರೊಬ್ಬರು ಇದೇ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಈ ಮಾತು ಅಪ್ಪಾಜಿ ಕಿವಿಗೆ ಬಿದ್ದಿದ್ದೆ ತಡ ಅತ್ತ ಧಾವಿಸಿದರು.

ಯೋಧರ ಯೋಗಕ್ಷೇಮ ವಿಚಾರಿಸಿದರು. ಅವರನ್ನು ಕಂಡು ನಿಜವಾದ ಹೀರೋ ನೀವು ಎಂದು ಶ್ಲಾಘಿಸಿದರು. ಅವರು ಆಸ್ಪತ್ರೆ ಯಲ್ಲಿ ಇರುವವರೆಗೂ ಪ್ರತಿನಿತ್ಯ ಅಲ್ಲಿಗೆ ತೆರಳಿ ಅವರ ಆರೋಗ್ಯ ವಿಚಾರಿಸುತ್ತಿದ್ದರು. ಭೇಟಿಯಾದಾಗ ಇಬ್ಬರ ಕಣ್ಣಂಚಿ ನಲ್ಲಿ ಹನಿ ಜಿನುಗುತಿರುತ್ತಿತ್ತು. ಇದರ ಜತೆಗೆ ಕಾರ್ಗಿಲ್ ಸೈನಿಕರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಇಡೀ ಚಿತ್ರರಂಗ ಒಂದಾಗಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅಂದು ಅಪ್ಪಾಜಿ ಆಡಿದ ಮಾತುಗಳು ನನ್ನನ್ನು ಹುರಿದುಂಬಿಸಿದವು.

ಯೋಧರ ಬಗ್ಗೆ ಗೌರವ ಇಮ್ಮಡಿಯಾಯಿತು. ನನಗೂ ಯೋಧನ ಪಾತ್ರದಲ್ಲಿ ನಟಿಸುವ ಆಸೆ ಚಿಗುರಿತು. ಹೀಗಿರುವಾಗಲೇ ನಿರ್ದೇಶಕ ಸ್ವಾಮಿ ಕಥೆ ಹೇಳಿದರು. ಕಥೆ ಕೇಳಿ ನನಗೂ ಇಷ್ಟವಾಯಿತು. ಕ್ಯಾಪ್ಟನ್ ರಾಜಾರಾಮ್ ಆಗಿ ಬಣ್ಣಹಚ್ಚಿದೆ. ಈ ಪಾತ್ರದ ಮೂಲಕ ಸೈನಿಕರ ಕುಟುಂಬವನ್ನು ಮುಟ್ಟಬಹುದು ಅದೇ ನನ್ನಲ್ಲಿ ಧನ್ಯತೆ ಮೂಡಿಸಿದೆ.

ಭಕ್ತಕುಂಬಾರನ ಪಾತ್ರ ನನಗಿಷ್ಟ

ಅಪ್ಪಾಜಿ ನಿರ್ವಹಿಸಿದ ಭಕ್ತಕುಂಬಾರನ ಪಾತ್ರ ಮಾಡಬೇಕು ಎಂಬ ಆಸೆಯಿದೆ. ನನಗೆ ಅಪ್ಪಾಜಿಯೇ ಎಲ್ಲಾ, ಅವರು ಹೇಳಿದಂತೆ ನಾನು ಕೇಳಿದ್ದೇನೆ. ಯಾವುದಕ್ಕೆ ಸೋಲಬೇಕು, ಯಾವುದಕ್ಕೆ ಸೋಲಬಾರದು ಎಂದು ಅವರು ತಿಳಿಸಿಕೊಟ್ಟಿದ್ದಾರೆ. ಪ್ರೀತಿಗೆ ಸೋಲಬೇಕು. ಕೋಪವನ್ನು ಗೆಲ್ಲಬೇಕು. ತಾಳ್ಮೆ ಗೆಲ್ಲಬೇಕು. ಪಾತ್ರಕ್ಕೆ ಸೋಲಬೇಕು, ಅಭಿಮಾನಿಗಳಿಗೆ ಸೋಲಬೇಕು ಎಂದು ಹೇಳಿ ಕೊಟ್ಟಿದ್ದಾರೆ. ಈ ಮಾತುಗಳು ನನ್ನನ್ನು ಸದಾ ಆವರಿಸುತ್ತವೆ. ಅಪ್ಪಾಜಿ ಹೇಳಿದಂತೆ ನಡೆಯುವ ಪ್ರಯತ್ನ ಮಾಡಿದೆ. ಹಾಗಾಗಿ 30 ವರ್ಷದ ನಟನಾ ಜೀವನದಲ್ಲಿ ಇತ್ತೀಚೆಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಪಡೆದಿದ್ದೇನೆ. ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯ, ಯೌವ್ವನ, ಹೀಗೆ ಎಲ್ಲವೂ ಇರುತ್ತವೆ.

ಅವೆಲ್ಲವನ್ನೂ ನಾನು ದಾಟಿಬಂದಿದ್ದೇನೆ. ಆ ಸಂದರ್ಭದಲ್ಲಿ ಕೊಟ್ಟ ಪಾತ್ರವನ್ನು ನಿಭಾಯಿಸಿದ್ದೇನೆ. ಈಗ ನನಗೂ ಮಕ್ಕಳಿವೆ.
ಪ್ರೇಕ್ಷಕರು ನನಗೆ ಒಂದು ಸ್ಥಾನಕೊಟ್ಟಿದ್ದಾರೆ. ಈಗ ಅಂದಿನ ಯುವಕನ ಪಾತ್ರ ಮಾಡುವುದು ಕಷ್ಟ. ರಾಘಣ್ಣ ಏನಾದರೂ
ಹೇಳಿದರೆ ಅದಕ್ಕೆ ಅರ್ಥವಿರುತ್ತದೆ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ಹಾಗಾಗಿ ಜವಾಬ್ಧಾರಿ ಅಣ್ಣನಾಗಿ, ನಿವೃತ್ತ ಯೋಧನಾಗಿ, ಹೋರಾಟಗಾರನ ಪಾತ್ರಗಳನ್ನು ನಿರ್ವಹಿಸುವುದು ನನಗಿಷ್ಟ.

ನಾನು ಸ್ಟಾರ್ ಎಂಬುದನ್ನು ಮರೆತಿದ್ದೇನೆ. ಒಳ್ಳೆಯ ಸಿನಿಮಾದಲ್ಲಿ ನಾನಿರುವುದನ್ನು ಬಯಸುತ್ತೇನೆ. ರಾಘಣ್ಣನ ಸಿನಿಮಾ
ಎನ್ನುವುದಕ್ಕಿಂತ ಈ ಸಿನಿಮಾದಲ್ಲಿ ರಾಘಣ್ಣ ಇರಬೇಕು ಎಂದು ನೆನೆಯಬೇಕು. ಅಂತಹ ಪಾತ್ರ ನಿರ್ವಹಿಸುವುದು ನನಗಿಷ್ಟ.

ಸಮಾಜಮುಖಿ ರಾಜಕಾರಣಿ

‘ಈಗ ನಾನು ವಾರ್ಡ್ ನಂ 11’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದು ಒಬ್ಬ ರಾಜಕಾರಣಿಯ ಕಥೆ. ಈ ಚಿತ್ರದಲ್ಲಿಯೂ ಒಳ್ಳೆಯ ಸಂದೇಶ ವಿದೆ. ಎಲ್ಲಾ ರಾಜಕಾರಣಿಗಳನ್ನು ನಾವು ಒಂದೇ ರೀತಿ ನೋಡುತ್ತಿದ್ದೇವೆ. ರಾಜಕಾರಣಿಗಳಲ್ಲೂ ಕೆಲವರು ಪ್ರಾಮಾಣಿಕರಿರುತ್ತಾರೆ. ಚಿತ್ರದ ಮೂಲಕ ಅದನ್ನೇ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಈ ಚಿತ್ರದಿಂದ ನಾನು ಹಲವು ವಿಚಾರಗಳನ್ನು ಕಲಿತಿದ್ದೇನೆ. ಕುಟಿಲತೆಗೆ ಜನತೆಯೇ ಹೇಗೆ ತಕ್ಕ ಪಾಠ ಕಲಿಸುತ್ತಾರೆ ಎಂಬ ಕಥಾಹಂದರ ಚಿತ್ರದಲ್ಲಿದೆ. ‘ಪೊಗರು’ ಚಿತ್ರದಲ್ಲಿಯೂ ಒಂದು ಮಹತ್ವದ ಪಾತ್ರ ನಿರ್ವಹಿಸಿದ್ದೇನೆ. ಆ ಪಾತ್ರ‘ನಾಗರಹಾವು’ ಚಿತ್ರದ ಚಾಮಯ್ಯ ಮೇಷ್ಟ್ರು ರೀತಿಯದ್ದು, ಎಂದು ನಿರ್ದೇಶಕರು ಹೇಳಿದ್ದಾರೆ. ಪ್ರೇಕ್ಷಕರು ಚಿತ್ರ ನೋಡಿ ಅದನ್ನು ಹೇಳಬೇಕು.

ಖಳನಟನಾಗಿ ಬಣ್ಣ ಹಚ್ಚುವುದಿಲ್ಲ

ಸಿನಿಮಾಗಳಲ್ಲಿ ಅಭಿನಯಿಸಲು ಸಾಲು ಸಾಲು ಅವಕಾಶಗಳು ಅರಸಿ ಬರುತ್ತಿವೆ. ಅದರಲ್ಲಿ ಖಳ ನಟರಾಗಿ ಬಣ್ಣಹಚ್ಚುವ ಅವಕಾಶವೂ ಇತ್ತು. ಆದರೆ ಇದಕ್ಕೆ ಅಭಿಮಾನಿಗಳು ಒಪ್ಪಲಿಲ್ಲ. ನನ್ನನ್ನು ಭೇಟಿ ಮಾಡಿದ ಅಭಿಮಾನಿಗಳು ನೀವು ಅಣ್ಣಾವ್ರ ಮಗ, ನೀವು ನಾಯಕರಾಗೆ ಇರಬೇಕು. ನಿಮ್ಮನ್ನು ದೇವರ ಹಾಗೆ ಕಾಣಲು ಬಯಸುತ್ತೇವೆ. ಖಳನಟರಾಗಿ ಬಣ್ಣಹಚ್ಚುವುದನ್ನು ನಾವು ಎಂದಿಗೂ ಊಹಿಸಿಕೊಳ್ಳುವುದಿಲ್ಲ. ಖಳ ನಟನಾದರೆ ಸಿಗರೇಟು, ಹೆಂಡ ಹೇಗೆ ವಿಭಿನ್ನವಾಗಿ ತೋರಿಸಲಾಗುತ್ತದೆ. ಈ ಮನೆ ಯಿಂದ ನಮ್ಮೆಲ್ಲರಿಗೂ ಒಳ್ಳೆಯ ಸಂದೇಶ ಸಿಗುತ್ತಿದೆ. ಮುಂದಿನ ಪೀಳಿಗೆಗೂ ಒಳ್ಳೆಯ ಸಂದೇಶವನ್ನು ಬಯಸುತ್ತೇವೆ. ಹಾಗಾಗಿ ಇಂತಹ ಪಾತ್ರ ಬೇಡವೇ ಬೇಡ ಎಂದರು. ಹಾಗಾಗಿ ಅಂದೇ ನಾನು ಅಂತಹ ಪಾತ್ರಗಳನ್ನು ಕೈಬಿಡಲು ನಿರ್ಧರಿಸಿದೆ.

ಪುಟಿದೇಳಲಿದೆ ಚಿತ್ರರಂಗ

ಕಾಡಿದ ಕೋವಿಡ್‌ನಿಂದಾಗಿ ಇಡೀ ಭಾರತೀಯ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದೆ. ಹಾಗಂತ ನಾವು ಧೃತಿಗೆಡಬಾರದು. ಒಂದು
ವರ್ಷ ಹಿಂದಕ್ಕೆ ಹೋದರೆ, ಮೂರು ವರ್ಷ ಮುಂದಕ್ಕೆ ಸಾಗುತ್ತೇವೆ. ಪ್ರಕೃತಿಯ ಮುಂದೆ ಯಾರೂ ದೊಡ್ಡವರಲ್ಲ. ಬಂದದನ್ನು ಎದುರಿಸಲು ನಾವು ಸಿದ್ಧವಾಗಿರಬೇಕು. ಅಪ್ಪಾಜಿ ಹೇಳುತ್ತಿದ್ದುದು ಇದನ್ನೆ, ಪ್ರಕೃತಿಯ ನಿಯಮಕ್ಕೆ ನಾವೆಲ್ಲರೂ ಬದ್ದವಾಗಿರ ಬೇಕು. ಅದರ ಜತೆಯೇ ಬಾಳಬೇಕು ಎನ್ನುತ್ತಿದ್ದರು.

ಕರೋನಾ ಒಳ್ಳೆಯ ಪಾಠ ಕಲಿಸಿದೆ

ಕರೋನಾ ನಿಜಕ್ಕೂ ಒಳ್ಳೆಯ ಪಾಠ ಕಲಿಸಿದೆ. ಹಿಂದೆ ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರುತ್ತಿದ್ದರು. ಆದರೆ ಕರೋನಾ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿಯೇ ನಮ್ಮ ಸುತ್ತಮುತ್ತಲೇ ಇದ್ದರು. ನನ್ನ ತಮ್ಮ ನಮ್ಮ ಮನೆಗೆ ಬಂದು ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದ, ನನ್ನ ಮಕ್ಕಳು ಸುತ್ತಮುತ್ತಲೇ ಇರುತ್ತಿದ್ದರು. ಎಲ್ಲರೂ ಜತೆಯಾಗೆ ಕಲೆಯುತ್ತಿದ್ದೆವು. ಸಂಕಷ್ಟ ದಲ್ಲಿ ಇರುವವರನ್ನು ಕಂಡು ಮರುಗಿದೆವು. ಮನೆಯನ್ನು ಸಂಬಾಳಿಸುವ ಮಡಿಯ ಕಷ್ಟ ಏನು ಎಂಬುದು ಅಂದು ನನಗೆ ಅರ್ಥ ವಾಯಿತು.

ಸಾಮಾಜಿಕ ಕಾರ್ಯವೇ ನನ್ನ ಧ್ಯೇಯ

ನಮಗೆ ಜನ ಎಲ್ಲವನ್ನೂ ನೀಡಿದ್ದಾರೆ. ಹಲವು ಪ್ರಶಸ್ತಿಗಳು ಸಂದಿವೆ. ಇದೆಲ್ಲವನ್ನೂ ಗಮನಿಸಿದರೆ ನಾವು ಸಮಾಜಕ್ಕೆ ಏನು
ಕೊಡಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಕೈಲಾದಷ್ಟು ಅಳಿಲು ಸೇವೆ ಮಾಡುತ್ತಾ ಸಾಗುತ್ತಿದ್ದೇವೆ. ಯಾವ
ಕಾರ್ಯದಲ್ಲೂ ತೃಪ್ತಿ ಸಿಕ್ಕಿಲ್ಲ. ಅಪ್ಪಾಜಿ ಅವರು ನೂರಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರು, ಯಾವ ಪಾತ್ರ ನಿಮಗೆ ತೃಪ್ತಿ
ನೀಡಿತು ಎಂದರೆ ಅದಕ್ಕೆ ಉತ್ತರ ಇಲ್ಲ ಎಂಬುದಾಗಿತ್ತು. ಹೀಗಿರುವಾಗ ನಾವು ಇಷ್ಟಕ್ಕೆ ತೃಪ್ತಿ ಸಿಕ್ಕಿದೆ ಎಂದುಕೊಂಡರೆ
ಬದುಕಿಗೆ ಅರ್ಥವೇ ಇರುವುದಿಲ್ಲ. ಜೀವನದುದ್ದಕ್ಕೂ ಸಮಾಜಕ್ಕೆ ಏನಾದರೂ ಕಾಣಿಕೆ ನಿಡಬೇಕು ಎಂಬ ಧ್ಯೇಯ ನನ್ನದು. ಅದನ್ನು ಸಾಕಾರಗೊಳಿಸುವ ಕನಸು ನನ್ನದು.

ಚಿತ್ರ ನಿರ್ದೇಶನದ ಬಯಕೆ ನನಗಿಲ್ಲ. ನಟನೆಯೇ ನನ್ನ ಮೊದಲ ಆಯ್ಕೆ. ಸಾಮಾಜಿಕ ಸಂದೇಶ ನೀಡುವ ಚಿತ್ರಗಳಿಗೆ ನನ್ನ
ಮೊದಲ ಆದ್ಯತೆ.

ಕೆಲವು ಗುಟ್ಟು ಗುಟ್ಟುಗಳಾಗಿಯೇ ಉಳಿದು ಬಿಡುತ್ತವೆ. ಅಂತೆಯೇ ಸಕಾರಾತ್ಮಕತೆ ಕೂಡ ಒಂದು ಗುಟ್ಟಾಗಿದೆ. ನನ್ನ ಮಡದಿ, ನನ್ನ
ಸಹೋದರರು ಮಕ್ಕಳು ಎಲ್ಲರೂ ನನ್ನನ್ನು ಹುರಿದುಂಬಿಸುತ್ತಾರೆ.