ಪ್ರಶಾಂತ್ ಟಿ.ಆರ್.
ಸ್ಯಾಂಡಲ್‌ವುಡ್‌ನಲ್ಲಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ರೆಮೋ ಮುಂಚೂಣಿಯಲ್ಲಿದೆ. ಒಂದೂವರೆ ವರ್ಷದ ಹಿಂದೆಯೇ ಸೆಟ್ಟೇರಿದ್ದ ರೆಮೋ ಚಿತ್ರೀಕರಣ ಮುಗಿಸಿದೆ. ಸದ್ಯ ಸಂಕಲನ ಹಾಗೂ ಗ್ರಾಫಿಕ್ಸ್ ವರ್ಕ್‌ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಪ್ರತಿ ದೃಶ್ಯಗಳು ಪ್ರೇಕ್ಷಕರಿಗೆ ಮನಮುಟ್ಟವಂತೆ ಮೂಡಿಬರಬೇಕು ಎಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಅದಕ್ಕಾಗಿಯೇ ಕಳೆದ ಒಂದೂವರೆ ವರ್ಷದಿಂದ ಶ್ರಮಿಸುತ್ತಿದ್ದೆ.
ಶೀರ್ಷಿಕೆಯಲ್ಲಿ ಕ್ಯೂರಿಯಾಸಿಟಿ ಮೂಡಿಸಿರುವ ರೆಮೋ, ಈಗಾಗಲೇ ಸಿನಿಪ್ರಿಯರಲ್ಲಿ ಕಾತರತೆ ಹೆಚ್ಚಿಸಿದೆ. ಕಾರಣ ರೆಮೋ ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ಎಂಬುದು. ಈ ಹಿಂದೆ ನಟಸಾರ್ವಭೌಮ ಸಿನಿಮಾವನ್ನು ಯಶಸ್ವಿಯಾಗಿ ತೆರೆಗೆ ತಂದ ಪವನ್, ಗೂಗ್ಲಿ ಬಳಿಕ ಕಂಪ್ಲೀಟ್ ಲವ್ ಸ್ಟೋರಿಯ ರೆಮೋ ಸಿನಿಮಾವನ್ನು ಹೊತ್ತು ಬರುತ್ತಿದ್ದಾರೆ. ರೆಮೋ, ಅಪ್ಪಟ ಪ್ರೇಮಕಥೆಯ ಚಿತ್ರ. ಅದಕ್ಕೂ ಮಿಗಿಲಾಗಿ ಇದು ಮ್ಯೂಸಿಕಲ್ ಲವ್ ಸ್ಟೋರಿಯ ಚಿತ್ರ
ಅನ್ನುವುದು ವಿಶೇಷ. ಕನ್ನಡದಲ್ಲಿ ಮ್ಯೂಸಿಕಲ್ ಲವ್ ಸ್ಟೋರಿಯ ಸಿನಿಮಾಗಳು ಮೂಡಿಬಂದಿರುವುದು ತೀರ ವಿರಳ, ಅಂತಹ ಸಂದರ್ಭದಲ್ಲಿ ರೆಮೋ ತೆರೆಗೆ
ಬರುತ್ತಿರುವುದು ಸಹಜವಾಗಿಯೇ ಕಾತರತೆ ಹೆಚ್ಚಿಸಿದೆ. ಇಲ್ಲಿ ಕಥೆಯ ಜತೆಗೆ ಸಂಗೀತಕ್ಕೂ ಹೆಚ್ಚಿನ ಆದ್ಯತೆಯಿದೆ. ವಿಶೇಷ ಎಂದರೆ ರೆಮೋ ಕನ್ನಡದ ಜತೆಗೆ ತೆಲುಗಿನಲ್ಲಿಯೂ ರಿಲೀಸ್ ಆಗಲಿದೆ.
ಸಂಗೀತ ಪ್ರೇಮಿ
ರೆಮೋ ಚಿತ್ರದ ಶೀರ್ಷಿಕೆಯೇ ವಿಭಿನ್ನವಾಗಿದೆ. ಚಿತ್ರದಲ್ಲಿ ನಾಯಕ ರೇವಂತ್, ಈತ ಅಪ್ಪಟ ಸಂಗೀತ ಪ್ರೇಮಿ. ಆತನಿಗೆ ಸಂಗೀತವೇ ಉಸಿರು. ಅದಕ್ಕಾಗಿಯೇ
ತನ್ನ ಇಡೀ ಜೀವನವನ್ನು ಸಂಗೀತಕ್ಕೆ ಮುಡಿಪಾಗಿಟ್ಟಿರುತ್ತಾನೆ. ಸಂಗೀತವನ್ನೇ ಆರಾಧಿಸುತ್ತಿರುತ್ತಾನೆ. ರೆಮೋ ಎಂಬ ರಾಕ್‌ಸ್ಟಾರ್ ತಂಡವನ್ನು ಕಟ್ಟಿ, ದೇಶ ವಿದೇಶದಲ್ಲಿ ಕಾರ್ಯಕ್ರಮ ನೀಡುತ್ತಾನೆ. ಅದರ ಮೂಲಕವೇ ತನ್ನ ನೋವುಗಳನ್ನು ಮರೆಯಲು ಪ್ರಯತ್ನಿಸುತ್ತಾರೆ. ಚಿತ್ರದ ನಾಯಕಿ ಮೋಹನಾ ಈಕೆ ಕೂಡ ಸಂಗೀತ ಪ್ರೇಮಿ, ಅದಕ್ಕೂ ಮಿಗಿಲಾಗಿ ಗಾಯಕಿ.
ಆಕೆಯ ಸುಮಧುರ ಕಂಠಕ್ಕೆ ಮನಸೋಲದವರೇ ಇಲ್ಲ. ಈ ನಡುವೆ ನಾಯಕ ಹಾಗೂ ನಾಯಕಿಯ ಪರಿಚಯ ಹೇಗಾಗುತ್ತದೆ. ಇಬ್ಬರ ನಡುವೆ ಪ್ರೀತಿ ಚಿಗುರುವುದು ಹೇಗೆ. ಕೊನೆಯಲ್ಲಿ ಈ ಇಬ್ಬರು ಒಂದಾಗುತ್ತಾರಾ. ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಽಸಿದ ನಾಯಕ, ತನ್ನ ಪ್ರೀತಿಯನ್ನು ಪಡೆಯಲು ಸಫಲನಾಗುತ್ತಾನ ಹೀಗೆ ಹಲವು ಪ್ರಶ್ನೆಗಳು ಕಾಡುತ್ತವೆ. ಇದೆಲ್ಲದಕ್ಕೂ ತೆರೆಯಲ್ಲಿಯೇ ಉತ್ತರ ಸಿಗಲಿದೆಯಂತೆ. ಹಾಗಂತ ಇಡೀ ಚಿತ್ರ ಸಂಗೀತಕ್ಕಷ್ಟೇ ಸೀಮಿತವಾಗಿಲ್ಲ. ಅಲ್ಲಿ ಪ್ರೀತಿಯಿದೆ, ಪ್ರೇಮವಿದೆ, ಭಾವನೆಗಳು ಮಿಳಿತವಾಗಿವೆ. ಜತೆಗೆ ಸರಸ, ವಿರಸ ಎಲ್ಲವೂ ಕಥೆಯಲ್ಲಿ ಬೆಸೆದಿದೆ. ಹಾಗಾಗಿ ಚಿತ್ರದ ಪ್ರತಿಯೊಂದು ಸನ್ನಿವೇಶವೂ ಪ್ರೇಕ್ಷರನ್ನು ಸೆಳೆಯಲಿದೆ ಎನ್ನುತ್ತಾರೆ ನಿರ್ದೇಶಕ ಪವನ್ ಒಡೆಯರ್.
ಬೊಂಬಾಟ್ ಜೋಡಿ
ಪೂರಿ ಜಗನ್ನಾಥ್ ಗರಡಿಯಲ್ಲಿ ಪಳಗಿದ ಇಶಾನ್, ರೆಮೋ ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ. ಇಶಾನ್‌ಗೆ ಜತೆಯಾಗಿ ಮುಗುಳು ನಗೆಯ ಬೆಡಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ಈ ಇಬ್ಬರ ಜೋಡಿ ಬೊಂಬಾಟ್ ಎಂಬ ಮಾತುಗಳು ಚಿತ್ರ ಸೆಟ್ಟೇರಿದಾಗಲೇ ಕೇಳಿಬಂದಿತ್ತು. ಇನ್ನು ಚಿತ್ರ ಪ್ರತಿಯೊಬ್ಬರಿಗೂ ಮೆಚ್ಚುಗೆಯಾಗುತ್ತದೆ ಎಂಬ ನಿರೀಕ್ಷೆ ಚಿತ್ರತಂಡಕ್ಕಿದೆ. ತೆಲುಗಿನ ರೋಗ್ ಚಿತ್ರದಲ್ಲಿ ಮಿಂಚಿದ್ದ ಇಶಾನ್, ರೆಮೋ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಆಶಿಕಾಗೆ ರೆಮೋ ಬಿಗ್‌ಬ್ರೇಕ್ ಕೊಡುವ ಸಾಧ್ಯತೆಯಿದೆ. ನಾನು ಹಿಂದಿನಿಂದಲೂ ಚಾಲೆಂಜಿಂಗ್ ಪಾತ್ರ ಬಯಸುತ್ತಿದ್ದೆ. ಆ ಪಾತ್ರ ರೆಮೋ ಚಿತ್ರದಲ್ಲಿ ಸಿಕ್ಕಿದೆ ಎಂದು ಸಂತಸ ಹಂಚಿಕೊಳ್ಳುತ್ತಾರೆ ಆಶಿಕಾ.
ನೈಜತೆಗೆ ಹತ್ತಿರವಾದ ಕಥೆ
ರೆಮೋ ಸಿನಿಮಾದ ಕಥೆ ಕಾಲ್ಪನಿಕವಾಗಿದ್ದರೂ, ಇದು ನೈಜತೆಗೆ ಹತ್ತಿರವಾಗಿದೆಯಂತೆ. ಬೆಳ್ಳಿತೆರೆಯಲ್ಲಿ ಚಿತ್ರ ನೋಡುತ್ತಿದ್ದರೆ, ನಮ್ಮಿಂದ ಮರೆಯಾದ ದಿನಗಳು,
ನಾವು ಕಂಡುಂಡ ಜೀವನಾನುಭವಗಳು ತೆರೆಯಲ್ಲಿ ಹಾದು ಹೋಗುತ್ತದೆಯಂತೆ. ಚಿತ್ರದಲ್ಲಿ ಬರುವ ಕೆಲವು ಸನ್ನಿವೇಶಗಳು ನಮ್ಮ ಜೀವನದಲ್ಲಿ ನಡೆದ ಘಟನೆಯೇನು ಎಂಬ ಭಾವ ಪ್ರೇಕ್ಷಕರನ್ನು ಆವರಿಸುತ್ತದೆಯಂತೆ. ಹಾಗಾಗಿ ಇದು ಕಾಲ್ಪನಿಕ ಕಥೆಯಾದರೂ ನೈಜತೆಗೆ ಹತ್ತಿರವಾದ ಸ್ಟೋರಿ ಅನ್ನಿಸುವುದು ಪಕ್ಕಾ ಎನ್ನುತ್ತಾರೆ ಪವನ್.
ನಿರ್ಮಾಣವಾಯ್ತು ಕೋಟಿ ವೆಚ್ಚದ ಸೆಟ್
ರೆಮೋ ಹೈಬಜೆಟ್ ಸಿನಿಮಾ. ಚಿತ್ರದ ಕಥೆ ಸಿದ್ಧವಾಗುತ್ತಿದ್ದಂತೆ ಲೋಕೇಷನ್ ಹುಡುಕಲು ದೇಶ ವಿದೇಶಗಳನ್ನು ಸುತ್ತಿದೆ ಚಿತ್ರತಂಡ. ದಕ್ಷಿಣ ಆಫ್ರಿಕಾ, ಹಾಂಕಾಂಗ್ ಹೀಗೆ ಸುಮಾರು ಐದು ದೇಶಗಳಲ್ಲಿ ಚಿತ್ರೀಕರಣ ನಡೆಸಿದೆ. ಜತೆಗೆ ಕರ್ನಾಟಕದ ಸುಂದರ ತಾಣಗಳಲ್ಲೂ ಶೂಟಿಂಗ್ ಮುಗಿಸಿದೆ. ಹಾಡಿಗಾಗಿಯೇ
ಕೋಟ್ಯಾಂತರ ರು ವೆಚ್ಚದಲ್ಲಿ ಸೆಟ್ ನಿರ್ಮಾಣ ಮಾಡಲಾಗಿತ್ತು. ಮ್ಯೂಸಿಕಲ್ ಜರ್ನಿ ಸಿನಿಮಾ ಎಂದಾಗಲೇ ಕಥೆಯಂತೆಯೇ ಸಂಗೀತಕ್ಕೂ ಹೆಚ್ಚಿನ
ಪ್ರಾಮುಖ್ಯತೆ ಇದೆ ಎಂಬುದು ಪಕ್ಕಾ. ಅದಕ್ಕಾಗಿಯೇ ಚಿತ್ರದಲ್ಲಿ ಆರು ಸುಮಧುರ ಗೀತೆಗಳಿವೆ. ಪ್ರದ್ಯುಮ್ನ, ಕವಿರಾಜ್ ಹಾಗೂ ಪವನ್ ಒಡೆಯರ್ ಸಾಹಿತ್ಯದಲ್ಲಿ
ಹಾಡುಗಳು ಮೂಡಿಬಂದಿವೆ. ಅರ್ಜುನ್ ಜನ್ಯ ಅವರ ಸಂಗೀತ ರೆಮೋ ಚಿತ್ರಕ್ಕಿದೆ. ಈ ವರ್ಷವೇ ಚಿತ್ರವನ್ನು ತೆರೆಗೆ ತರುವ ಪ್ಲಾನ್ ಚಿತ್ರತಂಡಕ್ಕಿದೆ.
ಒಬ್ಬ ನಿರ್ದೇಶಕನಿಗೆ ಪ್ರತಿ ಚಿತ್ರವೂ ಹೊಸ ನಿರೀಕ್ಷೆ ಹುಟ್ಟುಹಾಕುತ್ತದೆ. ಅಂತೆಯೇ ರೆಮೋ ನನ್ನಲ್ಲಿಯೂ ಹೊಸ ಆಶಾಭಾವ, ನಿರೀಕ್ಷೆ ಹೆಚ್ಚಿಸಿದೆ. ಗೂಗ್ಲಿ ಬಳಿಕ ಒಳ್ಳೆಯ ಲವ್ ಸ್ಟೋರಿಯ ಚಿತ್ರ ನಿರ್ದೇಶಿಸಬಾರದೇಕೆ ಎಂದು ಹಲವರು ಸಲಹೆ ನೀಡಿದರು. ಅದರಂತೆ ರೆಮೋ ಚಿತ್ರ ಮೂಡಿಬಂದಿದೆ. ಪ್ರೇಕ್ಷಕರಿಗೆ ಇಷ್ಟವಾಗುವ ಎಲ್ಲಾ ಅಂಶಗಳು ಚಿತ್ರದಲ್ಲಿವೆ. ಹಾಗಾಗಿ ರೆಮೋ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ನನ್ನಲ್ಲಿ ಒಡಮೂಡಿದೆ. ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರಬೇಕು ಎಂಬ ತುಡತವಿದೆ. ಚಿತ್ರಮಂದಿರಗಳು ಸಂಪೂರ್ಣ ತೆರೆದ ಮೇಲೆ ಚಿತ್ರವನ್ನು ತೆರೆಗೆ ತರುತ್ತೇವೆ.