Monday, 25th November 2024

ಶಿಲಾ ವಾಸ್ತುವಿನ ವಿಸ್ಮಯ

ಪೂಜಶ್ರೀ ತೋಕೂರು

ಪಶ್ಚಿಮ ಘಟ್ಟದ ಬುಡದಲ್ಲಿರುವ ಕಾರ್ಕಳ ಹಲವು ಶತಮಾನಗಳ ಹಿಂದೆ ಜೈನ ರಾಜರ ಆಳ್ವಿಕೆಯ ಕಾಲದಲ್ಲಿ ಪಾಂಡ್ಯ ನಗರಿ ಎಂದು ಪ್ರಸಿದ್ಧಿ ಪಡೆದಿತ್ತು.

ಇಲ್ಲಿರುವ ಕರಿ ಬಂಡೆಗಳಿಂದ ‘ಕರಿಕಲ್ಲು’ ಎಂದು, ನಂತರದ ದಿನಗಳಲ್ಲಿ ತುಳುವಿನಲ್ಲಿ ‘ಕಾರ್ಲ’ವೆಂದು ಮಾರ್ಪಟ್ಟು ಕನ್ನಡದಲ್ಲಿ ‘ಕಾರ್ಕಳ’ ಎಂದು ಹೆಸರಾಯಿತು. ಈ ಊರು ಹಲವು ಬಸದಿಗಳ ಬೀಡಾಗಿದ್ದು ಇಲ್ಲಿರುವ ಅನೇಕ ಬಸದಿಗಳಲ್ಲಿ ಚತುರ್ಮುಖ ಬಸದಿಯೂ ಒಂದು. ಬೆಟ್ಟದ ಶಿಖರದಲ್ಲಿರುವ ಈ ಬಸದಿಯನ್ನು ಕ್ರಿ.ಶ.1432ರಲ್ಲಿ ವೀರ ಪಾಂಡ್ಯದೇವ ರಾಜನು ನಿರ್ಮಿಸಿದ. 108 ಕಂಬಗಳನ್ನು ಹೊಂದಿರುವ ಈ ಚತುರ್ಮುಖ ಜೈನ ಬಸದಿಯು ಕಾರ್ಕಳದ ಮುಖ್ಯ ಆಕರ್ಷಣೆಗಳಲ್ಲೊಂದು.ಈ ಜೈನ ಬಸದಿಗೆ ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾದ ಛಾವಣಿ ವಿಶಿಷ್ಟ ಮೆರಗು ನೀಡಿದೆ. ಈ ಬಸದಿಗೆ ನಾಲ್ಕು ದಿಕ್ಕುಗಳಲ್ಲಿ ದ್ವಾರಗಳಿವೆ. ಈ ಬಸದಿ ಇಳಿಜಾರು ಸೂರನ್ನೊಳಗೊಂಡಿದ್ದು, ಈ ಸೂರಿಗೆ 68 ಸರಳ ಕಂಬಗಳು ಆಧಾರವಾಗಿವೆ.

ಬಸದಿಯ ಹೊರಭಿತ್ತಿಯ ಕೆಲವೆಡೆ ದೇವಾನುದೇವತೆಗಳ, ನೃತ್ಯ, ಚಾಮರಕರ, ಯುದ್ಧ ಸನ್ನಿವೇಶಗಳ ಉಬ್ಬುಶಿಲ್ಪಗಳ ಕಂಡರಿಕೆಯಿದೆ. ಒಳಾಂಗಣದ ಮಧ್ಯ ಭಾಗದಲ್ಲಿ ಗರ್ಭಗೃಹವಿದೆ. ಗರ್ಭಗೃಹದ ಆರಂಭಕ್ಕೆ ಪ್ರತಿ ದಿಕ್ಕಿಗೂ ಬ್ರಹ್ಮ, ಪದ್ಮಾವತಿಯರ ವಿಗ್ರಹವಿರಿಸಲಾಗಿದೆ.

ಪ್ರದಕ್ಷಿಣಾ ಪಥದಲ್ಲಿ ಮತ್ತೆ ಸರಳ 40 ಕಂಬಗಳು ಗುಡಿಯ ಕೇಂದ್ರಭಾಗವನ್ನು ಎತ್ತಿಹಿಡಿದಿದೆ. ಗರ್ಭಗೃಹದಲ್ಲಿ ನಾಲ್ಕು ದಿಕ್ಕುಗಳಲ್ಲಿ ಅರ, ಮಲ್ಲಿ, ಮುನಿಸು ವೃತ ಜೈನ ತೀರ್ಥಂಕರರ ಕರಿಯಕಲ್ಲಿನ ಮೂರ್ತಿಗಳು, ಹಾಗೂ ಪ್ರವೇಶದ ದಿಕ್ಕಿನಲ್ಲಿ ಪದ್ಮಾವತಿ ದೇವಿಯ ವಿಗ್ರಹವನ್ನು ಹೊಂದಿದೆ. ಬಸದಿಗೆ ಹೋಗುವ ದಾರಿ 58 ಮೆಟ್ಟಿಲುಗಳನ್ನು ಹೊಂದಿದೆ. ಕೆತ್ತನೆಗಳ ವಿಚಾರದಲ್ಲಿ ಚರ್ತು ರ್ಮುಖ ಬಸದಿಯು ಸಾಧಾರಣವಾಗಿದ್ದರೂ, ಶಿಲಾ ವಾಸ್ತುಶಿಲ್ಪಕ್ಕೆ ಪ್ರಸಿದ್ಧ ವಾಗಿದೆ. ಇಲ್ಲಿನ ಪ್ರತಿಯೊಂದು ಕಂಬವೂ ಏಕಶಿಲಾಕೃತಿ.

ಗೊಮ್ಮಟನ ದರ್ಶನ
ಈ ಚತುರ್ಮುಖ ಬಸದಿಯ ಎದುರು ಗುಡ್ಡದಲ್ಲಿ ಕಾರ್ಕಳದ ಗೊಮ್ಮಟನ ವಿಗ್ರಹವಿದೆ. ಕ್ರಿ.ಶ. 1432ರಲ್ಲಿ ರಚಿತಗೊಂಡಿರುವ ಈ ಗೊಮ್ಮಟೇಶ್ವರ ತುಳು ನಾಡಿನಲ್ಲಿ ಜನಪ್ರಿಯ. ವೀರಭೈರರಸನ ಪುತ್ರ ಮೂರನೆ ಪಾಂಡ್ಯ ಈ ಗೊಮ್ಮಟ ವಿಗ್ರಹವನ್ನು ಕೆತ್ತಿಸಿ ಸ್ಥಾಪಿಸಿ ಅಭಿನವ ಚಾವುಂಡರಾಯ ಎಂಬ ಬಿರುದು ಪಡೆದ. ಇದೇ ಹೊತ್ತಿಗೆ ಕಾರ್ಕಳದ ಪಾಂಡ್ಯ ನಗರಿಯಲ್ಲಿ ಒಂದು ಬಸದಿ ನಿರ್ಮಾಣದ ಕುರಿತಾಗಿ ಶಾಸನುಲ್ಲೇಖವಿದೆಯಾದರೂ ಬಸದಿಯಿದ್ದಂತೆ ತೋರುತ್ತಿಲ್ಲ.

ಇಲ್ಲಿ ಹೇಳುವ ಬಸದಿ, ಈಗ ಕಾಣುವ ಚತುರ್ಮುಖ ಬಸದಿ ಬೇರೆ ಬೇರೆ ಎಂಬ ತಜ್ಞರ ಅಭಿಪ್ರಾಯವಿದೆ. ಗೊಮ್ಮಟ ಬೆಟ್ಟದಲ್ಲಿ ನಿಂತು ಮುಂಭಾಗದತ್ತ ಕಣ್ಣು ಹಾಯಿಸಿದರೆ ಚತುರ್ಮುಖ ಬಸದಿ ಕಾಣುತ್ತದೆ. ಬೆಟ್ಟದಿಂದ ಇಳಿದು ಕಾಲ್ನಡಿಗೆಯ ಮೂಲಕ ಅಲ್ಲಿಗೆ ಹೋಗಬಹುದು. ವಿಶಾಲವಾದ ಬೆಟ್ಟದ ಮೇಲೆ ನಿರ್ಮಿಸಲಾದ ಈ ಬಸದಿಯನ್ನು ಚತುರ್ಮುಖ ತೀರ್ಥಂಕರ ಬಸದಿ ಎಂದೂ ಕರೆಯುತ್ತಾರೆ.

ದೇಶದ 13 ಇತರ ಬಸದಿಗಳಲ್ಲಿ ನಾಲ್ಕನೇ ಸ್ಥಾನವನ್ನು ಕಾರ್ಕಳದ ಚತುರ್ಮುಖ ಬಸದಿ ಗಳಿಸಿದೆ. ಇದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಮತ್ತು ಸಂಜೆ 4 ರಿಂದ 5.30 ರವರೆಗೆ ತೆರೆದಿರುತ್ತದೆ. ಬೆಂಗಳೂರಿನಿಂದ 380 ಕಿಮೀ ದೂರದಲ್ಲಿರುವ ಕಾರ್ಕಳ
ಗೋಮಟೇಶ್ವರನ ದರ್ಶನಕ್ಕೆೆ ಬಂದವರು ಸಮೀಪದ ಹಿರಿಯಂಗಡಿ ಜೈನ ಬಸದಿ, ಆನೆಕೆರೆ ಬಸದಿ, ಶಿರ್ಲಾಲು ಬಸದಿ ಹಾಗೂ ವರಂಗದಲ್ಲಿರುವ ಮನಮೋಹಕ ಕೆರೆಬಸದಿಯನ್ನು ಸಹ ಸಂದರ್ಶಿಸಬಹುದು.