ಸೆಂಟಿಮೆಂಟ್ ಚಿತ್ರಗಳನ್ನು ನಿರ್ಮಿಸಿ ಪ್ರಸಿದ್ಧಿ ಪಡೆದ ನಿರ್ದೇಶಕ ಎಸ್.ಮಹೇಂದರ್, 90ರ ದಶಕದಲ್ಲಿ ಪ್ರೇಕ್ಷಕರನ್ನು ಕಣ್ಣೀರಿ ನಲ್ಲಿ ತೇಲಿಸಿದ್ದರು. ಅಂತಹ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದರು.
ಈ ಅದೇ ಎಸ್.ಮಹೇಂದರ್ ಮೊದಲ ಬಾರಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಈಗಾಗಲೇ ಚಿತ್ರದ ಕಥೆಯೂ ಸಿದ್ಧವಾಗುತ್ತಿದೆ. ಆದರೆ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮಗೊಳಿಸಿಲ್ಲ. ವಿಶೇಷ ಎಂದರೆ ಇದು ಕೂಡ ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ.
ಚಿತ್ರದ ಒನ್ ಲೈನ್ ಸ್ಟೋರಿ ಕೇಳಿದ ರವಿಮಾಮ ಸಿನಿಮಾದಲ್ಲಿ ನಟಿಸಲು ಸಂತಸದಿಂದಲೇ ಒಪ್ಪಿದ್ದಾರೆ. ಹೇಗಿದ್ದರೂ ಇಬ್ಬರಿಗೂ ಹಳ್ಳಿಯ ಪರಿಸರದ ಚಿತ್ರವನ್ನು ನೀಡಿರುವ ಅನುಭವವಿದೆ. ಹಾಗಾಗಿ ಈ ಚಿತ್ರವೂ ದೊಡ್ಡ ಮಟ್ಟದಲ್ಲಿ ಹಿಟ್ ಆಗುವುದು ಖಚಿತವಾಗಿದೆ. ಇನ್ನು ಚಂದನವನದ ದೊಡ್ಡ ನಿರ್ಮಾಪಕರೊಬ್ಬರು ಚಿತ್ರ ನಿರ್ಮಾಣಕ್ಕೆ ಹಣ ಹೂಡಲು ಮುಂದೆ ಬಂದಿದ್ದಾ ರಂತೆ. ಸದ್ಯ ರವಿಚಂದ್ರನ್ ಕನ್ನಡಿಗ ಮತ್ತು ದೃಶ್ಯ-2 ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.
ಜತೆಗೆ ಇವರದೇ ನಿರ್ದೇಶನದ ರವಿ ಬೋಪಣ್ಣ ತೆರೆಗೆ ಬರಲು ಸಿದ್ದವಾಗಿದೆ. ಆ ಬಳಿಕ ಹೊಸ ಚಿತ್ರದ ಚಿತ್ರೀಕರಣದಲ್ಲಿ
ಪಾಲ್ಗೊಳ್ಳಲಿದ್ದಾರೆ. ಇನ್ನು ಮಹೇಂದರ್ ಆಕ್ಷನ್ ಕಟ್ ಹೇಳಿರುವ ಪಂಪ ಬಿಡುಗಡೆಯ ಸನಿಹದಲ್ಲಿದೆ. ಆ ಬಳಿಕ ರವಿಮಾಮನ ಜತೆಯಾಗಲಿದ್ದಾರೆ. ಪಂಪ ಥ್ರಿಲ್ಲರ್ ಕಥೆಯ ಸಿನಿಮಾವಾಗಿದೆ. ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕರಾದ ಪಂಚಳ್ಳಿ ಪರಶಿವಮೂರ್ತಿ ಅವರ ಮೇಲೆ ಚಿತ್ರವು ಸಾಗುತ್ತದೆ. ಇದರ ಜತೆಗೆ ಹದಿಹರೆಯದ ಪ್ರೀತಿ-ಪ್ರೇಮ, ಭಾಷೆಯ ಮೇಲಿನ ಅಭಿಮಾನ-ದುರಭಿಮಾನ, ಹೋರಾಟ, ಸಮಯ ಸಾಧಕ ಹಾಗೂ ಸ್ವಹಿತಾಸಕ್ತ ರಾಜಕಾರಣ ಇಂತಹ ಅಂಶಗಳನ್ನು ಒಳಗೊಂಡಿದೆ. ಸಾಹಿತ್ಯ ಮತ್ತು
ಸಂಗೀತ ಹಂಸಲೇಖಾ ಅವರದು.
ನಾನು ಮೊದಲಿನಿಂದಲೂ ರವಿಚಂದ್ರನ್ ಅವರ ಚಿತ್ರಗಳನ್ನು ನಿರ್ದೇಶನ ಮಾಡಬೇಕು ಅಂದುಕೊಂಡಿದ್ದೆ. ಆದರೆ ಅದು
ಸಾಧ್ಯವಾಗಿರಲಿಲ್ಲ. ಈಗ ಅದಕ್ಕೆ ಕಾಲ ಕೂಡಿಬಂದಿದೆ. ರವಿಚಂದ್ರನ್ ಅವರು ನಟಿಸುತ್ತಿರುವ ಸಿನಿಮಾ ಎಂದರೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಹಾಗಾಗಿ ಅವರು ಮೆಚ್ಚುವ, ಅವರ ನಿರೀಕ್ಷೆ ತಕ್ಕಂತ ಕಥೆಗಳನ್ನು ಹೆಣೆಯಬೇಕು. ಅದಕ್ಕೆ ಸಾಕಷ್ಟು ಕಾಲಾವಕಾಶವೂ ಬೇಕು. ಈ ಲಾಕ್‌ಡೌನ್ ಅವಧಿಯಲ್ಲಿ ಸಮಯ ಸಿಕ್ಕಿತು. ಒನ್ ಲೈನ್ ಸ್ಟೋರಿಯೂ ಹೊಳೆಯಿತು. ಈ ಕಥೆಯನ್ನು ಕೇಳಿ ನಟಿಸಲು ರವಿಚಂದ್ರನ್ ಒಪ್ಪಿದರು.
***
ಅವರ ಮೇಕಿಂಗ್ ಸ್ಟೈಲ್‌ಗೆ ಹೊಂದುವಂತಹ ಚಿತ್ರ ಇದಾಗಿದೆ. ಅವರನ್ನು ತೆರೆಯಲ್ಲಿ ರಿಚ್ ಆಗಿ ತೋರಿಸುವ ಹೊಣೆ ನಮ್ಮದು.
ಇನ್ನೇನು ಸಿನಿಮಾ ಸೆಟ್ಟೇರಬೇಕು ಎನ್ನವಾಗಲೇ ಕರೋನಾ ಕಾಡುತ್ತಿದೆ. ಹಾಗಾಗಿ ಕರೋನಾ ಮುಗಿಯುವವರೆಗೂ
ಚಿತ್ರೀಕರಣಕ್ಕೆ ಹೋಗಲು ಕಾಯಲೇಬೇಕು.
-ಎಸ್.ಮಹೇಂದರ್ ನಿರ್ದೇಶಕ